ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಕೋಳಿ ಮೊಟ್ಟೆಯ ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ

ದೀಕ್ಷಾ ನಾಯ್ಕ್
9448565007
1

ಮೊಟ್ಟೆಯ ಪೌಷ್ಟಿಕತೆ : ಮೊಟ್ಟೆ ಒಳ್ಳೆಯ ಸಸಾರಜನಕಯುಕ್ತ ಪೌಷ್ಟಿಕ ಆಹಾರ, ಮೊಟ್ಟೆಯಲ್ಲಿ ಬಹುಮಟ್ಟಿಗೆ ಸಂಪೂರ್ಣವಾಗಿ ಶರ್ಕರ ಪಿಷ್ಠಾದಿಗಳು ಇಲ್ಲದಿರುವುದರಿಂದ ಮೈಕಟ್ಟು ತೆಳ್ಳಗಾಗಲು ಆಹಾರವಾಗಿ ಬಳಸುತ್ತಾರೆ, ಮೊಟ್ಟೆಯಲ್ಲಿರುವ ಮೇದಸ್ಸು ಸೂಕ್ಷ್ಮಕಣಗಳ ರೂಪದಲ್ಲಿ ಹಳದಿ ಬಣ್ಣದಲ್ಲಿ ಇರುವುದರಿಂದ ಇದು ಬಹಳ ಸುಲಭವಾಗಿ ಜೀರ್ಣವಾಗುತ್ತದೆ, ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಎಲ್ಲಾ ಅಮೈನೋ ಆಮ್ಲಗಳು ಇರುತ್ತದೆ, ಜೀವಸತ್ವ ’ಎ’ ಒಳ್ಳೆಯ ಕಣ್ಣು ದೃಷ್ಟಿಗೆ ಅಗತ್ಯ. ಜೊತೆಗೆ ಅದು ದೇಹದೊಳಗಿನ ಲೋಳ್ಪೊರೆಗಳಿಗೆ ರೋಗ ನಿರೋಧಕ ಶಕ್ತಿಯನ್ನು ತುಂಬುತ್ತದೆ, ’ಎ’ ಜೀವಸತ್ವವು ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. (’ಸಿ’ ಹೊರತುಪಡಿಸಿ), ದೇಹದ ಬೆಳವಣಿಗೆ ಹಾಗೂ ತಿಂದ ಆಹಾರದಿಂದ ದೊರೆಯುವ ಶಕ್ತಿಯನ್ನು ಬಳಸಿಕೊಳ್ಳಲು ದೇಹಕ್ಕೆ ’ಬಿ೨’ ಜೀವಸತ್ವದ ನೆರವು ಅಗತ್ಯ. ಈ ’ಬಿ೨’ ಜೀವಸತ್ವ ಮೊಟ್ಟೆಯಲ್ಲಿರುತ್ತದೆ. ’ಡಿ’ ಜೀವಸತ್ವವು ಮೂಳೆಯ ಕ್ಯಾಲ್ಸಿಕರಣಕ್ಕೆ ಹಾಗೂ ಗಟ್ಟಿಯಾದ ಹಲ್ಲುಗಳ ಬೆಳವಣಿಗೆಗೆ ಅಗತ್ಯ. ಇದೂ ಸಹ ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ರಕ್ತ ಮೂಳೆ ಮತ್ತು ಮೃದು ಊತಕಗಳ ತಯಾರಿಕೆಗೆ ಅಗತ್ಯವಾದ ಖನಿಜಾಂಶಗಳೆಲ್ಲವೂ ಮೊಟ್ಟೆಯಲ್ಲಿರುತ್ತದೆ. ಮೊಟ್ಟೆಯಲ್ಲಿ ೨೦೦-೩೦೦ ಮಿ.ಗ್ರಾಂ.ನಷ್ಟು ಕೊಲೆಸ್ಟ್ರಾಲ್ ಅಂಶವಿರಬಹುದು. ಆದರೆ ಮೊಟ್ಟೆ ಸೇವಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಏರುವುದಿಲ್ಲ. ಏಕೆಂದರೆ, ಸಾಧಾರಣ ಮನುಷ್ಯನ ದೇಹವೇ ತನ್ನ ಅಗತ್ಯತೆಗಾಗಿ ದಿನಕ್ಕೆ ೨೦೦೦ ಮಿ.ಗ್ರಾಂಗಳವರೆಗೆ ಕೊಲೆಸ್ಟ್ರಾಲ್ನ್ನು ತಯಾರಿಸುತ್ತಲೇ ಇರುತ್ತದೆ. ಎಲ್ಲಾ ವಯಸ್ಸಿನವರಿಗೂ ಮೊಟ್ಟೆ ಒಳ್ಳೆಯ ಆಹಾರ. ಗರ್ಭಿಣಿಯರಿಗೆ ಹಾಲುಣಿಸುವ ತಾಯಂದಿರಿಗೆ, ಚಿಕ್ಕಮಕ್ಕಳಿಗೆ, ಬೆಳೆಯುವ ಮಕ್ಕಳಿಗೆ ಮತ್ತು ಮುದುಕರಿಗೆ ಇದು ಬಹಳ ಒಳ್ಳೆಯದು. ಏಕೆಂದರೆ, ಇದರಲ್ಲಿ ಸಸಾರಜನಕ ಮತ್ತು ಕಬ್ಬಿಣಾಂಶಗಳು ಅಧಿಕ ಪ್ರಮಾಣ ದಲ್ಲಿರುವುದಲ್ಲದೆ ಸುಲಭವಾಗಿ ಜೀರ್ಣವಾಗುವುದು. ಕೆಲವು ಮಂದಿ ಸಸ್ಯಾಹಾರಿಗಳು ಮೊಟ್ಟೆಯನ್ನು ತಿನ್ನುವುದಿಲ್ಲ. ಕಾರಣ, ಅದರಲ್ಲಿ ಜೀವವಿದೆ ಎಂದು ಅವರ ನಂಬಿಕೆ. ಈ ಹಿಂದೆ ತಿಳಿಸಿದಂತೆ ಇದು ಹಾಲಿನಂತೆ ಸರ್ವರೂ ಬಳಸಬಹುದಾದ ಪ್ರಾಣಿಜನ್ಯ ಆಹಾರ. ಹಸಿ (ಕಚ್ಚಾ) ಮೊಟ್ಟೆಗಳನ್ನು ತಿನ್ನಬಾರದು. ಏಕೆಂದರೆ, ಹಸಿಮೊಟ್ಟೆಗಳಲ್ಲಿ ’ಅವಿಡಿನ್’ ಎಂಬ ವಸ್ತುವಿರುತ್ತದೆ. ಇದು ಬಯೋಟಿನ್ ಎಂಬ ವಸ್ತುವಿನೊಡನೆ ಕೂಡಿ ದೇಹಕ್ಕೆ ಬಯೋಟಿನ್ ದೊರೆಯದಂತೆ ಮಾಡುತ್ತದೆ. ಅಲ್ಲದೆ, ಮೊಟ್ಟೆಗಳಲ್ಲಿ ಇನ್ನೂ ಎರಡು ಉಡುಗಿಕ ವಸ್ತುಗಳಾದ ಓವೋ ಮ್ಯೂಕಾಯ್ಡ್ ಮತ್ತು ಓವೋಇನ್ಹಿಬಿಟಾರ್ ಇರುತ್ತದೆ. ಇವು ಟ್ರಿಪ್ಸಿನ್ನ ಕಾರ್ಯವನ್ನು ಉಡುಗಿಸುತ್ತವೆ. ಅಲ್ಲದೆ, ಹಸಿಮೊಟ್ಟೆಯನ್ನು ತಿನ್ನುವುದರಿಂದ ಮೊಟ್ಟೆಯ ಆಲ್ಬುಮಿನ್ (ಬಿಳಿ ಭಾಗ) ಜೀರ್ಣನಾಳವನ್ನು ಪ್ರವೇಶಿಸಿ ಉದ್ದಕ್ಕೂ ಲೋಳ್ಪೊರೆಯ ಮೇಲೆ ಲೇಪನಗೊಳ್ಳುತ್ತದೆ. ಇದರಿಂದ ಆಹಾರ ಜೀರ್ಣವಾಗುವುದಕ್ಕೂ, ರಕ್ತಗತವಾಗುವುದಕ್ಕೂ ಅಡ್ಡಿಯಾಗುತ್ತದೆ. ಪುನಃ ಕಿಣ್ವಗಳ ಕ್ರಿಯೆಯಿಂದ ಪ್ರಕ್ಷೇಪಗೊಂಡಾಗಲೇ ಅದಕ್ಕೆ ಮುಕ್ತಿ. ಮೊಟ್ಟೆಯನ್ನು ಬೇಯಿಸುವುದರಿಂದ ಆಲ್ಬುಮಿನ್ ಪ್ರಕ್ಷೇಪಗೊಂಡು ಸುಲಭವಾಗಿ ಜೀರ್ಣವಾಗುತ್ತದೆ. ಕೋಳಿ ಮೊಟ್ಟೆಯಿಂದ ವಿವಿಧ ಉತ್ಪನ್ನಗಳಾದ ಎಗ್ ಬುರ್ಜಿ, ಕರ್ರಿ, ಫ್ರೈ, ಎಗ್ ಮಸಾಲ, ಎಗ್ ಫ್ರೈಯ್ಡ್ ರೈಸ್, ಎಗ್ ಮಂಚೂರಿ, ಆಮ್ಲೆಟ್ ಮುಂತಾದವುಗಳನ್ನು ತಯಾರಿಸಬಹುದಾಗಿದೆ

ಮೊಟ್ಟೆ ಮತ್ತು ಅದರ ಉತ್ಪನ್ನಗಳ ಉಪಯೋಗ : ಮೊಟ್ಟೆ ಮತ್ತು ಮೊಟ್ಟೆಯ ಉತ್ಪನ್ನಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ವಿವರಗಳು ಕೆಳಗಿನಂತಿವೆ: ೧. ಮೊಟ್ಟೆಗಳನ್ನು ಹಾಗೆಯೇ ತಿನ್ನಲು , ೨.ಘನೀಕರಿಸಿ ಪುಡಿ ಮಾಡಿ ಶೇಖರಿಸಲು, ೩. ಮರಿ ಮಾಡಲು, ೪.ಇತರೆ ಉಯೋಗಗಳಿಗೆ

ವೈದ್ಯಕೀಯ ಕ್ಷೇತ್ರದಲ್ಲಿ: ೧.ಔಷಧ ರೂಪ ಅಥವಾ ತಯಾರಿಕೆ, ೨. ಏಕಾಣು ಜೀವಿ ಮತ್ತು ವಿಷಾಣು ಜೀವಿಗಳ ಅಧ್ಯಯನ , ೩.ಊತಕ ರಚನಾ ಶಾಸ್ತ್ರದ ಅಧ್ಯಯನ, ೪. ಕೃತಕ ಗರ್ಭಧಾರಣಾ ಕಾರ್ಯ

ಆಹಾರ ತಯಾರಿಕೋದ್ಯಮದಲ್ಲಿ: ೧.ಬೇಕರಿ ಪದಾರ್ಥಗಳ ತಯಾರಿಕೆ, ೨. ಬಿಸ್ಕತ್ತು ಮತ್ತು ನೂಡಲ್ ತಯಾರಿಕೆ, ೩. ಐಸ್ಕ್ರೀಂ ತಯಾರಿಕೆ, ೪.ವಿವಿಧ ಭಕ್ಷ್ಯಗಳ ತಯಾರಿಕೆ, ೫. ಪ್ರಾಣಿ ಆಹಾರ ತಯಾರಿಕೆಯಲ್ಲಿ. ಆಹಾರೇತರ ವಸ್ತು ತಯಾರಿಕೋದ್ಯಮದಲ್ಲಿ : ೧. ಚರ್ಮ ಹದ ಮಾಡುವಿಕೆಯಲ್ಲಿ, ೨. ಬಣ್ಣಗಳ ತಯಾರಿಕೆ, ೩. ಫೋಟೋಗ್ರಫಿ ಮತ್ತು ಮುದ್ರಣ, ೪. ಕಾಂತಿವರ್ಧಕಗಳ ತಯಾರಿಕೆ, ೫. ಸಂಯೋಜನಾ ವಸ್ತುಗಳ ತಯಾರಿಕೆ, ೬.ಗೊಬ್ಬರಗಳ ತಯಾರಿಕೆ

6