ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
೯೪೪೯೬೨೩೨೭೫
1

ಹತ್ತು ವರ್ಷಗಳ ಹಿಂದೆ ಬರೀ ಅಡಿಕೆ ಮತ್ತು ತೆಂಗು ಬೆಳೆಯನ್ನು ಮಾತ್ರ ಬೆಳೆಯುತ್ತಿದ್ದು, ಅದಕ್ಕೆ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಕೈಸುಟ್ಟುಕೊಂಡಿದ್ದು ಇದೆ. ಜೊತೆಗೆ ಜಮೀನಿನಲ್ಲಿ ಕಳೆಗಳು ಹೆಚ್ಚಾಗಿ, ಹೆಚ್ಚಾದ ಖರ್ಚು, ಕಡಿಮೆ ಆದಾಯದಿಂದ ಸಾಲವು ಹೆಚ್ಚಾಗಿ ಇದಕ್ಕೆ ಮುಕ್ತಿಯಿಲ್ಲವೇ ಎಂದು ಈ ದಂಪತಿಗಳು ಚಿಂತಿಸತೊಡಗಿದರು. ಆಗ ನೆರವಿಗೆ ಬಂದದ್ದು ತಿಪಟೂರಿನ ಬೈಫ್ ಸಂಸ್ಥೆಯವರು. ಅಲ್ಲದೆ ಪತ್ರಿಕಾ ಮಾಧ್ಯಮ, ಮೈಸೂರು ಆಕಾಶವಾಣಿಯ ಕೇಶವಮೂರ್ತಿಯವರು ಇವರೆಲ್ಲರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಸಮಗ್ರ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಶ್ರೀಮತಿ ಯಶೋಧ ಮತ್ತು ಶ್ರೀ ಚಂದ್ರಪ್ರಕಾಶ ದಂಪತಿಗಳು ಗೆಲುವಿನ ನಗೆ ಬೀರಿದ್ದಾರೆ. ನೀವು ತಿಪಟೂರಿನಿಂದ ಬೆಂಗಳೂರಿನ ಮಾರ್ಗವಾಗಿ ೧೨ ಕಿ.ಮೀ. ಕ್ರಮಿಸಿದರೆ ಬಿಳಿಗೆರೆ ಗ್ರಾಮ ಎದುರಾಗುತ್ತೆ. ಸ್ವಲ್ಪ ದೂರ ಕ್ರಮಿಸಿದರೆ ಬಿಳಿಗೆರೆ ಪಾಳ್ಯ ಎಂಬ ಊರು, ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಇವರ ಜಮೀನು ಕಾಣುತ್ತದೆ. ಇಲ್ಲಿ ಏನುಂಟು ಏನಿಲ್ಲ ಎಂಬುದನ್ನು ನೀವೇ ಊಹಿಸಬೇಕಾಗುತ್ತದೆ. ಐದು ಎಕರೆ ೨ ಗುಂಟೆ ಜಮೀನಿನ ವಿಸ್ತೀರ್ಣದಲ್ಲಿ ವೈವಿಧ್ಯಮಯ ಬೆಳೆಗಳ ಮೂಲಕ ನಳನಳಿಸುತ್ತಿದೆ. ಈ ದಂಪತಿಗಳ ಜಮೀನಿನಲ್ಲಿ ತೆಂಗು(೨೦೦), ಅಡಿಕೆ(೮೦೦), ರಾಗಿ ಅಥವಾ ಭತ್ತ(ಒಂದು ಎಕರೆ) ಮನೆಗೆ ಬೇಕಾದಷ್ಟು ತರಕಾರಿಯನ್ನು ಬೆಳೆದುಕೊಳ್ಳುತ್ತಾರೆ. ಹೆಸರು, ಉದ್ದು, ಅವರೆ, ಜೋಳ ಇತ್ಯಾದಿ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಸೆಣಬು, ವೆಲ್ವೆಟ್ ಬೀನ್ಸ್, ದ್ವಿದಳ ಧಾನ್ಯಗಳನ್ನು ಹಸಿರು ಸೊಪ್ಪಿನ ಬೆಳೆಯಾಗಿ ಬೆಳೆದು, ಜಮೀನಿನ ಮಣ್ಣಿಗೆ ಸೇರಿಸುತ್ತಾರೆ. ಜೊತೆಗೆ ೩೦೦ ಬಾಳೆ ಸಸಿಯನ್ನು ನಾಟಿ ಮಾಡಿ ಬೆಳೆಯುತ್ತಿದ್ದಾರೆ. ಇವರ ಜಮೀನಿಗೆ ಹೇಮಾವತಿ ನದಿಯ ನಾಲೆಯು ನೀರಾವರಿ ವ್ಯವಸ್ಥೆ ಇದ್ದು, ಇದನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ. ಜೊತೆಗೆ ಕೊಳವೆ ಬಾವಿಯ ನೀರಿನ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಕೃಷಿ ಹೊಂಡವನ್ನು ನಿರ್ಮಿಸಿಕೊಂಡು ಜಮೀನಿನಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಶೂನ್ಯ ಬಂಡವಾಳ ಕೃಷಿ ಯೋಜನೆಯನ್ನು ಅನುಸರಿಸುತ್ತಿದ್ದು, ಅಡಿಕೆ ತೋಟಕ್ಕೆ ಉಳುಮೆಯನ್ನೇ ಮಾಡದೆ ಬೆಳೆಯನ್ನು ತೆಗೆಯುತ್ತಿದ್ದಾರೆ

3

ಸಾವಯವ ಪದ್ಧತಿಗಾಗಿ ಬಯೋ ಡೈಜೆಸ್ಟರ್, ಗೋಬರ್ ಗ್ಯಾಸ್, ಸಗಣಿಯ ಸ್ಲರಿ ಬಳಕೆ, ಜೀವಾಮೃತ (೧೫ದಿನಕ್ಕೊಮ್ಮೆ) ಬೇವಿನ ಹಿಂಡಿಯನ್ನು ಬಳಸುತ್ತಾರೆ. ಹಾಲು, ಮೊಸರು, ತುಪ್ಪ, ಎಳನೀರು, ಬಾಳೆಹಣ್ಣು ಬಳಸಿ ಮಾಡಿದ ಪಂಚಗವ್ಯವನ್ನು ಸಹ ಬಳಸುತ್ತಿದ್ದಾರೆ. ಜೊತೆಗೆ ಎರೆಗೊಬ್ಬರವನ್ನು ಬಳಸುತ್ತ ಸಂಪೂರ್ಣ ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಬೆಳೆಗಳಿಗೆ ಕೀಟನಾಶಕವಾಗಿ ಕುನಾಪ ಜಲ ಮಾಡುತ್ತಿದ್ದಾರೆ. ಗಂಜಲ ಮತ್ತು ಮಜ್ಜಿಗೆಯನ್ನು ಭತ್ತ ಮತ್ತು ಅವರೆ ಬೆಳೆಗಳಿಗೆ ಸಿಂಪಡಿಸುತ್ತಾರೆ. ಇವರು ಆಹಾರ ಸೇವಿಸುವುದರಲ್ಲೂ ವೈಶಿಷ್ಟ್ಯತೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಮೊಳಕೆ ಕಾಳುಗಳು, ಹಸಿ ತರಕಾರಿ ಹಾಗೂ ಒಟ್ಟಾರೆ ತಾಜಾ ಪದಾರ್ಥವನ್ನು ಸೇವಿಸುತ್ತ ತಮ್ಮ ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಂಡು ಕೃಷಿಯಲ್ಲಿ ತೊಡಗಿದ್ದಾರೆ. ಅಡುಗೆ ಮಾಡಲು ಸೌರ ಒಲೆಯನ್ನೇ ಉಪಯೋಗಿಸುತ್ತಿದ್ದು, ಮಳೆಗಾಲದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಗ್ಯಾಸ್ ಬಳಕೆ ಮಾಡುತ್ತಾರೆ. ಸಾವಯವ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ರಾಗಿಹಿಟ್ಟು, ರಾಗಿಮಾಲ್ಟ್, ರಾಗಿನಿಪ್ಪಟ್ಟು, ಕಾಯಿಹೋಳಿಗೆ, ದಂತಚೂರ್ಣ, ಸೋಪು ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ತಿಂಗಳಲ್ಲಿ ೮-೧೦ ದಿವಸಗಳ ಕಾಲ ಇವುಗಳ ತಯಾರಿಕೆಗೆ ಮೀಸಲು. ಹೀಗಾಗಿ ಇವರಿಗೆ ತಿಂಗಳಿಗೆ ಕನಿಷ್ಠವೆಂದರೂ ೧ ಲಕ್ಷ ರೂ.ಗಳ ಆದಾಯವನ್ನು ಗಳಿಸುತ್ತಿದ್ದಾರೆ. ಇವರ ಉತ್ಪನ್ನಗಳಿಗೆ ಬೆಂಗಳೂರಿನಲ್ಲಿ ಆತ್ಮೀಯ ಗ್ರಾಹಕ ವಲಯ ಪ್ರತಿ ತಿಂಗಳು ಇವರ ಉತ್ಪನ್ನಕ್ಕಾಗಿ ಕಾಯುತ್ತಿರುತ್ತದೆ. ತಮ್ಮ ಸ್ವಂತ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಕಂಡುಕೊಂಡಿರುವುದು ವಿಶೇಷ.

5

ಇವರ ಮನೆಯಲ್ಲಿ ಉಳುಮೆಗಾಗಿ ಪವರ್ ಟಿಲ್ಲರ್ ಬಳಸುತ್ತಾರೆ. ಎರಡು ಎಮ್ಮೆಗಳನ್ನು ಸಾಕಿದ್ದು, ಹಾಲು ಮತ್ತು ಸಗಣಿ ಗೊಬ್ಬರಕ್ಕೆ ಸಾಕಾಗುತ್ತದೆ. ಕೆಲವು ವರ್ಷದ ಹಿಂದೆ ಎನ್ ಎಮ್ ಎಸ್ ೨, ಪೊನ್ನಿ, ಎಚ್.ಎಂ.ಟಿ. ಸಾಂಪ್ರದಾಯಿಕ ಭತ್ತದ ತಳಿಗಳನ್ನು ಬೆಳೆದು ಅಧಿಕ ಉತ್ಪಾದನೆಯನ್ನು ಪಡೆದಿದ್ದರು. ರಾಗಿ ಬೆಳೆಯಲ್ಲಿ ಒಂದು ಎಕರೆ ಜಮೀನಿನಲ್ಲಿ ೧೫ ಚೀಲಗಳ ಇಳುವರಿ ಪಡೆದಿದ್ದಾರೆ. ಕಳೆದ ೬ ವರ್ಷ ತೀರ್ಥಹಳ್ಳಿಯ ಸಾವಯವ ಕೃಷಿ ಪರಿವಾರದವರು ಇವರ ಬೆಂಬಲಕ್ಕೆ ನಿಂತಿರುವುದು ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪರಿವಾರದವರು ನೀಡುವ ಪ್ರೋತ್ಸಾಹ, ಮಾರುಕಟ್ಟೆಯ ವ್ಯವಸ್ಥೆ ನಮ್ಮ ಕೃಷಿಯ ಬೆಂಗಾವಲಾಗಿದೆ ಎಂದು ಈ ದಂಪತಿಗಳು ಸದಾ ಸ್ಮರಿಸುತ್ತಾರೆ. ಇಂತಹ ಅಪರೂಪದ ಸಾಧಕ ದಂಪತಿಗಳ ಕೃಷಿ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಿ

ರೈತರ ಸಂಪರ್ಕ ವಿಳಾಸ: ಶ್ರೀಮತಿ ಯಶೋಧ ಮತ್ತು ಶ್ರೀ ಚಂದ್ರಪ್ರಕಾಶ, ೮೪೫೩೮೪೨೬೫೩, ಬಿಳಿಗೆರೆ ಪಾಳ್ಯ, ಬಿಳಿಗೆರೆ ಅಂಚೆ-೫೭೨೧೧೪, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ