ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಸುವರ್ಣಗೆಡ್ಡೆಯ ಲಾಭದ ಕೃಷಿ

ಡಾ. ಅರುಣ್ ಕುಮಾರ್, ಪಿ
7338110209
1

ಮ್ಯಾಥ್ಯುಸ್, ಒಬ್ಬ ಸ್ವಾವಲಂಬಿ ಸಣ್ಣ ರೈತ. ರಿಪ್ಪನ್ಪೇಟೆಯಿಂದ ತೀರ್ಥಹಳ್ಳಿಗೆ ಹೋಗುವ ಹೆದ್ದಾರಿಯಲ್ಲಿ ಬರುವೆ ಎಂಬ ಹಳ್ಳಿಯಲ್ಲಿರುವ ಇವರು ಮೂಲತಃ ಕೇರಳದವರು. ಇಲ್ಲಿಗೆ ಕೂಲಿ ಮಾಡಲು ಬಂದು ನಂತರ ಒಂದೂವರೆ ಎಕರೆ ಜಮೀನನ್ನು ಖರೀದಿಸಿದರು. ಇವರ ಜಮೀನು ಸಮಗ್ರ ಕೃಷಿ ಪದ್ಧತಿಗೆ ಒಂದು ಸಂಕ್ಷಿಪ್ತ ಮಾದರಿಯಾಗಿದೆ. ಇವರ ಜಮೀನಿನಲ್ಲಿ ಅಡಿಕೆ, ಮೆಣಸು, ಬಾಳೆ, ಮಾವು, ಹಲಸು, ಸಿಲ್ವರ್ ಹಾಗೂ ಮೇವಿನ ಹುಲ್ಲನ್ನು ನಾವು ಕಾಣಬಹುದು. ಇದರ ಜೊತೆಗೆ ಮಲಬಾರಿ ಆಡುಗಳನ್ನು ಸಾಕಿರುತ್ತಾರೆ. ಕೃಷಿ ಹೊಂಡದಲ್ಲಿ ಇವರು ಮೀನನ್ನು ಸಾಕಿರುತ್ತಾರೆ. ಸಾಂಬಾರು, ಪಲ್ಯ, ಉಪ್ಪಿಟ್ಟು ಮುಂತಾದ ಅಡುಗೆಗಳಿಗೆ ಬಳಸುವ ಸುವರ್ಣಗೆಡ್ಡೆ(ಇಟeಠಿhಚಿಟಿಣ ಜಿooಣ ಥಿಚಿm)ಯನ್ನು ಬೆಳೆಯಲು ಪಕ್ಕದ ಜಮೀನನ್ನು ಗುತ್ತಿಗೆ ತೆಗೆದುಕೊಂಡು ಪ್ರತಿ ವರ್ಷ ಸುವರ್ಣಗೆಡ್ಡೆಯನ್ನು ಬೆಳೆಯುತ್ತಾರೆ. ಈ ಬೆಳೆಯ ಬಗ್ಗೆ ಇವರು ಹೆಚ್ಚಿನ ಅನುಭವವನ್ನು ಹೊಂದಿದ್ದು, ಈ ಬೆಳೆಯನ್ನು ಹೊಸನಗರ, ಸಾಗರ, ತೀರ್ಥಹಳ್ಳಿಯಂತಹ ಮಲೆನಾಡು ಪ್ರದೇಶದಲ್ಲಿ ಬೆಳೆಯಲು ಸೂಕ್ತವೆಂದು ಹೇಳುತ್ತಾರೆ. ಇವರ ಪ್ರಕಾರ ನಾಟಿ ಮಾಡಲು ಸೂಕ್ತ ಸಮಯ ಮಾರ್ಚ್ ಏಪ್ರಿಲ್ ತಿಂಗಳು ಹಾಗೂ ಬಿತ್ತನೆ ಮಾಡಲು ಉಪಯೋಗಿಸುವ ಗೆಡ್ಡೆ ಸುಮಾರು ೫೦೦-೭೫೦ ಗ್ರಾಂ ಇರುವುದು ಸೂಕ್ತ, ಜೊತೆಗೆ ೨-೩ ಕಣ್ಣುಗಳನ್ನು ಗೆಡ್ಡೆ ಹೊಂದಿರಬೇಕು. ಸಾಲಿನಿಂದ ಸಾಲಿಗೆ ೯೦ ಸೆಂ.ಮೀ. ಮತ್ತು ಗಿಡದಿಂದ ಗಿಡಕ್ಕೆ ೭೫ ಸೆಂ.ಮೀ. ಅಂತರ ಇರಬೇಕು. ಪ್ರತಿಯೊಂದು ಗೆಡ್ಡೆಯ ಗುಂಡಿ ೪೫ x ೪೫ x ೩೦ ಸೆಂ.ಮೀ. ಇರಬೇಕು ಹಾಗೂ ಗೆಡ್ಡೆಯನ್ನು ನೆಡುವಾಗ ಮೇಲ್ಭಾಗದ ಮಣ್ಣು ಮತ್ತು ಎರಡರಿಂದ ಮೂರು ಕೆ.ಜಿ. ಸಾವಯವ ಗೊಬ್ಬರವನ್ನು ಉಪಯೋಗಿಸಬೇಕು. ಇವರ ಪ್ರಕಾರ ಸಾಮಾನ್ಯವಾಗಿ ಒಂದು ಎಕರೆಗೆ ೨೫೦೦-೩೦೦೦ ಗೆಡ್ಡೆಗಳು ಬೇಕಾಗಬಹುದು. ನಾಟಿಯಾದ ಮೂರು ತಿಂಗಳಲ್ಲಿ ಅಂತರ ಬೆಳೆಯಾಗಿ ತಿಂಗಳ ಹುರುಳಿಯನ್ನು ಬೆಳೆದಿರುತ್ತಾರೆ. ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಳೆಯುವ ಬೆಳೆ ಆದರೂ ಈ ಬೆಳೆಗೆ ೮-೧೦ ದಿನಕ್ಕೆ ಒಂದು ಬಾರಿ ನೀರನ್ನು ಕೊಡುವುದು ಸೂಕ್ತ. ಈ ಬೆಳೆಯ ವಿಶೇಷತೆಯೆಂದರೆ ಇದು ಕೀಟ ಮತ್ತು ರೋಗಕ್ಕೆ ಹೆಚ್ಚಾಗಿ ತುತ್ತಾಗುವುದಿಲ್ಲ. ಈ ಬೆಳೆಯ ಕಟಾವು ಮಾಡಲು ೬-೭ ತಿಂಗಳು ಬೇಕಾಗುತ್ತದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು. ಅಲ್ಲದೇ, ಕಟಾವು ಮಾಡುವ ಒಂದು ತಿಂಗಳ ಮುಂಚೆ ಇದರ ಎಲೆಗಳನ್ನು ಜಾನುವಾರುಗಳಿಗೆ ಉಪಯೋಗಿಸಬಹುದು. ಹಾಗಾಗಿ ಇವರು ಮಲಬಾರಿ ಮೇಕೆಗಳಿಗೆ ಇದನ್ನು ಮೇವಾಗಿ ಉಪಯೋಗಿಸುತ್ತಾರೆ. ಒಂದು ಗೆಡ್ಡೆಯಿಂದ ಸುಮಾರು ೮-೧೦ ಕೆ.ಜಿ. ಇಳುವರಿ ಬರುತ್ತದೆ. ಒಂದು ಎಕರೆಗೆ ಸುಮಾರು ರೂ. ೨೦೦೦೦/-ಗಳು ಖರ್ಚಾಗುತ್ತದೆ ಮತ್ತು ೪೦-೫೦ ಸಾವಿರ ರೂಪಾಯಿಗಳ ಆದಾಯವನ್ನು ಪಡೆಯಬಹುದು ಎನ್ನುತ್ತಾರೆ. ಇವರು ಬೆಳೆದ ಸುವರ್ಣಗೆಡ್ಡೆಯನ್ನು ಮಾರಾಟಕ್ಕೆ ಸ್ಥಳೀಯ ಮತ್ತು ಕೇರಳದ ವ್ಯಾಪಾರಸ್ಥರನ್ನು ಅವಲಂಬಿಸಿರುತ್ತಾರೆ. ವ್ಯಾಪಾರಸ್ಥರು ಇವರ ಜಮೀನಿಗೆ ಬಂದು ಖರೀದಿ ಮಾಡುತ್ತಾರೆ. ಒಂದು ಕೆ.ಜಿ.ಗೆ ಸಾಮಾನ್ಯವಾಗಿ ಸರಾಸರಿ ೧೫-೨೦ ರೂಪಾಯಿಗಳು ಇವರಿಗೆ ಸಿಗುತ್ತದೆ

3

ರೈತರ ಅನಿಸಿಕೆ : ಸುವರ್ಣಗೆಡ್ಡೆಯನ್ನು ಕಡಿಮೆ ಖರ್ಚಿನಲ್ಲಿ ಬೆಳೆದು ಹೆಚ್ಚು ಆದಾಯವನ್ನು ಪಡೆಯಬಹುದು. ಇದು ಔಷಧಿಯ ಗುಣವನ್ನು ಹೊಂದಿದ್ದು, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆನೋವುಗಳ ನಿವಾರಣೆಗೆ ಬಳಸುವುದಲ್ಲದೇ, ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ. ರೈತರ ಸಂಪರ್ಕ ವಿಳಾಸ: ಮ್ಯಾಥ್ಯೂಸ್, ಬರುವೆ ಹಳ್ಳಿ, ರಿಪ್ಪನ್ಪೇಟೆ ಹೋಬಳಿ, ಹೊಸನಗರ ತಾಲ್ಲೂಕು