ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಬಸವನ ಹುಳುವಿನ ಹಾವಳಿ ಮತ್ತು ಹತೋಟಿ

ರೇಖಾ, ಎಂ. ವಿ
೭೪೧೧೨೯೫೦೩೪
1

ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಮಳೆ ಬಿದ್ದ ತಕ್ಷಣ ಅಡಿಕೆ ಬೆಳೆಯಲ್ಲಿ ರೋಗಗಳು ಮತ್ತು ಕೀಟಗಳ ಬಾಧೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಾನಿ ಉಂಟು ಮಾಡುತ್ತಿರುವ ಬಸವನ ಹುಳು ಅಥವಾ ಶಂಖದ ಹುಳು ಬೆಳೆಗಳಿಗೆ ಮಾರಕ ಪೀಡೆಯಾಗಿ ಕಾಡುತ್ತಿದ್ದು ಇದರ ಹತೋಟಿಗೆ ರೈತರು ಹರಸಾಹಸ ಪಡುವಂತಾಗಿದೆ. ಈ ಹುಳುವನ್ನು ಆಫ್ರಿಕಾದ ದೈತ್ಯ ಶಂಖದ ಪೀಡೆ ಎನ್ನುತ್ತಾರೆ. ಈ ಹುಳುವಿನ ಹಾವಳಿ ಕೇವಲ ಅಡಿಕೆ ಬೆಳೆಗೆ ಮಾತ್ರವಲ್ಲದೇ, ತರಕಾರಿ ಬೆಳೆಗಳು, ಕಾಳುಮೆಣಸು, ಅರಿಶಿನ, ಪಪ್ಪಾಯ, ಕಬ್ಬು, ಅಲಂಕಾರಿಕ ಸಸ್ಯಗಳು ಮತ್ತು ಎಲೆಬಳ್ಳಿಗಳ ಮೇಲೆ ಅತಿಯಾಗಿ ಹಾನಿ ಮಾಡುತ್ತಿದ್ದು, ಬಳ್ಳಿಯ ಆಸರೆ ಗಿಡಗಳಾದ ಹಾಲಿವಾಣ ಹಾಗೂ ನುಗ್ಗೆಯ ಗಿಡಗಳ ಎಲೆ ಮತ್ತು ತೊಗಟೆಯನ್ನು ತಿಂದು ನಾಶಮಾಡುತ್ತಿದೆ. ಕಾಳುಗಳನ್ನು ಬಿತ್ತಿದ ಒಂದು ವಾರದಲ್ಲೇ ಮೊಳಕೆಯೊಡೆದ ಎಲ್ಲಾ ಸಸಿಗಳನ್ನು ತಿಂದು ಹಾಕಿ ಎಕರೆಗಟ್ಟಲೇ ಪ್ರದೇಶದ ಬೆಳೆಯನ್ನೇ ನಾಶ ಮಾಡುವ ಮೂಲಕ ಈ ಹುಳು ಪೀಡೆಯಾಗಿ ಪರಿಣಮಿಸಿದೆ. ಸಂತಾನೋತ್ಪತ್ತಿ ಮತ್ತು ಜೀವನ ಚಕ್ರ : ಮೊಟ್ಟೆಯಿಂದ ಹೊರಬರುವ ಮರಿಗಳು ಸುಮಾರು ಒಂದು ವರ್ಷ ಬೆಳೆದು ನಂತರ ಪ್ರೌಢಾವಸ್ಥೆಯನ್ನು ತಲುಪಿ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಪಡೆಯುತ್ತವೆ. ಈ ಹುಳುಗಳು ದ್ವಿಲಿಂಗಿಗಳಾಗಿದ್ದು, ಗಂಡು ಮತ್ತು ಹೆಣ್ಣು ಎರಡೂ ಅಂಗಗಳಿದ್ದು ಒಂದೇ ಗಾತ್ರದ ಎರಡು ಹುಳುಗಳ ನಡುವೆ ಮಿಲನ ಕ್ರಿಯೆ ನಡೆದು ವೀರ್ಯಾಣುಗಳ ಹಂಚಿಕೆಯಾಗಿ ಎರಡೂ ಹುಳುಗಳು ಗರ್ಭಧರಿಸಿ ಮೊಟ್ಟೆ ಇಡುತ್ತವೆ. ಈ ಹುಳುಗಳು ೩ ರಿಂದ ೫ ವರ್ಷಗಳ ಕಾಲ ಜೀವಿಸಬಲ್ಲವಾಗಿದ್ದು, ಪ್ರತಿಯೊಂದು ಹುಳುವು ತನ್ನ ಜೀವಿತ ಅವಧಿಯಲ್ಲಿ ೮೦೦ ರಿಂದ ೧೨೦೦ ಮೊಟ್ಟೆಗಳನ್ನು ಹಸಿಯಾದ ಮಣ್ಣಿನಲ್ಲಿ ೧೨.೫ ಸೆಂ.ಮೀ. ಅಗಲ ಮತ್ತು ೩೧.೫ ಸೆಂ.ಮೀ. ಆಳದವರೆಗೆ ಗೂಡನ್ನು ಮಾಡಿ ಮೊಟ್ಟೆ ಇಡುತ್ತವೆ. ಗುಲಗಂಜಿ ಗಾತ್ರದ ಮೊಟ್ಟೆಗಳು ಹಾಲಿನ ಕೆನೆಯ ಬಣ್ಣವನ್ನು ಹೊಂದಿದ್ದು ಮೇಲೆ ಲೋಳೆಯಂತಹ ದ್ರವದಿಂದ ಕೂಡಿರುತ್ತವೆ. ಮೊಟ್ಟೆಗಳಿಂದ ಮರಿಗಳು ಒಂದರಿಂದ ಎರಡು ವಾರಗಳಲ್ಲಿ ಹೊರ ಬರುತ್ತವೆ. ಮಳೆಗಾಲದಲ್ಲಿ ಕೇವಲ ಒಂದು ವಾರದಲ್ಲಿಯೇ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ ನಂತರ ೧೦ ರಿಂದ ೧೨ ತಿಂಗಳುಗಳಲ್ಲಿ ಪ್ರೌಢಾವಸ್ಥೆಯನ್ನು ತಲುಪಿ ಪುನಃ ತಮ್ಮ ಸಂತಾನವನ್ನು ಮುಂದುವರೆಸುತ್ತವೆ

3

ಬಸವನ ಹುಳುಗಳ ಬೆಳವಣಿಗೆಗೆ ಅನುಕೂಲ ಕರವಾದ ಅಂಶಗಳು : ಮಳೆಗಾಲದ ಅವಧಿಯಲ್ಲಿ ನೀರಿನ ಆಗರಗಳು, ತಂಪಾದ ವಾತಾವರಣ ಉಂಟುಮಾಡುವ ಕಸದ ರಾಶಿ, ಕಳೆಗಳು ಮತ್ತು ತ್ಯಾಜ್ಯಗಳು ಹುಳುಗಳಿಗೆ ಅಡಗುತಾಣಗಳಾಗಿ ಅವುಗಳ ವೃದ್ಧಿಗೆ ಕಾರಣವಾಗುತ್ತವೆ. ಹುಳುಗಳ ಅಸಮರ್ಪಕ ನಿರ್ವಹಣೆ ಮತ್ತು ಸಮಗ್ರ ನಿರ್ವಹಣೆ ಮಾಡದೆ ಇರುವುದು. ಬಸವನ ಹುಳುವಿನ ಚಟುವಟಿಕೆ : ಈ ಹುಳುಗಳ ಚಟುವಟಿಕೆ ಮಳೆ ಬಿದ್ದ ನಂತರ ಆರಂಭವಾಗಿ ಚಳಿಗಾಲದವರೆಗೂ ಇದ್ದು, ಬೇಸಿಗೆಯಲ್ಲಿ ನಿದ್ರಾವಸ್ಥೆಗೆ ಹೋಗುತ್ತವೆ. ಹಗಲಿನಲ್ಲಿ ಈ ಹುಳುಗಳು ಸಂದಿ ಗೊಂದಿಗಳಲ್ಲಿ, ಬಿರುಕು, ಕಲ್ಲಿನ ಅಡಿಗಳಲ್ಲಿ, ಮರದ ಟೊಂಗೆಗಳ ಮೇಲೆ, ಗಿಡದ ಬುಡಗಳಲ್ಲಿ, ತರಗೆಲೆಗಳಲ್ಲಿ ಹಾಗೂ ಕಸಕಡ್ಡಿಗಳಲ್ಲಿ ಅಡಗಿ ಕುಳಿತುಕೊಂಡು ಸಂಜೆ ವೇಳೆಯಲ್ಲಿ (ಬೆಳಕು ಮಬ್ಬಾದಾಗ) ಅಡಗು ತಾಣಗಳಿಂದ ಹೊರ ಬಂದು ಆಹಾರಕ್ಕಾಗಿ ಹುಡುಕಾಡಿ ಬೆಳೆಗಳ ಚಿಗುರು, ತೊಗಟೆ ಹಾಗೂ ಎಲೆಗಳನ್ನು ತಿಂದು ನಾಶ ಮಾಡುತ್ತವೆ. ಹುಳುಗಳ ಚಟುವಟಿಕೆ ಸಂಜೆ ೬ ಗಂಟೆಯಿಂದ ಬೆಳಗಿನ ಜಾವ ೧ರಿಂದ ೨ ಗಂಟೆಯವರೆಗೆ ಇರುತ್ತವೆ. ನಂತರ ಯಥಾಪ್ರಕಾರ ಬೆಳಗಾಗುವುದರೊಳಗೆ ಈ ಹುಳುಗಳು ಅಡಗು ತಾಣಗಳಲ್ಲಿ ಅಡಗಿಕೊಳ್ಳುತ್ತವೆ. ಬೆಳಗಿನ ಹೊತ್ತು ಕೇವಲ ಕೆಲವೇ ಹುಳುಗಳು ಅಲ್ಲಲ್ಲಿ ಹರಿದಾಡುತ್ತಿರುವುದನ್ನು ಕಾಣಬಹುದು

ಹತೋಟಿ ಕ್ರಮಗಳು- 1.ರೈತರು ಸಾಮೂಹಿಕವಾಗಿ ಹೊಲದಲ್ಲಿ ಪೆಟ್ರೋಮ್ಯಾಕ್ಸ್ ದೀಪ ಅಥವಾ ಟಾರ್ಚ್ ದೀಪದ ಸಹಾಯದಿಂದ ಸಾಯಂಕಾಲದ ಅವಧಿಯಲ್ಲಿ ಗುಂಪಾಗಿರುವ ಮರಿಹುಳುಗಳನ್ನು ಹಾಗೂ ಬೆಳೆದ ಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸಬೇಕು (ಆರಿಸಿದ ಹುಳುಗಳಿಗೆ ಉಪ್ಪನ್ನು ಹಾಕಿ ನಾಶಪಡಿಸಬಹುದು). 2. ಹುಳುಗಳ ಬೆಳವಣಿಗೆಗೆ ಅನುಕೂಲಕರವಾಗಿರುವ ವಾತಾವರಣವನ್ನು ಒದಗಿಸದೇ ಇರುವುದು. ಅಂದರೆ, ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಆದಷ್ಟು ಶುಚಿಯಾಗಿಡುವುದು. 3. ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು. 4. ತೋಟದ ಸುತ್ತಲೂ ಬಸಿಕಾಲುವೆಗಳನ್ನು ಮಾಡಿ ಅದರಲ್ಲಿ ಸುಣ್ಣವನ್ನು ತುಂಬುವುದರಿಂದ ತಡೆಗೋಡೆಯಾಗಿ ಹುಳುಗಳನ್ನು ನಿಯಂತ್ರಿಸಬಹುದು. 5. ಆರಿಸಿ ಸಂಗ್ರಹಿಸಿದ ಹುಳುಗಳನ್ನು ಕೋಳಿ, ಮೀನು, ಹಂದಿ ಮತ್ತು ಬಾತುಕೋಳಿಗಳಿಗೆ ಆಹಾರವಾಗಿ ಬಳಸಬಹುದು ಅಥವಾ ಬಾತುಕೋಳಿಗಳನ್ನು ಸಾಕುವುದರಿಂದ ಹುಳುಗಳನ್ನು ಹತೋಟಿ ಮಾಡಬಹುದು. 6. ಅಡಿಕೆ ಅಥವಾ ಇತರ ಎತ್ತರದ ಗಿಡಗಳ ಕಾಂಡಕ್ಕೆ ೧ ಮೀಟರ್ ಎತ್ತರದಲ್ಲಿ ತಾಮ್ರದ/ ಬೋರ್ಡೋ ದ್ರಾವಣ ಅಥವಾ ಕಾಫರ್ ಸಲ್ಪೇಟ್ನ ಲೇಪನವನ್ನು ಮಾಡಿದ ತಗಡನ್ನು ಕಾಂಡದ ಸುತ್ತ ಸುತ್ತಿದರೆ ಹುಳುಗಳು ಆಘಾತಕ್ಕೊಳಗಾಗಿ ಮರವನ್ನು ಏರುವುದಿಲ್ಲ. 7. ಹೊಲದಲ್ಲಿ ಅಲ್ಲಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹರಡುವುದರಿಂದ ಅಥವಾ ಕಸವನ್ನು ಗುಂಪಾಗಿರಿಸಿ ಅದರ ಆಶ್ರಯವನ್ನು ಪಡೆಯಲು ಬರುವ ಹುಳುಗಳನ್ನು ಆಯ್ದು ನಾಶಪಡಿಸುವುದು ಅಥವಾ ೨೫-೩೦ ಗ್ರಾಂ ಬ್ಲೀಚಿಂಗ್ ಪುಡಿ / ಸುಣ್ಣದ ಪುಡಿ / ತಂಬಾಕು ಮತ್ತು ಮೈಲು ತುತ್ತದ ಮಿಶ್ರಣವನ್ನು ಸಿಂಪರಣೆ ಮಾಡಿ ಹುಳುಗಳನ್ನು ನಾಶ ಮಾಡಬೇಕು. 8. ಬಾಧೆಯಿರುವ ತೋಟಗಳಲ್ಲಿ ಪ್ರತಿ ಗಿಡದ ಸುತ್ತಲೂ ಒಂದು ಅಡಿ ಅಂತರದಲ್ಲಿ ಶೇ.೨.೫ ರ ಮೆಟಾಲ್ಡಿಹೈಡ್ ತುಣುಕುಗಳನ್ನು ಪ್ರತಿ ಗಿಡಕ್ಕೆ ೫ ತುಣುಕುಗಳಂತೆ ಸಂಜೆ ೬ ಗಂಟೆಯ ನಂತರ ಉದುರಿಸಿ ಹುಳುಗಳನ್ನು ನಾಶಪಡಿಸಬೇಕು. ಹೊಸದಾಗಿ ತೋಟ, ತರಕಾರಿ ಹಾಗೂ ಹೂವಿನ ಗಿಡಗಳನ್ನು ಬೆಳೆಸುತ್ತಿರುವ ತೋಟಗಳಲ್ಲಿ ಬದುಗಳ ಸುತ್ತಲೂ ೩ ಅಡಿಗಳ ಅಗಲದಲ್ಲಿ ಶೇ. ೨.೫ರ ಮೆಟಾಲ್ಡಿಹೈಡ್ ತುಣುಕುಗಳನ್ನು (ಎಕರೆಗೆ ೮-೧೦ ಕೆ.ಜಿ. ಮೆಟಾಲ್ಡಿಹೈಡ್ ತುಣುಕುಗಳು ಬೇಕಾಗುತ್ತವೆ) ಉದುರಿಸಿದರೆ ಹುಳುಗಳು ಈ ಪಾಷಾಣಕ್ಕೆ ಆಕರ್ಷಣೆಗೊಂಡು, ಪಾಷಾಣದ ತುಣುಕುಗಳನ್ನು ತಿಂದು ತಲೆಯ ಭಾಗವನ್ನು ಹೊರಗೆ ಚಾಚಿಕೊಂಡು ಲೋಳೆ ಸುರಿಸಿ ಮರುದಿನವೇ ಸಾವನ್ನಪ್ಪುತ್ತವೆ. 9. ಸುಮಾರಾಗಿ ಬಲಿತ ಪರಂಗಿ ಅಥವಾ ಪಪ್ಪಾಯಿ ಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಹೊಲ/ತೋಟದಲ್ಲಿ ಅಲ್ಲಲ್ಲಿ ಸಣ್ಣ ಗುಡ್ಡೆ ಮಾಡಿ ಸಂಜೆ ೬ ರಿಂದ ೭ ಗಂಟೆ ಸಮಯದಲ್ಲಿ ಇಡಬೇಕು. ಅಂತಹ ಕಡೆಗೆ ಎಲ್ಲ ವಯಸ್ಸಿನ ಹಾಗೂ ಎಲ್ಲಾ ಗಾತ್ರದ ಬಸವನ ಹುಳುಗಳು ಆಕರ್ಷಿತವಾಗುತ್ತವೆ. ಒಂದೆರಡು ಗಂಟೆಗಳ ನಂತರ, ಈ ಎಲ್ಲ ಹುಳುಗಳನ್ನು ಆರಿಸಿ ನಾಶಪಡಿಸಬೇಕು. ವಿಶೇಷವಾಗಿ ಸಣ್ಣ (ಮರಿ) ಹುಳುಗಳನ್ನು ಈ ಕ್ರಮದಿಂದ ಸುಲಭವಾಗಿ ಆಕರ್ಷಿಸಿ ನಾಶಪಡಿಸುವುರಿಂದ ಇವುಗಳ ಹತೋಟಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. 10. ಗೋಧಿ ಅಥವಾ ಅಕ್ಕಿಯ ತೌಡು (೧೦ ಕೆ.ಜಿ.), ಬೆಲ್ಲ (೧.೫ ಕೆ.ಜಿ.) ಮತ್ತು ತಕ್ಕ ಮಟ್ಟಿಗೆ ನೀರನ್ನು (೪ ಲೀ.) ಬೆರೆಸಿ ನೆನೆಯಿಸಬೇಕು. ೩೬ ಗಂಟೆಗಳ ನಂತರ, ಮಾರನೇ ದಿನ ಮಿಥೋಮಿಲ್ ೪೦ ಎಸ್. ಪಿ. ಕೀಟನಾಶಕವನ್ನು (೧೫೦ ಗ್ರಾಂ) ಮಿಶ್ರಣ ಮಾಡಿ, ಸಂಜೆ ೬.೦೦ ಗಂಟೆಯ ನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಿ ಹುಳುಗಳನ್ನು ನಾಶಪಡಿಸಬಹುದು. 11. ಪರಂಗಿ/ಪಪ್ಪಾಯಿ ಕಾಯಿಯ ಸಣ್ಣ ಸಣ್ಣ ತುಂಡುಗಳ (೧೦ ಕೆ.ಜಿ.) ಜೊತೆ ಮಿಥೋಮಿಲ್ ೪೦ ಎಸ್.ಪಿ. ಕೀಟನಾಶಕ (೧೦೦ ಗ್ರಾಂ) ಮಿಶ್ರಣ ಮಾಡಿ, ಸಂಜೆ ೬.೦೦ ಗಂಟೆಯ ನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಿ ಹುಳುಗಳನ್ನು ನಾಶಪಡಿಸಬಹುದು

6

ವಿಶೇಷ ಸೂಚನೆ : 1. ಸತ್ತ ಹುಳುಗಳನ್ನು ಮರುದಿನವೇ ಆರಿಸಿ ೩ ಅಡಿ ಗುಂಡಿಯಲ್ಲಿ ಹೂಳಬೇಕು. ಈ ರೀತಿ ಮಾಡುವುದರಿಂದ ಸತ್ತ ಹುಳುವಿನ ಹೊಟ್ಟೆಯಲ್ಲಿರುವ ಮೊಟ್ಟೆಗಳನ್ನು ನಾಶಮಾಡಿದಂತಾಗುತ್ತದೆ. ಇಲ್ಲವಾದಲ್ಲಿ ಹುಳುಗಳ ಹೊಟ್ಟೆಯಲ್ಲಿರುವ ಮೊಟ್ಟೆಗಳೊಡೆದುಕೊಂಡು ಮರಿಗಳು ಹೊರ ಬರುತ್ತವೆ. 2. ಬಸವನ ಹುಳುಗಳು ನಿಸರ್ಗದಲ್ಲಿ ಶೇ. ೭೫-೮೦ ರಷ್ಟು ತಮ್ಮ ಆಹಾರವನ್ನು ಕೊಳೆಯುತ್ತಿರುವ ಪ್ರಾಣಿ ಮತ್ತು ಸಸ್ಯಜನ್ಯ ಪದಾರ್ಥಗಳನ್ನು ತಿಂದು ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡುತ್ತವೆ. ಆದ್ದರಿಂದ ಬೆಳೆಗಳ ಮೇಲೆ ಹಾವಳಿ ಇದ್ದಾಗ ಮಾತ್ರ ಹತೋಟಿ ಕ್ರಮ ಕೈಗೊಂಡು ಪ್ರಕೃತಿಯ ಸಮತೋಲನವನ್ನು ಕಾಪಾಡಬೇಕು. 3. ಮೆಟಾಲ್ಡಿಹೈಡ್ ಹಾಗೂ ಮಿಥೋಮಿಲ್ ವಿಷ ಪಾಷಾಣವನ್ನು ಬಳಸಿದ ಯಾವುದೇ ಬೆಳೆಗಳಲ್ಲಿ ಇತರೆ ಸಾಕು ಪ್ರಾಣಿಗಳು ಹಾಗೂ ಜಾನುವಾರುಗಳು ಈ ಪಾಷಾಣದ ತುಣುಕುಗಳನ್ನು ತಿನ್ನದಂತೆ ಎಚ್ಚರವಹಿಸಬೇಕು. 4. ರೈತರು ಈ ಹುಳುಗಳ ಹತೋಟಿ ಕ್ರಮಗಳನ್ನು ಸಾಮೂಹಿಕವಾಗಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಕ್ಕದ ತೋಟಗಳಿಂದ ಹುಳುಗಳು ಆಹಾರವನ್ನು ಹುಡುಕಿಕೊಂಡು ಎಲ್ಲಾ ತೋಟಗಳಿಗೂ ಹರಡುತ್ತವೆ. 5. ರಾಸಾಯನಿಕದಿಂದ ಸತ್ತ ಹುಳುಗಳನ್ನು ಬೇರೆ ಪ್ರಾಣಿಗಳಿಗೆ ಆಹಾರವಾಗಿ ಬಳಸಬಾರದು