ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ನಾಟಿಪಶುವೈದ್ಯ

ಜಾನುವಾರುಗಳಲ್ಲಿ ಕಣ್ಣಿನ ತೊಂದರೆಗಳು-ಅಲಕ್ಷ್ಯ ಬೇಡ

ಡಾ. ಎನ್.ಬಿ.ಶ್ರೀಧರ
081822651005
1

ಕಣ್ಣು ಮಾನವನಿಗೇ ಆಗಲಿ, ರಾಸುಗಳಿಗೇ ಆಗಲಿ ಬಹು ಅಮೂಲ್ಯ ಅಂಗ. ಜಾನುವಾರುಗಳ ಆಯ್ಕೆಯ ವೇಳೆಯಲ್ಲಿ ಕಣ್ಣುಗಳ ಹೊಳಪಿಗೆ ವಿಶೇಷ ಪ್ರಾಧಾನ್ಯ ನೀಡುವುದನ್ನು ನಾವಿಲ್ಲಿ ಸ್ಮರಿಸಬಹುದು. ನಮ್ಮ ಕಣ್ಣುಗಳ ಬಗ್ಗೆ ಅಷ್ಟೊಂದು ಜಾಗ್ರತೆ ವಹಿಸುವ ನಾವುಗಳು ಹಲವು ವೇಳೆ ಜಾನುವಾರುಗಳ ಕಣ್ಣುಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ದನ, ಕರು, ಎಮ್ಮೆ, ಕುರಿ, ಮೇಕೆಗಳ ಕಣ್ಣುಗಳನ್ನು ತರಹೇವಾರಿ ತೊಂದರೆಗಳು ಕಾಡಬಹುದು. ಕಾರಣವಿಲ್ಲದೇ ರಾಸುಗಳ ಎರಡೂ ಕಣ್ಣುಗಳಲ್ಲಿ ನೀರು ಸುರಿಯುವುದನ್ನು ಹಲವರು ಗಮನಿಸಿರಬಹುದು. ಹೊಟ್ಟೆ ಹಾಗೂ ಕರುಳಿನಲ್ಲಿ ಜಂತುಹುಳುಗಳ ಸಂಖ್ಯೆ ಮಿತಿಮೀರಿದಾಗ ಹೀಗಾಗುವ ಸಾಧ್ಯತೆಗಳಿವೆ. ಸಗಣಿ ತಪಾಸಣೆ ಮಾಡಿಸಿ ಸೂಕ್ತ ಜಂತುನಾಶಕ ಔಷಧೋಪಚಾರ ಮಾಡಿಸಿದರೆ ಈ ಸಮಸ್ಯೆ ಇನ್ನಿಲ್ಲವಾಗುತ್ತದೆ. ಇದರ ಹೊರತಾಗಿ ಜಾನುವಾರುಗಳ ಕಣ್ಣಿನಲ್ಲಿ ಹೂ ಕೂರುವುದು, ಕೆಂಪಗಾಗುವುದು, ಗಾಯಗಳಾಗುವುದು, ಗಡ್ಡೆಗಳು ಬೆಳೆಯುವುದು ಇತ್ಯಾದಿ ಸಮಸ್ಯೆಗಳು ತಲೆದೋರುತ್ತಲೇ ಇರುತ್ತವೆ. ಇದಕ್ಕೆ ಕಾರಣಗಳು ಹಲವಾರು; ಕಣ್ಣಿಗೆ ಬೀಳುವ ಪೆಟ್ಟುಗಳು, ಪೌಷ್ಟಿಕ ಆಹಾರದ ಕೊರತೆ, ನೊಣಗಳ ಕಾಟ, ಅನಾರೋಗ್ಯ ಇತ್ಯಾದಿ. ಇಂತಹ ಸಮಸ್ಯೆಗಳನ್ನು ಆರಂಭದಲ್ಲೇ ಗುರ್ತಿಸಿ ಸೂಕ್ತ ಚಿಕಿತ್ಸೆಯಿಂದ ವಾಸಿ ಮಾಡಿಕೊಳ್ಳುವುದು ಜಾಣತನ. ನಿರ್ಲಕ್ಷ್ಯ ತೋರಿದರೆ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಗಬಹುದು. ಇದು ಜಾನುವಾರುಗಳ ಉತ್ಪಾದಕತೆಗೆ ಮಾರಕವಷ್ಟೇ ಅಲ್ಲ, ಪ್ರಾಣಿ ಕಲ್ಯಾಣದ ಆಯಾಮದಲ್ಲಿ ಅಮಾನವೀಯವೂ ಹೌದು. ಜನಪದ ಪಶುವೈದ್ಯದಲ್ಲಿ ರಾಸುಗಳ ಕಣ್ಣಿನ ತೊಂದರೆಗಳಿಗೆ ಹಲವು ದಿವ್ಯೌಷಧಿಗಳು ಲಭ್ಯವಿವೆ. ಕೊಂಚ ಜಾಗ್ರತೆಯಿಂದ ಇವನ್ನು ಬಳಸಿ ರಾಸುಗಳ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದಾಗಿದೆ. ಕಣ್ಣಿನಲ್ಲಿ ಹೂ ಬೀಳುವುದು: ಕಣ್ಣಿನ ಗುಡ್ಡೆಯ ಕಪ್ಪು ಭಾಗ ಬಿಳೀ ಬಣ್ಣಕ್ಕೆ ತಿರುಗುವುದನ್ನು ಜನಸಾಮಾನ್ಯರು ಹೂ ಕೂರುವುದು ಎಂದು ಗುರ್ತಿಸುತ್ತಾರೆ. ಆರಂಭದಲ್ಲಿ ಇದನ್ನು ಸುಲಭವಾಗಿ ನಿಯಂತ್ರಿಸಬಹುದಾದರೂ ಅಲಕ್ಷ್ಯ ಮಾಡಿದರೆ ದೃಷ್ಟಿದೋಷಕ್ಕೆ ಕಾರಣವಾಗಬಹುದು

3

೧.ಮೂರು-ನಾಲ್ಕು ಹನಿ ಎಕ್ಕದ ತಾಜಾ ಹಾಲನ್ನು ಕಡಲೇ ಕಾಳು ಗಾತ್ರದ ಹಸುವಿನ ಬೆಣ್ಣೆಯಲ್ಲಿ ಚೆನ್ನಾಗಿ ರಂಗಳಿಸಿ ಕಣ್ಣಿನ ಹಿಂಭಾಗದ ತಗ್ಗಿನಲ್ಲಿ ಒಂದು ಸಲ ಮಾತ್ರ ಇಡಬೇಕು. ಇದನ್ನು ನೇರವಾಗಿ ಕಣ್ಣಿನಲ್ಲಿ ಹಾಕಬಾರದು. ಈ ಔಷಧಿ ಹಾಕಿದ ಮಾರನೆಯ ದಿನ ಕಣ್ಣು ಊದಿಕೊಂಡು ನಾಲ್ಕೈದು ದಿನಗಳ ಕಾಲ ನೀರು ಸುರಿಯುತ್ತದೆ. ನಂತರ ನಿಧಾನವಾಗಿ ಕಣ್ಣಿನ ತೊಂದರೆಗಳು ಕಡಿಮೆಯಾಗುತ್ತವೆ. ೨. ಹಿರೇಮದ್ದಿನ ಗಿಡ (ಅಶ್ವಗಂಧ)ದ ೪-೫ ಎಲೆಗಳನ್ನು ಸ್ವಚ್ಛ ನೀರಿನಿಂದ ತೊಳೆದು ಕೈಯಲ್ಲಿ ಹೊಸಕಿ ರಸ ತೆಗೆಯಬೇಕು. ಪ್ರತಿನಿತ್ಯ ೪-೫ ಹನಿ ರಸವನ್ನು ಹೂ ಕೂತ ಕಣ್ಣಿನಲ್ಲಿ ಹಾಕುವುದರಿಂದ ೫-೬ ದಿನಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದು. ೩. ನಾಲ್ಕು ಕಾಳುಮೆಣಸು ಮತ್ತು ಐದು ಚಮಚ ಕಲ್ಲುಸಕ್ಕರೆಯನ್ನು ಚೆನ್ನಾಗಿ ಅರೆದು ಒಂದು ನಿಂಬೆಹಣ್ಣಿನ ರಸದಲ್ಲಿ ಬೆರೆಸಬೇಕು. ಈ ರಸದ ನಾಲ್ಕು ಹನಿಗಳನ್ನು ದಿನಕ್ಕೆ ಮೂರು ಬಾರಿಯಂತೆ ೩-೪ ದಿನಗಳ ಕಾಲ ರಾಸುಗಳ ಕಣ್ಣಿಗೆ ಹಾಕುವುದರಿಂದ ಹೂ ಕೂತಿರುವುದನ್ನು ನಿವಾರಿಸಬಹುದು. ೪. ಹಸೀ ಶುಂಠಿಯನ್ನು ಮೊಸರಿನಲ್ಲಿ ತೇದು ಕಣ್ಣಿನ ಸುತ್ತಲೂ ಲೇಪಿಸುವುದರಿಂದ ಹಾಗೂ ಒಂದೆರಡು ಹನಿಯಷ್ಟು ಕಣ್ಣಿನೊಳಗೆ ಹಾಕುವುದರಿಂದಲೂ ಉತ್ತಮ ಫಲಿತಾಂಶ ಸಿಗಬಹುದು

ಕಣ್ಣು ಕೆಂಪಾಗುವುದು: ಉಷ್ಣತೆಯ ಕಾರಣಕ್ಕೆ ಅಥವಾ ಕಣ್ಣಿನ ಪೊರೆಯ ಉರಿಯೂತದಿಂದಾಗಿ ಕಣ್ಣು ಕೆಂಪಾಗಬಹುದು. ೧.ಅರ್ಧ ಕೆ.ಜಿ ಮೆಂತ್ಯೆಯನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಮೂರುದಿನ ಕುಡಿಸುವುದು ರಾಸುಗಳನ್ನು ತಂಪಾಗಿಸಿ ಕಣ್ಣಿನ ಕೆಂಪನ್ನು ಕಡಿಮೆ ಮಾಡುತ್ತದೆ. ೨. ಕೊತ್ತಂಬರಿ ಬೀಜವನ್ನು ರಾತ್ರಿ ನೆನೆ ಹಾಕಿ ಮಾರನೇ ಬೆಳಿಗ್ಗೆ ಕುಡಿಸುವುದೂ ಒಳ್ಳೆಯದು. ಕಣ್ಣಿನಲ್ಲಿ ಗಾಯ/ ನೀರು ಸೋರುವುದು: ೧.ಸ್ವಚ್ಛವಾದ ಲೋಳೆಸರದ ತಿರುಳನ್ನು ತೆಗೆದುಕೊಂಡು ಇದರ ನಾಲ್ಕೈದು ಹನಿಗಳನ್ನು ದಿನಕ್ಕೊಮ್ಮೆಯಂತೆ ೩-೪ ದಿನಗಳ ಕಾಲ ಕಣ್ಣಿನ ಒಳಗೆ ಹಾಕಬೇಕು. ೨.ಒಂದು ಲೋಟ ಕುದಿಸಿ ಆರಿಸಿದ ನೀರಿನಲ್ಲಿ ಎರಡು ಚಮಚ ಅರಿಶಿಣದ ಪುಡಿ ಬೆರೆಸಿ ಈ ನೀರಿನಲ್ಲಿ ಕಣ್ಣುಗಳನ್ನು ಚೆನ್ನಾಗಿ ತೊಳೆಯಬೇಕು. ಇದನ್ನೇ ನಾಲ್ಕು ಹನಿಯಷ್ಟು ಕಣ್ಣಿನಲ್ಲಿ ಬಿಡುವುದು ಸಹಾ ಫಲಕಾರಿಯಾಗಬಹುದು. ಗ್ರಂಥ ಋಣ: ೧. ಮೂಲಿಕಾ ಪಶುವೈದ್ಯ- ಬೈಫ್ ಸಂಸ್ಥೆಯ ಪ್ರಕಟಣೆ, ೨. ಒಗ್ಗರಣೆ ಡಬ್ಬಿಯಲ್ಲಿ ಪಶು ಆರೋಗ್ಯ-ಡಾ. ಗಣೇಶ ಹೆಗಡೆ ನೀಲೇಸರ