ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಮಣ್ಣ ಮಡಿಲಲ್ಲಿ

ರೈತರ ಬೆಳೆಗಳ ಬೆಲೆ ನಿಗದಿಗೊಂದು ವಿಶೇಷ ವ್ಯವಸ್ಥೆ

image_
ಕೆ.ಸಿ.ಶಶಿಧರ
1

ಉಡುಪಿ ಮಲ್ಲಿಗೆ ನೋಡಿದಾಗೆಲ್ಲಾ ನನ್ನಲ್ಲಿ ಒಂದು ಕುತೂಹಲವಿತ್ತು. ಬೆಳಿಗ್ಗೆ ಮೊಗ್ಗು ಹರಿದರೆ, ಸಂಜೆಗೆ ಬಳಕೆಯಾಗಬೇಕು. ಮರುದಿನಕ್ಕೆ ತನ್ನ ಮಧುರತೆ, ಪರಿಮಳ ಕ್ಷೀಣಿಸಿರುತ್ತದೆ. ಇಷ್ಟು ಬೇಗ ತನ್ನ ಅಸ್ತಿತ್ವ ಕಳೆದುಕೊಳ್ಳುವ ಈ ಹೂ ಬೆಳೆಗಾರರು ಇದರ ಮಾರುಕಟ್ಟೆಗೆ ಎಷ್ಟೆಲ್ಲಾ ಕಷ್ಟಪಡುತ್ತಿರಬೇಕು ಎನಿಸುತ್ತಿತ್ತು. ಕಾರಣ ಬೇಗ ಹಾಳಾಗುವ ಹಣ್ಣು-ತರಕಾರಿಗಳ ಮಾರಾಟ ಮಾಡುವಲ್ಲಿನ ರೈತರ ಬವಣೆ ಎಲ್ಲಾ ಸುದ್ದಿ ಮಾಧ್ಯಮಗಳು ಬಿತ್ತರಿಸುತ್ತಲೇ ಇರುತ್ತವೆ. ವಾರಗಟ್ಟಲೆ ಇಡಬಹುದಾದ ಟೊಮ್ಯಾಟೊ ಸಹ ಬೀದಿಗೆ ಸುರಿವುದನ್ನು ನಾವು ಗಮನಿಸಿದ್ದೇವೆ. ಸಮಸ್ಯೆ ಹೀಗಿರುವಾಗ ಒಂದೇ ದಿನದಲ್ಲಿ ಬಾಡುವ ಈ ಮಲ್ಲಿಗೆ ಹೇಗೆ ಈ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಈ ಪ್ರಶ್ನೆ ಬಹುದಿನಗಳಿಂದ ನನ್ನ ಮನಸ್ಸಿನಲ್ಲಿ ಇತ್ತು. ಇದನ್ನು ಆ ಹೂ ಬೆಳೆಯ ಮಣ್ಣ ಮಡಿಲಲ್ಲಿಯೇ ಹೋಗಿ ನೋಡಿ ಅರಿಯುವ ಕುತೂಹಲದಿಂದ ನಮ್ಮ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿ ಅವರೊಡನೆ ಚರ್ಚಿಸಿದಾಗ ಡಾ. ಧನಂಜಯ ಬನ್ನಿ ಹೋಗೋಣ ಅಂದ್ರು. ಆಗಸ್ಟ್ ೯, ೨೦೧೭ರಂದು ಬ್ರಹ್ಮಾವರದಿಂದ ಶಂಕರಪುರಕ್ಕೆ ನಮ್ಮನ್ನ ಕರೆದೊಯ್ದರು. ಅಲ್ಲಿಗೆ ತಲುಪಿದಾಗ ಬೆಳಿಗ್ಗೆ ಹತ್ತು ಗಂಟೆ. ಮಾರುಕಟ್ಟೆ ದರ ನಿಗದಿ ಶಂಕರಪುರದಲ್ಲಿ ಆಗುತ್ತೆ ಹನ್ನೊಂದು ಗಂಟೆಗೆ ಆಗುತ್ತೆ ಅಲ್ಲಿಯವರೆಗೆ ಕಟ್ಟೆ ಹತ್ತಿರ ಹೋಗಣ ಅಂದ್ರು. ಕಟ್ಟೆ ಅಂದ್ರೆ? ಕಟ್ಟೆ ಅಂದ್ರೆ ಈ ಹೂಗಳನ್ನ ಸಂಗ್ರಹಿಸುವ ಸ್ಥಳ ಬೆಳೆಗಾರರು ಮಲ್ಲಿಗೆ ಮೊಗ್ಗು ಕಟ್ಟಿ ಇಲ್ಲಿ ತಂದು ಕೊಡುತ್ತಾರೆ ಅಂದ್ರು. ಸರಿ ನೋಡುವಾ ಅಂತ ತೆರಳಿದೆವು. ಹೋದ್ರೆ ಅಲ್ಲಿ ಪುಟ್ಟದೊಂದು ಕಲ್ಲು ಬೆಂಚು ಅದರ ಮೇಲೆ ಒಂದೆರಡು ಗೇಣು ಕಟ್ಟಿದ ಹೂಗಳು, ಕೆಳಗೆ ನೀರಿನ ಬಕೆಟ್ ಪಕ್ಕದಲ್ಲಿ ಒಬ್ಬ ವ್ಯಕ್ತಿ ಸಣ್ಣ ಸಣ್ಣ ಚೀಟಿ ಹರಡಿಕೊಂಡು ಪುಸ್ತಕದಲ್ಲಿ ದಾಖಲಿಸುತ್ತಿದ್ದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ನೋಡಿ ಬನ್ನಿ ಮಾರಾಯರ ಅಂದ್ರು. ಧನಂಜಯ ಇವರು ವಿಲ್ಸೆನ್ ರೋಡ್ರಿಗಸ್ ಎಂದು ಪರಿಚಯಿಸಿದರು. ನಮ್ಮ ಪರಿಚಯದ ನಂತರ ರೋಡ್ರಿಗಸ್ ನಿಮ್ಮ ವ್ಯಾಪಾರ ಹೇಗೆ ನಡೀತಿದೆ ಎಷ್ಟು ಸಮಯದಿಂದ ಉಡುಪಿ ಮಲ್ಲಿಗೆಯ ಜೊತೆ ನಿಮ್ಮ ಒಡನಾಟ ಎಂದೆ. ಇದು ವ್ಯವಹಾರವಲ್ಲ. ನಾನು ಇಲ್ಲಿ ಸಂಗ್ರಾಹಕ. ನಮ್ಮ ತಂದೆ ಕಾಲದಿಂದ ಮಾಡುತ್ತಿದ್ದೇನೆ. ನಮ್ಮ ಕಟ್ಟೆಗೆ ೧೨೦ ರಿಂದ ೨೦೦ ಅಟ್ಟಿ ನಿತ್ಯ ಹೂ ಬರುತ್ತೆ ಅಂದ್ರು. ಅಟ್ಟಿ ಅಂದ್ರೇನು ಅನ್ನೋ ನಮ್ಮ ಕುತೂಹಲಕ್ಕೆ ಅವರು ವಿವರಣೆ ನೀಡಿದರು. ಹೂ ಕಟ್ಟೋದು ಅನ್ನೋದು ಕೈಬರಹದ ರೀತಿ ಒಬ್ಬೊಬ್ಬರು ತುಂಬಾ ನಯವಾಗಿ ಕಟ್ಟುತ್ತಾರೆ. ೯ ಇಂಚು ಉದ್ದ ೬ ಸುತ್ತು ಇರುವುದಕ್ಕೆ ಚೆಂಡು ಅಂತ ಕರಿತಾರೆ. ಒಂದು ಚೆಂಡಲ್ಲಿ ಮೊದಲು ೧೦೦೦ ಹೂ ಇರುತ್ತಿತ್ತು. ಈಗ ೮೦೦ ಹೂ ಇರುತ್ತೆ. ಬಾಳೆ ನಾರಿನಿಂದ ಕಟ್ಟುವುದು ಇದರ ವಿಶೇಷ. ನಾಲ್ಕು ಚೆಂಡು ಸೇರಿ ಒಂದು ಅಟ್ಟಿ. ಈ ಅಟ್ಟಿಗೆ ಬೆಲೆ ನಿಗದಿಯಾಗೋದು ಇಲ್ಲೇ ಅಂದ್ರು, ಯಾರು ನಿಗದಿ ಮಾಡ್ತಾರೆ ಅಂದೆ. ಅದಕ್ಕೆ ರೋಡ್ರಿಗಸ್ ನೋಡಿ ನಮ್ಮ ಸದಸ್ಯರು ಬಂದ್ರು ಎನ್ನುತ್ತ ಏಳು ಜನರ ತಂಡ ದುಂಡಾಗಿ ಕುಳಿತು ಬನ್ನಿ ಸಾರ್ ಇಲ್ಲೇನು ಮುಚ್ಚು ಮರೆ ಇಲ್ಲ ಅಂದ್ರು ನಿಂದೇನ ಎಷ್ಟು ಅಟ್ಟಿ ಅಂದ್ರು ಕೇವಲ ೧೫-೨೦ ನಿಮಿಷದಲ್ಲಿ ಇಂದಿನ ಬೆಲೆ ರೂ.೨೩೦/ಅಟ್ಟಿ ಮಲ್ಲಿಗೆ, ರೂ.೭೦/ಅಟ್ಟಿ ಜಾಜಿ ಅಂದ್ರು ಎದ್ದು ಹೊರಟರು. ನಮಗೆ ಆಶ್ಚರ್ಯ ಇಡೀ ರಾಜ್ಯದ ಬೆಲೆ ಇಲ್ಲಿ ನಿಗದಿಯಾಗುತ್ತೆ ಅದು ಇಷ್ಟು ಬೇಗ ಇದು ಹೇಗೆ ಸದಸ್ಯ ಲಾರೆನ್ಸ್ ಅವರನ್ನ ಕೇಳಿದೆ. ಬೆಲೆ ಬೇಡಿಕೆ ಮತ್ತು ಪೂರೈಕೆ ಆಧರಿಸಿರುತ್ತೆ. ಇಂದು ಯಾವ ಬೆಲೆಗೆ ಎಷ್ಟು ಬೇಡಿಕೆ ಇದೆ ಎಂದು ಎಲ್ಲಾ ಮಾರಾಟಗಾರರ ಬೇಡಿಕೆ ತಿಳಿದುಕೊಳ್ಳುತ್ತೇವೆ. ಹಾಗೆ ಕಟ್ಟೆಯಲ್ಲಿ ಎಷ್ಟು ಮಾಲು ಬಂದಿದೆ ಎಂದು ವಿಶ್ಲೇಷಿಸಿ ಬೆಲೆ ನಿಗದಿ ಮಾಡುತ್ತೇವೆ. ಇದು ರಾಜ್ಯಾದ್ಯಂತ ಕೊಳ್ಳುವ ಬೆಲೆ. ಉಡುಪಿ ಮಲ್ಲಿಗೆಗೆ ಈ ಬೆಲೆ ಎಲ್ಲೆಡೆ ಅನ್ವಯ ಅಂದ್ರು ಹೊರಟೆ ಬಿಟ್ರು. ಪುನಃ ರೋಡ್ರಿಗಸ್ ಅವರಲ್ಲಿ ಕೇಳಿದೆ. ಈ ಬೆಲೆ ಮಾರಾಟ ಬೆಲೆನ ಅಂತ. ಸರ್ ಇದು ರೈತರಿಗೆ ನಾವು ವಿತರಿಸುವ ಹಣ ೨೩೦ ರೂ./ಅಟ್ಟಿ. ಇದರಲ್ಲಿ ಕಟ್ಟೆ ನಡೆಸುವವರಿಗೆ ೧೦ ರೂ, ೨೨೦ ರೂ. ರೈತರಿಗೆ. ನಮ್ಮಿಂದ ಮಾಲು ಕೊಂಡವರು ಅವರಿಗೆ ಬೇಕಾದ ಬೆಲೆಗೆ ಮಾರಾಟ ಮಾಡ್ತಾರೆ. ಬೆಲೆ ಹೆಚ್ಚಾದ್ರೆ ನಿಮಗೆ ಸಿಗೋ ಹಣ ಹೆಚ್ಚಾಗುತ್ತಾ ಅಂದೆ. ಅದಕ್ಕವರು ೪೦೦ ಕ್ಕಿಂತ ಕಡಿಮೆ ಬೆಲೆ ಆದ್ರೆ ೧೦ ರೂ., ೪೦೦ಕ್ಕೂ ಹೆಚ್ಚಾದರೆ ೨೦ ರೂ. ಮಾತ್ರ ಕಟ್ಟೆಗೆ ಸಿಗುತ್ತೆ ಅಂದ್ರು. ಕಟ್ಟೆಯವರು ಎಷ್ಟು ಅಟ್ಟಿ ಹೂ ಬೇಕಾದರೂ ಸಂಗ್ರಹಿಸಿ ಹಣ ಮಾಡಬಹುದೆ? ಇದಕ್ಕೂ ಮಿತಿ ಇದೆ ಒಂದು ಕಟ್ಟೆಯಲ್ಲಿ ೨೫೦ ರಿಂದ ೨೭೦ ಅಟ್ಟಿ ಅತಿ ಹೆಚ್ಚು ೫೦೦ ಅಟ್ಟಿ ಸಂಗ್ರಹಿಸಬಹುದು. ಒಂದು ಕಟ್ಟೆಗೆ ೧೦ ಜನ ಚಿಲ್ಲರೆ ವ್ಯಾಪಾರಿಗಳಿರುತ್ತಾರೆ. ಶಂಕರಪುರದಲ್ಲಿ ೧೦೦ ಕ್ಕೂ ಹೆಚ್ಚು ಕಟ್ಟೆಗಳಿವೆ. ಅಟ್ಟಿ ಬೆಲೆಯನ್ನು ಬೇಡಿಕೆ ಪೂರೈಕೆ ಆಧರಿಸಿ ೨೫೦ ರಿಂದ ೧೨೦೦ ರೂ. ನಿಗದಿಯಾದ ಉದಾಹರಣೆಗಳಿವೆ ಅಂದ್ರು. ಅಬ್ಬಾ! ಇದೊಂದು ಸೋಜಿಗವೇ ಸರಿ

345

ಪ್ರತಿಯೊಂದಕ್ಕೂ ಶಿಸ್ತು ಬದ್ಧ ಚೌಕಟ್ಟು ಇದೆ. ಬೆಲೆ ನಿಗದಿಯಾದ್ದೆ ತಡ, ಬಂದ ಹೂ ಕಟ್ಟುಗಳನ್ನ ನೀರಲ್ಲಿ ಅದ್ದಿ ಪುನಃ ಬಾಳೆ ಎಲೆ ನೀರರಿವೆಗಳಿಂದ ಪ್ಯಾಕ್ ಮಾಡಿ ಆ ಕಟ್ಟುಗಳನ್ನು ಹೊತ್ತು ಬಸ್ಸುಗಳಿಗೆ, ಕಾರುಗಳಿಗೆ ರವಾನಿಸಲಾಗುತ್ತೆ. ರಾಜ್ಯ, ರಾಷ್ಟ್ರ ವ್ಯಾಪಿ ತಲುಪಿಸುವ ವ್ಯವಸ್ಥೆಯ ಚುರುಕುತನ ಒಳ್ಳೆಯ ಸಂಶೋಧನಾ ವಸ್ತುವೆ ಸರಿ. ರೋಡ್ರಿಗಸ್ ಹೇಳಿದ್ರು ನಾನೇ ೩೦ ಅಟ್ಟಿ ನಿತ್ಯ ಬಾಂಬೆಗೆ ಕಳಿಸುತ್ತೇನೆ. ದೇಶದ ಯಾವುದೇ ಮೂಲೆ ತಲುಪಿದರೂ ಹೂ ಅಂದೆ ಮಾರಾಟವಾಗಬೇಕು. ಅಂದು ಕಳೆದರೆ ಅದರ ಮೌಲ್ಯವೆ ಕುಸಿಯುತ್ತದೆ. ಇನ್ನೊಂದು ವಿಶೇಷ ಎಂದರೆ ಈ ಹೂವಿಗೆ ದೊಡ್ಡ ಬೆಳೆಗಾರರಿಲ್ಲ. ಕಾರಣ ಕೂಲಿ ಆಳುಗಳ ಬೇಡಿಕೆ ಹೆಚ್ಚು. ೧/೨ ಅಥವಾ ೧/೪ ಚೆಂಡು ಅಂದ್ರೆ ೧೦೦ ರೂ, ೨೦೦ ಹೂನಿಂದ ಹಿಡಿದು ೩೦-೫೦ ಅಟ್ಟಿ ಹೂ ಬೆಳೆಯುವವರು ಇದ್ದಾರೆ. ಅಬ್ಬಾ! ಅದ್ಭುತ ಮಾರಾಟ ಜಾಲ. ಈ ಜಾಲದ ಬಗ್ಗೆ ರೈತರು ಏನು ಹೇಳುತ್ತಾರೆ. ಅವರಿಗೆ ಈ ಬೆಲೆ ನಿಗದಿಯಿಂದ ಸಮಾಧಾನ ಇದೆಯಾ ಎಂದು ಅರಿಯಬೇಕೆನಿಸಿ ರೈತರ ಭೇಟಿ ಮಾಡೋಣ ಅಂತ ತೀರ್ಮಾನಿಸಿದೆ. ಅಷ್ಟರಲ್ಲೆ ಹೂ ಕೊಡಲು ಬಂದ ವ್ಯಕ್ತಿಯೊಬ್ಬ ಸರ್ ನೀವು ನೇಗಿಲ ಮಿಡಿತ ಪತ್ರಿಕೆಯವರಲ್ಲಾ ಅಂದ್ರು. ಹೌದು ನೀವು ಹೇಗೆ ಗುರುತಿಸಿದಿರಿ ಅಂದೆ. ಸಾರ್ ನನ್ನ ಹೆಸರು ರಾಘವೇಂದ್ರ ನಾಯಕ್ ನಿಮ್ಮ ಪತ್ರಿಕೆ ಓದುಗ, ನಾ ಬೆಳೆದ ಮಲ್ಲಿಗೆ ಕಟ್ಟೆಗೆ ಕೊಡಲು ಬಂದಿದ್ದೆ ಅಂದ್ರು. ರಾಘವೇಂದ್ರ, ನೀವೆಷ್ಟು ಹೂ ತಂದಿರಿ ಹೂ ಬೆಳೆ ಬಗ್ಗೆ ನಿಮ್ಮ ಅನುಭವ ಹೇಳಬಹುದಾ ಅಂದೆ. ಅವರು ಬಹಳ ಸಂತಸದಿಂದ ವಿವರಣೆ ಪ್ರಾರಂಭಿಸಿದರು. ಸರ್ ೧೪೦ ಗಿಡ ಇವೆ. ದಿನಕ್ಕೆ ಸರಾಸರಿ ೮ ಚೆಂಡು ಬೆಳಿತೇನೆ. ಬೆಳಗ್ಗೆ ೬-೯ ಗಂಟೆ ಕೊಯ್ಲು ಸಮಯ ಮನೆಯವರು ಕೊಯ್ದು ಕಟ್ಟುತ್ತೇವೆ. ಹೆಚ್ಚು ಹೂ ಇದ್ದಾಗ ಅಕ್ಕಪಕ್ಕದ ಮನೆಯವರು ನೆರವಾಗುವುದುಂಟು. ಕೂಲಿ ಆದ್ರೆ ಒಂದು ಚೆಂಡು ಕೊಯ್ಯಲು ೫ ರೂ., ಕಟ್ಟಲು ೫ ರೂ. ಮಳೆಗಾಲದ ಹಾಗೂ ಚಳಿಗಾಲದ ಇಳುವರಿ ಕಡಿಮೆ ಬೇಸಿಗೆಯಲ್ಲಿ ಜಾಸ್ತಿ. ಒಳ್ಳೆ ಗಿಡದಿಂದ ಬೇಸಿಗೆಯಲ್ಲಿ ೫ ಚೆಂಡು ಹೂ ತೆಗೆಯಬಹುದು. ಆದ್ರೆ ಎಲ್ಲಾ ಹೀಗೆ ನಿರ್ವಹಣೆ ಮಾಡೋದು ಕಷ್ಟ ಅಂದ್ರು. ನಾಯಕ್ ನಾವು ಬೆಲೆ ನಿಗದಿ ಕೇಂದ್ರದ ಬಗ್ಗೆ ತಿಳಿದುಕೊಳ್ಳೋಕೆ ಬಂದ್ವಿ, ನಿಮಗೆ ಯಾವಾಗಾದರೂ ನಿಗದಿಯಾದ ಬೆಲೆ ಕಡಿಮೆ ಆಗಿದೆ ನಷ್ಟ ಅನಿಸಿದೆಯಾ? ಖಂಡಿತಾ ಇಲ್ಲ, ನಮಗೆ ಕನಿಷ್ಠ ಲಾಭದಾಯಕ ಬೆಲೆ ಯಾವಾಗಲೂ ಸಿಗುತ್ತೆ ಹಬ್ಬದ ದಿನಗಳಲ್ಲಿ ಬೇಡಿಕೆ ಇದ್ದಾಗ ಲಾಭ ಹೆಚ್ಚಾಗುತ್ತೆ. ನಷ್ಟ ಅನ್ನುವಂತ ಬೆಲೆ ನನ್ನ ಅನುಭವಕ್ಕೆ ಬಂದಿಲ್ಲಾ ಅಂದ್ರು. ಅವರಷ್ಟೆ ಅಲ್ಲ ಹೂ ಕೊಡಲು ಬಂದ ಯಾರೂ ಬೆಲೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸದೆ ಇದ್ದದ್ದು ಅತ್ಯಂತ ವಿಶೇಷ ಅಂಶ. ರಾಘವೇಂದ್ರ ನಾಯಕ್ ಅವರು ಬೀದರ್ನ ಕೆ.ವಿ.ಎ.ಎಫ್.ಎಸ್ ವಿಶ್ವವಿದ್ಯಾಲಯದ ಶ್ರೇಷ್ಠ ಕೃಷಿ ಪ್ರಶಸ್ತಿ ವಿಜೇತರು. ಇವರು ಕೋಳಿ, ಹಸು ಸಾಕುತ್ತಾರೆ. ಕೆ.ಎಂ.ಎಫ್ ಡೈರಿ ನಿರ್ದೇಶಕರಾಗಿದ್ದಾರೆ. ಭತ್ತ, ಬಾಳೆ, ಅಡಿಕೆ, ತೆಂಗು, ತರಕಾರಿ, ಹಾಲು ಬೆಂಡೆ, ಬಸಳೆ, ಹರಿವೆ, ತೆಂಡೆ ಗೆಣಸು, ಮೀಟರ್ ಅಲಸಂದೆ ಬೆಳೆ ಬೆಳೆಯುವ, ಸಮಗ್ರ ಕೃಷಿ ಪದ್ಧತಿ ಪಾಲಿಸುವ ರೈತರ

7

ನಂತರ ನಮ್ಮ ತಂಡ ಬೆಳೆ ಬೆಳೆಯುವ ಸ್ಥಳಗಳಿಗೆ ಭೇಟಿ ನೀಡಲು ತಲೆ ಮಾರುಗಳಿಂದ ಉಡುಪಿ ಮಲ್ಲಿಗೆ ಬೆಳೆಯುತ್ತಿದ್ದ ಶ್ರೀಮತಿ ಲಲಿತ ಅವರನ್ನು ಭೇಟಿ ಮಾಡಿದೆವು. ಇಪ್ಪತ್ತೊಂದು ಗಿಡಗಳ ಒಡತಿ. ಇವರು ತಾಯಿಯಿಂದ ಕಲಿತು ಕೃಷಿ ಮಾಡುತ್ತಿದ್ದಾರೆ. ಗಿಡಗಳು ಒಮ್ಮೆ ಹಾಳಾದಾಗ ಕೃಷಿ ವಿಜ್ಞಾನ ಕೇಂದ್ರದವರು ಇವರಿಗೆ ಒದಗಿಸಿದ್ದಾರೆ. ಇವರ ತಾಯಿ ಸೀತಕ್ಕ ೩೫ ವರ್ಷದಿಂದ ಮಲ್ಲಿಗೆಯೊಡನೆ ನಂಟು ಹೊಂದಿ ಇಂದಿಗೂ ನಿತ್ಯ ಸರಾಸರಿ ಎರಡು ಚೆಂಡು ಹೂ ಬೆಳೆಯುತ್ತಾರೆ. ಈ ಪುಟ್ಟ ಕುಟುಂಬಗಳಿಗೆ ಮಲ್ಲಿಗೆ ಸುಸ್ಥಿರ ಆದಾಯ ಮೂಲ. ಲಲಿತಮ್ಮ ಆಗಲಿ ಅವರ ಅಮ್ಮ ಸೀತಕ್ಕ ಆಗಲಿ ಬೆಲೆ ಬಗ್ಗೆ ದೂರಲಿಲ್ಲ. ಇವರನ್ನೆಲ್ಲಾ ಕೇಳಿದ ಮೇಲೆ ನಿಜಕ್ಕೂ ಬೆಲೆ ನಿಗದಿ ಸಮಿತಿಯನ್ನು ಅಭಿನಂದಿಸಲೇಬೇಕು ಅನಿಸಿತು. ಹಾಗೆ ನಮ್ಮ ಕಾರ್ಯ ಮುಗಿಸಿ ಬ್ರಹ್ಮಾವರ ದಾರಿ ಹಿಡಿದೆವು. ದಾರಿಯಲ್ಲಿ ಮಲ್ಲಿಗೆ ಚಿಲ್ಲರೆ ವ್ಯಾಪಾರಿಗಳ ಬಳಿ ಬೆಲೆ ಕೇಳುತ್ತಾ ಸಾಗಿದೆವು. ಶಂಕರಪುರದಿಂದ ದೂರ ಹೋದಂತೆ ಚಿಲ್ಲರೆ ಮಾರಾಟ ಬೆಲೆ ಹೆಚ್ಚಳ ಆಗುತ್ತಿರುವುದನ್ನು ನಾವು ಗಮನಿಸಿದೆವು. ಅಂದೇ ಬ್ರಹ್ಮಾವರದಲ್ಲಿ ೫೦೦ರೂ./ಅಟ್ಟಿಯ ಬೆಲೆ ಇತ್ತು. ಮುಂದೆ ಹೋದಂತೆ ಬೆಲೆ ಏರುಪೇರಾಗಬಹುದು. ಆದರೆ ಎಲ್ಲೆಡೆಗೆ ಕೊಳ್ಳುವ ಬೆಲೆಗೆ ಶಂಕರಪುರದ ನಿಗದಿತ ಬೆಲೆಯೇ ಅಂತಿಮ

9

ಉಡುಪಿ ಮಲ್ಲಿಗೆ ಪರಿಮಳಕ್ಕೆ ಜಾಗತಿಕ ಮನ್ನಣೆ : ಉಡುಪಿ ಮಲ್ಲಿಗೆಯ ಹಲವು ವಿಶೇಷತೆಗಳನ್ನು ಗಮನಿಸಿ ೨೦೦೬ರಲ್ಲಿ ಭೌಗೋಳಿಕವಾಗಿ ಗುರುತಿಸಲಾಗಿದೆ. ಭೌಗೋಳಿಕ ವಿಶಿಷ್ಟ ಬ್ರ್ಯಾಂಡ್ ಅನ್ನು ೨೦೧೩ರಲ್ಲಿ ನೀಡಲಾಗಿದೆ. ಇಂದು ಉಡುಪಿ ಮಲ್ಲಿಗೆ ಬೆಳೆಗಾರರು ಸಂಘ ಸ್ಥಾಪಿಸಿದ್ದಾರೆ. ಉಡುಪಿ ಮಲ್ಲಿಗೆ ವಿಶಿಷ್ಟ ಪರಿಮಳಕ್ಕೆ ತಳಿ ಮತ್ತು ಬೆಳೆ ಪರಿಸರಗಳೆರಡೂ ಕಾರಣ. ಈ ಹಿನ್ನೆಲೆಯಲ್ಲಿ ಇದನ್ನು ಭೌಗೋಳಿಕವಾಗಿ ಗುರುತಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಭೌಗೋಳಿಕ ಸಂಕೇತ ಪಡೆದ ಕೆಲವೇ ಬೆಳೆಗಳಲ್ಲಿ ಇದೂ ಒಂದು. ಭೌಗೋಳಿಕ ಸಂಕೇತದ ಸಂಖ್ಯೆ: ೭೦, ಭೌಗೋಳಿಕ ಸಂಕೇತದ ಬ್ರ್ಯಾಂಡ್ ಸಂಖ್ಯೆ: ೨೬೪೭೧೦೩ ಬೆಲೆ ಸ್ಥಿರತೆಗೆ ಕಾರಣ? ಕರಾವಳಿಯಲ್ಲಿ ದೇವಿ ದೇವಸ್ಥಾನಗಳು ಹೆಚ್ಚು. ಎಲ್ಲಾ ದೇವಸ್ಥಾನಗಳೂ ಈ ಮಲ್ಲಿಗೆ ಪೂಜೆಗೆ ಬಳಸುತ್ತಾರೆ. ಇದು ರೈತರಿಗೆ ವರವಾಗಿದೆ. ಹಾಗೆ ಉತ್ಪಾದನೆ ಚಿಕ್ಕದಾಗಿ ಸೀಮಿತ ಪ್ರದೇಶದಲ್ಲಿದ್ದರೂ ಮಾರುಕಟ್ಟೆ ವ್ಯಾಪ್ತಿ ಹೆಚ್ಚಿದೆ