ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ರೈತ ವಿಜ್ಞಾನಿ ಸನ್ನಿ ಡಿಸೋಜಾ

image_
ಕೆ.ಸಿ.ಶಶಿಧರ
1

ನಾನು ಇದುವರೆಗೆ ಸಾವಿರಾರು ರೈತರೊಡನೆ ಅವರ ಅನುಭವ ಕುರಿತು ಚರ್ಚಿಸಿದ್ದೇನೆ ಹಾಗೆಯೇ ಒಂದು ವೈಜ್ಞಾನಿಕ ಸಂಶೋಧನಾ ಲೇಖನ ಓದಿ, ಅದನ್ನು ಕಾರ್ಯರೂಪಕ್ಕೆ ತರಬೇಕೆನ್ನುವ ಚಿಂತನೆ ಮಾಡಿದೆ ಎಂದು ಹೇಳಿದ ಮೊದಲ ಕೃಷಿಕ ಸನ್ನಿ ಡಿಸೋಜಾ. ಇಂದು ರಾಜ್ಯದಲ್ಲಿ ಬಯೋಫ಼್ಲಾಕ್ ವಿಧಾನದಲ್ಲಿ ಸೀಗಡಿ ಬೆಳೆಯುವ ನೂತನ ಪ್ರಯೋಗಗಳನ್ನು ಸನ್ನಿ ಡಿಸೋಜಾ ಮಾಡಿದ್ದಾರೆ. ಸನ್ನಿ ಡಿಸೋಜಾ ಅವರು ಸಂಶೋಧನಾ ಲೇಖನ ಓದುತ್ತಿದ್ದಾಗ ಬಯೋಫ಼್ಲಾಕ್ ಮೂಲಕ ಸೀಗಡಿ ಉತ್ಪಾದಿಸಲು ಪೆಡಲ್ ಎರೇಟರ್ಗಿಂತ ಡಿಫ್ಯೂಜರ್ ಒಳ್ಳೆಯದು. ಕಾರಣ, ಗಾಳಿ ಗುಳ್ಳೆಗಳ ವ್ಯಾಸ ಕಡಿಮೆ ಇರುತ್ತದೆ. ಗಾಳಿ ಗುಳ್ಳೆಗಳ ವ್ಯಾಸ ಕಡಿಮೆಯಾದಷ್ಟು ಪರಿಣಾಮಕಾರಿ ಎಂದು ಓದಿದ್ದನ್ನು ಪರೀಕ್ಷಿಸಲು ಸಣ್ಣ ಪ್ರಯೋಗ ಮಾಡಿ ಅದನ್ನು ಕಂಡುಕೊಂಡ ಮೇಲೆ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಲು ಕೈಹಾಕಿದರು. ಪ್ರಯೋಗ ಮಾಡಲು ಉಲ್ಲಾಳದ ಸಮುದ್ರದ ಬದಿಯಲ್ಲಿ ೪ ಅಡಿ ೪೦ ಅಡಿ ಉದ್ದ ರೀಸರ್ಕ್ಯೂಲೇಟರಿ ತೊಟ್ಟಿ ಮಾಡಿಕೊಂಡು ಅಕ್ವೇರಿಯಂ ಪಂಪು ಕೊಂಡು, ಅಕ್ವೇರಿಯಂಗಳಲ್ಲಿ ಬಳಸುವ ಏರ್ ಸ್ಟೋನ್ಗಳಿಂದ ಬೇಕಾದ ಮಾದರಿ ಡಿಸೈನ್ ಮಾಡಿಕೊಂಡು ಪ್ರಯೋಗ ಮಾಡಿದಾಗ ಒಳ್ಳೆ ಫಲಿತಾಂಶ ಬಂತು. ಸಾಮಾನ್ಯವಾಗಿ ಒಂದು ಚದರ ಮೀಟರ್ಗೆ ಒಂದು ಕೆ.ಜಿ. ಇಳುವರಿ ಬರುತ್ತೆ. ಈ ವಿಧಾನದಲ್ಲಿ ೫ ರಿಂದ ೭ ಕೆ.ಜಿ. ಬರುತ್ತೆ ಎನ್ನುವುದನ್ನು ಕಂಡುಕೊಂಡರಂತೆ. ನಂತರ ಹಲವು ವರ್ಷ ಈ ಪ್ರಯತ್ನ ಮುಂದುವರೆಸಲಿಲ್ಲ. ೨೦೧೬ರಲ್ಲಿ ಒಂದು ಎಕರೆ ಜಮೀನು ಲೀಜ್ ತೆಗೆದುಕೊಂಡು ೧೫ ಲಕ್ಷ ಬಂಡವಾಳ ಹೂಡಿರುವ ಇವರನ್ನು ಲೀಜ್ ಎಷ್ಟು ವರ್ಷ? ಅಂದೆ, ಎರಡು ವರ್ಷ ಅಂದ್ರು. ೨ ವರ್ಷ ಲೀಜ್ಗೆ ೧೫ ಲಕ್ಷ ಬಂಡವಾಳ ಹೂಡಿದ್ದೀರಿ ಎಂದಾಗ ಅವರು ೯೦ ದಿನಕ್ಕೆ ಬೆಳೆ ಬಂತು. ಅಲ್ಲಿಂದ ೧೦೦ ದಿನಕ್ಕೆ ಮತ್ತೊಂದು ಬೆಳೆ ಆ ಹಣ ಹೂಡಿ ಇನ್ನೂ ೨ಳಿ ಎಕರೆ ಲೀಜ್ ಪಡೆದು ಪ್ರಾರಂಭಿಸಿದೆ. ಮೂರನೆ ಬೆಳೆ ೧೦೪ ದಿನಕ್ಕೆ ಬಂತು. ಮೊದಲ ಬೆಳೆ ೧೦ ಟನ್ ಎರಡನೆದು ೧೭ ಟನ್ ಮೂರನೆಯದು ೧೩ ಟನ್ ಬಂತು. ಮೊದಲನೆಯದು ಕಡಿಮೆ ಇಳುವರಿ, ಪ್ರಯೋಗಗಳಿಂದ ಕಲಿತ ಮೇಲೆ ಎರಡನೆಯ ಬೆಳೆ ಚೆನ್ನಾಗಿ ಬಂತು. ಮೂರನೆಯ ಬೆಳೆ ಮಳೆಯಿಂದ ಸ್ವಲ್ಪ ಕಡಿಮೆಯಾಯಿತು ಅಂತ ವಿವರ ನೀಡಿದರು

3

ಇವರ ವಿಶೇಷ ಅಂದ್ರೆ ಬೇಕಾದ ಡಿಫ಼್ಯೂಜರ್ ಇವರೆ ವಿನ್ಯಾಸ ಮಾಡಿಕೊಂಡಿದ್ದಾರೆ. ಬಯೋಫ಼್ಲಾಕ್ ಕೃಷಿಯಲ್ಲಿ ಅ:ಓ ಅನುಪಾತ ಅಂದ್ರೆ ಕಾರ್ಬನ್:ನೈಟ್ರೋಜನ್ ಅನುಪಾತ ಬಹಳ ಮುಖ್ಯ ಅಂತೆ. ಆದ್ರೆ ಇವರು ಅದನ್ನು ಅಳತೆ ಮಾಡೋಲ್ಲ ಅಮೋನಿಯಾ ಪ್ರಮಾಣದ ಮೇಲೆ ಇವರು ಅ:ಓ ಅನುಪಾತದ ನಿರ್ಧಾರ ಮಾಡ್ತಾರಂತೆ. ಅಮೋನಿಯಾ ಮತ್ತು ಕರಗಿದ ಆಕ್ಸಿಜನ್ ಅಳತೆಗೆ ಕಿಟ್ಗಳನ್ನು ಬಳಸುತ್ತಾರೆ. ಅಮೋನಿಯಾ ೩ ಪಿಪಿಎಂಗಿಂತ ಕಡಿಮೆ ಇದ್ದಾಗ ನಿರ್ವಹಣೆ ಹೆಚ್ಚೇನಿಲ್ಲ. ನಂತರ, ಒಂದು ಪಿಪಿಎಂ ಹೆಚ್ಚಾಗುತ್ತಿದ್ದಂತೆ ಕಾರ್ಬನ್ ಮೂಲ ಇರುವ ಸಕ್ಕರೆ, ಮೊಲ್ಯಾಸಿಸ್, ಪೆಕ್ಸ್ಟ್ರೋನ್ ಹಾಕುತ್ತಾರೆ. ಮೊದಲ ಬೆಳೆಗೆ ಸಕ್ಕರೆ ಹಾಕುತ್ತಿದ್ದರಂತೆ. ಈಗ ಅದು ದುಬಾರಿಯಾಗುತ್ತೆ ಅಂತ ಎಣ್ಣೆ ತೆಗೆದ ಭತ್ತದ ಪಾಲಿಷ್ ತೌಡಿಗೆ ಸ್ವಲ್ಪ ಬೆಲ್ಲ ಮಿಕ್ಸ್ ಮಾಡಿ ೧೨ ಗಂಟೆ ಫ಼ರ್ಮೆಂಟ್ ಮಾಡಿ ಹಾಕುತ್ತಾರೆ. ಕಾಲು ಎಕರೆಗೆ ೫ ಕೆ.ಜಿ.ಯಿಂದ ೪೦ ಕೆ.ಜಿವರೆಗೆ ಬಳಕೆ ಮಾಡುತ್ತಾರೆ. ಪ್ರಮಾಣವನ್ನು ಅಮೋನಿಯಾ ಪಿಪಿಎಂ ಮೇಲೆ ನಿರ್ಧರಿಸುತ್ತಾರೆ. ೨೦-೨೫ ದಿನಗಳ ಕಾಲ ನಿತ್ಯ ಕೊಡುತ್ತಾರೆ. ಜೊತೆಗೆ ಗಾಳಿ ನಿತ್ಯ ಒದಗಿಸುತ್ತಾರೆ. ಇದಕ್ಕಾಗಿ ಬ್ಲೋವರ್ ಡಿಫ಼್ಯೂಜರ್ ವ್ಯವಸ್ಥೆ ಇದೆ. ಐದು ನಿಮಿಷ ನಿಲ್ಲಿಸುವುದಿಲ್ಲ. ಹಗಲು ರಾತ್ರಿ ಈ ವ್ಯವಸ್ಥೆ ನಡಿತಾನೆ ಇರುತ್ತೆ. ಇದಕ್ಕೆ ಎರಡು ಜನರೇಟರ್ ಎರಡು ಪೆಟ್ರೋಲ್ ಎಂಜಿನ್ಗಳೂ ವಿದ್ಯುತ್ಗೆ ಪೂರಕವಾಗಿವೆ. ಈ ಡಿಫ಼್ಯೂಜರ್ ವ್ಯವಸ್ಥೆಯಿಂದ ಪ್ರತಿಶತ ೭೦ರಷ್ಟು ವಿದ್ಯುತ್ ಉಳಿತಾಯ ಜೊತೆಗೆ ಶಬ್ದ ಮಾಲಿನ್ಯದ ಸಮಸ್ಯೆ ಇಲ್ಲವಂತೆ. ಇಷ್ಟೆಲ್ಲಾ ವ್ಯವಸ್ಥೆ ನೋಡಿದಾಗ ಹೊಂಡ, ಕೆರೆಗಳಲ್ಲಿ ಮೀನು ಸಾಕೋರು ಇಷ್ಟು ಖರ್ಚು ಮಾಡೋಲ್ಲ. ನೀವ್ಯಾಕೆ ಇಷ್ಟು ಖರ್ಚು ಮಾಡುತ್ತೀರಿ ಅಂದೆ. ಸಾರ್ ಇದೆ ಬಯೋಫ಼್ಲಾಕ್ ವಿಶೇಷ. ನಾವು ಸೀಗಡಿಗೆ ಆಹಾರ ಕೊಡುತ್ತೇವೆ. ಅದು ಕೇವಲ ೩೦% ಬಳಸಿ ಉಳಿದದ್ದು, ಬಳಕೆಯಾಗದೇ ವಿಸರ್ಜಿಸಲ್ಪಡುತ್ತದೆ. ಇದನ್ನು ಸ್ವಚ್ಛ ಮಾಡುವುದು ಕಷ್ಟ ಮಾಡದಿದ್ದರೆ ಸೀಗಡಿ ಸಾಯುತ್ತೆ. ಪರಿಹಾರ ರೀಸರ್ಕ್ಯೂಲೇಟರಿ ಸಿಸ್ಟಮ್. ಇದಕ್ಕೆ ತುಂಬಾ ವೆಚ್ಚ ಆದರೆ ಬಯೋಫ಼್ಲಾಕ್ ವಿಧಾನದಲ್ಲಿ ಈ ಎಕ್ಸ್ಕ್ರಿಟಾವನ್ನ ಪುನಃ ಆಹಾರ ಮಾಡಲಾಗುತ್ತದೆ. ಇದಕ್ಕಾಗಿ ಅ:ಓ ಪ್ರಮಾಣ ನಿರ್ವಹಣೆ ಅಗತ್ಯ. ಆದ್ದರಿಂದ ಇಷ್ಟೆಲ್ಲಾ ವ್ಯವಸ್ಥೆ ಬೇಕು. ಇದರಲ್ಲಿ ಹೆವಿಡೆನ್ಸಿಟಿ ಬಿಡ್ತಿವಿ, ನಾವು ಒಂದು ಚದರ ಮೀಟರ್ಗೆ ೨೦೦ ಮೀನು ಬಿಡ್ತಿವೆ ೩೦೦ರವೆರೆಗೆ ಬಿಡುವವರು ಇದ್ದಾರೆ. ಇದರಿಂದ ೬-೭ ಪಟ್ಟು ಹೆಚ್ಚು ಉತ್ಪನ್ನ ತೆಗೆಯಲು ಸಾಧ್ಯ ಅಂತ ವಿವರಿಸಿದರು

5

ಇಂತಹ ಸಂಶೋಧನಾ ರೈತ ಸಾಗಿ ಬಂದ ದಾರಿಯೂ ವಿಶೇಷ. ೧೯೮೯ರಲ್ಲಿ ಬಿ.ಎಸ್ಸಿ ಮುಗಿಸಿ ಬೆಂಗಳೂರಿನಲ್ಲಿ ಅಣಬೆ ಉತ್ಪಾದನೆ ಮಾಡುವ ಕಂಪೆನಿಗೆ ಸೇರಿ ನಂತರ ಅಲ್ಲಿಂದ ಬಳ್ಳಾರಿಯ ಎಂ. ಫಾರ್ಮ ಕಂಪನಿಗೆ ಸೇರುತ್ತಾರೆ. ಇಲ್ಲಿ ಹಲವು ಪ್ರಾಣಿಗಳಿಗೆ ಔಷಧಿ ಆಹಾರ ತಯಾರಿಸುತ್ತಿದ್ದರು. ಮೀನುಗಳಿಗೆ ಐಯೋಡಿನ್ಯುಕ್ತ ಪೋಷಕಾಂಶಗಳ ತಯಾರಿಕೆ ಒಂದನ್ನ ಮಾರಾಟ ಮಾಡಲು ಕಂಪೆನಿಯವರು ಆಂಧ್ರಕ್ಕೆ ಕಳಿಸಿದರು. ಮೀನಿಗೆ ಒಂದು ರೀತಿ ಅಲ್ಸರ್ ಆಗಿ ಸಾಯುತ್ತಿದ್ದವಂತೆ ಏನು ಹಾಕಿದರೂ ಸರಿಯಾಗುತ್ತಿರಲಿಲ್ಲ. ಈ ಐಯೋಡಿನ್ಯುಕ್ತ ಪೋಷಣೆ ಸಹ ಪ್ರಯೋಜನಕ್ಕೆ ಬರಲಿಲ್ಲ. ಆಗ ಇವರ ಸಂಶೋಧನಾ ಮನಸ್ಸು ಜಾಗ್ರತವಾಗಿ ಅಲ್ಲಿ ಮೀನಿಗೆ ಕೊಡುವ ಆಹಾರ ವ್ಯವಸ್ಥೆ ನೋಡಿದರು ಹೊಂಡದಲ್ಲಿ ಮದ್ಯು ಪೀಡಿಂಗ್ ಕಂಬ ಆದ ಬ್ಯಾಗ್ ಕಟ್ಟಿರುತ್ತಿದ್ದರು. ನಂತರ ಇವರು ಗ್ಲುಕೋಸ್ ಬಾಟಲ್ ತೆಗೆದುಕೊಂಡು ಮೀನು ಆಹಾರ ತಿನ್ನಲು ಬರುವ ಜಾಗದ ಹತ್ತಿರ ಹನಿ ಹನಿ ಬೀಳುವಂತೆ ಮಾಡಿದಾಗ ಸಾವಿನ ಪ್ರಮಾಣ ಕಡಿಮೆಯಾಯಿತು. ರೈತರೆಲ್ಲ ಇವರನ್ನ ಪ್ರೀತಿಸತೊಡಗಿದರು. ಇವರೇ ತಿಳಿಸಿ ಮೊದಲ ಬಾರಿಗೆ ಖಾಸಗಿ ನೀರು ಪರೀಕ್ಷಾ ಕೇಂದ್ರವನ್ನು ೧೯೯೧ರಲ್ಲಿ ಪ್ರಾರಂಭಿಸಿದರು. ನಂತರ ಭೀಮಾವರಮ್ನಲ್ಲಿ ಸೀಗಡಿ ಕೃಷಿ ಆಗ ತಾನೆ ಪ್ರಾರಂಭ ಆಗಿತ್ತು. ಅಲ್ಲಿ ಪಾರ್ಟ್ನರ್ ಆಗಿ ೧೦ ವರ್ಷ ಕೆಲಸ ಮಾಡಿದರು

ಅಷ್ಟರಲ್ಲಿ ಪಾರ್ಟ್ನರ್ಗಳ ಮಧ್ಯ ವ್ಯತ್ಯಾಸ ಪ್ರಾರಂಭ ಆಯಿತು. ಅದೇ ಸಮಯಕ್ಕೆ ತಂದೆ ತೀರಿದರು. ತಮ್ಮ ಊರಾದ ನೀರು ಮಾಡಲ್ಲಿನ ೧೬ ಎಕರೆ ತೋಟ ನೋಡಿಕೊಳ್ಳಬೇಕಾದ್ದರಿಂದ ಕೆಲಸ ಬಿಟ್ಟು ಪೂರ್ಣ ಪ್ರಮಾಣದ ಕೃಷಿಕರಾದರು. ಸಂಪೂರ್ಣ ಸಾವಯವ ಕೃಷಿ ಮಾಡಿದ ಇವರ ಸಾಧನೆ ನೋಡಿ ಕಾಂಬೋಡಿಯಾ, ಫಿಲಫೈನ್ಮ, ಬಾಂಗ್ಲಾ, ನೇಪಾಳ ದೇಶಗಳಿಗೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದರು. ನಂತರ ೨೦೧೦ರಲ್ಲಿ ರೀಸರ್ಕ್ಯೂಲೇಟರಿ ಸಿಸ್ಟಂ ಹಾಗೂ ಡಿಫ಼್ಯೂಜರ್ ಸಂಶೋಧನಾ ಲೇಖನ ಓದಿ ಪ್ರಯೋಗ ಮಾಡಿ ೨೦೧೬ರಲ್ಲಿ ಬಯೋಫ಼್ಲಾಕ್ ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ. ಇವರ ಕೌಶಲ್ಯ ಕಲಿಯಲು ದೇಶದ ವಿವಿಧ ಭಾಗಗಳಿಂದ ರೈತರು ಬರುತ್ತಾರೆ. ಗೊತ್ತಿರುವುದನ್ನು ಉಚಿತವಾಗಿ ಕಲಿಸುತ್ತಾರೆ. ಇವರ ಆಸೆ ಎಂದರೆ ಒಳನಾಡಿನಲ್ಲಿ, ಅಂತರ್ಜಲ ನೀರಲ್ಲಿ ಉಪ್ಪಿನ ಅಂಶ ಹೆಚ್ಚಿರುವ ಕಡೆ ತಮ್ಮ ಈ ಪ್ರಯೋಗ ಮುಂದುವರೆಸಬೇಕೆಂದಿದ್ದಾರೆ. ಇವರು ತಮ್ಮ ಓದು ಸಂಶೋಧನೆಯಿಂದ ಕಂಡುಕೊಂಡಿದ್ದನ್ನು ಕೊನೆಯಲ್ಲಿ ಹೇಳಿದ್ದು ಹೀಗೆ ಇಂಪ್ಲಿಮೆಂಟ್ ಇನ್ನೋವೇಶನ್ (ಆವಿಷ್ಕಾರಗಳನ್ನು ಅಳವಡಿಸಿ) ಇದೇ ಧ್ಯೇಯ ಇಟ್ಟುಕೊಂಡು ಒಂದು ಸಂಸ್ಥೆಯನ್ನು ಪ್ರಾರಂಭಿಸಿ ಯುವಕರಿಗೆ ತಾನು ಕಲಿತದ್ದನ್ನು ಕಲಿಸಬೇಕೆಂದಿದ್ದಾರೆ

8910

ಇವರ ಅನುಭವ ದಾಖಲಿಸಲು ಒಂದು ಪೂರ್ಣ ಪ್ರಮಾಣದ ಪುಸ್ತಕವನ್ನೇ ಬರೆಯಬೇಕಾಗುತ್ತದೆ. ನಮ್ಮ ಓದುಗರಿಗೆ ಅವರ ಕಿರುಪರಿಚಯವನ್ನಷ್ಟೆ ಮಾಡಿದ್ದೇನೆ. ಇವರ ಅನುಭವ ಕೌಶಲ್ಯ ತಿಳಿಯಲು ಇವರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡುವುದು ಅಗತ್ಯ. ರೈತರ ಸಂಪರ್ಕ ವಿಳಾಸ: ಸನ್ನಿ ಡಿಸೋಜಾ, ೯೩೪೧೭೧೮೮೦೮, ಪೊಯ್ಯಬಯಲು ಹೌಸ್, ಪಡು ಅಂಚೆ, ಗ್ರಾಮ ನೀರು ಮಾರ್ಗ, ಮಂಗಳೂರು -೨೯