ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಉಪಕಾರಿ ಸೂಕ್ಷ್ಮಜೀವಿ ಟ್ರೈಕೋಡರ್ಮ

ಡಾ. ವಿಜಯ್ ಅಂಗಡಿ
೯೪೪೮೯೯೬೪೯೫
1

ಕಾಳುಮೆಣಸು, ಶುಂಠಿ, ಆಲೂಗೆಡ್ಡೆ, ಮತ್ತಿತರೇ ತರಕಾರಿಗಳಲ್ಲಿ, ಪೈರುಗಳಲ್ಲಿ ಶಿಲೀಂಧ್ರದ ರೋಗಗಳು ಬಾರದಂತೆ ನೋಡಿಕೊಳ್ಳಲು ಉಪಕಾರಿ ಶಿಲೀಂಧ್ರ ಟ್ರೈಕೋಡರ್ಮವನ್ನು ಬಳಸಲಾಗುತ್ತಿದೆ. ಕೃಷಿ, ತೋಟಗಾರಿಕೆ ಇಲಾಖೆಗಳಲ್ಲದೇ ಸಂಬಾರ ಮಂಡಳಿ, ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಸಗಣಿಗೊಬ್ಬರ, ಎರೆಹುಳುಗೊಬ್ಬರದೊಂದಿಗೆ ಸೇರಿಸಿ ವೃದ್ಧಿಸಿಕೊಂಡು ಬೆಳೆ ಮಾಡುವ ಕಡೆ ಇದನ್ನು ಉಪಯೊಗಿಸಲಾಗುತ್ತಿದೆ. ಬೇವಿನ ಹಿಂಡಿಯನ್ನು ಬಳಸುವ ಕಡೆ ಟ್ರೈಕೋಡರ್ಮವು ಚೆನ್ನಾಗಿ ವೃದ್ಧಿಯಾಗುತ್ತದೆ ಎಂದು ಈ ನಿಟ್ಟಿನಲ್ಲಿ ಕೆಲಸ ಮಾಡಿರುವ ಸಂಶೋಧಕರು ಹೇಳುತ್ತಾರೆ

1.ಟ್ರೈಕೋಡರ್ಮವು ೮೯ ಉಪಜಾತಿಗಳಲ್ಲಿ ಕಾಣಿಸುತ್ತದೆ. ಇವುಗಳಲ್ಲಿ ಟ್ರೈಕೋಡರ್ಮ ಹಾರ್ಜಿಯಾನಂ, ಟ್ರೈಕೋಡರ್ಮ ವಿರಿಡೇ, ಟ್ರೈಕೋಡರ್ಮ ಹಾಮಾಟಾಮ್ ಇವು ಕೃಷಿಯಲ್ಲಿ ರೋಗಗಳ ಹತೋಟಿಗೆ ಉಪಯುಕ್ತ ಸೂಕ್ಷ್ಮಜೀವಿಗಳಾಗಿವೆ. ಇವು ಮಣ್ಣಿನಲ್ಲಿ ಶಿಲೀಂಧ್ರ ರೋಗಗಳನ್ನು ಹಾಗೂ ಪೈರಿನ ಮೇಲಿರುವ ಶಿಲೀಂಧ್ರ ರೋಗಗಳನ್ನು ಹತೋಟಿ ಮಾಡುತ್ತವೆ. 2. ಇದು ಎಲ್ಲಾ ಬಗೆಯ ಮಣ್ಣುಗಳಲ್ಲಿ ಇರುತ್ತದೆ. 3. ೨೫-೩೦ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಇದು ಚೆನ್ನಾಗಿ ಅಭಿವೃದ್ಧಿಯಾಗುತ್ತದೆ. 4. ಟ್ರೈಕೋಡರ್ಮ ಹಾರ್ಜಿಯಾನಂ(ಬಯೋಟೈಪ್-೪) - ಇದು ಬೆಳೆಯುವ ಅಣಬೆಗಳಲ್ಲಿ ಹಸಿರು ಬೂಜು ರೋಗವನ್ನು ಸೃಷ್ಟಿಮಾಡುತ್ತದೆ. 5. ಈರುಳ್ಳಿಯಲ್ಲಿ ಹಸಿರು ಬೂಜು ಕೊಳೆ ರೋಗವು ಟ್ರೈಕೋಡರ್ಮ ವಿರಿಡೇ ಎಂಬುದರಿಂದ ಬರುತ್ತದೆ. 6. ಟ್ರೈಕೋಡರ್ಮ ಶಿಲೀಂಧ್ರವು ಸಸ್ಯಗಳ ಬೇರುಗಳನ್ನೇ ಆಸರೆಯಾಗಿ ಪಡೆದುಕೊಂಡು ವೃದ್ಧಿಯಾಗುತ್ತವೆ. ಹೀಗಾಗಿ ಟ್ರೈಕೋಡರ್ಮವು ಸಸ್ಯಗಳ ಬೇರುಗಳನ್ನು ಬಲಿಷ್ಟವಾಗಿ, ವಿಶಾಲವಾಗಿ ವೃದ್ಧಿಸಲು ಕಾರ್ಯ ಮಾಡುತ್ತದೆ. ಆ ಮೂಲಕ ಬರ ನಿರೋಧಕ ಶಕ್ತಿಯನ್ನು ಸಸ್ಯಗಳಿಗೆ ತುಂಬಲು ಸಹಕಾರಿಯಾಗುತ್ತದೆ. 7. ರೋಗಕಾರಕ ಶಿಲೀಂಧ್ರ ಸೂಕ್ಷ್ಮಜೀವಿಗಳ ಮೇಲೆ ಟ್ರೈಕೋಡರ್ಮ ಶಿಲೀಂಧ್ರಗಳು ದಾಳಿ ಮಾಡುತ್ತವೆ. ಅವುಗಳಿಗೆ ಸತ್ವಾಂಶಗಳು ಸಿಗದಂತೆ ಕೊರಗಿಸುತ್ತವೆ. ವಿಷಕಾರಿ ಅಂಶಗಳನ್ನು ಹೊರಸೂಸಿ ಅವುಗಳ ಅಂತ್ಯಕ್ಕೆ ಹೋರಾಟ ಮಾಡುತ್ತವೆ. 8. ಟ್ರೈಕೋಡರ್ಮ ವರ್ಗದಲ್ಲಿ ಬಹಳಷ್ಟು ಉಪಜಾತಿಗಳಲ್ಲಿ ವಂಶಾಭಿವೃದ್ಧಿಯು ಪ್ರತೀ ಜೀವಿಯಿಂದಲೂ ನಡೆಯುತ್ತದೆ. ಈ ಜೀವಿಯಲ್ಲಿ ಹೆಣ್ಣು- ಗಂಡುಗಳ ಸೃಷ್ಠಿ ಇಲ್ಲ. ಎಲ್ಲಾ ಸೂಕ್ಷ್ಮಜೀವಿಗಳು ಸಂತಾನಾಭಿವೃದ್ಧಿಗೆ ಸಮರ್ಥವಾಗಿರುತ್ತವೆ. 9. ಟ್ರೈಕೋಡರ್ಮವು ಸಾರಜನಕವನ್ನು ಸೇರಿಕೊಂಡು ಇತರೇ ಪೋಷಕಾಂಶಗಳನ್ನು ಸಸ್ಯಗಳಿಗೆ ಮಣ್ಣಿನಿಂದ/ವಾತಾವರಣದಿಂದ ಲಭಿಸಲು ನೆರವಾಗುತ್ತದೆ. ಇದರಿಂದ ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಹಾಕುವುದನ್ನು ತಗ್ಗಿಸಬಹುದು, ಖರ್ಚನ್ನು ಉಳಿಸಬಹುದು