ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಸಂಪಾದಕೀಯ

ವಲಸೆ ಭವಿಷ್ಯವನ್ನು ಬದಲಾಯಿಸಿ

image_
ಕೆ.ಸಿ.ಶಶಿಧರ
1

ಸ್ವಚ್ಛಂದವಾಗಿ ಹಾರುವ ಹಕ್ಕಿಗಳು ಆಹಾರ ಭದ್ರತೆಗಾಗಿ, ಸಂತಾನಾಭಿವೃದ್ಧಿಗಾಗಿ ಹಾಗೂ ಮರಿಗಳನ್ನು ಉಳಿಸಿ ಬೆಳೆಸಲು ನೂರಾರು, ಸಾವಿರಾರು ಕಿಲೋಮೀಟರ್ ವಲಸೆ ಹೋಗುತ್ತವೆ. ವಲಸೆ ಹೋಗಲು ಮೂಲ ಕಾರಣ ತಾವಿರುವ ತಾಣದಲ್ಲಿನ ಆತಂಕಗಳು, ಹವಾಮಾನ ವೈಪರೀತ್ಯಗಳು, ಆಹಾರದ ಭದ್ರತೆ ಸಮಸ್ಯೆ ಇತ್ಯಾದಿ. ಪ್ರಕೃತಿಯ ಭಾಗವೆನ್ನುವಂತೆ ವಲಸೆ ಪ್ರಕ್ರಿಯೆ ನಡೆಯುತ್ತದೆ. ಮನುಷ್ಯರೂ ಸಹ ಇದೇ ಕಾರಣಗಳಿಗಾಗಿ ವಲಸೆ ಹೋಗುತ್ತಾರೆ. ಇವುಗಳ ಜೊತೆ ಉದ್ಯೋಗ, ಮದುವೆ, ಬೆಳೆಯಬೇಕೆಂಬ ಹಂಬಲಗಳೂ ಜೊತೆಗೂಡುತ್ತವೆ. ಹುಟ್ಟೂರಿನಿಂದ ಇನ್ನೊಂದು ಊರಿಗೆ, ಹಳ್ಳಿಯಿಂದ ನಗರಕ್ಕೆ, ನಗರದಿಂದ ಮಹಾನಗರಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಸಾಮಾನ್ಯ. ವಲಸೆ, ಅಭಿವೃದ್ಧಿ ಹಾಗೂ ಸಮಸ್ಯೆಗಳೆರಡಕ್ಕೂ ಕಾರಣವಾಗಬಹುದು. ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣ ಸಾಧ್ಯವಾದದ್ದು ವಲಸೆಯಿಂದಲೆ ಎಂದರೆ ತಪ್ಪಾಗಲಾರದು. ದೊಡ್ಡ ದೊಡ್ಡ ನಗರಗಳು ಸಮಸ್ಯೆಯ ಆಗರವಾಗಿರುವುದು ವಲಸೆಯಿಂದಲೆ. ವಲಸೆಗೆ ಅಭಿವೃದ್ಧಿಯ ಚಿಂತನೆಗಳು, ಇರುವಲ್ಲಿನ ಕೊರತೆಗಳು, ಹವಾಮಾನ ವೈಪರೀತ್ಯಗಳು, ಸಂಪನ್ಮೂಲಗಳ ಕೊರತೆಗಳು, ಅಭಿವೃದ್ಧಿಯಲ್ಲಿನ ಅಸಮಾನತೆ ಹಾಗೂ ಬದಲಾವಣೆ ಬಯಸುವ ಮನಸ್ಸು ಪ್ರಮುಖ ಕಾರಣ. ಸುಸ್ಥಿರ ಅಭಿವೃದ್ಧಿಯಾಗಬೇಕಾದರೆ ಅಭಿವೃದ್ಧಿಯಲ್ಲಿ ಸಮಾನತೆ ಅತಿ ಅಗತ್ಯ. ಹೀಗಾಗಲು ಅಭಿವೃದ್ಧಿಗೆ ಹೂಡುವ ಬಂಡವಾಳದಲ್ಲಿ ಸಮಾನತೆ ಅತಿ ಅಗತ್ಯ. ನಮ್ಮ ಕೃಷಿ ವ್ಯವಸ್ಥೆಯಲ್ಲಿ ಯುವಕರು ಕೃಷಿಯಲ್ಲಿ/ಹಳ್ಳಿಯಲ್ಲಿ ಮುಂದುವರಿಯುವ ಆಸಕ್ತಿ ತೋರುತ್ತಿಲ್ಲ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಇಂತಹ ಹಲವಾರು ಸಮಸ್ಯೆಗಳಿಗೆ ಬಂಡವಾಳ ಹೂಡಿಕೆಯ ಸಮಸ್ಯೆ ಮೂಲ ಕಾರಣ. ಹಳ್ಳಿಯಲ್ಲಿ ಉತ್ತಮ ಶಿಕ್ಷಣ, ಸಾರಿಗೆ ಸಂಪರ್ಕ, ಡಿಜಿಟಲ್ ಸಂಪರ್ಕ, ಆರೋಗ್ಯ, ನೈರ್ಮಲ್ಯ, ಉತ್ತಮ ಆಹಾರ ಪರಿಕರಗಳೆಲ್ಲವೂ ದೊರೆತರೆ ವಲಸೆಯ ಪ್ರಮಾಣ ಕಡಿಮೆಯಾಗುವುದು. ಕೃಷಿಯಿಂದ ಯುವಕರು ವಿಮುಖರಾಗಿ ನಗರಕ್ಕೆ ಹೋಗುತ್ತಾರೆ ಎನ್ನುವುದಕ್ಕೆ ಕಾರಣಗಳನ್ನು ಕೃಷಿಯಲ್ಲಿ ಮಾತ್ರ ಹುಡುಕುವ ಪ್ರಯತ್ನ ಮಾಡಿ ಯೋಜನೆ ರೂಪಿಸುವ ಪ್ರಯತ್ನ ಹೆಚ್ಚಾಗುತ್ತಿದೆ, ಇದು ಪರಿಣಾಮಕಾರಿಯಾಗುವುದಿಲ್ಲ. ನಾವು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿ ನಗರಗಳ್ನು ವಲಸೆಗೆ ಪ್ರೋತ್ಸಾಹ ಕೊಡುವಂತೆ ಮಾಡುತ್ತಿದ್ದೇವೆ. ಹಾಗಿದ್ದಾಗ ಒಂದು ಪ್ರಶ್ನೆ ಬರಬಹುದು ಬೆಂಗಳೂರಂತ ಮಹಾನಗರದಲ್ಲಿ ಇದ್ದಂತವರು ಸಹ ಬೇರೆ ದೇಶಕ್ಕೆ ವಲಸೆ ಹೋಗುವುದಿಲ್ಲವೆ?. ಹೌದು ಅದು ಅಭಿವೃದ್ಧಿಯ ಹಂಬಲದ ವಲಸೆ. ಈ ರೀತಿಯ ವಲಸೆ ಹೆಚ್ಚಾದರೆ ಸಮಸ್ಯೆಯಿಲ್ಲ. ಎಲ್ಲಿಗೇ ಈ ಪಯಣ? ಯಾವುದೋ ದಾರಿ? ಅಂತ ಗೊತ್ತು ಗುರಿ ಇಲ್ಲದೆ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ವಲಸೆ ಹೋಗುವವರು ಹಾಗೂ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಕಾಗದಂತಹ ದುಡಿಮೆಗೂ ವಲಸೆ ಹೋಗುವವರುಗಳ ಪ್ರಮಾಣ ಕಡಿಮೆ ಯಾಗಬೇಕಿದೆ. ಹಾಗಂತ ವಲಸೆ ಬೇಡವೆ ಬೇಡ ಎನ್ನಲಾಗದು. ಹಾಗಿದ್ದಲ್ಲಿ ವಲಸೆ ರೀತಿ ನೀತಿಗಳು, ಚಿಂತನೆಗಳು ಬದಲಾಗಬೇಕಿದೆ. ವಲಸೆ ಭವಿಷ್ಯವನ್ನು ಬದಲಾಯಿಸಬೇಕು. ಇದಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಬೇಕಿದೆ. ಇದನ್ನು ಎಲ್ಲೆಡೆ ಗುರುತಿಸಲು ಪ್ರಾರಂಭಿಸಿದ್ದರೂ ಇದಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿಲ್ಲ ಇದನ್ನು ಗುರುತಿಸಿ ವಿಶ್ವ ಆಹಾರ ಸಂಸ್ಥೆ ೨೦೧೭ನ್ನು ವಲಸೆ ಭವಿಷ್ಯವನ್ನು ಬದಲಾಯಿಸಿ - ಆಹಾರ ಭದ್ರತೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಬಂಡವಾಳ ಹೂಡಿ ಎನ್ನುವ ಘೋಷವಾಕ್ಯದೊಂದಿಗೆ ಈ ಸಾಲಿನ ವಿಶ್ವ ಆಹಾರ ದಿನಾಚರಣೆ ಆಚರಿಸಲು ತೀರ್ಮಾನಿಸಿದೆ. ನಮ್ಮ ಆಯವ್ಯಯ ತಯಾರಕರು ನೀತಿ ನಿರೂಪಕರು ಇದನ್ನು ಗಮನಿಸಿದಲ್ಲಿ ವಲಸೆ ಭವಿಷ್ಯ ಬದಲಾಯಿಸಬಹುದು