ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
೯೪೪೯೬೨೩೨೭೫
1

ಸತತ ಮೂರು ವರ್ಷಗಳಿಂದ ಬರಗಾಲವನ್ನು ಎದುರಿಸಿಯೂ ಸಂಪೂರ್ಣ ಸಾವಯವ ಪದ್ಧತಿ ಹಾಗೂ ಜೀರೋ ಕಲ್ಟಿವೇಶನ್ ಅಳವಡಿಸಿಕೊಂಡು ಸಮಗ್ರ ಕೃಷಿ ಪದ್ಧತಿಯಲ್ಲಿ ವೈವಿಧ್ಯ ಬೆಳೆಗಳನ್ನು ಬೆಳೆದಿರುವ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮದ ಶ್ರೀಮತಿ ನಯನ ಮತ್ತು ಶ್ರೀ ಆನಂದ ದಂಪತಿಗಳು ಎಲ್ಲರ ಗಮನ ಇತ್ತ ಸೆಳೆಯುವಂತೆ ಮಾಡಿದ್ದಾರೆ. ಇವರು ತಮ್ಮ ೧೮ ಎಕರೆ ಕೃಷಿಭೂಮಿಯನ್ನು ಸಂಪೂರ್ಣ ಸಾವಯವ ಪದ್ಧತಿಯ ಕರ್ಮಭೂಮಿಯಾಗಿಸಿಕೊಂಡಿದ್ದಾರೆ. ಈಗಿರುವ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ವಿಂಗಡಿಸಿಕೊಂಡಿದ್ದಾರೆ. ೪ ಎಕರೆ ಅಡಿಕೆ ತೋಟದಲ್ಲಿ ಬಾಳೆ, ಅರಿಶಿಣ, ಶುಂಠಿ ಬೆಳೆಗಳನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಿದ್ದಾರೆ. ಒಂದು ಎಕರೆ ಮಾವು, ಐದು ಎಕರೆಯಲ್ಲಿ ರಾಗಿ, ಭತ್ತ, ತರಕಾರಿ ಕಾಯಿಪಲ್ಲೆಗಳು, ಹೆಸರು, ಉದ್ದು, ಅಲಸಂದೆ, ಹುರುಳಿ, ಅವರೆ, ಜೋಳ ಮುಂತಾದ ಕಾಳುಬೆಳೆಗಳನ್ನು ಬೆಳೆಯುತ್ತಿದ್ದಾರೆ. ಉಳಿದ ಎಂಟು ಎಕರೆ ಭೂಮಿಯಲ್ಲಿ ತೆಂಗನ್ನು ಬೆಳೆಯುತ್ತಿದ್ದಾರೆ. ತೆಂಗಿನ ತೋಟದಲ್ಲಿ ವಿಶೇಷವಾಗಿ ಪ್ಯೂರೇರಿಯಾ, ಮುಳ್ಳಿಲ್ಲದ ನಾಚಿಕೆ ಮುಳ್ಳನ್ನು ಮುಚ್ಚಿಗೆ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಇದರಿಂದ ತೋಟದಲ್ಲಿ ತೇವಾಂಶ ಉಳಿಕೆಯಾಗಿ ಕಡಿಮೆ ನೀರಿನಲ್ಲಿ ಅಧಿಕ ಉತ್ಪಾದನೆ ತೆಗೆಯುತ್ತಿದ್ದಾರೆ. ಪ್ರತಿವರ್ಷ ಸರಾಸರಿ ೩೦ ಸಾವಿರ ತೆಂಗಿನಕಾಯಿ ಇಳುವರಿ ಪಡೆಯುತ್ತಿದ್ದಾರೆ. ಸಹಜ ಕೃಷಿ ಪದ್ಧತಿಯನ್ನು ಅನುಸರಿಸುತ್ತಲೇ ಭೂಮಿಯ ಉಳುಮೆಯನ್ನು ಕಳೆದ ೧೦ ವರ್ಷಗಳಿಂದ ಮಾಡದೆ ಜೀರೋ ಕಲ್ಟಿವೇಶನ್ ಅನುಸರಿಸಿ ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆ ಮಾಡುತ್ತಿದ್ದಾರೆ. ಈ ಪದ್ಧತಿಯಿಂದಾಗಿ ಕೊಬ್ಬರಿ ತೂಕ, ಗುಣಮಟ್ಟ, ಎಣ್ಣೆಯ ಅಂಶ ಹೆಚ್ಚಿನ ಪ್ರಮಾಣದಲ್ಲಿ ಉತ್ಕೃಷ್ಟತೆಯನ್ನು ಹೊಂದಿದೆ. ಕೃಷಿ ಭೂಮಿಗೆ ಜೀವಾಮೃತ, ಕುರಿಗೊಬ್ಬರವನ್ನು ಯಥೇಚ್ಛವಾಗಿ ಬಳಸುತ್ತಾರೆ. ಗುಬ್ಬಿ ತಾಲ್ಲೂಕಿನಲ್ಲಿ ಕೆಲವು ಭಾಗಗಳಲ್ಲಿ ನೀರಾವರಿ ಸೌಲಭ್ಯವಿದ್ದರೂ ಇವರ ಜಮೀನಿಗೆ ಪಕ್ಕದ ಕೆರೆಯ ನೀರೇ ಆಸರೆಯಾಗಿದೆ. ಇವರ ತೋಟದಲ್ಲಿ ೫ ಕೊಳವೆ ಬಾವಿಗಳಿದ್ದು ಕೆರೆಯ ನೀರಿನಿಂದ ಜಲ ಮರುಪೂರಣವಾಗುವುದರಿಂದ ನೀರಿನ ಕೊರತೆಯನ್ನು ಎದುರಿಸಿಲ್ಲ. ಲಭ್ಯವಿರುವ ನೀರನ್ನೇ ಸಮರ್ಪಕವಾಗಿ ಬಳಸಿಕೊಂಡು ಸಮಗ್ರ ಕೃಷಿ ಬೆಳೆಗಳನ್ನು ಹುಲುಸಾಗಿ ಬೆಳೆಯುತ್ತಿದ್ದಾರೆ. ಆ ಮೂಲಕ ಕಳೆದ ೧೦ ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ಬೆಳೆ ತೆಗೆಯುತ್ತಿದ್ದಾರೆ. ಇವರಿಗೆ ಕೃಷಿಪತ್ರಿಕೆಗಳು, ತಿಪಟೂರಿನ ಸಿರಿಸಮೃದ್ಧಿ ಬಳಗ ಹಾಗೂ ಸಿರಿಸಮೃದ್ಧಿ ಪತ್ರಿಕೆ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸಲು ಆಸರೆಯಾಗಿ, ಪ್ರೇರಣೆ ನೀಡಿವೆ. ಇವರು ವೈಯಕ್ತಿಕ ಬದುಕಿನಲ್ಲೂ ಹಸಿ ತರಕಾರಿ ಆಹಾರ ಸೇವನೆ, ಮೊಳಕೆ ಕಾಳುಗಳ ಬಳಕೆಗಳಿಂದ ಉತ್ತಮ ಆರೋಗ್ಯವನ್ನು ಕಂಡುಕೊಂಡಿದ್ದಾರೆ. ಈ ದಂಪತಿಗಳು ಕೃಷಿ ಬೆಳೆಗಳಷ್ಟನ್ನೇ ಬೆಳೆಯದೆ ಅವುಗಳ ಮೌಲ್ಯವರ್ಧನೆಯತ್ತ ಹೆಜ್ಜೆಹಾಕಿ ಮಾರುಕಟ್ಟೆ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತ ಮುನ್ನಡೆಯುತ್ತಿದ್ದಾರೆ. ಸಾವಯವ ರಾಗಿಹಿಟ್ಟು, ರಾಗಿಮಾಲ್ಟ್, ತೆಂಗಿನಕಾಯಿ ಹೋಳಿಗೆ, ದಂತಚೂರ್ಣ, ಸೋಪು, ಶ್ಯಾಂಪೂ ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರಾಟ ಮಾಡುತ್ತಿದ್ದಾರೆ. ಸಾವಯವ ಎಂದೊಡನೆ ತೀರ್ಥಹಳ್ಳಿಯ ಸಾವಯವ ಕೃಷಿ ಪರಿವಾರವನ್ನು ತಟ್ಟನೆ ಸ್ಮರಿಸಿಕೊಳ್ಳುತ್ತಾರೆ. ಸಾವಯವ ಮಾರುಕಟ್ಟೆಯ ವಿಸ್ತರಣೆ ಮತ್ತು ಅವರ ಪ್ರೋತ್ಸಾಹವನ್ನು ಸದಾ ನೆನೆಯುತ್ತಾರೆ. ಪ್ರತಿ ತಿಂಗಳು ಸಾವಯವ ಪರಿವಾರವು ಬೆಂಗಳೂರಿನಲ್ಲಿ ನಡೆಸುವ ಸಾವಯವ ಮೇಳಗಳಲ್ಲಿ ಸತತ ಎರಡು ವರ್ಷಗಳಿಂದ ಭಾಗಿಯಾಗುತ್ತಾ ಬಂದಿದ್ದಾರೆ. ಇವರ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಬೆಂಗಳೂರಿನ ಆತ್ಮೀಯ ಗ್ರಾಹಕರು ಪ್ರತಿ ತಿಂಗಳು ಇವರ ಉತ್ಪನ್ನಕ್ಕಾಗಿ ಕಾಯುತ್ತಿರುತ್ತಾರೆ. ಇದರ ಜೊತೆಗೆ ಆಸಕ್ತ ರೈತರಿಗೆ ಮೌಲ್ಯವರ್ಧನೆ ಕುರಿತಂತೆ ತರಬೇತಿಯನ್ನು ನೀಡುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ ಅನುಸರಣೆ, ಮೌಲ್ಯವರ್ಧನೆ ಮತ್ತು ಮಾರಾಟ ಕ್ಷೇತ್ರದಲ್ಲಿ ಇವರದು ಯಶಸ್ವಿ ಪಯಣ. ಕೃಷಿಕ ಸ್ವಾವಲಂಬಿಯಾಗಬೇಕು, ಕೃಷಿಯಲ್ಲಿ ಗಂಡ-ಹೆಂಡತಿ ಸಮನಾದ ಜವಾಬ್ದಾರಿಯುತ ನಿರ್ವಹಣೆ ಮಾಡಿದಲ್ಲಿ ಕೃಷಿಯಲ್ಲಿ ಯಶಸ್ಸೆಂಬುದು ಬೆನ್ನ ಹಿಂದೆ ಬಿದ್ದಿರುತ್ತದೆ ಎಂಬುದು ಇವರ ಅನುಭವದ ಮಾತು. ಇಂತಹ ಯಶಸ್ವಿ ಕೃಷಿಕ ದಂಪತಿಗಳ ಸಮಗ್ರ ಕೃಷಿ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಿ

ರೈತರ ಸಂಪರ್ಕ ವಿಳಾಸ: ಶ್ರೀಮತಿ ನಯನ ಮತ್ತು ಶ್ರೀ ಆನಂದ, ೮೪೫೩೬೬೩೩೭೮, ಅತ್ತಿಕಟ್ಟೆ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ