ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಔಷಧಿ ಸಸ್ಯಗಳು

ಔಷಧಿ ಸಸ್ಯಗಳು:ಬಜೆ

image_
ಡಾ. ಯಶಸ್ವಿನಿ ಶರ್ಮ
9535228694
1

ಬಹು ಸುವಾಸನೆಯುಳ್ಳ ಬಜೆಯ ಬೇರನ್ನು ಔಷಧಿ ಹಾಗೂ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಬಜೆ ಎಂದ ತಕ್ಷಣ ನೆನಪಾಗುವುದೇ ಚಿಕ್ಕ ಮಕ್ಕಳು, ಬಜೆಯ ಬೇರನ್ನು ಮಕ್ಕಳ ನಾಲಿಗೆಗೆ ಉಜ್ಜುತ್ತಾರೆ. ಮಕ್ಕಳಿಗೆ ಇದು ನಿದ್ರಾಜನಕವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಬಂಗಾರದ ತಂತಿಯೊಂದಿಗೆ ತಯಾರಿಸಿದ ಸ್ವರ್ಣವಚವನ್ನು ನಿತ್ಯವೂ ತೇಯ್ದು ಸೇವಿಸುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ವಿಕಸಿತಗೊಳ್ಳುತ್ತದೆ. ವಚ ಅಥವಾ ಉಗ್ರಗಂಧ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಬಜೆ, ’ಅಕೋರಸ್ ಕೆಲಾಮಸ್’, ಎಂಬ ವೈಜ್ಞಾನಿಕ ನಾಮ ಹೊಂದಿದ್ದು, ಏರೇಸೀ ಕುಟುಂಬಕ್ಕೆ ಸೇರಿದೆ. ಬಜೆಯ ಬೇರು ಸುಗಂಧ ದ್ರವ್ಯ ಹೊಂದಿದ್ದು ’ಅಕೋರಿನ್’ ಎಂಬ ಕಹಿ ಅಂಶ ಅಸ್ತಮಾ ನಿವಾರಣೆಗೆ ಸಹಾಯ ಮಾಡುತ್ತದೆ. ಬೇರಿನ ಪುಡಿಯನ್ನು ನಿದ್ರಾಹೀನತೆ, ಅಪಸ್ಮಾರ, ಹಿಸ್ಟೀರಿಯಾ ನಿವಾರಣೆಗೆ ಮತ್ತು ನೆನಪಿನ ಶಕ್ತಿ, ರಕ್ತ ವೃದ್ಧಿಸಲು ಉಪಯೋಗಿಸುತ್ತಾರೆ. ಇದನ್ನು ಅಗರಬತ್ತಿಗಳಲ್ಲಿ, ಧೂಪ ಹಾಗೂ ಹೋಮಸಾಮಗ್ರಿಗಳಲ್ಲಿ, ಮಧ್ಯದ ಸುವಾಸನೆಗಾಗಿ, ಜೀರ್ಣಕ್ರಿಯ ವೃದ್ಧಿಸಲು ಬಳಸುತ್ತಾರೆ. ಬಜೆಯ ಎಣ್ಣೆಯನ್ನು ಸುರಕ್ಷಿತ ಕೀಟನಾಶಕವಾಗಿ ಬಳಸಲಾಗುತ್ತದೆ. ಒದ್ದೆಯಾಗಿರುವ, ನೀರು ನಿಲ್ಲುವ ಪ್ರದೇಶದಲ್ಲಿ, ಭತ್ತದ ಗದ್ದೆಗಳಲ್ಲಿ, ನದಿತಟದಲ್ಲಿ ಇದು ಸುಲಭವಾಗಿ ಬೆಳೆಯುತ್ತದೆ. ಭಾರತದಲ್ಲಿ ಕರ್ನಾಟಕ, ಕಾಶ್ಮೀರ, ಮಣಿಪುರ, ಮೇಘಾಲಯಗಳಲ್ಲಿ ಇದನ್ನು ವಾಣಿಜ್ಯವಾಗಿ ಬೆಳೆಯುತ್ತಾರೆ. ಇದು ಭತ್ತದಂತೆ ಬೆಳೆಯುವ ಏಕದಳ ಸಸ್ಯವಾಗಿದ್ದು, ಗೆಡ್ಡೆಯ/ಬೇರಿನ ತುದಿಭಾಗದಿಂದ ಸಸ್ಯಾಭಿವೃದ್ಧಿ ಮಾಡುತ್ತಾರೆ. ನೀರು ನಿಲ್ಲುವೆಡೆ ಅಥವಾ ಭತ್ತದ ಗದ್ದೆಗಳಲ್ಲಿ ೩೦ x ೩೦ ಸೆಂ.ಮೀ. ಅಂತರದಲ್ಲಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಾಟಿ ಮಾಡಬೇಕು. ಬೆಳೆಯುವ ಜಾಗದಲ್ಲಿ ೫-೧೦ ಸೆಂ.ಮೀ. ನೀರು ನಿಲ್ಲುವಂತೆ ನೋಡಿಕೊಳ್ಳಬೇಕು. ಹೆಕ್ಟೇರಿಗೆ ೧೫ ಟನ್ ಕೊಟ್ಟಿಗೆ ಗೊಬ್ಬರದ ಜೊತೆ ೧೦೦ ಕೆ.ಜಿ ಅಮೋನಿಯಂ ಸಲ್ಪೇಟ್, ೩೦೦ ಕೆ.ಜಿ. ಸೂಪರ್ ಫಾಸ್ಪೇಟ್ ಮತ್ತು ೧೦೦ ಕೆ.ಜಿ. ಪೋಟ್ಯಾಷ್ ಗೊಬ್ಬರವನ್ನು ೩ ಸಮಭಾಗಗಳಾಗಿ ಮಾಡಿ ೩ ತಿಂಗಳಿಗೊಮ್ಮೆ ಕೊಡಬೇಕು. ನಾಟಿ ಮಾಡಿದ ಒಂದು ವರ್ಷಕ್ಕೆ ಕಟಾವಿಗೆ ಬರುತ್ತದೆ. ಕೊಯ್ಲಿಗೆ ಮುಂಚೆ ಗದ್ದೆಯ ನೀರನ್ನು ಆರಿಸಿ ಆಳ ಉಳುಮೆ ಮಾಡಿ ಬೇರನ್ನು ಕೀಳಬೇಕು. ೩೦-೬೦ ಸೆಂ.ಮೀ. ಉದ್ದದ ಬೇರು ಸುಮಾರು ೬೦ ಸೆಂ.ಮೀ. ಆಳದವರೆಗೆ ಬೆಳೆಯುತ್ತದೆ. ಕೊಯ್ಲಿನ ನಂತರ ಬೇರುಗಳನ್ನು ಸ್ವಚ್ಛನೀರಿನಲ್ಲಿ ತೊಳೆದು ೫-೭.೫ ಸೆಂ.ಮೀ. ತುಂಡುಗಳನ್ನಾಗಿ ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಹೆಕ್ಟೇರಿಗೆ ೧೦-೧೫ ಟನ್ ಇಳುವರಿ ಪಡೆಯಬಹುದು