ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಸಂಪಾದಕೀಯ

ಕೃಷಿಯತ್ತ ಸಾಹಿತ್ಯ ಪರಿಷತ್

image_
ಕೆ.ಸಿ.ಶಶಿಧರ
1

ಸಂಸ್ಕೃತಿಯನ್ನು ಕಟ್ಟಿಕೊಟ್ಟ ಜನಪದರು ಸಾಹಿತ್ಯ ಸೃಷ್ಟಿಗೆ ನಾಂದಿ ಹಾಡಿದರು. ಇಂತಹ ಅವಿನಾಭಾವ ಸಂಬಂಧವಿರುವ ಕ್ಷೇತ್ರಗಳನ್ನು ಇಂದು ಮತ್ತೆ ಮೇಳೈಸುವ ಕಾರ್ಯಕ್ಕೆ ಕರ್ನಾಟಕದ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್ರವರು ಕೈ ಹಾಕಿರುವುದು, ಒಕ್ಕಲಿಗರೆಲ್ಲಾ ಹೆಮ್ಮೆಪಡುವ ವಿಚಾರ. ನೂರು ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಕೃಷಿಯ ಕೆಲಸ ಮಾಡಿಲ್ಲವೆಂದಲ್ಲ. ಆದರೆ ಬೇಕಾದ ವೇಗ ಪಡೆದುಕೊಂಡಿರಲಿಲ್ಲವಷ್ಟೆ. ಹಾಸನದಲ್ಲಿ ೧೯೯೬ ರ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಗೋಷ್ಠಿಯನ್ನು ಆಯೋಜಿಸಬೇಕೆಂದು ಸಾ.ಶಿ. ಮರುಳಯ್ಯನವರಿಗೆ ನಾನು ಮತ್ತು ಪದ್ಮಭೂಷಣ ಎಂ. ಮಹದೇವಪ್ಪನವರು ಬೇಡಿಕೆ ಮುಂದಿಟ್ಟಾಗ ಅವರು ವಿಜ್ಞಾನ ಗೋಷ್ಠಿ ಆಯೋಜಿಸಿದ್ದೇವೆ. ಆ ಗೋಷ್ಠಿಗೆ ಕೃಷಿ ವಿಜ್ಞಾನಿಗಳ ಅಧ್ಯಕ್ಷತೆ ಮಾಡೋಣ ಮುಂದೆ ಈ ನಿಟ್ಟಿನಲ್ಲಿ ಯೋಚಿಸೋಣ ಎಂದರು. ನಂತರ ೨೦೦೬ರಲ್ಲಿ ನಮ್ಮ ಬೇಡಿಕೆಗೆ ಚಂಪಾರವರು ಸ್ಪಂದಿಸಿ ಪ್ರತ್ಯೇಕ ಕೃಷಿ ಗೋಷ್ಠಿಗೆ ಚಾಲನೆ ನೀಡಿದರು. ಈ ಹಿಂದೆ ಸಾಹಿತ್ಯ ಪರಿಷತ್ತು ಕೃಷಿ ಚಿಂತನೆ ಮಾಡಿಲ್ಲವೆಂದಲ್ಲ. ಇದಾದ ನಂತರ ಜಿಲ್ಲಾ, ತಾಲ್ಲೂಕು ಮೇಳಗಳಲ್ಲೂ ಕೃಷಿ ಗೋಷ್ಠಿ ನಡೆಯಲಾರಂಭಿಸಿದ್ದು ವಿಶೇಷ. ಇಂದಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಕೃಷಿ ಹಿನ್ನೆಲೆ ಮತ್ತು ಅವರಿಗೆ ಇರುವ ಕಾಳಜಿಯಿಂದ ಕೃಷಿಕರು, ಕೃಷಿಯ ಸಮಸ್ಯೆಗಳು ಹಾಗೂ ಕೃಷಿ ಸಾಹಿತ್ಯಕ್ಕೆ ಸಾಹಿತ್ಯ ಪರಿಷತ್ತು ದೊಡ್ಡ ಧ್ವನಿಯಾಗುವ ಚಿಂತನೆ ನಿಜಕ್ಕೂ ಅಭಿನಂದನಾರ್ಹ. ಅವರು ರಾಜ್ಯಾದ್ಯಂತ ಕೃಷಿ, ಸಹಕಾರ ಸಾಹಿತ್ಯ ಸಮ್ಮೇಳನಗಳ ಹೊಸ ಪರ್ವ ಆರಂಭಿಸಿದ್ದಾರೆ. ಕೃಷಿ ಸಾಹಿತ್ಯ ೧೯೦೦ರ ಘನಮಠದ ಶಿವಯೋಗಿಗಳ ಕೃಷಿ ಜ್ಞಾನ ಪ್ರದೀಪಿಕೆಯಿಂದ ಸಾಗಿಬಂದಿದೆಯಾದರೂ ಕೃಷಿ ಬೆಳವಣಿಗೆಯ ವೇಗಕ್ಕೆ ಸ್ಪಂದಿಸಲಾಗುತ್ತಿಲ್ಲ. ಪ್ರಪಂಚದಲ್ಲಿನ ಕೃಷಿಯ ಎಲ್ಲಾ ಆಗು ಹೋಗುಗಳನ್ನು ರೈತರಿಗೆ ತಲುಪಿಸಲು ಭಾಷಾಂತರ ಮಾಡುವ ಕಾರ್ಯ ಆಗಬೇಕಾಗಿದೆ. ಇದಕ್ಕೆ ಒಂದು ಪುಸ್ತಕ ಹೊರ ತಂದರೆ ಸಾಲದು, ನಿತ್ಯ ನಡೆಯಬೇಕಾದ ಕೆಲಸ. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಹಿಂದೆ ತರುತ್ತಿದ್ದ ನಾಲ್ಕಾಣೆ, ಒಂದು ರೂ. ಮಾದರಿಯ ಗ್ರಂಥಮಾಲಿಕೆಯನ್ನು ಕೃಷಿಗಾಗಿ ಪ್ರಾರಂಭಿಸಬೇಕಿದೆ. ಇದನ್ನು ಮಾಡಲು ಮನು ಬಳಿಗಾರ್ ಸಮರ್ಥರು ಎಂಬುದನ್ನು ನಾನು ಬಲ್ಲೆ. ಇಂತಹ ಕಾರ್ಯಕ್ಕೆ ಅವರು ಮುನ್ನುಡಿ ಬರೆಯಲಿ ಎಂದು ಆಶಿಸುತ್ತೇನೆ. ಕೃಷಿ ಸಾಹಿತ್ಯ ಸೇವೆಯಲ್ಲಿರುವ ಸರ್ವರೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್ ರವರು ನೀಡಿರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಹೆಚ್ಚು ಹೆಚ್ಚು ಕೃಷಿ ಪುಸ್ತಕ ಬರೆದುಕೊಟ್ಟಲ್ಲಿ ಪ್ರಕಟಣೆ ಮಾಡಲು ಸಾಹಿತ್ಯ ಪರಿಷತ್ತು ಸಿದ್ಧವಿದೆ. ರೈತರು, ರೈತ ಹೋರಾಟಗಾರರು, ರೈತಪರ ಚಿಂತಕರು, ಕೃಷಿ ವಿಜ್ಞಾನಿಗಳು ಈ ಸದಾವಕಾಶ ಬಳಸಿಕೊಂಡು ಸಾಹಿತ್ಯ ಪರಿಷತ್ಗೆ ಜೊತೆ ನೀಡಿದರೆ ಕೃಷಿ ಸಾಹಿತ್ಯ ಪರಿಷತ್ತು ಕೃಷಿ ಸಾಹಿತ್ಯದ ಜ್ಞಾನ ಭಂಡಾರ ನಿರ್ಮಿಸಲಿದೆ. ಬನ್ನಿ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ನಾವೆಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯದಲ್ಲಿ ಕೈಜೋಡಿಸೋಣ