ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಸ್ಕಿಲ್ ಇಂಡಿಯಾ ರೂವಾರಿಗಳು ಈ ಉತ್ಸಾಹಿ ಕಾರ್ವೆ ಯುವಕರು

image_
ಕೆ.ಸಿ.ಶಶಿಧರ
1

ಕರ್ನಾಟಕದ ಮೊದಲ ಸಿ-ಬಾಸ್(C-BASS) ಪಂಜರ ಮೀನು ಕೃಷಿಕರ ಸಂಘ ಸ್ಥಾಪಿಸಿದ ಉಕ್ಕುಂದ ಕಾರ್ವೆ ಯುವಕರು. ಈ ಯುವಕರನ್ನು ಭೇಟಿ ಮಾಡಲು ನಮ್ಮ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹುಲಕೋಟಿಯವರ ಜೊತೆ ಮಧ್ಯಾಹ್ನ ೩ ಗಂಟೆಗೆ ಹೊರಟೆವು. ಕರ್ಕಿಕಳಿ ಪ್ರಯಾಣವೇ ರೋಮಾಂಚನ, ರಮಣೀಯವಾಗಿತ್ತು. ಒಂದೆಡೆ ಸಮುದ್ರ, ಇನ್ನೊಂದೆಡೆ ಅದಕ್ಕೆ ಬಂದು ಸೇರುವ ಎಡಮಾವಿನ ಹೊಳೆ, ಬದಿಗಳಲ್ಲಿ ಮೀನುಗಾರರ ದೋಣಿ, ಬಲೆ ಅಬ್ಬಾ! ಒಂದು ಸುಂದರ ಪರಿಸರ. ನಾವು ಕರ್ಕಿಕಳಿ ತಲುಪುತ್ತಿದ್ದಂತೆ ನಾಲ್ಕಾರು ಯುವಕರು ಬಂದು ಹುಲಕೋಟಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡು ನನ್ನನ್ನು ಪರಿಚಯ ಮಾಡಿಕೊಂಡರು. ರವೀಂದ್ರ ಕಾರ್ವೆಯವರು ಸರ್ ನಾವು ಕರ್ನಾಟಕದ ಮೊದಲ ಪಂಜರ ಮೀನು ಕೃಷಿಕರ ಸಂಘ ಮಾಡಿದ್ದೇವೆ ನೋಡಿ ಎಂದು ಮೊಬೈಲ್ನಲ್ಲಿ ನೋಂದಣಿ ಪತ್ರ ತೋರಿಸಿದರು. ನನಗೆ ಈ ಪಂಜರ ಮೀನು ಹೊಸದು. ಪಂಜರದ ಗಿಣಿ ಬಲ್ಲೆ. ಪಂಜರ ಮೀನು ಹೇಗಿರುತ್ತೆ ಎಂದೆ. ಇದು ಬೇರೆ ಮೀನಲ್ಲ. ಈಗ ಸಮುದ್ರ ಹಿನ್ನೀರಿನಲ್ಲಿರುವ ಮೀನೆ ನಾವು ಕೃಷಿ ಮಾಡುತ್ತೇವೆ. ಹಾಗೆ ಮೀನು ಮರಿಯನ್ನ ನೀರಲ್ಲಿ ಬಿಟ್ಟರೆ ನಾವು ಬಿಟ್ಟವು ಬಿಟ್ಟಲ್ಲಿಯೇ ಇರುತ್ತವೆ? ಅದಕ್ಕೆ ನೈಸರ್ಗಿಕ ಪರಿಸರದಲ್ಲಿ ನಾವು ಬಿಟ್ಟ ಮೀನು ನಮ್ಮ ಹಿಡಿತದಲ್ಲೆ ಇರಲು ಒಂದು ಪಂಜರ ಮಾಡುತ್ತೇವೆ. ಒಂದು ಸಣ್ಣ ಪಂಜರ ಮರಿ ಬಿಡಲಿಕ್ಕೆ ಅದು ೧೨ x ೬ x ೬ಳಿ ಅಡಿ ಉದ್ದ x ಅಗಲ x ಎತ್ತರ ಇರುತ್ತೆ. ಇನ್ನೊಂದು ದೊಡ್ಡ ಮೀನು ಬಿಡಲು ೨೦ x ೬ x ೬ಳಿ ಅಡಿ ಇರುತ್ತೆ. ಇದನ್ನು ಬಿದಿರು ಅಥವಾ ಕಬ್ಬಿಣದ ಪೈಪ್ ಅಥವಾ ಟ್ಯೂಬ್ನಿಂದ ಮಾಡಿ ಅದಕ್ಕೆ ಎಚ್ಡಿಪಿಇ ಜಾಲರಿ ಹಾಕುತ್ತೇವೆ. ಅದರೊಳಗೆ ಬಲೆ ಹಾಕಿ ಪಂಜರ ಸಿದ್ಧಪಡಿಸಿ ಅವುಗಳನ್ನು ಎಡಮಾವಿನ ಹೊಳೆಯಲ್ಲಿ ಇಟ್ಟು ಮೀನು ಬಿಡುತ್ತೇವೆ. ಕುರುಡಿ ಮತ್ತು ಕೆಂಬೇರಿ ಎಂಬ ಎರಡು ಜಾತಿ ಮೀನು ಸಾಧಾರಣ ಸಾಕುತ್ತೇವೆ. ಹೊಳೆ ಅಂದ್ರೆ ಇದು ಸಿಹಿ ನೀರೇನಲ್ಲ. ಇದು ಸಮುದ್ರ ಸೇರುವ ಜಾಗ. ಆದ್ದರಿಂದ ಇದು ಉಪ್ಪು ನೀರೆ. ನಾವು ಸಾಮಾನ್ಯ ೩೮ ರೂ.ಗೆ ಒಂದರಂತೆ ೪ ಇಂಚುವರಿ ತಂದು ಮೊದಲು ಸಣ್ಣ ಪಂಜರಕ್ಕೆ ನಂತರ ದೊಡ್ಡವಾದ ಮೇಲೆ ದೊಡ್ಡ ಪಂಜರಕ್ಕೆ ಬಿಡುತ್ತೇವೆ. ಒಂದು ಪಂಜರದಲ್ಲಿ ೨೦೦೦ ಮರಿ ಬಿಡುತ್ತೇವೆ. ಒಂದು ವರ್ಷದವರೆಗೆ ಮರಿ ಬೆಳವಣಿಗೆ ನಿಧಾನ ನಂತರ ಬೇಗ ಬೆಳೆಯುತ್ತಾ ೧೮ ತಿಂಗಳಿಗೆ ತೆಗೆದು ಮಾರುತ್ತೇವೆ. ಮೀನು ಒಂದು ಕೆ.ಜಿ. ಬೆಳೆದ ನಂತರ ಮಾರಬಹುದು. ಒಂದು ಮೀನು ೩ ರಿಂದ ೫ ಕೆ.ಜಿ. ಬೆಳೆಯುತ್ತೆ. ನಾವು ಸಾಧಾರಣ ೩-೪ ಕೆ.ಜಿ. ಇದ್ದಾಗ ಮಾರುತ್ತೇವೆ. ಸರಾಸರಿ ಕೆ.ಜಿ.ಗೆ ೪೫೦ ರೂ. ದೊರೆಯುತ್ತೆ. ಬಿಟ್ಟ ಎಲ್ಲಾ ಮರಿಗಳು ಬದುಕಿ ಉಳಿಯೋಲ್ಲ, ಪ್ರತಿಶತ ೫೦-೯೦ ಮಾತ್ರ ಉಳಿತಾವೆ. ಐವತ್ತು ಉಳಿದ್ರು ಓಕೆ. ಅಂತ ಪಟ ಪಟನೆ ಅತಿ ಉತ್ಸಾಹದಿಂದ ಹೇಳಿ ಸಾರ್, ಕರ್ನಾಟಕದಲ್ಲಿ ನಾವೇ ಇದನ್ನು ಪ್ರಾರಂಭ ಮಾಡಿದ್ದು. ನಮ್ಮನ್ನ ನೋಡಿ ಈ ಭಾಗದಲ್ಲಿ ೩೦೦ಕ್ಕೂ ಹೆಚ್ಚು ಜನರು ಪಂಜರ ಕೃಷಿ ಪ್ರಾರಂಭಿಸಿದ್ದಾರೆ. ಎಡಮಾವಿನ ಹೊಳೆಲಿ ೧೦೦, ಸುಮನಾ ನದಿಯಲ್ಲಿ ೧೦೦, ಸೌಪರ್ಣಿಕಾ ಮತ್ತು ಪಂಚಗಂಗಾದಲ್ಲಿ ೧೦೦ ಪಂಜರಗಳಾಗಿವೆ. ಆದ್ರೆ ಇದರ ಕಡೆ ಸರ್ಕಾರ, ಬೇರೆ ಯಾರು ಗಮನ ಹರಿಸಿಲ್ಲ, ಸಹಾಯನೂ ಇಲ್ಲ ಅಂದ್ರು

3

ಸಹಾಯ ಯಾಕೆ? ಇದು ನಿಮಗೆ ಲಾಭ ಸಂತಸ ತಂದಿದೆಯಾ ಅಂದೆ. ಚಂದ್ರು ಖಂಡಿತಾ ಇದೆ ಸಾರ್ ಜೊತೆಗೆ ನಮ್ಮ ಸಾಧನೆ ಬಗ್ಗೆ ಹೆಮ್ಮೆ ಇದೆ. ಆದ್ರೆ ಸರ್ಕಾರ ಇದರ ಬಗ್ಗೆ ಗಮನ ಹರಿಸಿದ್ರೆ ಬಹಳಷ್ಟು ಬಡ ಮೀನುಗಾರರನ್ನು ಮೀನು ಕೃಷಿಕರನ್ನಾಗಿ ಮಾಡಬಹುದು. ಗೋವಾ ಸರ್ಕಾರ ಉತ್ತಮ ನೆರವು ನೀಡುತ್ತಿದೆ. ನಮ್ಮ ಈ ತಂತ್ರಜ್ಞಾನ ಎಲ್ಲರಿಗೂ ಉಪಯೋಗ ಆಗಲಿ ಅನ್ನೋದು ನಮ್ಮ ಆಸೆ ಅಂದ್ರು. ತಂತ್ರಜ್ಞಾನ ನಿಮ್ಮದೆ ಬೇರೆಲ್ಲೂ ಮಾಡಿಲ್ಲವೆ? ನೀವು ಹೇಗೆ ಕಲ್ತೀರಿ? ಸಾರ್ ಇದು ಅಒಈಖI ನವರು ಓಪನ್ಸೀಕೇಜ್ ಕಲ್ಚರ್ ಅಂತ ಸಮುದ್ರದಲ್ಲಿ ಪಂಜರ ಇಡುವ ಕೃಷಿ ಮಾಡಿದ್ರು. ಅದು ಅಷ್ಟು ಯಶಸ್ವಿ ಆಗಲಿಲ್ಲ. ಅವರಿಂದ ಆ ಸಾಮಗ್ರಿ ಪಡೆದು ನಾವು ಸುಧಾರಣೆ ಮಾಡಿಕೊಂಡು ಹಿನ್ನೀರಿಗೆ ತಂದು ಯಶಸ್ವಿ ಟೆಕ್ನಾಲಜಿ ಕೊಟ್ಟಿದ್ದೇವೆ ಅಂತಾ ಹೇಳಿದ್ರು ಸಂಘದ ಅಧ್ಯಕ್ಷರಾದ ರವೀಂದ್ರ ಕಾರ್ವೆ. ಈ ಮೀನಿಗೆ ಆಹಾರ ಏನು ಒಂದು ಬೆಳೆ ತೆಗೆಯಲು ಖರ್ಚು ಎಷ್ಟು ಅಂದದಕ್ಕೆ ಸರ್, ಆಹಾರ ಲೆಕ್ಕ ಹಾಕಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ತಿನ್ನುತ್ತವೆ. ನಾವು ಬೇಟೆಗೆ ಹೋದಾಗ ಬಲೆ ಉಳಿದ ವೇಸ್ಟು ಅದು ಹಾಕ್ತೀವಿ. ನಂತರ ಮಳೆಗಾಲದಲ್ಲಿ ಹಾಗೂ ಆಹಾರ ಬೇಡಿಕೆ ಹೆಚ್ಚಿದ್ದಾಗ ಕೊಂಡು ತರ್ತೀವಿ ಅಂದ್ರು. ಆಗ ವಿಜ್ಞಾನಿ ಹುಲಕೋಟಿಯವರು ಸರ್ ಸರಾಸರಿ ವರ್ಷಕ್ಕೆ ೬೭ ಸಾವಿರ ರೂ. ಆಹಾರಕ್ಕೆ ಬೇಕು. ಒಂದು ಪಂಜರ ಕೃಷಿಗೆ ೨.೫ ಲಕ್ಷ ರೂ. ತಗಲುತ್ತದೆ. ಸಾಮಾನ್ಯವಾಗಿ ೪ರಿಂದ ೬ ಲಕ್ಷ ಆದಾಯ ಬರುತ್ತೆ. ಖರ್ಚು ತೆಗೆದರೂ ೨ರಿಂದ ೩ ಲಕ್ಷ ಉಳಿಯುತ್ತೆ. ಇಲ್ಲಿ ವಿಶೇಷ ಅಂದ್ರೆ ಇದು ಅವರಿಗೆ ಉಪಕಸುಬು. ಇದರಲ್ಲಿ ತಿಂಗಳಿಗೊಮ್ಮೆ ಪಂಜರ ಸ್ವಚ್ಛ ಮಾಡೋದು, ಆಹಾರ ಕೊಡೋದು ಇತ್ಯಾದಿ ಕೆಲಸ ಇರುತ್ತೆ. ಇವರ ಕೂಲಿ ಅವರು ಹಿಡಿಯುವುದಿಲ್ಲ. ಅದಕ್ಕೆ ಚಂದ್ರು ಸಾರ್ ಬರಿ ಬೈಕ್ನಲ್ಲಿ ಹೋಗಿ ಫೀಡ್ ತರಾಕೆ ೨೦೦-೩೦೦ ರೂ. ಪೆಟ್ರೋಲ್ಗೆ ವೆಚ್ಚ ಮಾಡ್ತಿವಿ ಅಂದ್ರು. ಇವರ ಮಾತಿನಿಂದ ಲಾಭ ಇದೆ. ಆದರೆ ವಿಸ್ತೃತ ಆರ್ಥಿಕ ಅಧ್ಯಯನ ಮಾಡುವ ಅಗತ್ಯವಿದೆ ಅಂತ ನನಗೆ ಅನಿಸ್ತು. ಒಂದು ಸಾರಿ ಪಂಜರ ಮಾಡಿದ್ರೆ ೨-೩ ವರ್ಷ ಬರುತ್ತೆ. ಕಬ್ಬಿಣದ ಪೈಪ್ ತುಕ್ಕು ಹಿಡಿತಾವೆ. ಆ ವೆಚ್ಚ ೨ ವರ್ಷಕ್ಕೆ ಬಂದೇ ಬರುತ್ತೆ ಅಂತ ಗಣೇಶ ಹೇಳಿದ. ಹೌದು, ಇಲ್ಲೂ ಸುಧಾರಣೆ ಮಾಡುವ ಅಗತ್ಯ ಇದೆ ಮಾಡಲು ಸಾಧ್ಯವೂ ಇದೆ. ಈ ವ್ಯವಸ್ಥೆ ಯುವಕರ ಉತ್ಸಾಹ ನೋಡಿದಾಗ ನನಗೂ ಇವರೊಂದಿಗೆ ಸಹಕರಿಸಬೇಕು ಅನ್ನಿಸಿತು. ಆ ಪ್ರಯತ್ನ ಮುಂದಿನ ದಿನಗಳಲ್ಲಿ ಮಾಡೊ ಚಿಂತನೆ ಕಟ್ಟಿಕೊಂಡು ಶಿವಮೊಗ್ಗ ತಲುಪಿದೆ

567

ಅಬ್ಬಾ! ಈ ಮೀನುಗಾರರ ಕುಟುಂಬದ ಈ ಯುವಕರ ಸಂಶೋಧನಾ ಮನೋಭಾವ, ಸಾಧಿಸಬೇಕೆಂಬ ಛಲ ನಮ್ಮ ಈ ತಂತ್ರಜ್ಞಾನ ಇತರರಿಗೆ ತಲುಪಬೇಕೆಂಬ ಹಂಬಲ. ನಮ್ಮ ಇತರೆ ಪ್ರದೇಶದ ಯುವಕರಿಗೆ ಮಾದರಿ. ಇವರ ಪ್ರಯತ್ನ ಗಳಿಗೆ ಸರ್ಕಾರ ಸಾರ್ವಜನಿಕರು ಕೈಜೋಡಿಸಿದರೆ ಇವರ ಉತ್ಸಾಹಕ್ಕೆ ಇಂಬು ಸಿಕ್ಕಂತಾಗುತ್ತದೆ. ಇವರು ನಮ್ಮ ಸ್ಕಿಲ್ ಇಂಡಿಯಾದ ರೂವಾರಿಗಳಾಗುತ್ತಾರೆ.

ಯುವಕರ ಸಂಪರ್ಕ ವಿಳಾಸ: ರವೀಂದ್ರ ಕಾರ್ವೆ, ೯೫೩೫೩೭೫೮೭೮ ಬಿನ್ ನಾರಾಯಣ ಕಾರ್ವೆ, ಚೌಕಿ ಹೌಸ್, ಉಪ್ಪುಂದ ಪೋಸ್ಟ್, ಉಪ್ಪುಂದ ಗ್ರಾಮ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ - ೫೭೬೨೩೨