ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಕೃಷಿಯೊಂದು ಕಲೆ

ಬಿ. ಎಮ್. ಚಿತ್ತಾಪೂರ
9448821755

ಕವಿತಾಳದ ಶ್ರೀಮತಿ ಕವಿತಾ ಅವರು ಹೇಳಿದರು ‘ಒಂದು ಬಾರಿ ದಾಳಿಂಬೆಗೆ ಹೊಡೆಯಬಾರದ ಯಾವುದೋ ರಾಸಾಯನಿಕವನ್ನು ಸಿಂಪರಣೆ ಮಾಡಿದ್ದೆ. ಹೀಗಾಗಿ ಗಿಡದ ಎಲೆ ಹೂಗಳೆಲ್ಲ ಉದುರಿ ಗಿಡ ಸಾಯುವ ಸ್ಥಿತಿಯಲ್ಲಿತ್ತು. ಆವಾಗ ನಾನು ಇದೊಂದು ಸವಾಲೆಂದು ತೊಗೊಂಡು ಮೂರುದಿನಗಳಿಗೊಮ್ಮೆ ಬೀಜಾಮೃತ ಮತ್ತು ಘನಾಮೃತ ಕೊಡುತ್ತ ಬಂದೆ. ರಾಸಾಯನಿಕಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಗಿಡಗಳು ಪುನಹ ಚಿಗುರೊಡೆದು, ಹೂ ಹಿಡಿದು ಫಲ ನೀಡಿದೆ. ನೋಡಿ ಯಾರಿಗೆ ಹೇಳಿದರೂ ನಂಬುವದಿಲ್ಲ. ಈಗ ಬೆಳೆ ಸುಧಾರಿಸಿದೆ. ತೋಟಗಾರಿಕೆ ಇಲಾಖೆಯವರು ಇದೊಂದು ಪವಾಡ ಅಂತ ಹೇಳ್ಯಾರ್ರಿ.’. ಹತ್ತನ್ನೆರಡು ಸಸ್ಯಗಳ ಎಲೆಗಳನ್ನು ಹತ್ತನ್ನೆರಡು ದಿನ ನೆನೆಹಾಕಿ ಬಂದ ಜೀವ ಜಲವನ್ನು ಡ್ರಿಪ್ ಮೂಲಕ ತೋಟಕ್ಕೆ ಕೊಡುವುದೇನೂ ಬಾಬತ್ತಿನ ಕೆಲಸವೇನಲ್ಲ. ಕವಿತಾರವರ ಅವರದು ಮಿಶ್ರ ಸಸ್ಯಪ್ರಭೇದ ಬೇಸಾಯ. ದಾಳಿಂಬೆಯೊಂದಿಗೆ ನೇರಳೆ, ಸೀತಾಫಲ, ಶ್ರೀಗಂಧ, ಮಾವು ಏನೆಲ್ಲ ಸಸ್ಯಗಳು ಅಂದರೆ ಅರಣ್ಯ ಮತ್ತು ಹಣ್ಣಿನ ಸಸ್ಯಗಳ ಮಿಶ್ರ ಬೇಸಾಯ. ಹೀಗಾಗಿ, ಅವರು ಹೇಳುತ್ತಾರೆ ’ಈ ಸಸ್ಯ ವೈವಿಧ್ಯತೆಯಿಂದಾಗಿ ನನಗೆ ಕ್ರಿಮಿ ಕೀಟಗಳ ಬಾಧೆ ಕಡಿಮೆ, ಏಕೆಂದರೆ ಈ ವೈವಿಧ್ಯತೆ ಕೀಟಗಳನ್ನು ನಿಗ್ರಹಿಸುವಲ್ಲಿ ಸಹಕಾರಿ. ಮತ್ತು ಇದೇ ಸಸ್ಯಗಳ ಎಲೆಪತ್ರಗಳನ್ನು ಉಪಯೋಗಿಸಿ ೧೦ -೧೨ ದಿನಗಳಲ್ಲಿ ಜೀವಾಮೃತ ದ್ರಾವಣ (ಬಯೋಡೈಜೆಸ್ಟರ ಬಳಸಿ) ತಯಾರಿಸಿ ಬೆಳೆಗೆ ಸಿಂಪರಣೆ ಮಾಡುತ್ತೇನೆ ಮತ್ತು ನೀರಿನೊಂದಿಗೆ ಗಿಡಗಳಿಗೆ ಕೊಡುತ್ತೇನೆ. ಹೀಗಾಗಿ ಗಿಡದಾಗಿನ ಕಾಯಿ ನೋಡಿದರ ನೆದರ ಆಗುವಂಗ ಇರತದರಿ’ ಅಂತಾರೆ ಶ್ರಿಮತಿ ಕವಿತಾ ಮಿಶ್ರಾರವರು