ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಚಿಂತನೆ

ವಿಶ್ವ ಆಹಾರ ದಿನಾಚರಣೆ ೨೦೧೭; ಆಹಾರ ಸುರಕ್ಷತೆ, ಅಭಿವೃದ್ಧಿಯ ಮೂಲಕ ವಲಸೆ ಸಮಸ್ಯೆಗೆ ಪರಿಹಾರ

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಎರಡು ಮಹಾಯುದ್ಧಗಳಿಂದ ತತ್ತರಿಸಿ ಹೋಗಿದ್ದ ವಿಶ್ವದ ಬಹುತೇಕ ರಾಷ್ಟ್ರಗಳು ಒಂದೆಡೆ ಸೇರಿ ವಿಶ್ವ ಶಾಂತಿಯನ್ನು ಸ್ಥಾಪಿಸುವುದಲ್ಲದೇ, ವಿಶ್ವದ ಒಳಿತಿಗೆ ಚಿಂತಿಸುವ ವೇದಿಕೆಯಾಗಿ ವಿಶ್ವ ಸಂಸ್ಥೆಯನ್ನು (ಯುನೈಟೆಡ್ ನೇಶನ್ಸ್) ಹುಟ್ಟುಹಾಕಿದವು. ಈ ಸಂಸ್ಥೆಯ ಒಂದು ಪ್ರಮುಖ ಅಂಗವಾಗಿ ರೋಮ್ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ’ಆಹಾರ ಮತ್ತು ಕೃಷಿ ಸಂಸ್ಥೆ’ (ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಜೇಶನ್)ಯು ಅಕ್ಟೋಬರ್ ೧೬, ೧೯೪೫ ರಂದು ಪ್ರಾರಂಭವಾಯಿತು. ಈ ದಿನವನ್ನು ೧೯೮೧ರಿಂದ ಆರಂಭಿಸಿ ಪ್ರತಿ ವರ್ಷವೂ ಜಗತ್ತಿನಾದ್ಯಂತ ’ವಿಶ್ವ ಆಹಾರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಕೃಷಿ ಅಭಿವೃದ್ಧಿಯ ಮೂಲಕ ಜಗತ್ತಿನಾದ್ಯಂತ ಹಸಿವೆ ಮತ್ತು ಬಡತನಗಳ ವಿರುದ್ಧ ಹೋರಾಟವನ್ನು ಮುಖ್ಯ ಧ್ಯೇಯವನ್ನಾಗಿರಿಸಿಕೊಂಡಿದ್ದರೂ ಸಹ, ಪ್ರಚಲಿತ ಸಮಸ್ಯೆಗಳ ಆಧಾರದ ಮೇಲೆ ಪ್ರತಿ ವರ್ಷವೂ ಪ್ರಾಮುಖ್ಯತೆ ಕೊಡಬೇಕಾದ ವಿಷಯವನ್ನಾರಿಸಿಕೊಂಡು ಒಂದು ಧ್ಯೇಯ ವಾಕ್ಯವನ್ನು ಕೊಡುತ್ತದೆ. ಜಗತ್ತಿನಾದ್ಯಂತ ೧೫೦ಕ್ಕೂ ಹೆಚ್ಚು ದೇಶಗಳು ಅಕ್ಟೋಬರ್ ೧೬ ರಂದು ’ವಿಶ್ವ ಆಹಾರ ದಿನ’ವನ್ನು ಆಚರಿಸುತ್ತವೆ. ಭಾರತದಲ್ಲಿ ಈ ದಿನವನ್ನು ’ಆಹಾರ ಎಂಜಿನಿಯರ್ಸ್ ದಿನ’ವನ್ನಾಗಿಯೂ ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನೀಡಿದ ಧ್ಯೇಯ ವಾಕ್ಯಗಳನ್ನು ಗಮನಿಸಿದರೆ, ಜಾಗತಿಕ ಕೃಷಿ ಮತ್ತು ಆಹಾರ ಸಂಸ್ಥೆಯ ಚಿಂತನೆಗಳ ಬಗ್ಗೆ ಒಂದು ಒಳನೋಟ ದೊರೆಯುತ್ತದೆ. ಉದಾಹರಣೆಗೆ, ’ಬದಲಾಗುತ್ತಿರುವ ವಾತಾವರಣಕ್ಕೆ ಕೃಷಿ ಮತ್ತು ಆಹಾರದ ಬದಲಾವಣೆ’ ’ಗ್ರಾಮೀಣ ಬಡತನದ ವಿರುದ್ದದ ಹೋರಾಟ-ಸಾಮಾಜಿಕ ರಕ್ಷಣೆ’, ’ಕುಟುಂಬ ಕೃಷಿಯ ಮೂಲಕ ಎಲ್ಲರಿಗೂ ಆಹಾರ ಮತ್ತು ಭೂಮಿಯ ರಕ್ಷಣೆ’, ’ಆಹಾರ ಮತ್ತು ಪೌಷ್ಟಿಕಾಂಶ ಸುರಕ್ಷತೆಗೆ ಸುಸ್ಥಿರ ಕೃಷಿ’, ’ಎಲ್ಲರಿಗೂ ಆಹಾರ ಒದಗಿಸಲು ಕೃಷಿ ಸಹಕಾರ ವ್ಯವಸ್ಥೆ’, ’ಆಹಾರದ ಬೆಲೆಗಳು, ಕಳವಳದಿಂದ ಸ್ಥಿರತೆಯೆಡೆಗೆ’, ’ಹಸಿವಿನ ವಿರುದ್ಧ ಒಗ್ಗಟ್ಟು’, ’ಸಂಕಷ್ಟಕರ ಪರಿಸ್ಥಿತಿಗಳಲ್ಲಿ ಆಹಾರ ಸುರಕ್ಷತೆಯ ಸಾಧನೆ’, ’ಕೃಷಿಯಲ್ಲಿ ಮಹಿಳೆ’, ’ಗ್ರಾಮೀಣ ಯುವಕರು’, ’ಗ್ರಾಮೀಣ ಬಡತನ’, ’ಆಹಾರ ಮತ್ತು ಪರಿಸರ’, ’ಎಲ್ಲರಿಗೂ ಆಹಾರ’, ’ಜೀವನಕ್ಕೆ ನೀರು’, ’ಜೀವನಕ್ಕೆ ಮರಗಳು’, ’ಆಹಾರ ಸುರಕ್ಷತೆಗೆ ಬಂಡವಾಳ ಹೂಡಿಕೆ’, ’ಜಗತ್ತಿಗೆ ಆಹಾರ ನೀಡುವ ಮಹಿಳೆ’. ಇತ್ಯಾದಿಗಳು. ವರ್ಷ ೨೦೧೭ ಕ್ಕೆ ನೀಡಿರುವ ಧ್ಯೇಯ ವಾಕ್ಯವೆಂದರೆ, ’ಆಹಾರ ಸುರಕ್ಷತೆ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಹೂಡಿಕೆಯ ಮೂಲಕ ವಲಸೆಯ ಸಮಸ್ಯೆಗೆ ಪರಿಹಾರ’ (ಛೇಂಜ್ ದಿ ಫ್ಯೂಚರ್ ಆಫ್ ಮೈಗ್ರೇಶನ್, ಇನ್ವೆಸ್ಟ್ ಇನ್ ಫುಡ್ ಸೆಕ್ಯೂರಿಟಿ ಅಂಡ್ ರೂರಲ್ ಡೆವೆಲಪ್ಮೆಂಟ್) ಎನ್ನುವುದು

ವಲಸೆಯ ಹಲವು ಮುಖಗಳು; ಕೆಲವು ಸಮುದಾಯಗಳು ಯುದ್ಧ, ಸಾಮಾಜಿಕ, ಧಾರ್ಮಿಕ ಅಶಾಂತಿ, ಮುಂತಾದ ಹಲವು ಕಾರಣಗಳಿಂದ ತಮ್ಮ ಜೀವನ ನೆಲೆಯನ್ನು ಕಳೆದುಕೊಂಡು, ನಿರಾಶ್ರಿತರಾಗಿ, ಬದುಕುವ ನೆಲೆಯನ್ನು ಅರಸುತ್ತಾ ಒಂದು ದೇಶ ಅಥವಾ ಪ್ರದೇಶದಿಂದ ಇನ್ನೊಂದು ಪ್ರದೇಶದೆಡೆಗೆ ಚಲಿಸಬಹುದು. ಟಿಬೆಟ್ ದೇಶದಲ್ಲಿನ ಅಶಾಂತಿಯಿಂದ ಭಾರತಕ್ಕೆ ಬಂದು ನೆಲೆಸಿದ ಟಿಬೆಟಿಯನ್ನರು, ಯುದ್ಧದ ಸಮಯದಲ್ಲಿ ಭಾರತಕ್ಕೆ ಬಂದ ಬಾಂಗ್ಲಾದೇಶೀಯರು, ಬರ್ಮಾದಿಂದ ವಲಸೆ ಹೋಗುತ್ತಿರುವ ರೋಹಿಂಗ್ಯಾ ಸಮುದಾಯದವರು, ಐಸಿಸ್ನವರ ಹೆದರಿಕೆಯಿಂದ ಹಲವು ಮುಸ್ಲಿಂ ದೇಶಗಳಿಂದ ಯುರೋಪಿಯನ್ ದೇಶಗಳಿಗೆ ವಲಸೆ ಹೋಗುತ್ತಿರುವವರು, ನಿತ್ಯವೂ ನಡೆಯುತ್ತಿರುವ ಈ ವಲಸೆಗೆ ಉತ್ತಮ ಉದಾಹರಣೆಗಳು. ವಿಶ್ವ ಸಂಸ್ಥೆಯವರು ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ವಯ, ಬೇರೆ ದೇಶಗಳು ಇವರಿಗೆ ಆಸರೆಯನ್ನು ಕೊಟ್ಟರೂ ಸಹ, ಈ ವಲಸೆಗಳು ಶಾಶ್ವತ ರೂಪವನ್ನು ತಾಳಿದಾಗ, ಅನೇಕ ರೀತಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳು ಎದುರಾಗುತ್ತವೆಯಲ್ಲದೇ, ಅವರಿಗೆ ಸೂಕ್ತ ರೀತಿಯಲ್ಲಿ ಆಹಾರ ಮತ್ತು ರಕ್ಷಣೆಯನ್ನೊದಗಿಸುವಲ್ಲಿ ಅತಿಯಾದ ಭಾರವನ್ನು ಹೊರಬೇಕಾಗುತ್ತದೆ. ಆದರೆ, ಈಗ ಕೃಷಿ ಕ್ಷೇತ್ರದಲ್ಲಿ ಸಮಸ್ಯೆಯಾಗಿರುವುದು ಇನ್ನೊಂದು ರೀತಿಯ ವಲಸೆ. ಅದೆಂದರೆ, ಗ್ರಾಮೀಣ ಪ್ರದೇಶದಲ್ಲಿ ನೆಲೆಯಿದ್ದರೂ ಸಹ, ಆರ್ಥಿಕ ಕಾರಣಗಳಿಗಾಗಿ, ಉತ್ತಮ ಜೀವನ ಮಟ್ಟವನ್ನು ಅರಸಿ, ನಗರಗಳಿಗೆ ವಲಸೆ ಹೋಗುವುದು ಹೆಚ್ಚಾಗುತ್ತಿರುವುದು. ಇದರಲ್ಲಿ ಅತಿ ಬರಗಾಲದ ಪ್ರದೇಶಗಳಲ್ಲಿ ಕೆಲವು ವರ್ಷಗಳ ಕಾಲ ತೀವ್ರ ಬರಗಾಲ ಬಂದಾಗ ಅನ್ಯ ಮಾರ್ಗವಿಲ್ಲದೇ, ತಾತ್ಕಾಲಿಕವಾಗಿ ಉತ್ತಮ ಮಳೆ ಬೀಳುವ ಪ್ರದೇಶಗಳಿಗೆ ಹಾಗೂ ನಗರಗಳಿಗೆ ಕುಟುಂಬದ ಕೆಲವು ಸದಸ್ಯರು ಉದ್ಯೋಗಾವಕಾಶಗಳನ್ನು ಅರಸಿಕೊಂಡು ವಲಸೆ ಹೋಗಿ, ಉತ್ತಮ ದಿನಗಳು ಬಂದಾಗ ಮತ್ತೆ ಸ್ವಸ್ಥಾನಕ್ಕೆ ಮರಳುವರು. ಕರ್ನಾಟಕದ ಉತ್ತರದ ಬಯಲು ಸೀಮೆಯ ಜಿಲ್ಲೆಗಳಿಂದ ಕೃಷಿ ಕೆಲಸವನ್ನು ಅರಸಿಕೊಂಡು ಮಲೆನಾಡು, ಕರಾವಳಿಗಳಿಗೆ ಹಾಗೂ ಕಟ್ಟಡದ ಕೆಲಸಕ್ಕೆ ನಗರಗಳಿಗೆ ತಾತ್ಕಾಲಿಕವಾಗಿ ವಲಸೆ ಹೋಗುತ್ತಿರುವುದು ಅತಿ ಸಾಮಾನ್ಯ. ಈ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ನೀರಾವರಿ ಅಭಿವೃದ್ಧಿಯಿಂದ ವಲಸೆ ಸಮಸ್ಯೆಗೆ ತಕ್ಕ ಮಟ್ಟಿನ ಪರಿಹಾರ ದೊರೆತಿದೆ. ಈ ವರ್ಷದ ವಿಶ್ವ ಆಹಾರ ದಿನದ ಧ್ಯೇಯದಂತೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಹೂಡಿಕೆಯಿಂದ ವಲಸೆ ಸಮಸ್ಯೆಯ ಪರಿಹಾರಕ್ಕೆ ಇದೊಂದು ಉತ್ತಮ ಉದಾಹರಣೆ. ಕೃಷಿ ಕ್ಷೇತ್ರದ ಭವಿಷ್ಯಕ್ಕೆ ತೊಡಕಾಗಬಹುದೆಂದು ಭಾವಿಸಲಾಗಿರುವ ಇನ್ನೊಂದು ರೀತಿಯ ವಲಸೆಯೆಂದರೆ, ಗ್ರಾಮೀಣ ಪರಿಸರದ ಯುವಕರು ಕೃಷಿ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಇಚ್ಛಿಸದೇ, ಕೃಷಿಯೇತರೆ ಜೀವನ ಮಾರ್ಗಗಳನ್ನೂ, ನಗರ ಜೀವನದ ಅನುಕೂಲ ಗಳನ್ನೂ ಅರಸಿ ನಗರಗಳೆಡೆಗೆ ಮುಖ ಮಾಡಿರುವುದು

ಎಂದರೆ, ಗ್ರಾಮೀಣ ಯುವಕರು ಕೇವಲ ಗ್ರಾಮಗಳಿಗೇ ಸೀಮಿತವಾಗಿರಬೇಕು ಮತ್ತು ಅವರ ಭವಿಷ್ಯವನ್ನು ಕೇವಲ ಕೃಷಿಯಲ್ಲಿಯೇ ಕಂಡುಕೊಳ್ಳಬೇಕು ಎನ್ನುವುದು ಈ ಲೇಖಕನ ಆಶಯವಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೇ ಕ್ಷೇತ್ರದಲ್ಲಿ ಇತರರಿಗೆ ಸರಿ ಸಮಾನರಾಗಿ ಬೆಳೆದು ಉತ್ತುಂಗಕ್ಕೇರುವ ಅವಕಾಶಗಳು ಗ್ರಾಮೀಣ ಯುವಕರಿಗೂ ಇರಲೇಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಪಡೆದ ಅನೇಕರು ಮುಂದುವರೆದು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆಗಳನ್ನು ಮಾಡಿರುವ, ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಉದಾಹರಣೆಗಳು ನಮ್ಮ ಮುಂದೆ ಬೇಕಾದಷ್ಟು ಇವೆ.ಸ್ಪರ್ಧಾತ್ಮಕ ಮನೋಭಾವದಿಂದ ಉತ್ತಮವಾಗಿ ಬೆಳೆದು ಜಗತ್ತಿನ ಯಾವುದೇ ಭಾಗದಲ್ಲಿ ಮನುಕುಲದ ಸೇವೆ ಮಾಡುವ ಗ್ರಾಮೀಣ ಪ್ರದೇಶದ ಯುವ ಮಾನವ ಸಂಪನ್ಮೂಲದ ಚಲನೆಗೆ ಯಾವುದೇ ನಿರ್ಬಂಧ ಮಾಡಿದರೆ, ಅದರಿಂದ ಮನುಕುಲಕ್ಕೇ ನಷ್ಟ. ಆದ್ದರಿಂದ ಗ್ರಾಮೀಣ ಮಕ್ಕಳು ಅತ್ಯುತ್ತಮ ವಿದ್ಯಾಭ್ಯಾಸ ಗಳಿಸಿ ವಿವಿಧ ಕ್ಷೇತ್ರಗಳಲ್ಲಿ ಮುಂದುವರೆಯುವುದಕ್ಕೆ ಮೊದಲ ಆದ್ಯತೆಯಿರಬೇಕು. ಆದರೆ, ಮೂಲ ವಿದ್ಯಾಭ್ಯಾಸದ ನಂತರ ಗ್ರಾಮಗಳಲ್ಲಿಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆನ್ನುವವರಿಗೆ ಸಹಕಾರಿಯಾಗುವಂತೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಈ ಕೆಳಗಿನ ಅಂಶಗಳ ಬಗ್ಗೆ ಹೆಚ್ಚು ಗಮನ ನೀಡಬೇಕು

೧. ಕೃಷಿಯಲ್ಲಿ ಮೂಲಭೂತ ಸೌಕರ್ಯಗಳ ವೃದ್ಧಿ: ನೀರಾವರಿ ಸೌಲಭ್ಯ, ನೀರೆತ್ತಲು ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಸ್ಥಳೀಯ ಸ್ಪರ್ಧಾತ್ಮಕ ಮಾರುಕಟ್ಟೆ, ಕೃಷಿ ಯಂತ್ರಗಳ ಸುಲಭ ಲಭ್ಯತೆ, ಉತ್ತಮ ಗುಣಮಟ್ಟದ ಬೀಜಗಳ ಪೂರೈಕೆ, ರೈತನಿಗೆ ಹೊರೆ ಯಾಗದಂತಹ ವಾಸ್ತವಿಕ ಬೆಲೆಗಳಲ್ಲಿ ಕೃಷಿ ಪರಿಕರಗಳ ಪೂರೈಕೆ, ಮುಂತಾದ ವಿಷಯಗಳಲ್ಲಿ ಸರ್ಕಾರೀ ಹಾಗೂ ಖಾಸಗಿ ಬಂಡವಾಳ ಹೂಡಿಕೆಯಾಗಬೇಕು. ೨. ರೈತನ ಜೀವನ ಸುಭದ್ರತೆ: ನೈಸರ್ಗಿಕ ವಿಕೋಪಗಳಿಂದ ಆಗುವ ಹಾನಿಯನ್ನು ಕೇವಲ ಒಂದೆರಡು ಬೆಳೆಗಳ ಬದಲಿಗೆ ಕೃಷಿಕನ ಸಂಪೂರ್ಣ ಆದಾಯಕ್ಕೆ ಪರಿಗಣಿಸಿ, ರೈತ ಕುಟುಂಬಕ್ಕೆ ಜೀವನ ಸುಭದ್ರತೆ ನೀಡಲು, ಬೆಳೆ ವಿಮೆಗಳ ಬದಲಿಗೆ ಒಟ್ಟು ಕೃಷಿ ಆದಾಯ ವಿಮೆಯ ಮಾರ್ಗಗಳನ್ನು ರೂಪಿಸಬೇಕು. ಇದಕ್ಕೋಸ್ಕರ ಈಗಿರುವ ನೀತಿ ನಿಯಮಗಳಲ್ಲಿ ಕೆಲವು ಮೂಲಭೂತ ಬದಲಾವಣೆಗಳನ್ನು ಮಾಡಬೇಕು. ೩. ಸಮಗ್ರ ಕೃಷಿ ಪದ್ಧತಿಗೆ ಉತ್ತೇಜನ: ಕೃಷಿ ಕುಟುಂಬದ ಸುಖಕರ ಹಾಗೂ ಸಂತೃಪ್ತ ಜೀವನಕ್ಕೆ ಮಾರ್ಗ ಮಾಡಿಕೊಡುವ ಸಮಗ್ರ ಕೃಷಿ ಪದ್ಧತಿಗೆ ಇನ್ನೂ ಹೆಚ್ಚಿನ ಉತ್ತೇಜನ ಬೇಕು. ಯಾವುದೇ ಒಂದು ಬೆಳೆ ಅಥವಾ ಕಸುಬಿಗೆ ಸಾಲ ನೀಡುವ ಪ್ರಸ್ತುತ ಸಾಲ ನೀತಿಯನ್ನು ಮಾರ್ಪಾಡು ಮಾಡಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾಲ ನೀಡುವಂತಾಗಬೇಕು. ಸಮಗ್ರ ಕೃಷಿ ಪದ್ಧತಿಯಲ್ಲಿ ಅನೇಕ ಕಿರು ಉತ್ಪನ್ನಗಳ ಹಾಗೂ ಸಾವಯವ ವಸ್ತುಗಳ ಉತ್ಪಾದನೆಯನ್ನು ಉತ್ತೇಜಿಸಿ, ಅವುಗಳಿಗೆ ಸ್ಥಳೀಯವಾದ ಲಾಭಕರ ಮಾರುಕಟ್ಟೆಯ ಅವಕಾಶವನ್ನು ಕಲ್ಪಿಸಬೇಕು. ೪. ಗ್ರಾಮೀಣ ಉದ್ದಿಮೆದಾರರಿಗೆ ಉತ್ತೇಜನ: ಇಂದಿನ ಕೃಷಿಕರು ಕೃಷಿ ಆದಾಯದ ಜೊತೆಗೆ, ಗ್ರಾಮದಲ್ಲಿದ್ದುಕೊಂಡೇ ಕೈಗೊಳ್ಳಬಹುದಾದ ಕೃಷಿಯೇತರೆ ಆದಾಯಗಳ ಮೂಲಗಳನ್ನೂ ರೂಢಿಸಿಕೊಳ್ಳಬೇಕು. ಗ್ರಾಮಗಳಲ್ಲಿ ವಿವಿಧ ಉದ್ಯೋಗಗಳನ್ನು ಕೈಗೊಳ್ಳುವವರಿಗೆ ಆರ್ಥಿಕ ಸಹಾಯ, ಸುಲಭ ಸಾಲ, ಅವಶ್ಯಕ ಕೌಶಲ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಯುವಕರು ಗ್ರಾಮದಲ್ಲಿಯೇ ಉದ್ದಿಮೆ ದಾರರಾಗಿ ಗುರುತಿಸಿಕೊಳ್ಳುವಂತಾಗಬೇಕು. ೫. ಉತ್ತಮ ನಾಗರಿಕ ಸೌಲಭ್ಯಗಳು: ಗೃಹ ಬಳಕೆಗೆ ಉತ್ತಮ ಗುಣಮಟ್ಟದ ನೀರು ಪೂರೈಕೆ, ಅಡುಗೆ ಅನಿಲ, ವಿದ್ಯುತ್ ಪೂರೈಕೆ, ಸಂವಹನ, ಸಂಪರ್ಕ ಮತ್ತು ಸಾರಿಗೆ, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಗ್ರಾಮ ನೈರ್ಮಲ್ಯ ವ್ಯವಸ್ಥೆಗಳಲ್ಲಿ ನಗರಗಳಿಗೆ ಕಡಿಮೆಯಿಲ್ಲದಂತೆ ಅಥವಾ ಇನ್ನೂ ಉತ್ತಮವಾಗಿರುವ ಸೇವೆಗಳನ್ನು ಕೊಡಬೇಕು. ರೈತರಿಗೆ ಬಹಳ ಉಪಯುಕ್ತವಾಗುವ ಸಂಚಾರೀ ಪಶು ಚಿಕಿತ್ಸಾಲಯಗಳನ್ನು ಸ್ಥಾಪಿಸಬೇಕು. ೬. ಭೂ ಒಡೆತನ ನೀತಿಯಲ್ಲಿ ಸೂಕ್ತ ಮಾರ್ಪಾಡುಗಳು: ಕೃಷಿಯಲ್ಲಿ ಪೂರ್ಣ ಸಮಯ ತೊಡಗುವ ಯುವಕರಿಗೆ ಭೂಮಿಯ ಒಡೆತನದಲ್ಲಿ ಸ್ಪಷ್ಟ ಪಾಲು ಇರಬೇಕು. ಆಗ ಮಾತ್ರ ಯುವಕರು ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ದೀರ್ಘಕಾಲೀನ ಅಭಿವೃದ್ಧಿಗಳನ್ನು ಕೈಗೊಳ್ಳಲು ಉತ್ತೇಜನ ದೊರೆಯುತ್ತದೆ. ಈ ದಿಶೆಯಲ್ಲಿ ಭೂ ಒಡೆತನ ನೀತಿಗೆ ಕೆಲವು ಮೂಲಭೂತ ಬದಲಾವಣೆಗಳನ್ನು ಮಾಡಬೇಕಾದೀತು

ಕೃಷಿಯಲ್ಲಿ ತೊಡಗಿರದ ಮಕ್ಕಳಿಗೆ ನಿರ್ವಹಣೆಯಲ್ಲಿ ಪಾಲುದಾರಿಕೆಯಿಲ್ಲದೆ ಕೇವಲ ಆಸ್ತಿಯ ಹಕ್ಕನ್ನು ಕೊಡುವುದು ಎಷ್ಟು ಸಮಂಜಸ ಎನ್ನುವುದರ ಬಗ್ಗೆ ಚರ್ಚೆಗಳಾಗಬೇಕು. ವಲಸೆಯು ಜಗತ್ತಿನಲ್ಲಿ ಸದಾ ಕಾಲ ನಡೆಯುತ್ತಾ ಬಂದಿರುವ ಒಂದು ಪ್ರಕ್ರಿಯೆ. ತಾತ್ಕಾಲಿಕವಾಗಿ ಸಮಸ್ಯೆಗಳನ್ನುಂಟು ಮಾಡಿದರೂ, ದೀರ್ಘ ಕಾಲದಲ್ಲಿ ವಿಭಿನ್ನ ನೆಲೆಗಟ್ಟಿನ ಸಂಸ್ಕೃತಿಯನ್ನುಳ್ಳ ಸಮುದಾಯಗಳ ಬೆರೆಯುವಿಕೆಯಿಂದ ಲಾಭವೇ ಅಧಿಕ. ಆದರೆ, ಒಂದೆಡೆ ನೆಲೆ ನಿಂತ ಜನಾಂಗವು ಬದುಕಿನ ನೆಲೆಗಟ್ಟನ್ನೇ ಕಳೆದುಕೊಂಡು ನಿರಾಶ್ರಿತರಾಗಿ ಇನ್ನೊಂದೆಡೆಗೆ ಚಲಿಸುವಂತಹ ಒತ್ತಾಯದ ಪರಿಸ್ಥಿತಿ ಬಾರದಂತೆ ತಡೆಗಟ್ಟುವುದು ಅನಿವಾರ್ಯ. ಈ ದಿಶೆಯಲ್ಲಿ ವಿಶ್ವ ಆಹಾರ ಸಂಸ್ಥೆಯ ಪ್ರಯತ್ನಗಳು ಫಲಪ್ರದವಾಗುತ್ತವೆಂದು ಆಶಿಸೋಣ