ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಜಾನುವಾರುಗಳಲ್ಲಿ ರಕ್ತ ಮೂತ್ರ-ಗಾಬರಿಯಾಗದಿರಿ

ಡಾ-ಎನ್.ಬಿ.ಶ್ರೀಧರ
೯೪೪೮೦೫೯೭೭೭
1

ಜಾನುವಾರುಗಳಲ್ಲಿ ಹಲವಾರು ಬಾರಿ ಮೂತ್ರವನ್ನು ಗಮನಿಸಿದಾಗ ಕೆಂಪಗೇ ಅಥವಾ ಕಾಫ಼ಿ ಡಿಕಾಕ್ಷನ್ ಬಣ್ಣದ್ದಾಗಿರುತ್ತದೆ. ಇದನ್ನು ಆಡು ಭಾಷೆಯಲ್ಲಿ ರಕ್ತ ಮೂತ್ರ ಅಂತ ಕರೆಯಲಾಗುತ್ತದೆ. ಆದರೆ ವೈಜ್ಞಾನಿಕವಾಗಿ, ರಕ್ತ ಕಣಗಳು ಮೂತ್ರದಲ್ಲಿ ಬರುತ್ತಿದ್ದರೆ ಅದನ್ನು ಹೆಮೆಚೂರಿಯಾ ಎಂದೂ ಹಾಗೂ ರಕ್ತ ಕಣಗಳು ಒಡೆದು ಹಿಮೋಗ್ಲೋಬಿನ್ ಅಂಶ ಮೂತ್ರದಲ್ಲಿ ಬರುತ್ತಿದ್ದರೆ ಅದನ್ನು ಹಿಮೋಗ್ಲೋಬಿನ್ಯುರಿಯಾ ಎಂದು ಕರೆಯುತ್ತಾರೆ. ಹೆಮೆಚೂರಿಯಾದಲ್ಲಿ ಮೂತ್ರವು ಕಡು ಕೆಂಪು ಬಣ್ಣದಲ್ಲಿದ್ದರೆ, ಹಿಮೋಗ್ಲೋಬಿನ್ಯುರಿಯಾದಲ್ಲಿ ಮೂತ್ರವು ಕಾಫ಼ಿ ಬಣ್ಣ ಅಥವಾ ಕಡುಕಂದು ಬಣ್ಣದಲ್ಲಿರುತ್ತದೆ. ಇವೆರಡಕ್ಕೆ ತುಂಬಾ ವ್ಯತ್ಯಾಸವಿದ್ದರೂ ಸಹ ಎರಡಕ್ಕೂ ರಕ್ತ ಮೂತ್ರವೆಂದೇ ಕರೆಯುತ್ತಾರೆ. ಹೆಮೆಚೂರಿಯಾ ಅಥವಾ ಮೂತ್ರದಲ್ಲಿ ರಕ್ತಕಣಗಳು ಬರಲು ಹಲವಾರು ಕಾರಣಗಳಿದ್ದರೂ ಸಹ ಮೂತ್ರಜನಕಾಂಗಕ್ಕೆ ಧಕ್ಕೆಯಾದಾಗ, ಮೂತ್ರನಾಳಗಳು ಒಡೆದು ಹೋದಾಗ, ಮೂತ್ರ ಕೋಶಗಳು ಸೋಂಕಿಗೆ ಒಳಗಾದಾಗ, ಮೂತ್ರಜನಕಾಂಗದ ಯಾವುದೇ ಭಾಗದಲ್ಲಿ ಮೂತ್ರ ಕಲ್ಲುಗಳು ಬೆಳೆದು ಅವು ಧಕ್ಕೆಯುಂಟು ಮಾಡಿದಾಗ ಮೂತ್ರದಲ್ಲಿ ಶುದ್ಧ ರಕ್ತ ಬರುತ್ತದೆ. ಇಲ್ಲಿ ನಾವು ಚರ್ಚೆ ಮಾಡಲು ಹೊರಟಿರುವುದು ಜಾನುವಾರುಗಳಲ್ಲಿ ಬಹಳ ಸಾಮಾನ್ಯವಾದ, ಹಿಮೋಗ್ಲೋಬಿನ್ ಅಂಶ ಮೂತ್ರದಲ್ಲಿ ಬರುವ ಹಿಮೋಗ್ಲೋಬಿನ್ಯುರಿಯಾದ ಬಗ್ಗೆ. ಇದನ್ನು ರೈತರಿಗೆ ಅರ್ಥವಾಗುವ ಹಾಗೇ ರಕ್ತ ಮೂತ್ರವೆಂದೇ ಕರೆದು ಇದರ ಬಗ್ಗೆ ಮಾಹಿತಿ ನೀಡೋಣ. ಮೂತ್ರಕ್ಕೆ ಕಾಫಿ ಹಿಮೋಗ್ಲೋಬಿನ್ಯೂರಿಯಾ ತರುವಂತೆ ರಕ್ತ ಕಣಗಳು ಒಡೆಯಲು ಸೋಂಕು ರೋಗಗಳು, ಪೋಷಕಾಂಶಗಳ ಕೊರತೆ, ವಿವಿಧ ವಿಷ ಬಾಧೆಗಳು ಮತ್ತು ಕೆಲವು ರೀತಿಯ ಔಷಧಿಗಳನ್ನು ನೀಡುವುದು ಪ್ರಮುಖವಾದ ಕಾರಣಗಳಾಗಬಹುದು

ವಿವಿಧ ರೋಗಗಳು ಯಾವುವು? - ಬೆಬೆಸಿಯೋಸಿಸ್ ಎಂಬುದು ಮಿಶ್ರತಳಿಯ ಜಾನುವಾರುಗಳಲ್ಲಿ ಅತ್ಯಂತ ಸಾಮಾನ್ಯವಾಗಿ ರಕ್ತ ಮೂತ್ರವನ್ನುಂಟು ಮಾಡುವ ಉಣ್ಣೆಗಳಿಂದ ಹರಡುವ ಒಂದು ಕಾಯಿಲೆ. ಪ್ರಾರಂಭಿಕ ಹಂತದಲ್ಲಿ ತುಂಬಾ ಜ್ವರವಿರುವ ಈ ಕಾಯಿಲೆಯಲ್ಲಿ ಕೆಂಪು ರಕ್ತಕಣವನ್ನು ಸೇರಿಕೊಳ್ಳುವ ರೋಗಾಣುಗಳು ಕೆಂಪು ರಕ್ತ ಕಣದ ಪದರವನ್ನು ತೆಳುಗೊಳಿಸಿ ಅವು ಒಡೆದು ಹೋಗುವ ಹಾಗೇ ಮಾಡುತ್ತವೆ. ಹೀಗೆ ಕೆಂಪು ರಕ್ತ ಕಣಗಳು ಒಡೆದು ಹೋದಾಗ ರಕ್ತ ಕಣದಲ್ಲಿನ ಅಮ್ಲಜನಕವನ್ನು ಹೀರಿಕೊಳ್ಳುವ ಶಕ್ತಿ ಹೊಂದಿರುವ ಹೀಮೋಗ್ಲೋಬಿನ್ ಅಂಶವು ಆಚೆ ಬಂದು ಮೂತ್ರಜನಕಾಂಗದ ಮೂಲಕ ವಿಸರ್ಜಿಸಲ್ಪಟ್ಟು ಮೂತ್ರದಲ್ಲಿ ಬಂದು ಮೂತ್ರಕ್ಕೆ ಕಾಫಿ ಬಣ್ಣವನ್ನು ನೀಡುತ್ತದೆ. ಈ ಕಾಯಿಲೆಗೆ ಪ್ರಾರಂಭಿಕ ಹಂತದಲ್ಲಿ ಉತ್ತಮವಾದ ಚಿಕಿತ್ಸೆಯಿದ್ದು, ತಜ್ಞ ಪಶುವೈದ್ಯರು ಇದನ್ನು ಮಾಡಿ ಕಾಯಿಲೆಯನ್ನು ಗುಣಪಡಿಸಿದರೆ ರಕ್ತ ಮೂತ್ರವು ೨-೪ ದಿನಗಳಲ್ಲಿ ಕ್ರಮೇಣ ಕಡಿಮೆಯಾಗುತ್ತ, ನಂತರ ನಿಂತು ಹೋಗುತ್ತದೆ. ಆದರೆ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಮಾಡಿಸದೇ ಹೋದರೆ, ಜಾನುವಾರು ತೀವ್ರವಾದ ರಕ್ತ ಹೀನತೆಯಿಂದ ಬಳಲಿ, ಕಾಮಾಲೆಗೆ ಒಳಗಾಗಿ ಸಾವನ್ನಪ್ಪಬಹುದು. ಹೀಮೋಗ್ಲೋಬಿನ್ ಅಂಶವು ತುಂಬಾ ಕಡಿಮೆಯಾದಾಗ ಕೆಲವೊಮ್ಮೆ ರಕ್ತ ವರ್ಗಾವಣೆಯ ಅವಶ್ಯಕತೆಯೂ ಸಹ ಇರುತ್ತದೆ. ಗರ್ಭಧರಿಸಿದ ಜಾನುವಾರುಗಳಲ್ಲಿ ಈ ಕಾಯಿಲೆ ಬಹಳ ಮಾರಕ. ಲೆಪ್ಟೋಸ್ಪೈರೋಸಿಸ್ ಅಥವಾ ಇಲಿಜ್ವರ ಕಾಯಿಲೆಯೂ ಸಹ ಜಾನುವಾರುಗಳಲ್ಲಿ ರಕ್ತ ಮೂತ್ರವನ್ನುಂಟು ಮಾಡುವ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದು. ಆದರೆ ಬೆಬೆಸಿಯೋಸಿಸ್ಗೆ ಹೋಲಿಸಿದರೆ ಇದರ ಪಾತ್ರ ರಕ್ತ ಮೂತ್ರವನ್ನುಂಟು ಮಾಡುವಲ್ಲಿ ಕಡಿಮೆ. ಈ ಕಾಯಿಲೆಯಲ್ಲೂ ಸಹ ರೋಗಾಣುಗಳು ಕೆಂಪು ರಕ್ತ ಕಣಕ್ಕೆ ಹಾನಿಯನ್ನುಂಟು ಮಾಡಿ ಅದನ್ನು ಒಡೆದು ಅದರಲ್ಲಿನ ಹೀಮೋಗ್ಲೋಬಿನ್ ಅಂಶ ರಕ್ತದಲ್ಲಿ ಬರುವ ಹಾಗೆ ಮಾಡುತ್ತವೆ. ಈ ಕಾಯಿಲೆಗೂ ಸಹ ಸೂಕ್ತ ಚಿಕಿತ್ಸೆಯಿದ್ದು ನಿಗದಿತ ಸಮಯದಲ್ಲಿ ಮಾಡಿಸಬೇಕು. ಮುಖ್ಯವಾದ ಅಂಶವೆಂದರೆ, ಈ ಕಾಯಿಲೆ ಮನುಷ್ಯರಿಗೂ ಬರುವ ಸಾಧ್ಯತೆ ಇದ್ದು, ಈ ಕುರಿತು ಎಚ್ಚರ ವಹಿಸಬೇಕು. ಬ್ಯಾಸಿಲ್ಲರಿ ಹಿಮೋಗ್ಲೋಬಿನ್ಯುರಿಯಾ ಜಾನುವಾರುಗಳಲ್ಲಿ ರಕ್ತ ಮೂತ್ರವನ್ನುಂಟು ಮಾಡುವುದು ವಿರಳ. ಪೌಷ್ಟಿಕಾಂಶಗಳ ಪಾತ್ರವೇನು? ವಿವಿಧ ರೀತಿಯ ಪೌಷ್ಟಿಕಾಂಶಗಳ ಕೊರತೆ ರಕ್ತ ಮೂತ್ರಕ್ಕೆ ಕಾರಣವಾಗಬಹುದು. ಅದರಲ್ಲಿ ಪ್ರಮುಖವಾದದ್ದು ರಂಜಕದ ಕೊರತೆ. ಜೊತೆಯಲ್ಲೇ ತಾಮ್ರದ ಅಂಶದ ಕೊರತೆಯಿದ್ದರಂತೂ ರಕ್ತ ಮೂತ್ರದ ಪ್ರಮಾಣ ಜಾಸ್ತಿಯಾಗಬಹುದು. ಈ ರೀತಿಯ ಕೊರತೆ ಮಿಶ್ರತಳಿಯ ಜಾನುವಾರುಗಳಿಗೆ ಹೋಲಿಸಿದರೆ ಎಮ್ಮೆಗಳಲ್ಲಿ ಜಾಸ್ತಿ ಎನ್ನಬಹುದು. ರಂಜಕ ಮತ್ತು ತಾಮ್ರದ ಅಂಶವನ್ನು ಹೊಂದಿದ ಉತ್ತಮ ಖನಿಜ ಮಿಶ್ರಣವನ್ನು ನೀಡುವುದರಿಂದ ಇದನ್ನು ತಡೆಗಟ್ಟಬಹುದು

ವಿವಿಧ ವಿಷಬಾಧೆಗಳಾವುವು? ತಾಮ್ರದ ಪ್ರಮಾಣ ಶರೀರದಲ್ಲಿ ಜಾಸ್ತಿಯಾದಾಗಲೂ ಸಹ ರಕ್ತ ಕಣಗಳು ಒಡೆಯುತ್ತವೆ. ಜಾನುವಾರಿಗೆ ಆಕಸ್ಮಿಕವಾಗಿ ಮೈಲುತುತ್ತದ ವಿಷಬಾಧೆಯಾದಾಗ ಇಲಿ ಪಾಷಾಣಗಳನ್ನು, ಜಾನುವಾರು ಆಕಸ್ಮಿಕವಾಗಿ ಸೇವಿಸಿ ವಿಷಬಾಧೆಗೆ ಒಳಗಾದಾಗ, ನೈಟ್ರೇಟ್ ಅಂಶ ಹೊಂದಿದ ಗಿಡಗಳನ್ನು ಸೇವಿಸಿದಾಗಲೂ ಸಹ ರಕ್ತ ಮೂತ್ರವಾಗಬಹುದು. ವಿಚಿತ್ರವೆಂದರೆ, ಎಳೆ ಕರುಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕೆಂಬ ಅರಿವಿರುವುದಿಲ್ಲ. ಅಕಸ್ಮಾತ್ತಾಗಿ ಅವುಗಳಿಗೆ ಹೆಚ್ಚಿನ ನೀರು ದೊರೆತು ಅವು ಕುಡಿದರೆ, ಅವುಗಳ ರಕ್ತ ಕಣಗಳು ಒಡೆದು ರಕ್ತ ಮೂತ್ರವಾಗಿ, ರಕ್ತ ಹೀನತೆಯಾಗಿ ಕರುಗಳು ಮರಣವನ್ನಪ್ಪಬಹುದು. ಔಷಧಗಳು ರಕ್ತ ಮೂತ್ರವನ್ನುಂಟು ಮಾಡುತ್ತವೆಯೇ? ಹೌದು. ಕೆಲವೊಮ್ಮೆ ರೋಗ ಚಿಕಿತ್ಸೆಗೆ ಬಳಸುವ ಔಷಧಗಳ ಅಲರ್ಜಿಯಾದಾಗ ಅಥವಾ ಆಕ್ಸಿಟೆಟ್ರಾಸೈಕ್ಲಿನ್ ಇತ್ಯಾದಿ ಔಷಧಿಗಳನ್ನು ನೀಡಿದಾಗ ಸಹ ರಕ್ತಕಣಗಳು ಒಡೆದು ರಕ್ತ ಮೂತ್ರವಾಗಬಹುದು. ಚಿಕಿತ್ಸೆಯೇನು? ರಕ್ತ ಮೂತ್ರ ಕಾಣಿಸಿಕೊಂಡ ಕೂಡಲೇ ಅದನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ ತಜ್ಞ ಪಶುವೈದ್ಯರ ಗಮನಕ್ಕೆ ತರಬೇಕು. ಅವರು ಇದಕ್ಕೆ ಮೂಲ ಕಾರಣ ಪತ್ತೆ ಮಾಡಿ ತಕ್ಕ ಚಿಕಿತ್ಸೆ ನೀಡಬಲ್ಲರು. ಪ್ರಥಮ ಚಿಕಿತ್ಸೆಯಾಗಿ ರೈತರು ಜಾನುವಾರುಗಳಲ್ಲಿ ಮೂತ್ರವು ಕಾಫಿ ಬಣ್ಣಕ್ಕೆ ತಿರುಗಿದಾಗ ಜಾನುವಾರಿಗೆ ಸುಮಾರು ೫೦ ಗ್ರಾಂ ನಷ್ಟು ಅಡುಗೆ ಸೋಡಾವನ್ನು ಅಹಾರದಲ್ಲಿ ನೀಡಬಹುದು. ಸಾಮಾನ್ಯವಾಗಿ ಹಿಮೋಗ್ಲೋಬಿನ್ ಅಂಶವು ಮೂತ್ರಜನಕಾಂಗದಿಂದ ವಿಸರ್ಜಿಸಲ್ಪಡುವಾಗ ಮೂತ್ರಜನಕಾಂಗದ ಸಣ್ಣ ನಾಳಗಳನ್ನು ಕಟ್ಟಿಕೊಂಡು ಹಾಳುಗೆಡಹಬಹುದು. ಅಡುಗೆ ಸೋಡಾವನ್ನು ನೀಡುವುದರಿಂದ ಮೂತ್ರವು ಕ್ಷಾರತೆಗೊಂಡು, ಸುಲಭವಾಗಿ ವಿಸರ್ಜಿಸಲ್ಪಡುತ್ತದೆ. ಮುಖ್ಯವಾಗಿ ರೈತರು ಅವರ ಜಾನುವಾರುಗಳ ಮೂತ್ರದ ಬಣ್ಣದ ಕಡೆ ನಿತ್ಯ ಒಂದು ಸಾರಿ ಗಮನ ಹರಿಸಿದರೆ, ಈ ರಕ್ತ ಮೂತ್ರವನ್ನು ತಡೆಗಟ್ಟಿ ಜೀವ ಉಳಿಸುವುದು ಕಷ್ಟವೇನಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಡಾ: ಎನ್.ಬಿ.ಶ್ರೀಧರ, ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು, ಜಾನುವಾರುಗಳ ನಿಗೂಢ ಕಾಯಿಲೆಗಳ , ಸಂಶೋಧನಾ ಕೇಂದ್ರ , ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಶಿವಮೊಗ್ಗ, ದೂರವಾಣಿ: ೦೮೧೮೨-೬೫೧೦೦೫, ೯೪೪೮೦೫೯೭೭೭