ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ದಾರಿದೀಪ

ಸೈನಿಕನಾಗಬೇಕೆಂದವಾ ನೇಗಿಲ ನಂಬಿದ

ಪ್ರದೀಪ ಬಿರಾದಾರ
9743064405
1

ಎಪ್ಪತ್ತರ ದಶಕದ ಬರಗಾಲದಲ್ಲಿ ತಲ್ಲಣಿಸಿದ ಕೃಷಿ ಕುಟುಂಬಗಳಲ್ಲಿ ಕೊಪ್ಪಳದ ಚಿಕ್ಕಸಿಂಧೋಗಿಯ ಭೀಮನಗೌಡರದ್ದೂ ಕೂಡ ಒಂದು. ಸಾಕಷ್ಟು ಜಮೀನು ಇದ್ದರೂ ಬರಗಾಲದಿಂದ ನಲುಗಿದ ಈ ಕುಟುಂಬದ ಯುವಕ ದೇಶಸೇವೆಗಾದರೂ ಹೋದರಾಯಿತೆಂದು ೧೯೭೪ ರಲ್ಲಿ ಕೊಪ್ಪಳದಲ್ಲಿ ಆದ ಸೈನ್ಯಭರ್ತಿಯಲ್ಲಿ ತಾನೂ ನಿಂತು ಆಯ್ಕೆಯಾದ. ಆದರೆ, ಬಡತನದಿಂದಾಗಿ ಬೆಳಗಾವಿಗೆ ಪ್ರಯಾಣ ಮಾಡಲು ಬೇಕಾದ ಕನಿಷ್ಟ ಹಣ ೨ ರೂಪಾಯಿ ೫೦ ಪೈಸೆ ಇರದುದಕ್ಕೆ ಆತನಿಗೆ ಸೈನಿಕನಾಗಿ ಸೇವೆಗೆ ಸೇರಲು ಸಾಧ್ಯವಾಗಲಿಲ್ಲ. ಆದದ್ದಾಗಲಿ ಮೂಲವೃತ್ತಿಯಾದ ಕೃಷಿಯಲ್ಲೇ ಬದುಕು ಕಂಡುಕೊಂಡರಾಯಿತೆಂದು ಅಂದೇ ನಿರ್ಧರಿಸಿದ ಶ್ರೀ ಇಂದ್ರಗೌಡರು ದೇಶದ ಆಹಾರ ಭದ್ರತೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ಇಂದು ಅವರಿಗೆ ೬೩ ವರ್ಷ, ಸದೃಢದೇಹ ಮತ್ತು ನೇರ ನಿಲುವು. ಪಯಣಿಸಿದ ದಾರಿ ದೀರ್ಘ ಮತ್ತು ಅಷ್ಟೇ ಭಿನ್ನ. ಮೂಲದಲ್ಲಿ ತಂದೆಯವರೊಂದಿಗೆ ಅವಿಭಕ್ತ ಕುಟುಂಬದಲ್ಲಿ ಸುಮಾರು ೧೬ ಎಕರೆ ಒಣ ಜಮೀನಿನಲ್ಲಿ ಮುಂದಾಗಿ ದುಡಿದು ಮತ್ತೆ ೮-೧೦ ಎಕರೆ ಜಮೀನು ಖರೀದಿಸಿದರು. ಆದರೆ ಹಿರಿಯರು ಬೇರಾದ ನಂತರ ತನ್ನ ಪಾಲಿಗೆ ಬಂದ ೧೦-೧೨ ಎಕರೆ ಜಮೀನಿನಲ್ಲಿ ಅದೇ ಉತ್ಸಾಹದಿಂದ ದುಡಿದು ಎರಡು ಅಂಕಣದ ಮನೆಯಿಂದ ಎಂಟು ಅಂಕಣದ ಮನೆ ಕಟ್ಟಿಸಿರುವ ಇವರ ಕುಟುಂಬವೂ ಬೆಳೆದಿದೆ. ಇಂದು ೨೫ ಎಕರೆಗೂ ಹೆಚ್ಚು ಜಮೀನನ್ನು ಹೊಂದಿದ್ದರೂ ೧೮ ಎಕರೆಯನ್ನು ತನ್ನ ನಿರ್ವಹಣೆಯಲ್ಲಿ ಇಟ್ಟುಕೊಂಡು ಉಳಿದುದನ್ನು ಸಂಬಂಧಿಕರಿಗೆ ಜೀವನೋಪಾಯಕ್ಕಾಗಿ ಕೊಟ್ಟಿರುವರು. ತಮ್ಮ ಪಾಲಿನ ಒಣ ಜಮೀನಿನಲ್ಲಿ ಇಂದು ೩ ಕೊಳವೆ ಬಾವಿಗಳನ್ನು ಕೊರೆಸಿದ್ದು, ಬಂದ ಆದಾಯದಲ್ಲಿ ೧ ಟ್ರ್ಯಾಕ್ಟರ್, ೧ ಸರಕು ಸಾಗಣೆ ಗಾಡಿ, ೨ ಮೋಟಾರ್ ಸೈಕಲ್ ಮತ್ತು ೧ ಸ್ಕೂಟರ್ ಹೊಂದಿರುವುದಲ್ಲದೇ ಸುಮಾರು ೨೫ ಜನರ ಅವಿಭಕ್ತ ಕುಟುಂಬದ ಯಜಮಾನನೀತ

3

ಕೊಳವೆ ಬಾವಿಯೆಂದ ತಕ್ಷಣ ಭಾರಿ ನೀರಿರಬಹುದೆಂದು ಅಂದುಕೊಳ್ಳಬೇಡಿ. ಕಳೆದ ೩ ವರ್ಷಗಳಿಂದ ಬರಗಾಲ ಅನುಭವಿಸುತ್ತಿರುವ ಕೊಪ್ಪಳದಲ್ಲಿ ಅವರ ಒಂದು ಕೊಳವೆ ಬಾವಿ ಮಾತ್ರ ನೀರು ನೀಡುತ್ತಿದ್ದು, ಅದೂ ಕೂಡ ಒಂದೂವರೆ ಇಂಚಿಗಿಂತಲೂ ಕಡಿಮೆ. ಅಂತಹುದರಲ್ಲಿ ೨೫ ಜನರ ಕುಟುಂಬವನ್ನು ಯಾವುದೇ ತರಹದ ತೊಂದರೆ ಇಲ್ಲದೆ ನಿಭಾಯಿಸುವುದು ಸಾಮಾನ್ಯ ಕೆಲಸವಲ್ಲ. ಇವರು ಬ್ಯಾಂಕಿನಲ್ಲಿ ಸಾಲವನ್ನಲ್ಲ, ಬದಲಿಗೆ ಸಾಕಷ್ಟು ಠೇವಣಿ ಹೊಂದಿದ್ದಾರೆ. ನೇಗಿಲನ್ನು ನಂಬಿಕೊಂಡು ಮುಖ್ಯವಾಗಿ ತರಕಾರಿ ಬೇಸಾಯದಲ್ಲಿ ತೊಡಗಿದ್ದಾರೆ. ನಗರ ಸಮೀಪವಿರುವ ತಮ್ಮ ಹೊಲದಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ. ಎಕರೆಗಟ್ಟಲೆ ಬದನೆ, ಟೊಮಾಟೊ, ಬೂದುಗುಂಬಳ, ಕರಿಕುಂಬಳ, ಹಂದರದಲ್ಲಿ ಪಡುವಲ, ನುಗ್ಗೆ, ಬಾಳೆ ಇತ್ಯಾದಿಗಳ ಬೇಸಾಯದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಹಂಗಾಮಿನಲ್ಲಿ ವಾರದ ವಹಿವಾಟು ೨೫ ರಿಂದ ೭೫ ಸಾವಿರದವರೆಗೂ ಆಗುವುದುಂಟು. ಇದೇನು ಯಾರೂ ಬೆಳೆಯದ ತರಕಾರಿಯೇ ಎಂದೆನ್ನಬೇಡಿ. ಎಲ್ಲವೂ ಸ್ವಂತ ಅನುಭವದ ಮೇಲೆ. ತಾವೇ ಆಯ್ಕೆ ಮಾಡಿದ ಒಣಸಿಪ್ಪೆಯ ಈರುಳ್ಳಿ ವಿಶಿಷ್ಟವಾದುದ್ದು. ಈ ಈರುಳ್ಳಿಗೆ ಬೆಂಗಳೂರಿನಲ್ಲಿ ವಿಶೇಷ ಬೆಲೆಯಂತೆ. ಕಳೆದ ೧೦-೧೨ ವರ್ಷಗಳಿಂದಲೂ ಈರುಳ್ಳಿಯ ಬೀಜೋತ್ಪಾದನೆ ಮಾಡುತ್ತಿದ್ದು, ಇತರೆ ರೈತರಿಗೂ ಬೀಜವನ್ನು ಮಾರುವುದುಂಟು. ಉದ್ರಿಯಾಗಿ ಕೊಟ್ಟ ಈರುಳ್ಳಿ ಬೀಜದಿಂದ ಕೈ ಸುಟ್ಟುಕೊಂಡಿದ್ದೂ ಉಂಟು. ಹಾಗೆಯೇ, ಕಳೆದ ೮-೧೦ ವರ್ಷಗಳಿಂದಲೂ ತಮ್ಮದೇ ಆದ ಪಡವಲ ತಳಿಯ ಸಂರಕ್ಷಣೆ ಮತ್ತು ಬೀಜೋತ್ಪಾದನೆ ಮಾಡುತ್ತಿದ್ದಾರೆ. ಮಾರುದ್ದ ಮತ್ತು ದಪ್ಪನಾದ ಪಡವಲಕಾಯಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ. ಇವರ ಸಾಮಾನ್ಯ ಜ್ಞಾನ ಮತ್ತು ಮಾರುಕಟ್ಟೆ ಅನುಭವ ಮೆಚ್ಚುವಂತಹುದೇ. ಶ್ರಾವಣದಿಂದ ದೀಪಾವಳಿಯವರೆಗೆ ಹಬ್ಬಗಳ ಸಡಗರದಲ್ಲಿ ಕುಂಬಳ, ಪಡವಲಗಳ ಬೇಡಿಕೆಯನ್ನು ನೋಡಿಯೇ ಇವುಗಳ ಬೇಸಾಯ ಮಾಡುತ್ತಾರೆ. ಹೀಗಾಗಿ ಮಾರುಕಟ್ಟೆಯ ಮೇಲೆ ಹೆಚ್ಚಿನ ಹಿಡಿತ ಇವರಿಗುಂಟು. ಪಡುವಲ ಬೆಳೆಯ ಬೇಸಾಯದಲ್ಲಿ ವಿಶೇಷವೆಂದರೆ ೩ ಸಾಲಿನ ಹಂದರ. ಇದರಿಂದಾಗಿ ಬೆಳೆಗೆ ಗಾಳಿ ಬೆಳಕಿನ ಉತ್ತಮ ಹಂಚಿಕೆ ಸಾಧ್ಯ. ಅದೇರೀತಿ ಸೋರೆಕಾಯಿಯನ್ನು ಕಂಬಸಾಲುಗಳಲ್ಲಿ ಬೆಳೆದಿರುವುದು ಇನ್ನೊಂದು ತರಹದ ಭಿನ್ನ ಬೇಸಾಯ. ಒಂದುವರೆ ಎಕರೆ ನುಗ್ಗೆಯನ್ನು ಸಹ ಬೆಳೆದಿದ್ದು, ಅತಿಯಾದ ಬೆಳವಣಿಗೆಯನ್ನು ನಿರ್ವಹಿಸಲು ಒಂದೂವರೆ ವರ್ಷದ ಗಿಡಗಳನ್ನು ನೆಲದಿಂದ ಒಂದುವರೆ ಅಡಿ ಎತ್ತರಕ್ಕೆ ಕತ್ತರಿಸಿದ್ದು, ಮಧ್ಯದಲ್ಲಿ ೨ ಸಾಲು ಸೌತೆ ಬಳ್ಳಿಯನ್ನು ಹಾಕಿದ್ದಾರೆ. ನೀರು ನೀಡದಿದ್ದರೂ ಕನಿಷ್ಠ ಮಳೆಯಲ್ಲೂ ಸೌತೆ ಬಳ್ಳಿ ಚೆನ್ನಾಗಿ ಹರಡಿದೆ. ಮೂಲತಃ ಕುರಿಗಾರರಾಗಿದ್ದು, ಸುಮಾರು ೮೦ ಕುರಿಗಳನ್ನು ಇವರು ಹೊಂದಿದ್ದು ಪಾಲಿನಂತೆ ಬೇರೆಯವರಿಗೆ ಸಾಕಲು ಕೊಟ್ಟಿದ್ದಾರೆ. ಇವರಿಗೆ ಕುರಿಗೊಬ್ಬರ ಮತ್ತು ಕುರಿ ಮಾರಾಟದಿಂದ ವರ್ಷಕ್ಕೆ ೨೫ ರಿಂದ ೩೦ ಸಾವಿರ ಗಳಿಕೆ ಬೇರೆ. ಕುರಿಗೊಬ್ಬರದಿಂದಾಗಿ ಅವರೇ ಹೇಳುವಂತೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ನೀಡದಿದ್ದರೂ ಕನಿಷ್ಠ ಮಳೆಯಲ್ಲೂ ಉತ್ತಮ ಇಳುವರಿ ಈ ಗೊಬ್ಬರದಿಂದ ಸಾಧ್ಯವಾಗಿದೆಯಂತೆ. ಮನೆಯಲ್ಲಿ ಹೈನಿಗೂ ಕೊರತೆಯಿಲ್ಲ. ಕೊಳವೆ ಭಾವಿಗಳಲ್ಲಿ ನೀರು ಸಾಕಷ್ಟು ಇರದಿದ್ದರೂ ಅರ್ಧ ತಾಸಿನ ಅಂತರದಲ್ಲಿ ಪ್ರತಿ ಬೆಳೆಗೂ ಗುಟುಕು ನೀರು ನೀಡುತ್ತ ವ್ಯವಸಾಯ ಮಾಡುತ್ತಿದ್ದಾರೆ. ಬೀಡುಬಿಟ್ಟ ಜಮೀನಿನಲ್ಲಿ ಬೆಳೆ ನಳನಳಿಸುವಂತೆ ಮಾಡಿದ್ದಾರೆ, ವಿವಿಧ ತರಹದ ಬಳ್ಳಿಗಳನ್ನು ಬೆಳೆಯುತ್ತಿದ್ದಾರೆ. ಕೊಪ್ಪಳ ಅಷ್ಟೇ ಅಲ, ಹೊಸಪೇಟೆ, ಹುಬ್ಬಳ್ಳಿ, ಬಳ್ಳಾರಿ, ಗಂಗಾವತಿ ಹೀಗೆ ದೂರದ ಊರುಗಳಿಗೆ ತಮ್ಮ ಉತ್ಪನ್ನಗಳನ್ನು ಸಾಗಿಸುತ್ತಾರೆ

5

ಬದುಗಳ ಮೇಲೆ ಕುಂಬಳ ಬಳ್ಳಿ (ಕರೆಕುಂಬಳ), ಬಾರೆ, ನಿಂಬೆ, ಸಾಗುವಾನಿ ಮತ್ತು ಮಡ್ಡಿ (ಔಷಧಿ/ದಿಮ್ಮಿ) ಮರ ಬೆಳೆಯುತ್ತಿದ್ದಾರೆ. ಕಳೆದ ವರ್ಷ ಎರಡು ಎಕರೆಯಲ್ಲಿ ಹನಿನೀರಾವರಿಯಲ್ಲಿ ಬೆಳೆದ ಬಾಳೆಯಿಂದ ೧೦ ಲಕ್ಷ ರೂಪಾಯಿ ಆದಾಯ ಬಂದಿದ್ದು, ಈ ವರ್ಷ ೮ ಲಕ್ಷ ರೂಪಾಯಿಯವರೆಗೂ ನಿರೀಕ್ಷೆ ಇಟ್ಟಿದ್ದಾರೆ. ನೀರಿನ ಕೊರತೆಯಲ್ಲೂ ರಾಸಾಯನಿಕಗಳ ಬಳಕೆ ಇಲ್ಲದೆ ೨೫-೩೦ ಲಕ್ಷ ರೂಪಾಯಿ ಉತ್ಪಾದನೆ ಮೆಚ್ಚುವಂತಹ ಸಾಧನೆ. ಕಳೆದವರ್ಷ ಕೃಷಿ ವಿಶ್ವವಿದ್ಯಾಲಯದ ಸಂಪರ್ಕದಲ್ಲಿ ನಾಟಿ ತೊಗರಿ ಬೇಸಾಯ ಮಾಡಿದ್ದು ಬರದಲ್ಲೂ ೪ ಎಕರೆ ಜಮೀನಿನಲ್ಲಿ ೨೫ ಕ್ವಿಂಟಾಲ್ ಇಳುವರಿ ಪಡೆದುದು ಇವರ ಸಾಧನೆ. ಈ ವರ್ಷವೂ ಊರುಗಾಳು ತೊಗರಿಬೇಸಾಯ ಮುಂದುವರೆಸಿದ್ದಾರೆ. ರಸ್ತೆಬದಿಯ ತೊಗರಿಯ ಹೊಲದಲ್ಲಿ ಈ ಬಾರಿ ಬೆಳೆದ ಕುಂಬಳ ಮತ್ತು ಚವಳಿ ಮಿಶ್ರ ಬೇಸಾಯ ಜನರ ಕಣ್ಣುಗಳನ್ನು ತನ್ನತ್ತ ಸೆಳೆಯುತ್ತದೆ. ಬದನೆಯಲ್ಲಿ ಕೀಟನಿಯಂತ್ರಣಕ್ಕಾಗಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳಿಗೆ ಹಳದಿ ಬಣ್ಣವನ್ನು ಹಚ್ಚಿ ಅದರ ಮೇಲೆ ಜಿಗಿಟು ಗ್ರೀಸ್ ದ್ರಾವಣವನ್ನು ಲೇಪಿಸಿ ಬೆಳೆಯಲ್ಲಿ ನೇತುಬಿಟ್ಟಿದ್ದಾರೆ. ಇಂತಹ ತಮ್ಮದೆ ಆದ ಅನೇಕ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

7

ಇವರ ಸಾಧನೆಗಳನ್ನು ಗಮನಿಸಿದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ್, ಮತ್ತು ಸ್ಥಳೀಯ ತೋಟಗಾರಿಕೆ ಇಲಾಖೆಯವರು ಇವರನ್ನು ಸಂಪನ್ಮೂಲವ್ಯಕ್ತಿಯಾಗಿ ಅನೇಕ ರೈತ ತರಬೇತಿ ಕಾರ್ಯಕ್ರಮಗಳಲ್ಲಿ ಇದೀಗ ತೊಡಗಿಸಿಕೊಳ್ಳುತ್ತಿರುವುದು ಗಮನಾರ್ಹ ವಿಷಯ. ಸರಕಾರದ ಯಾವುದೇ ಸಹಾಯಧನವಿಲ್ಲದೆ ಸದಾ ಬೆಳಗಿನ ೫ ಗಂಟೆಯಿಂದಲೇ ದಿನನಿತ್ಯದ ಕಾರ್ಯದಲ್ಲಿ ತೊಡಗಿ ಕುಟುಂಬದ ಪ್ರತಿಯೊಬ್ಬರಿಗೂ ಯೋಗ್ಯ ಜೀವನ ನಡೆಸುವಂತೆ ಶಕ್ತರನ್ನಾಗಿ ಮಾಡುವುದರ ಜೊತೆಗೆ ಆರೋಗ್ಯಕರ ಕಾಯಿಪಲ್ಯೆ ಮತ್ತು ಹಣ್ಣುಗಳನ್ನು ಬೆಳೆದು ಇತರರಿಗೆ ನೀಡುತ್ತ ಬರದಲ್ಲೂ, ಬಿರಿಯುವ ನೆಲದಲ್ಲು ಸ್ವತಂತ್ರ ಜೀವನ ನಡೆಸುತ್ತಿರುವ ಶ್ರೀ ಇಂದ್ರಗೌಡ ಸೈನಿಕನಾಗದಿದ್ದರೂ ತಾನು ನಂಬಿದ ನೇಗಿಲಿನಿಂದ ದೇಶದ ಆಹಾರ ಭದ್ರತೆಯಲ್ಲಿ ತೊಡಗಿರುವುದು ಅನುಕರಣೀಯ ಸಾಧನೆ

9101112