ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಜಾಯಿಕಾಯಿ

ರೇಖಾ, ಎಂ. ವಿ
7022912309
1

ಅಡಿಕೆ ತೋಟದಲ್ಲಿ ಕೇವಲ, ಅಡಿಕೆಯನ್ನು ಮಾತ್ರ ಬೆಳೆಯದೆ, ಮಿಶ್ರ ಬೆಳೆಯಾಗಿ ಕೋಕೋ, ಬಾಳೆ, ಕಾಳುಮೆಣಸು, ಎಲೆಬಳ್ಳಿ, ಶುಂಠಿ ಏಲಕ್ಕಿಯನ್ನು ಬೆಳೆದು ರೈತರು ಲಾಭವನ್ನು ಗಳಿಸುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ಕೊಡುವಂತಹ ಬೆಳೆ ಜಾಯಿಕಾಯಿಯೂ ಕೂಡ ಒಂದು ಉತ್ತಮ ಮಿಶ್ರ ಬೆಳೆ. ಕೆಲವರು ಇದರಿಂದ ವರ್ಷಕ್ಕೆ ೨-೩ ಲಕ್ಷ ರೂ. ಆದಾಯವನ್ನು ಪಡೆಯುತ್ತಿದ್ದಾರೆ. ಜಾಯಿಕಾಯಿ ಮರಗಳನ್ನು ಬೆಳೆಯುವುದು ಅತೀ ಸುಲಭವಾಗಿದ್ದು, ಸ್ವಲ್ಪ ನೆರಳು ಮತ್ತು ತೇವಾಂಶವಿರುವ ಮಣ್ಣಿನಲ್ಲಿ ನಾಟಿ ಮಾಡಿದ ೬-೭ ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭವಾಗುತ್ತವೆ. ರೋಗ ಮತ್ತು ಕೀಟ ಬಾಧೆ ಕಡಿಮೆ ಇರುವ ಈ ಸಸ್ಯಕ್ಕೆ ಒಂದು ವರ್ಷಕ್ಕೊಮ್ಮೆ ಕೇವಲ ಕೊಟ್ಟಿಗೆ ಗೊಬ್ಬರವನ್ನು ಕೊಟ್ಟು ಉತ್ತಮ ಇಳುವರಿಯನ್ನು ಪಡೆಯಬಹುದು. ಪರಿಚಯ: ಮಿರಿಸ್ಟಿಕಾ ಫ್ರಾಗ್ರೆನ್ಸ್ ಎಂದು ಕರೆಯಲ್ಪಡುವ ಜಾಯಿಕಾಯಿ ಔಷಧೀಯ ಗುಣಗಳಿಂದ ಮತ್ತು ವಾಣಿಜ್ಯವಾಗಿಯೂ ಪ್ರಾಮುಖ್ಯತೆಯನ್ನು ಹೊಂದಿರುವ ಬೆಳೆ. ಇದು ಏಷ್ಯಾ ಖಂಡದಲ್ಲಿ ಸಾಮಾನ್ಯವಾಗಿ ಬೆಳೆಯುವ, ಸದಾಹಸಿರಾಗಿರುವ ಮರವಾಗಿದ್ದು ಇಂಡೋನೇಶಿಯ ಇದರ ಮೂಲ ಸ್ಥಾನ. ಬಹು ಉಪಯೋಗಿಯಾದ ಜಾಯಿಕಾಯಿ ಉಷ್ಣವಲಯದಲ್ಲಿ ಬೆಳೆಯುತ್ತದೆ. ಈ ಹಣ್ಣಿನಲ್ಲಿ ಎರಡು ಭಾಗಗಳಿದ್ದು, ಕಾಯಿಗಳನ್ನು ಜಾಯಿಕಾಯಿ ಎಂದು, ಕಾಯಿಯನ್ನು ಆವರಿಸಿರುವ ಪತ್ರೆ/ಸಿಪ್ಪೆಯನ್ನು ಜಾಯಿಪತ್ರೆ ಎಂದು ಕರೆಯುತ್ತಾರೆ. ಈ ಎರಡೂ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಉಪಯೋಗ: ಈ ಕಾಯಿಯನ್ನು ಸಾಂಬಾರು ಪದಾರ್ಥಗಳಲ್ಲಿ, ಜ್ಯಾಮ್, ಉಪ್ಪಿನಕಾಯಿ ತಯಾರಿಕೆಯಲ್ಲಿ, ಸುಗಂಧ ದ್ರವ್ಯಗಳಲ್ಲಿ, ಸೌಂದರ್ಯ ವರ್ಧಕಗಳಲ್ಲಿ ಉಪಯೋಗಿಸುತ್ತಾರೆ. ಔಷಧೀಯ ಗುಣಗಳನ್ನು ಹೊಂದಿರುವ ಜಾಯಿಕಾಯಿಯನ್ನು ಸ್ನಾಯು ನೋವು, ಉರಿಯೂತ, ಕೀಲುನೋವು, ಊತ, ನಿದ್ರಾಹೀನತೆ, ಅತಿಸಾರ, ಮಲಬದ್ಧತೆ, ಖಿನ್ನತೆ ಮತ್ತು ಆತಂಕ ದೂರಮಾಡಲು ಬಳಸುತ್ತಾರೆ. ಏಕಾಗ್ರತೆ ಹೆಚ್ಚಿಸುವಲ್ಲಿ, ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಚರ್ಮದ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.ಸಸ್ಯಾಭಿವೃದ್ದಿ: ಜಾಯಿಕಾಯಿ ಗಿಡಗಳನ್ನು ಬಲಿತ ಕಾಯಿಗಳಿಂದ ಅಥವಾ ಕಸಿ ಕಟ್ಟಿ ಬೆಳೆಸಬಹುದು. ಕಸಿ ಕಟ್ಟಿದ ಗಿಡ ಕನಿಷ್ಠ ಐದು ವರ್ಷದ ಅವಧಿಯೊಳಗೆ ಕಾಯಿ ನೀಡಲು ಆರಂಭಿಸುತ್ತದೆ. ಗಿಡಗಳನ್ನು ನೆಡಲು ಜೂನ್-ಜುಲೈ ತಿಂಗಳು ಸೂಕ್ತ ಕಾಲವಾಗಿದ್ದು, ಕಸಿ ಕಟ್ಟುವುದಾದರೆ ಆಗಸ್ಟ್-ಸೆಪ್ಟೆಂಬರ್ ಅವಧಿ ಉತ್ತಮವಾಗಿರುತ್ತದೆ. ಜಾಯಿಕಾಯಿಯಲ್ಲಿ ಗಂಡು ಮತ್ತು ಹೆಣ್ಣು ಮರಗಳು ಪ್ರತ್ಯೇಕವಾಗಿರುತ್ತವೆ. ಗಂಡು ಮತ್ತು ಹೆಣ್ಣು ಗಿಡಗಳನ್ನು ಚಿಕ್ಕವಿರುವಾಗ ಗುರುತಿಸುವುದು ಕಷ್ಟಕರವಾಗಿದ್ದು, ಗಂಡು ಮರದ ಎಲೆಗಳು ಚಿಕ್ಕದಾಗಿದ್ದು, ಹೆಣ್ಣು ಮರದ ಎಲೆಗಳು ನೀಳವಾಗಿರುತ್ತವೆ. ಗಂಡು ಮರದಲ್ಲಿ ಕಾಯಿಗಳು ಬಿಡುವುದಿಲ್ಲವಾದ್ದರಿಂದ ಎಷ್ಟು ವರ್ಷಗಳ ಕಾಲ ಬೆಳೆದರೂ ಕಾಯಿ ಕಟ್ಟದೆ ರೈತರು ಪಟ್ಟ ಪರಿಶ್ರಮ ವ್ಯರ್ಥವಾಗುತ್ತದೆ. ಆದ್ದರಿಂದ ಉತ್ತಮ ಫಸಲು ಕೊಡುವ ಮರಗಳಿಂದ ಕಸಿ ಕಟ್ಟಿ ಗಂಡು ಗಿಡಗಳನ್ನು ಹತೋಟಿ ಮಾಡಬಹುದು. ಆದರೆ, ಹೆಣ್ಣು ಮರಗಳು ಉತ್ತಮ ಫಸಲು ಕೊಡಬೇಕಾದಲ್ಲಿ ಎಕರೆಗೆ ೨-೪ ಗಂಡು ಮರಗಳನ್ನು ನಾಟಿ ಮಾಡಬೇಕಾಗುತ್ತದೆ. ಕೊಯ್ಲು: ಕಾಯಿಗಳು ಹಣ್ಣಾದಾಗ ತಾವಾಗಿಯೇ ಬಿರಿದುಕೊಂಡು ಕೆಳಗೆ ಬೀಳುತ್ತವೆ. ಈ ರೀತಿ ಬಿದ್ದು ಜಾಯಿ ಪತ್ರೆ ಹಾಳಾಗುವುದರಿಂದ ಬಲಿತ ಕಾಯಿಗಳನ್ನು ಕೊಯ್ಲು ಮಾಡಿ ಪತ್ರೆಯನ್ನು ಬೇರ್ಪಡಿಸಿ ಒಣಗಿಸಬೇಕು. ನಂತರ ಶೇಖರಿಸಿ ಮಾರಾಟ ಮಾಡಬಹುದು. ಒಂದು ಮರದಲ್ಲಿ ೧೦೦೦-೨೦೦೦ ಹಣ್ಣುಗಳು ಬಿಡುತ್ತವೆ. ಇದರಿಂದ ೫-೭ ಕೆ.ಜಿ. ಒಣಗಿದ ಜಾಯಿಕಾಯಿ ಮತ್ತು ೦.೫-೦.೭ ಕೆ.ಜಿ. ಜಾಯಿ ಪತ್ರೆ ದೊರೆಯುತ್ತದೆ. ಜಾಯಿಕಾಯಿ ಕಿಲೋಗೆ ಕನಿಷ್ಟ ೨೫೦-೩೦೦ ರೂ. ಇದ್ದು, ಜಾಯಿ ಪತ್ರೆಗೆ ಕಿಲೋಗೆ ರೂ. ೧೦೦೦-೧೨೦೦ ಬೆಲೆ ದೊರೆಯುತ್ತದೆ. ರೈತರು ಅಡಿಕೆ ಬೆಳೆಯಲ್ಲಿ ಜಾಯಿಕಾಯಿಯನ್ನು ಒಂದು ಮಿಶ್ರ ಬೆಳೆಯಾಗಿ ಬೆಳೆದಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು