ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ನಾಟಿಪಶುವೈದ್ಯ

ಮುಳ್ಳಿಲ್ಲದ ನಾಚಿಕೆಗೆ ಮೈಯೆಲ್ಲಾ ವಿಷ !!!

ಡಾ. ಎನ್.ಬಿ.ಶ್ರೀಧರ
081822651005
1

ಮುಳ್ಳಿಲ್ಲದ ನಾಚಿಕೆ ಗಿಡಕ್ಕೆ ಅಂಗ್ಲ ಭಾಷೆಯಲ್ಲಿ ಒimosಚಿ iಟಿvisಚಿ ಎಂದು ಕರೆಯುತ್ತಾರೆ. ಇದನ್ನು ಮಲೆನಾಡಿನ ಜಿಲ್ಲೆಗಳಲ್ಲಿ ಅಡಿಕೆ ತೋಟದಲ್ಲಿ ಕಳೆ ನಿರ್ವಹಣೆಗಾಗಿ ಬೆಳೆಯುವುದು ವಾಡಿಕೆ. ಇದು ಮರಗಳ ಮಧ್ಯೆ ಹಾಗೂ ಸ್ವಲ್ಪ ತೇವಾಂಶ ಇರುವ ಕಡೆ ಹುಲುಸಾಗಿ ಬೆಳೆಯುತ್ತದೆ. ಇದು ಸೊಂಪಾಗಿ ಬೆಳೆಯುವುದರಿಂದ ಇತರ ಕಳೆಗಳನ್ನು ಬೆಳೆಯಲು ಬಿಡುವುದಿಲ್ಲ. ಅಲ್ಲದೇ ಈ ಗಿಡವು ಕೊಳೆತ ನಂತರ ಜೈವಿಕ ಗೊಬ್ಬರವಾಗಿ ಪರಿಣಾಮಕಾರಿ ಯಾಗುವುದರಿಂದ ಜನರು ಇದರ ಬೀಜಗಳನ್ನು ವಿವಿಧ ಖಾಸಗಿ ಕಂಪನಿಗಳು ಹಾಗೂ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಇತ್ಯಾದಿಗಳಿಂದ ಪಡೆದು ತಮ್ಮ ತೋಟಗಳಲ್ಲಿ ಬೆಳೆಸುವುದು ವಾಡಿಕೆ. ಹಲವು ಪತ್ರಿಕೆಗಳಲ್ಲೂ ಸಹ ಈ ಗಿಡವನ್ನು ಕಳೆನಾಶಕವಾಗಿ ತೋಟದಲ್ಲಿ ಬೆಳೆಯಲು ಲೇಖನಗಳು ಬಂದಿವೆ. ಇದರ ವಿಷಕಾರಿ ಗುಣದ ಬಗ್ಗೆ ಗೊತ್ತಿರದೇ ಹಲವರು ಇದನ್ನು ಜಾನುವಾರುಗಳಿಗೆ ಮೇವಾಗಿ ಬಳಸಬಹುದೆಂದು ಸಲಹೆ ನೀಡಿದ್ದಿದೆ. ಅಕಸ್ಮಾತ್ತಾಗಿ ಜಾನುವಾರುಗಳಿಗೆ ಗಿಡದ ಸೊಪ್ಪನ್ನು ತಿನ್ನಿಸಿದಾಗ ವಿಷವಾಗಿ ಪರಿಣಿಮಿಸಿ ಅವು ಸಾವನ್ನಪ್ಪಿದ ಘಟನೆ ಸಾಕಷ್ಟಿದೆ. ಉದಾಹರಣೆಗೆ ಸಾಗರ ತಾಲೂಕಿನ ತಾಳಗುಪ್ಪದ ಸಮೀಪದ ಹಳ್ಳಿಗಳಲ್ಲಿ, ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ, ಶ್ರೀರಂಗ ಪಟ್ಟಣದ ಸಮೀಪದ ಇಸ್ಕಾನ್ ಫಾರ್ಮನಲ್ಲಿ, ಶಿವಮೊಗ್ಗ ಜಿಲ್ಲೆಯ ಹನುಮಂತಾಪುರದಲ್ಲಿ ಮತ್ತಿತರ ಕಡೆ ಕಳೆದ ಒಂದೆರಡು ವರ್ಷಗಳಲ್ಲಿ ಇದರ ವಿಷಬಾಧೆಯಿಂದ ಹಲವು ಜಾನುವಾರುಗಳು ಮರಣವನ್ನಪ್ಪಿದ ವರದಿಗಳಿವೆ. ನಾಯಿಯಲ್ಲಿಯೂ ಸಹ ಈ ಗಿಡ ವಿಷಕಾರಿ ಎಂಬ ಬಗ್ಗೆ ವರದಿ ಬಂದಿದೆ. ಪಶುಚಿಕಿತ್ಸಾಲಯ ತಾಳಗುಪ್ಪದಲ್ಲಿ ಪ್ರಾಯೋಗಿಕವಾಗಿ ಕರುಗಳಿಗೆ ಈ ಸೊಪ್ಪನ್ನು ತಿನ್ನಿಸಿ ಇದರ ವಿಷಬಾಧೆ ಹಾಗೂ ಇದರ ಚಿಕಿತ್ಸೆಯ ಕುರಿತು ಸಂಶೋಧನೆ ನಡೆಸಲಾಗಿದೆ

3

ಜಾನುವಾರುಗಳು ತೋಟದಲ್ಲಿ ಹುಲುಸಾಗಿ ಬೆಳೆಯುವ ಮುಳ್ಳಿಲ್ಲದ ನಾಚಿಕೆ ಗಿಡದ ಸೊಪ್ಪನ್ನು ಯಥೇಚ್ಚವಾಗಿ ತಿಂದಾಗ ಮಾತ್ರ ರೋಗ ಲಕ್ಷಣಗಳು ಕಂಡು ಬರುತ್ತವೆ. ಸೊಪ್ಪು ತಿಂದ ಒಂದೆರಡು ದಿನ ಯಾವುದೇ ರೋಗ ಲಕ್ಷಣ ಕಾಣಿಸದು. ಜಾನುವಾರು ಅರೋಗ್ಯವಾಗಿದ್ದಂತೆ ಕಂಡು ಬರುವುದು. ಜಾನುವಾರಿನ ಮೇವು ಚೀಲದ ನಿಶ್ಕ್ರಿಯತೆ ಪ್ರಾರಂಭವಾಗಿ ಜಾನುವಾರು ಮೇವು ತಿನ್ನುವುದನ್ನು ಬಿಡುತ್ತದೆ. ನಂತರ ಜಾನುವಾರಿನಲ್ಲಿ ಮಲಬದ್ಧತೆಯ ಲಕ್ಷಣಗಳು ಕಂಡು ಬರುತ್ತವೆ. ರೋಗದ ಪ್ರಾರಂಭಿಕ ಲಕ್ಷಣಗಳೆಂದರೆ ಒದ್ದಾಡುವುದು, ಉಸಿರಾಟದ ತೊಂದರೆ, ಜೊಲ್ಲು ಸುರಿಸುವುದು, ಕಣ್ಣಲ್ಲಿ ನೀರು ಬರುವುದು ಮತ್ತು ಶರೀರದ ತಾಪಮಾನ ಕಡಿಮೆಯಾಗುವುದು ಇತ್ಯಾದಿ. ಈ ಹಂತದಲ್ಲಿ ಜಾನುವಾರು ಆಹಾರ ಮತ್ತು ನೀರು ಸೇವನೆಯನ್ನು ನಿಲ್ಲಿಸುತ್ತದೆ. ಸೊಪ್ಪನ್ನು ತಿಂದ ೫-೬ ದಿನಗಳ ನಂತರ ಮಲಬದ್ಧತೆ ಜಾಸ್ತಿಯಾಗುತ್ತದೆ ಮತ್ತು ಜಾನುವಾರು ಏಳಲು ತುಂಬಾ ಕಷ್ಟ ಪಡುತ್ತದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ಜಾನುವಾರಿನ ಹಿಂಭಾಗದಲ್ಲಿ ಅದರಲ್ಲೂ ಗುದದ್ವಾರದ ಸುತ್ತ ಮುತ್ತ ಮತ್ತು ಕೆಳ ಭಾಗದಲ್ಲಿ ಊತ ಪ್ರಾರಂಭವಾಗುವುದು. ಎಮ್ಮೆ ಹಾಗೂ ಆಕಳುಗಳಲ್ಲಿ ಯೋನಿಯ ಸುತ್ತ ಗಣನೀಯ ಪ್ರಮಾಣದಲ್ಲಿ ಊತ ಕಂಡು ಬರುತ್ತದೆ. ಗಂಡು ಜಾನುವಾರುಗಳಲ್ಲಿ ವೃಷಣದ ಸುತ್ತ ಊತ ಕಂಡು ಬರುತ್ತದೆ. ಮುಳ್ಳಿಲ್ಲದ ನಾಚಿಕೆ ಗಿಡದ ಸೊಪ್ಪನ್ನು ತಿಂದ ಜಾನುವಾರುಗಳು ೭-೧೦ ದಿನಗಳಲ್ಲಿ ಸಾವನ್ನಪ್ಪತ್ತವೆ

5

ಪ್ರಾಯೋಗಿಕವಾಗಿ ಜಾನುವಾರುಗಳಿಗೆ ಈ ಸೊಪ್ಪನ್ನು ತಿನ್ನಿಸಿ ಅಭ್ಯಸಿಸಿದಾಗ ಈ ಎಲ್ಲಾ ಲಕ್ಷಣಗಳು ಕ್ರಮವಾಗಿ ಕಂಡು ಬಂದಿದೆ. ಇದರ ವಿಷಬಾಧೆಯಿಂದ ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆಯಿಂದ ಜಾನುವಾರಿನ ಮೂತ್ರ ಪಿಂಡಗಳು ಹಾಳಾಗಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ೨೦೦ ಕಿಲೋ ತೂಕದ ಜಾನುವಾರು ೨-೩ ಕೆಜಿ ಸೊಪ್ಪನ್ನು ತಿಂದಾಗ ತೀವೃ ತರದ ರೋಗ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕಿಂತ ಕಡಿಮೆ ತಿಂದಾಗ ಅಲ್ಪ ಸ್ವಲ್ಪ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಪಶುವೈದ್ಯರಿಂದ ಚಿಕಿತ್ಸೆ ನೀಡಿದರೆ ಜಾನುವಾರು ಚೇತರಿಸಿ ಕೊಳ್ಳುವ ಸಾಧ್ಯತೆ ಇದೆ. ವಿಷಬಾಧೆಯ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ. ಇದಕ್ಕೆ ನಿಖರವಾದ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಂಶೋಧನೆ ಮುಂದುವರೆದಿದೆ. ಈ ಗಿಡದ ವೈಜ್ನಾನಿಕ ವಿಶ್ಲೇಷಣೆಯಿಂದ ಇದರಲ್ಲಿ ಸಯನೈಡ್, ನೈಟ್ರೇಟ್, ಅಲ್ಕಲೋಯ್ಡ್ಸ್, ಫ಼್ಲಾವೋನಾಯ್ಡ್ಸ್, ಟರ್ಪಿನ್ಸ್, ಸ್ಟಿರಾಯ್ಡ್ಸ್ ಇತ್ಯಾದಿ ವಿಷಕಾರಿ ರಾಸಾಯನಿಕಗಳ ಸಂಕೀರ್ಣವೇ ಇದೆ ಎಂದು ತಿಳಿದು ಬಂದಿದೆ. ರೈತರು ಈ ಸಸ್ಯವನ್ನು ಕೇವಲ ಕಳೆನಾಶಕವಾಗಿ ಹಾಗೂ ಜೈವಿಕಗೊಬ್ಬರವಾಗಿ ಮಾತ್ರ ಬಳಸುವುದು ಒಳಿತು. ಆದಷ್ಟು ಈ ಸಸ್ಯವನ್ನು ಜಾನುವಾರು ತಿನ್ನದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಇದೇ ರೀತಿ ರೋಗವು ಮುಳ್ಳಿರುವ ನಾಚಿಕೆಗಿಡವನ್ನು ಅತಿಯಾಗಿ ಜಾನುವಾರು ತಿಂದಾಗ ಬರುವುದನ್ನೂ ಸಹ ಗಮನಿಸಲಾಗಿದೆ. ಬೇರೆ ಸಸ್ಯಗಳೂ ಸಹ ಇದೇ ರೀತಿಯ ರೋಗಲಕ್ಷಣಗಳನ್ನು ಉಂಟು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.ಮುಳ್ಳಿಲ್ಲದ ನಾಚಿಕೆ ಗಿಡವನ್ನು ಬೆಳೆಸಲು ರೈತರನ್ನು ಪ್ರೋತ್ಸಾಹಿಸುವವರು ಜಾನುವಾರಿನಲ್ಲಿ ಇದರ ವಿಷಬಾಧೆಯ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಒಳ್ಳೆಯದು