ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ರೈತರಿಗೇಕೆ ಸಸ್ಯತಳಿಗಳ ಮೇಲೆ ನಿರ್ಲಕ್ಷ್ಯ?

ಡಾ. ನಿಶಾಂತ್, ಜಿ. ಕೆ
9844484496

ನಮ್ಮ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಭಾಗವಾಗಿ ಏರ್ಪಡಿಸುವ ಬೆಳೆ ವಿಚಾರ ಸಂಕಿರಣಗಳಲ್ಲಿ ಬೆಳೆಗಳ ಸುಧಾರಿತ ತಳಿಗಳ ಬಗೆಗೆ ವಿವರಿಸಲು ವಿವಿಧ ವಿಷಯ ತಜ್ಞರ ಜೊತೆ ನಾನು ಭಾಗಿಯಾಗಿದ್ದೆ. ಈ ವಿಚಾರ ಸಂಕಿರಣಗಳಲ್ಲಿ ರೈತರು ಅತೀ ಹೆಚ್ಚಾಗಿ ಕೇಳುತ್ತಿದ್ದ ಪ್ರಶ್ನೆಗಳೆಂದರೆ ಬೆಳೆಗಳ ರೋಗ ಮತ್ತು ಕೀಟಗಳ ಹಾವಳಿ ಮತ್ತು ಅವುಗಳ ನಿರ್ವಹಣೆ ಹೇಗೆ? ನಮ್ಮ ತಜ್ಞರು ಕೆಲವು ಪೀಡೆನಾಶಕಗಳ ಬಗೆಗೆ ವಿವರಿಸಿದರೆ ಅದನ್ನು ನಾವು ಉಪಯೋಗಿಸಿದ್ದೇವೆ ಹೊಸದೇನಾದರೂ ಮಾರುಕಟ್ಟೆಯಲ್ಲಿ ಲಭ್ಯವಿದೆಯಾ ಎನ್ನುವ ಮರುಪ್ರಶ್ನೆ ಬಹುತೇಕ ಗ್ರಾಮಗಳ ರೈತರಲ್ಲಿ ಸಾಮಾನ್ಯವಾಗಿತ್ತು. ಈ ರೀತಿಯ ಹಲವು ಕಾರ್ಯಕ್ರಮಗಳಲ್ಲಿ ನಾನು ಎಷ್ಟೇ ಸುಧಾರಿತ ತಳಿಗಳು ಮತ್ತು ಸಂಕರಣ ತಳಿಗಳ(ಹೈಬ್ರಿಡ್) ಬಗ್ಗೆ ಮತ್ತು ಅವುಗಳ ಅಧಿಕ ಇಳುವರಿ, ರೋಗ ಕೀಟಗಳ ನಿರೋಧಕ ಶಕ್ತಿ, ಬರ, ಜೌಳು, ಮುಳುಗಡೆ ಸಹಿಷ್ಣು ಸಾಮರ್ಥ್ಯ ಮತ್ತು ಇತರೆ ಬಹು ವಿಶೇಷ ಗುಣಲಕ್ಷಣಗಳ ಬಗ್ಗೆ ವಿವರಿಸಿ ಇಂತಹ ತಳಿಗಳನ್ನು ಉಪಯೋಗಿಸಿದರೆ ರೋಗ ಮತ್ತು ಕೀಟಗಳಿಂದ ಮುಕ್ತಿ ಹಾಗೂ ಅಧಿಕ ಇಳುವರಿ ಪಡೆಯಬಹುದು. ಬೇಸಾಯದ ಖರ್ಚನ್ನು ಕಡಿಮೆ ಮಾಡಬಹುದು ಎಂದು ಮಾಹಿತಿ ನೀಡಿದರೂ ಮತ್ತೆ ಚರ್ಚೆಯ ಸಮಯದಲ್ಲಿ ಅವರು ಕೀಟ ರೋಗಗಳ ಬಗೆಗೆ ವಾಲುತ್ತಿದ್ದರೆ ಹೊರತು ತಳಿಗಳ ಬಗೆಗಿನ ಮಾಹಿತಿಯ ಕಡೆಗಲ್ಲ, ಏಕೆ ಹೀಗೆ? ಸುಧಾರಿತ ತಳಿಗಳು ಮತ್ತು ಸಂಕರಣ ತಳಿಗಳು(ಹೈಬ್ರಿಡ್) ಹಸಿರು ಕ್ರಾಂತಿಗೆ ನಾಂದಿ ಹಾಡಿ, ೬೦ರ ದಶಕದಲ್ಲಿ ಭಾರತದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದನ್ನು ನಾವು ಮರೆಯುವಂತಿಲ್ಲ. ಭಾರತದ ಹಲವಾರು ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಅಧಿಕ ಇಳುವರಿ ಮತ್ತು ಹಲವು ವಿಶೇಷತೆಗಳನ್ನೊಳಗೊಂಡ ತಳಿಗಳನ್ನು ಅಭಿವೃದ್ಧಿ ಪಡಿಸಲು ಸದಾ ಶ್ರಮಿಸುತ್ತಿದ್ದಾರೆ. ಜೊತೆಗೆ ಪ್ರತೀ ವರ್ಷವೂ ಪ್ರತೀ ಪ್ರದೇಶಗಳ ಸಮಸ್ಯೆಗಳಿಗೆ ಅನುಗುಣವಾಗಿ ಅನೇಕ ಹೊಸತಳಿಗಳನ್ನು ಸಂಶೋಧಿಸಿ ಆಯಾ ಪ್ರದೇಶಗಳಿಗೆ ಸೂಕ್ತವೆಂದು ಪರೀಕ್ಷಿಸಿ ಬಿಡುಗಡೆಗೊಳಿಸುತ್ತಲೇ ಬಂದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕವಾಗಿ ತಳಿಗಳಲ್ಲಿಯೇ ಆಧಿಕ ರೀತಿಯ ಪೌಷ್ಠಿಕಾಂಶಗಳನ್ನು ಹೊಂದಿರುವಂತಹ ವಿನೂತನ ಜೈವಿಕ ಸಾರವರ್ಧನೆ ಎಂಬ ಕ್ರಮದ ಮುಖೇನ ಅಧಿಕ ಪ್ರೋಟೀನ್, ಸತು (ಜಿಂಕ್) ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿರುವ ತಳಿಗಳನ್ನು ಸಹ ಬಿಡುಗಡೆಗೊಳಿಸಿ, ಅಪೌಷ್ಠಿಕತೆಯನ್ನು ದೂರವಾಗಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಉದಾಹರಣೆಗೆ ಭತ್ತದಲ್ಲಿ ಅಧಿಕ ಸತುವಿನ ಅಂಶವನ್ನು ಹೊಂದಿರುವ ಡಿ.ಆರ್.ಆರ್. ಧನ್-೪೫ ಎಂಬ ತಳಿಯನ್ನು ಭಾರತೀಯ ಕೃಷಿ ಅನುಸಂಧಾನ ಭವನ, ನವದೆಹಲಿಯ ತಳಿತಜ್ಞರು ಅಭಿವೃದ್ಧಿಪಡಿಸಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿಗೆ ಸೂಕ್ತವೆಂದು ಬಿಡುಗಡೆಗೊಳಿಸಿರುತ್ತಾರೆ. ಕೇವ ಪೀಡೆನಾಶಕಗಳ ಬಳಕೆ ಮತ್ತು ಸುಧಾರಿತ ಬೇಸಾಯಕ್ರಮವನ್ನು ಅನುಸರಿಸಿದರೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಿಲ್ಲ, ಸುಧಾರಿತ ತಳಿಗಳು ಸುಧಾರಿತ ಬೇಸಾಯಕ್ರಮದ ಭಾಗವಾದರೆ ಮಾತ್ರ ಇಳುವರಿಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಾಣಬಹುದು. ಬರ, ಇನ್ನಿತರ ಸಸ್ಯ ಶಾರೀರಿಕ ನೂನ್ಯತೆ, ರೋಗ ಮತ್ತು ಕೀಟಗಳ ಹಾವಳಿಯನ್ನು ಸಮರ್ಥವಾಗಿ ನಿರೋಧಿಸುವ ಶಕ್ತಿಯನ್ನು ಹೊಂದಿರುವ ಸುಧಾರಿತ ತಳಿಗಳ ಮಾಹಿತಿಯನ್ನು ರೈತರು ಕಾಲ ಕಾಲಕ್ಕೆ ಕೃಷಿ ವಿಶ್ವವಿದ್ಯಾಲಯಗಳಿಂದ ಪಡೆದು ಅಧಿಕ ಇಳುವರಿಯ ಜೊತೆಗೆ ಕೃಷಿ ರಾಸಾಯನಿಕಗಳ ಅತಿಯಾದ ಉಪಯೋಗವನ್ನು ತಪ್ಪಿಸಿ ಪರಿಸರಮಾಲಿನ್ಯ ಮತ್ತು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬಹುದು. ಇನ್ನಾದರೂ ರೈತರು ಅತಿಯಾದ ಪೀಡೆನಾಶಕಗಳಿಂದ ಮಾತ್ರ ಹೆಚ್ಚಿನ ಇಳುವರಿ ಎಂಬುವ ಅವೈಜ್ಞಾನಿಕ ಯೋಚನೆಯನ್ನು ನಿಲ್ಲಿಸಿ, ಸುಧಾರಿತ ತಳಿಗಳ ಬಗೆಗಿರುವ ನಿರ್ಲಕ್ಷ್ಯವನ್ನು ಬದಿಗೊತ್ತಿದರೆ ಮುಂದಿನ ದಿನಗಳಲ್ಲಿ ಮತ್ತೊಂದು ಹಸಿರು ಕ್ರಾಂತಿಗೆ ನಾಂದಿ ಹಾಡಬಹುದಲ್ಲದೆ ಬಲಿಷ್ಠ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬಹುದು