ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಔಷಧಿ ಸಸ್ಯಗಳು

ಮಂಗರವಳ್ಳಿ /ಸಂದು ಬಳ್ಳಿ

image_
ಡಾ. ಯಶಸ್ವಿನಿ ಶರ್ಮ
9535228694
1

ಸಂದು ಬಳ್ಳಿ ಎಂಬ ಹೆಸರೇ ಸೂಚಿಸುವಂತೆ ಇದನ್ನು ಗಂಟು ನೋವು/ ಸಂದು ನೋವು ನಿವಾರಿಸಲು ಬಳಸಲಾಗುತ್ತದೆ. ಇದೊಂದು ಬಹು ವಿಸ್ಮಯಕಾರಿ ಬಹುವಾರ್ಷಿಕ ಬಳ್ಳಿಯಾಗಿದ್ದು, ಎಲುಬು ಹಾಗೂ ಕೀಲು ಜೋಡಣೆಗೆ ಸಹಕಾರಿಯಾಗಿರುವುದರಿಂದ ಇದನ್ನು ಅಸ್ತಿಶೃಂಖಲಾ ಎಂದೂ ಕರೆಯುತ್ತಾರೆ. ಸುಮಾರು ೧.೫ ರಿಂದ ೨ ಮೀ. ವರೆಗೆ ಹಬ್ಬಿಕೊಂಡು ಬೆಳೆಯುವ ಸಂದುಬಳ್ಳಿ, ರಸವತ್ತಾದ, ಚೌಕಾಕಾರದ ಕಾಂಡವನ್ನು ಹೊಂದಿದ್ದು, ಪ್ರತಿ ಕಣ್ಣಿಗೆ ಒಂದೊಂದು ಚಿಕ್ಕದಾದ ಎಲೆ ಹೊಂದಿರುತ್ತದೆ. ಆದ್ದರಿಂದಲೇ ಇದನ್ನು ವಜ್ರವಳ್ಳಿ ಅಥವಾ ಚತುರ್ಧಾರಾ ಎನ್ನುವರು. ವೈಟೇಸೀ ಕುಂಟುಂಬಕ್ಕೆ ಸೇರಿದ ಈ ಬಳ್ಳಿ ’ಸಿಸಸ್ ಕ್ವಾಡ್ರಾಂಗ್ಯುಲಾರಿಸ್’ ಎಂಬ ವೈಜ್ಞಾನಿಕ ಹೆಸರು ಹೊಂದಿದೆ. ಸಂದು ಬಳ್ಳಿಯನ್ನು ದೇಹದ ಶಕ್ತಿವರ್ಧನೆಗಾಗಿ, ವಜ್ರಕಾಯಕ್ಕಾಗಿ ಸೇವಿಸುತ್ತಾರೆ. ಅಥ್ಲೀಟ್ಗಳು, ಕುಸ್ತಿಪಟುಗಳು ಸಂದು ಬಳ್ಳಿಯನ್ನು ದೇಹದ ನೋವು ನಿವಾರಣೆಗೆ ಉಪಯೋಗಿಸುತ್ತಾರೆ. ಪ್ರತಿದಿನ ೨೦ ಗ್ರಾಂ ಸಂದು ಬಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಎಲುಬು ಮತ್ತು ಕೀಲುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಜೀವಸತ್ವ ’ಸಿ’ ಅಂಶಗಳು ಎಲುಬು ಜೋಡಣೆಗೆ ಸಹಕರಿಸುತ್ತವೆ. ಇದರಲ್ಲಿ ವಿಟಾಮಿನ್ ’ಎ’, ಆಂಟಿ ಆಕ್ಸಿಡಂಟ್ಗಳು ಹೇರಳವಾಗಿದ್ದು, ಇದನ್ನು ತರಕಾರಿಯಂತೆ ಕೂಡ ಬಳಸುತ್ತಾರೆ. ಸಂದುಬಳ್ಳಿ ಬಹು ಶೀಘ್ರವಾಗಿ ಮೂಳೆ ಜೋಡಣೆಗೆ ಸಹಕರಿಸುತ್ತದೆ ಎಂಬ ಅಂಶ ವೈಜ್ಞಾನಿಕ ಅಧ್ಯಯನದಿಂದ ತಿಳಿದು ಬಂದಿದೆ. ಅಲ್ಲದೇ ಇದನ್ನು ದೇಹದ ತೂಕ ಇಳಿಸಲು, ಮೈಕೈ ನೋವು ನಿವಾರಕವಾಗಿ, ಅಸ್ತಮಾ ಕಾಯಿಲೆಗೆ ಔಷಧಿಯಾಗಿ ಆಯುರ್ವೇದಿಕ್ ಔಷಧಿಗಳಲ್ಲಿ ಬಳಸುತ್ತಾರೆ. ಸಂದುಬಳ್ಳಿಯ ಎಳೆಯದಾಗಿರುವ ಕುಡಿಯನ್ನು ತುಪ್ಪದಲ್ಲಿ ಹುರಿದು ಚಟ್ನಿಮಾಡಿ ಸೇವಿಸುತ್ತಾರೆ. ಇದರಲ್ಲಿ ಕ್ಯಾಲ್ಸಿಯಂ ಆಕ್ಸಾಲೇಟ್ ಅಂಶವಿದ್ದು ಚೆನ್ನಾಗಿ ಹುಳಿ ಹಾಕಿ ಕುದಿಸುವುದು ಅವಶ್ಯ. ಇಲ್ಲದಿದ್ದಲ್ಲಿ ಗಂಟಲಿನಲ್ಲಿ ಕಡಿತ ಉಂಟಾಗುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ, ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿ ಇದನ್ನು ಬೆಳೆಯುತ್ತಾರೆ ಹಾಗೂ ಸ್ಥಳೀಯ ನಾಟಿ ಔಷಧಿಗಳಲ್ಲಿ ಹೆಚ್ಚಾಗಿ ಮೂಳೆ ಮುರಿತ ಚಿಕಿತ್ಸೆಯಲ್ಲಿ ಇದನ್ನು ಉಪಯೋಗಿಸುತ್ತಾರೆ. ಕಾಂಡದ ತುಂಡುಗಳಿಂದ ಸುಲಭವಾಗಿ ಇದರ ಸಸ್ಯಾಭಿವೃದ್ಧಿ ಮಾಡಬಹುದು. ಇದು ತುಂಬಾ ಗಡುಸಾದ ಬಳ್ಳಿಯಾಗಿದ್ದು ಕಾಡಿನಲ್ಲಿ, ಬಂಜರು ಭೂಮಿಯಲ್ಲಿ, ಒಣಪ್ರದೇಶಗಳಲ್ಲಿಯೂ ಬೆಳೆಯಬಹುದು. ೨ ಮೀ. ಎತ್ತರಕ್ಕೆ ಆಸರೆ ಕೊಟ್ಟು, ೯೦x೬೦ ಸೆಂ.ಮೀ. ಅಂತರದಲ್ಲಿ ಇದನ್ನು ಬೆಳೆಯಬಹುದು. ನೆರಳಿನಲ್ಲಿ ಮತ್ತು ನೀರು ಒದಗಿಸಿದಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತದೆ. ೩ ತಿಂಗಳಿಗೊಮ್ಮೆ ನೆಲದಿಂದ ೨೩ ಕಣ್ಣುಗಳನ್ನು ಬಿಟ್ಟು ಕೊಯ್ಲು ಮಾಡಬೇಕು. ನೀರಾವರಿಯಾದಲ್ಲಿ ಎಕರೆಗೆ ೨೦-೨೫ ಟನ್ ಇಳುವರಿ ಪಡೆಯಬಹುದು. ಕೆಲ ಔಷಧಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಇದನ್ನು ಲಾಭದಾಯಕವಾಗಿ ಬೆಳೆಯಬಹುದು. ಮನೆಮದ್ದಾಗಿ ಕುಂಡಗಳಲ್ಲಿ ಅಥವಾ ಕೈತೋಟದಲ್ಲಿ ಬೆಳೆಸಿಕೊಂಡು ದೈನಂದಿನ ಆಹಾರದಲ್ಲಿಯೂ ಕೂಡ ಇದನ್ನು ಉಪಯೋಗಿಸಿಕೊಂಡರೆ ಆರೋಗ್ಯವರ್ಧನೆಗೆ ಬಹುಪಯೋಗಿ