ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಬೀಜ ಪ್ರಪಂಚ

ಕಡಲೆ

image_
ಡಾ. ಕೆ. ಎಸ್. ಶೇಷಗಿರಿ
9741769213
1

ಕಡಲೆ ಭಾರತದ ಅತಿ ಪ್ರಾಚೀನ ಹಾಗೂ ಪ್ರಮುಖವಾದ ಬೇಳೆಕಾಳು ಬೆಳೆಯಾಗಿದ್ದು, ದೇಶದ ದ್ವಿದಳ ಧಾನ್ಯದ ಉತ್ಪಾದನೆಯಲ್ಲಿ ಕಡಲೆಯ ಪಾಲು ಶೇ.೪೦ಕ್ಕಿಂತ ಹೆಚ್ಚು. ಉತ್ತರ ಭಾರತ ಶೇ. ೯೦-೯೫ ರಷ್ಟು ಕ್ಷೇತ್ರ ಮತ್ತು ಉತ್ಪಾದನೆಯನ್ನು ಮಾಡುತ್ತಿದ್ದು ದಕ್ಷಿಣಭಾರತದಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಹಿಂಗಾರಿನಲ್ಲಿ ಕೃಷಿ ಮಾಡಲಾಗುತ್ತಿದೆ. ಕಡಲೆಯ ವೈಜ್ಞಾನಿಕ ಹೆಸರು ಸೈಸರ್ ಆರೆನ್ಶಿಯಮ್ ಎಂಬುದಾಗಿದ್ದು ಇದು ಫ್ಯಾಬೆಸಿಯೆ ಕುಟುಂಬಕ್ಕೆ ಸೇರಿದೆ. ಕಡಲೆ ಉತ್ತಮ ಸಸಾರಜನಕದ ಮೂಲವಾಗಿದ್ದು ದೇಹ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಹಾರದಲ್ಲಿ ಕಡಲೆಯನ್ನು ಬೇಳೆಕಾಳಾಗಿ, ಹುರಿದು ಹುರಿಗಡಲೆಯಾಗಿ, ಹಿಟ್ಟಿನ ರೂಪದಲ್ಲಿ, ತರಕಾರಿಯಾಗಿ, ಪಶುಗಳಿಗೆ ಮೇವಾಗಿ ಬಳಸಬಹುದಾಗಿದೆ. ಪ್ರತಿ ೧೦೦ ಗ್ರಾಂ ಕಡಲೆಯ ಸೇವನೆಯಿಂದ ದೇಹಕ್ಕೆ ೩೬೯ ಕ್ಯಾಲೊರಿ ಶಕ್ತಿ, ೮.೮೬ ಗ್ರಾಂ ಸಸಾರಜನಕ, ೨.೫ ಗ್ರಾಂ ಕೊಬ್ಬು, ೨೭.೪೨ ಗ್ರಾಂ ಶರ್ಕರಪಿಷ್ಟ, ೭.೬ ಗ್ರಾಂ ನಾರು, ೨೯೧ ಮಿ.ಗ್ರಾಂ ಪೊಟಾಸಿಯಮ್, ೧೬೮ ಮಿ.ಗ್ರಾಂ ರಂಜಕ, ೪೮ ಮಿ.ಗ್ರಾಂ ಸುಣ್ಣದ ಅಂಶ ದೊರೆಯುತ್ತದೆ. ಪ್ರತಿನಿತ್ಯ ಕಡಲೆ ಸೇವನೆಯಿಂದ ಹಲವಾರು ಆರೋಗ್ಯ ಲಾಭಗಳಿವೆ. ಸುಪುಷ್ಟ ದೇಹದ ಬೆಳವಣಿಗೆಗೆ ಅಗತ್ಯವಾದ ಪ್ರೋಟಿನ್ ಮೂಲ ಇದಾಗಿದ್ದು ನಿತ್ಯ ಬೆಳಿಗ್ಗೆ ನೆನೆಸಿದ ಕಡಲೆ ಸೇವನೆಯಿಂದ ಉತ್ತಮ ದೇಹದಾರ್ಢ್ಯ ಪಡೆಯಬಹುದು, ಸೇವಿಸಿದ ಆಹಾರದ ಜೀರ್ಣಕ್ರಿಯೆಗೆ ಕಡಲೆ ಸೇವನೆ ಪೂರಕವಾಗಿದ್ದು, ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಮೂಳೆಗಳ ಬೆಳವಣಿಗೆಗೆ ಕಡಲೆ ಸಹಕಾರಿ ಯಾಗಿದ್ದು ದೇಹತೂಕವನ್ನು ಸಹ ನಿಯಂತ್ರಿಸುವ ಗುಣ ಹೊಂದಿದೆ. ಕಡಲೆ ಮೂಲಿಕಾಸದೃಶ ವಾರ್ಷಿಕ ಬೆಳೆಯಾಗಿದ್ದು ಇದರಲ್ಲಿ ’ದೇಸಿ’ ಮತ್ತು ’ಕಾಬುಲಿ’ ಎಂಬ ಎರಡು ಜಾತಿಗಳಿವೆ. ದೇಸಿ ಕಡಲೆ ಕಾಳುಗಳು ಚಿಕ್ಕಗಾತ್ರದಲ್ಲಿದ್ದು ಗಾಢಬಣ್ಣದ ಒರಟು ಮೇಲ್ಮೈ ಹೊಂದಿದ್ದರೆ ಕಾಬುಲೀ ಜಾತಿಯ ಕಾಳುಗಳುಗಳಲ್ಲಿ ದೊಡ್ಡಗಾತ್ರ, ತಿಳಿಯಾದ ಬಣ್ಣ ಮತ್ತು ನಯವಾದ ಹೊರಮೈಯನ್ನು ನೋಡಬಹುದು. ಕಾಬೂಲಿ ಜಾತಿಯ ಕಡಲೆ ಕೃಷಿಯನ್ನು ಮೆಡಿಟರೇನಿಯನ್ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಕಾಣಬಹುದು. ಪ್ರಪಂಚದ ಶೇ.೭೫ ರಷ್ಟು ಕಡಲೆ ಉತ್ಪಾದನೆ ದೇಸಿವಿಧದ್ದೇ ಆಗಿದೆ. ಕಡಲೇ ಗಿಡಗಳು ತೆವಳಿಕೊಂಡು ಬೆಳೆಯುವ ಗುಣ ಹೊಂದಿದ್ದು ೨೦-೪೫ ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತವೆ, ಬರನಿರೋಧಕ ಶಕ್ತಿ ಇರುವ ಈ ಗಿಡದ ಎಲ್ಲಾಭಾಗಗಳೂ ರೋಮದಿಂದ ಆವೃತವಾಗಿರುತ್ತವೆ. ಊದಿಕೊಂಡಂತಿರುವ ಕಾಯಿಗಳು ೧-೨ಕಾಳುಗಳನ್ನು ಮಾತ್ರ ಹೊಂದಿರುತ್ತವೆ. ಬಿತ್ತನೆಮಾಡಿದ ಸುಮಾರು ೧೨೦-೧೫೦ ದಿನಗಳಲ್ಲಿ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ. ಕಡಲೆಯ ಬೀಜಗಳನ್ನು ಚೆಲ್ಲಿ ಅಥವಾ ಸಾಲುಗಳಲ್ಲಿ ಬಿತ್ತನೆ ಮಾಡಿ ಕೃಷಿ ಮಾಡಲಾಗುತ್ತದೆ. ಬಿತ್ತನೆಗೆ ಮೊದಲು ಒಂದು ಎಕರೆ ಪ್ರದೇಶಕ್ಕೆ ಬೇಕಾಗುವ ಬಿತ್ತನೆ ಬೀಜವನ್ನು ೨೦೦ ಗ್ರಾಂ ರೈಜೋಬಿಯಮ್ ಜೀವಾಣು ಮತ್ತು ರಂಜಕ ಕರಗಿಸುವ ಜೀವಾಣುಗಳಿಂದ ಲೇಪನ ಮಾಡಿ ೩೦ ಸೆಂ.ಮೀ. ಸಾಲುಗಳಲ್ಲಿ ೧೦ ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಿದರೆ ೪-೭ ದಿನಗಳ ಅವಧಿಯಲ್ಲಿ ಮೊಳಕೆಯಾಗುತ್ತವೆ. ಒಂದು ಎಕರೆ ಪ್ರದೇಶಕ್ಕೆ ೨೫-೩೦ ಕಿ.ಗ್ರಾಂ. ಬಿತ್ತನೆ ಬೀಜ ಬೇಕಾಗುತ್ತದೆ