ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ದೊಣ್ಣೆ ಮೆಣಸಿನಕಾಯಿಯ ದುಂಡಾಣು ಸೊರಗು ರೋಗ

ಪ್ರವೀಣ ಯಡಹಳ್ಳಿ
08272225539
1

ದುಂಡಾಣು ಸೊರಗು ರೋಗ(ಬ್ಯಾಕ್ಟೀರಿಯಾ ವಿಲ್ಟ್)ವು ರಾಲ್ಸ್ಟೋನಿಯಾ ಸೋಲ್ಯಾನೇಸಿಯಾರಮ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ರೋಗವು ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನದಲ್ಲಿ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ತೀವ್ರವಾಗಿ ಕಂಡು ಬರುತ್ತದೆ. ಹಾಗೆ ಪಾಲಿಮನೆಯಲ್ಲಿ ಬೆಳೆಯುವ ದೊಣ್ಣೆ ಮೆಣಸಿನಕಾಯಿಗೂ ಈ ರೋಗ ಬರುವ ಸಾಧ್ಯತೆಗಳಿವೆ. ರೋಗದ ಲಕ್ಷಣಗಳು: ಈ ರೋಗವು ಬೆಳೆಯ ಕೆಲವು ಗಿಡಗಳಲ್ಲಿ ಅಥವಾ ಗುಂಪುಗಳಲ್ಲಿ ಕಾಣಿಸುತ್ತದೆ. ರೋಗ ತಗುಲಿದ ಹಳೆಯ ಗಿಡಗಳಲ್ಲಿ ಕೆಳ ಎಲೆಗಳು ಮತ್ತು ಚಿಕ್ಕ ಸಸಿಗಳಲ್ಲಿ ಮೇಲ್ಭಾಗದ ಎಲೆಗಳ ಬಾಡುವಿಕೆಯನ್ನು ಕಾಣಬಹುದು. ರೋಗದ ಮೊದಲ ಹಂತದಲ್ಲಿ ದಿನದ ಬೆಳಗಿನ ಅಥವಾ ಸಂಜೆಯ ತಂಪಾದ ತಾಪಮಾನದಲ್ಲಿ ಸಸಿಗಳು ತಾತ್ಕಾಲಿಕವಾಗಿ ಚೇತರಿಸಿಕೊಳ್ಳಬಹುದು. ಕೆಲವು ದಿನಗಳ ನಂತರ ಸಸಿಗಳು ಶಾಶ್ವತವಾಗಿ ಬಾಡುತ್ತವೆ. ಇದರಲ್ಲಿ ಎಲೆಗಳು ಹಸಿರಾಗಿದ್ದು ಬಾಡಲು ಆರಂಭಿಸುತ್ತವೆ. ರೋಗದ ತೀವ್ರತೆಯಲ್ಲಿ ಗಿಡಗಳು ಒಣಗುತ್ತವೆ. ರೋಗ ನಿರ್ಣಯದ ಪ್ರಮುಖ ಲಕ್ಷಣಗಳು: ಬೇರು ಅಥವಾ ಕಾಂಡವನ್ನು ಕತ್ತರಿಸಿ ನೀರಿರುವ ಒಂದು ಪಾರದರ್ಶಕ ಲೋಟದಲ್ಲಿ ಇರಿಸಿದಾಗ ಬೂದು ಬಣ್ಣದ ಬ್ಯಾಕ್ಟೀರಿಯಾದ ಹೊಗೆಯಾಕಾರದ ಸ್ರವಿಸುವಿಕೆಯನ್ನು ಕಾಣಬಹುದಾಗಿದೆ. ಈ ಪರೀಕ್ಷೆಯು ಬ್ಯಾಕ್ಟೀರಿಯಾ ವಿಲ್ಟ್/ ದುಂಡಾಣು ಸೊರಗು ರೋಗವೆಂದು ದೃಢೀಕರಿಸಲು ಸಹಾಯಕಾರಿಯಾಗಿದೆ

ರೋಗ ನಿರ್ವಹಣೆ: ರೋಗ ಮುಕ್ತ ಸಸಿಗಳನ್ನು ನಾಟಿಗೆ ಬಳಸಬೇಕು, ರೋಗ ತಗುಲಿದ ಸಸಿಗಳನ್ನು ಕಿತ್ತೊಗೆಯಬೇಕು ಹಾಗೂ ಆ ಸಸಿಗಳನ್ನು ಸುಟ್ಟುಹಾಕಬೇಕು, ಹನಿ ನಿರಾವರಿ ಪದ್ಧತಿಯನ್ನು ಅನುಸರಿಸಬೇಕು. ಇದರಿಂದ ನೀರು ರೋಗಗ್ರಸ್ಥ ಮಣ್ಣಿನಿಂದ ಆರೋಗ್ಯಕರ ಮಣ್ಣಿನ ಕಡೆಗೆ ಹರಿಯುವುದನ್ನು ತಡೆಯಬಹುದು, ರೋಗ ನಿರೋಧಕ ತಳಿಗಳನ್ನು ಬಳಸುವುದು, ನೀರಾವರಿಗೆ ಕಲುಷಿತ ನೀರಿನ ಬಳಕೆಯನ್ನು ತಡೆಯುವುದು, ಪಾಲಿಮನೆ ಸಲಕರಣೆಗಳನ್ನು ಕ್ರಿಮಿನಾಶಕಗಳಿಂದ ಶುದ್ಧಿಕರಿಸುವುದು, ಬೆಳೆ ಪರಿವರ್ತನೆಯನ್ನು ಅಳವಡಿಸುವುದು, ಸ್ಟ್ರೆಪ್ಟೋಸೈಕ್ಲೀನ್ ಬ್ಯಾಕ್ಟೀರಿಯನಾಶಕ (೦.೫ಗ್ರಾಂ/ಲೀ.) + ಕಾಪರ್ ಆಕ್ಸಿಕ್ಲೋರೈಡ್ (೩ಗ್ರಾಂ/ಲೀ.) ಮಿಶ್ರಣವನ್ನು ರೋಗ ತಗುಲಿದ ಸಸಿಗಳ ಬುಡಕ್ಕೆ ಚೆನ್ನಾಗಿ ಸುರಿಯುವುದು, ಬ್ಯಾವಿಸ್ಟೀನ್ (೨ಗ್ರಾಂ/ಲೀ.)/ ರಿಡೊಮಿಲ್ ಎಮ್.ಜೆಡ್. (೨ಗ್ರಾಂ/ಲೀ.)ನ್ನು ಬುಡಕ್ಕೆ ಸುರಿಯುವುದು