ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಬೀಜ ಪ್ರಪಂಚ

ಬದನೆ

image_
ಡಾ. ಕೆ. ಎಸ್. ಶೇಷಗಿರಿ
9741769213
1

ಬದನೆ ಉಷ್ಣವಲಯದ ಪ್ರಮುಖ ತರಕಾರಿ ಬೆಳೆಯಾಗಿದ್ದು, ಇದರ ಮೂಲ ಉಗಮಸ್ಥಾನ ಇಂಡೊ-ಬರ್ಮಾ ವಲಯವಾಗಿದೆ. ವೈಜ್ಞಾನಿಕವಾಗಿ ಸೊಲಾನಮ್ ಮೆಲೋಂಜಿನ ಎಂದು ಕರೆಯಲಾಗುವ ಬದನೆ ಸೊಲನೇಸಿಯೆ ಕುಟುಂಬಕ್ಕೆ ಸೇರಿದೆ. ಚೈನಾ ದೇಶದಲ್ಲಿ ೧೫೦೦ವರ್ಷಗಳ ಹಿಂದೆಯೇ ಇದರ ಕೃಷಿ ಪ್ರಚಲಿತವಾಗಿತ್ತು ಎಂಬ ಮಾಹಿತಿಯಿದೆ. ಬದನೆಯನ್ನು ವರ್ಷದ ಎಲ್ಲಾ ಋತುಗಳಲ್ಲಿಯೂ ಕೃಷಿ ಮಾಡಬಹುದಾಗಿದೆ. ಪ್ರತಿ ೧೦೦ ಗ್ರಾಂ ಬದನೆಕಾಯಿಯ ಸೇವನೆಯಿಂದ ಮಾನವ ದೇಹಕ್ಕೆ ೨೫ ಕ್ಯಾಲೊರಿ ಶಕ್ತಿ, ೬.೦ ಗ್ರಾಂ ಶರ್ಕರಪಿಷ್ಟ, ೩.೦ಗ್ರಾಂ ನಾರು, ೩.೫ಗ್ರಾಂ ಸಕ್ಕರೆ, ೨೨೯ಮಿ.ಗ್ರಾಂ ಪೊಟಾಸಿಯಮ್, ೯.೦ಮಿ.ಗ್ರಾಂ ಸುಣ್ಣ ಹಾಗೂ ೨.೦ಮಿ.ಗ್ರಾಂ ಸೋಡಿಯಮ್ ದೊರೆಯುತ್ತದೆ. ಇದಲ್ಲದೆ, ಶೇ.೫ರಷ್ಟು ಬಿ-೬ ಜೀವಸತ್ವ ಮತ್ತು ಶೇ.೩ರಷ್ಟು ’ಸಿ’ ಜೀವಸತ್ವವನ್ನು ಕೂಡ ಬದನೆ ಹೊಂದಿದೆ. ಬದನೆಯನ್ನು ನಿತ್ಯದ ಆಹಾರದಲ್ಲಿ ಬಳಸಿದಾಗ ಹಲವಾರು ಆರೋಗ್ಯ ಲಾಭಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರಿನಂಶದಿಂದಾಗಿ ಆಹಾರ ಪಚನಕ್ರಿಯೆ ಸುಗಮವಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಕೊಬ್ಬು ಮತ್ತು ಕೊಲೆಸ್ಟಿರಾಲ್ ಅಂಶವನ್ನು ಬದನೆ ಹೊಂದಿರುವುದರಿಂದ ದೇಹದಲ್ಲಿ ಬೊಜ್ಜಿನ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಏಡಿಗಂತಿ ರೋಗಕ್ಕೆ ತುತ್ತಾಗುವಿಕೆಯನ್ನು ತಡೆಯುತ್ತವೆ. ಬದನೆಯಲ್ಲಿ ಲಭ್ಯವಿರುವ ಅಧಿಕ ಸುಣ್ಣದ ಪ್ರಮಾಣದಿಂದಾಗಿ ದೇಹದ ಮೂಳೆಗಳ ಬೆಳವಣಿಗೆ ಉತ್ತಮವಾಗುತ್ತದೆ. ಅಲ್ಲದೇ ಹೇರಳವಾಗಿರುವ ಸಸ್ಯಜನ್ಯ ಪೊಷಕಾಂಶಗಳು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತವೆ. ಬದನೆ ಸುಮಾರು ೧೬-೫೫ ಸೆಂ.ಮೀ.ಎತ್ತರಕ್ಕೆ ಬೆಳೆಯುವ ಸಸ್ಯವಾಗಿದ್ದು ತಳಭಾಗದಲ್ಲಿ ಮುಳ್ಳುಗಳಿರುವ ೧೦-೨೦ಸೆ.ಮೀ.ಉದ್ದ, ೫-೧೦ಸೆಂ.ಮೀ ಅಗಲದ ಎಲೆಗಳನ್ನು ಹೊಂದಿರುತ್ತವೆ. ಹೂವುಗಳ ಬಣ್ಣ ಬಿಳಿ ಅಥವಾ ನೇರಳೆ. ಕಾಯಿಗಳು ಹಸಿರು, ನೀಲಿ ಅಥವಾ ನೇರಳೆ ಬಣ್ಣದ್ದಾಗಿರುತ್ತವೆ ಮತ್ತು ಒಳಭಾಗದಲ್ಲಿ ಮೆದುವಾದ ಚಿಕ್ಕ ಗಾತ್ರದ ಬೀಜಗಳಿರುತ್ತವೆ. ಹೂವು ಬಿಟ್ಟು ಕಾಯಿಗಳು ಕೊಯ್ಲಿಗೆ ಬರಲು ೬೦-೭೫ದಿನಗಳ ಕಾಲ ಬೇಕಾಗುತ್ತದೆ. ಬದನೆಯನ್ನು ಬೀಜದಿಂದ ಕೃಷಿ ಮಾಡಲಾಗುತ್ತದೆ. ಬೀಜಕ್ಕಾಗಿ ಬದನೆಯನ್ನು ಪೂರ್ಣ ಹಣ್ಣಾದ ನಂತರ ಕೊಯ್ಲು ಮಾಡಬೇಕು. ಆಯ್ದ ೪೦೦ಗ್ರಾಂ ಬಿತ್ತನೆ ಬೀಜಗಳನ್ನು ಟ್ರೈಕೋಡರ್ಮಾ ವಿರಿಡೇ-೪.೦ ಗ್ರಾಂ ಅಥವಾ ಸೂಡೋಮೊನಾಸ್ ಪ್ಲೋರೆಸೆನ್ಸ್-೧೦.೦ಗ್ರಾಂ ಅಥವಾ ಅಜೋಸ್ಪೈರಿಲ್ಲಮ್-೪೦ ಗ್ರಾಂ ಶಿಲೀಂಧ್ರ/ಜೈವಿಕ ಜೀವಾಣುಗಳಿಂದ ಉಪಚರಿಸಬೇಕು. ನಂತರ ಆಗಲೇ ಸಿದ್ಧಗೊಳಿಸಿದ ಎತ್ತರಿಸಿದ ಸಸಿಮಡಿಗಳಲ್ಲಿ ೭.೫೦ಸೆಂ.ಮೀ. ಸಾಲುಗಳಲ್ಲಿ ಉಪಚರಿಸಿದ ಬೀಜಗಳನ್ನು ಬಿತ್ತನೆ ಮಾಡಿ ತೆಳುವಾಗಿ ಮಣ್ಣಿನಿಂದ ಮುಚ್ಚಿ ನೀರು ಹಾಕುತ್ತಿದ್ದರೆ ಸುಮಾರು ನಾಲ್ಕು ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ಒಂದು ಎಕರೆ ಪ್ರದೇಶಕ್ಕೆ ಸುಮಾರು ೧೦೦-೧೨೫ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ