ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಕಬ್ಬಿನ ಇಳುವರಿ ಹೆಚ್ಚಿಸಲು ಸೂತ್ರಗಳು

ರಘುವೀರ
೮೯೫೧೫೨೬೮೦೩
1

ಹನಿ ನೀರಾವರಿ ಪದ್ದತಿ: ಇತ್ತೀಚಿನ ದಿನಗಳಲ್ಲಿ ಅತಿಯಾದ ನೀರಾವರಿಯಿಂದ (Flood irrigation) ಕಬ್ಬು ಬೆಳೆಯುತ್ತಿರುವ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ಸವಳು ಮತ್ತು ಜವಳು ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಆದ್ದರಿಂದ ಇದನ್ನು ತಡೆಗಟ್ಟಲು ಹನಿ ನೀರಾವರಿ ಪದ್ದತಿಯನ್ನು ವಲಯ ೩ ಮತ್ತು ೮ ರಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಸರಕಾರ ಶೇಕಡ ೭೫ ರಷ್ಟು ಸಬ್ಸಿಡಿ ನೀಡುತ್ತಿದೆ

೧. ಮೇಲ್ಮೈ ಹನಿ ನೀರಾವರಿ ಪದ್ಧತಿ, ೨. ಭೂಗರ್ಭ ಹನಿ ನೀರಾವರಿ ಪದ್ಧತಿ

ಮುಖ್ಯವಾಗಿ ಹನಿ ನೀರಾವರಿ ಭೂಮಿಯ ಮೇಲೆ ಮತ್ತು ಭೂಮಿಯ ಒಳಗೆ ಹನಿ ನೀರಾವರಿಯ ಪೈಪುಗಳನ್ನು ಅಳವಡಿಸಿ ಕಬ್ಬಿಗೆ ನೀರನ್ನು ಹಾಯಿಸಬಹುದು. ಭೂಮಿಯ ಮೇಲೆ ಅಳವಡಿಸಿದ ಪದ್ಧತಿಯಲ್ಲಿ ೫ ಅಡಿ ಅಂತರದ ಸಾಲುಗಳಲ್ಲಿ ಕಬ್ಬನ್ನು ನಾಟಿ ಮಾಡಿದಾಗ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡಲು ಸೂಕ್ತ. ಭೂಮಿಯ ಒಳಗೆ ಅಳವಡಿಸಿದ ಹನಿ ನೀರಾವರಿ ಪದ್ಧತಿಯಲ್ಲಿ ೨ ಅಡಿ ಅಂತರದ ಎರಡು ಸಾಲುಗಳ ನಾಟಿ ಮುಖಾಂತರ ಕಬ್ಬಿನ ಬೇಸಾಯ ಮಾಡಲಾಗುತ್ತಿದೆ. ಹನಿ ನೀರಾವರಿ ಘಟಕಗಳನ್ನು ಭೂಮಿಯ ಒಳಗೆ ಅಳವಡಿಸುವಾಗ ಪೈಪುಗಳನ್ನು ಕನಿಷ್ಠ ೮ ರಿಂದ ೧೦ ಇಂಚು ಭೂಮಿಯ ಒಳಗೆ ಹಾಕಬೇಕು ಮತ್ತು ಸಂಪೂರ್ಣವಾಗಿ ಕಬ್ಬಿಗೆ ಬೋದು ಏರಿಸಿದಾಗ ಮಾತ್ರ ಕಬ್ಬು ಸಾಕಷ್ಟು ಮರಿಗಳನ್ನು ಹಾಕಿ ಕಬ್ಬಿನ ಸಂಖ್ಯೆ ಹೆಚ್ಚಿಸಲು ಪ್ರಯೋಜನಕಾರಿಯಾಗುವುದಲ್ಲದೇ ಕಬ್ಬು ನೆಲಕ್ಕೆ ಬೀಳದ ಹಾಗೆ ಆಶ್ರಯ ಕೊಡುತ್ತದೆ. ಹನಿ ನೀರಾವರಿಯಲ್ಲಿ ಪ್ರತಿ ಗಂಟೆಗೆ ೧.೬ ರಿಂದ ೨.೦ ಲೀ. ಪ್ರತಿ ಗುಂಡಿಗೆ ೪೦ ಅಥವಾ ೫೦ ಸೆಂ.ಮೀ. ಅಂತರದಲ್ಲಿ ನೀರನ್ನು ಕೊಡುವುದರಿಂದ ಸಮರ್ಪಕವಾಗಿ ನೀರಿನ ನಿರ್ವಹಣೆಯನ್ನು ಮಾಡಲು ಸಾಧ್ಯ. ಕಬ್ಬಿನ ಬೆಳೆಗೆ ಪ್ರತಿ ದಿನ ಮೊದಲು ಮೂರು ತಿಂಗಳು_ ೨ ಗಂಟೆ, ೩ ರಿಂದ ೧೦ ತಿಂಗಳ ವರೆಗೆ _ ೩ ಗಂಟೆ, ನಂತರ ಎರಡೂವರೆಗಂಟೆ ನೀರು ಕೊಡುವುದು ಸೂಕ್ತ.

ಉಪಯೋಗಗಳು: ಹನಿ ನೀರಾವರಿ ಪದ್ಧತಿಯಲ್ಲಿ ನೀರನ್ನು ಉಳಿತಾಯ ಮಾಡಬಹುದಲ್ಲದೆ ವಿದ್ಯುತ್ ಅನ್ನು ಉಳಿತಾಯ ಮಾಡಬಹುದು. ಇದರಿಂದ ರಸಗೊಬ್ಬರ ಮತ್ತು ಕೂಲಿ ಖರ್ಚನ್ನು ಕಡಿಮೆ ಮಾಡಬಹುದು. ಸವಳು, ಜವಳು ಮತ್ತು ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು.ಗೊಬ್ಬರವನ್ನು ಹನಿ ನೀರಾವರಿಯ ಮುಖಾಂತರ ಕೊಡುವುದರಿಂದ ರಾಸಾಯನಿಕ ಗೊಬ್ಬರ ಬಳಕೆಯ ಸಾಮರ್ಥ್ಯ ಹೆಚ್ಚಾಗುತ್ತದೆ

ಕಬ್ಬಿಣದ ಮತ್ತು ಸತುವಿನ ಕೊರತೆಯ ನಿರ್ವಹಣೆ

ಕೊರತೆಯ ಲಕ್ಷಣಗಳು: ಕಬ್ಬಿಣದ ಕೊರತೆಯಿಂದ ಎಲೆಗಳು ತಿಳಿ ಬಳಿ ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ ಇಳುವರಿ ಕಡಿಮೆಯಾಗುತ್ತದೆ. ಸತುವಿನ ಕೊರತೆಯಿಂದ ಮದ್ಯದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಇಳುವರಿ ಕುಂಠಿತವಾಗುತ್ತದೆ. ನಿರ್ವಹಣೆ: ಕಬ್ಬಿಣದ ಕೊರತೆ ಕಂಡು ಬಂದಲ್ಲಿ ಪ್ರತಿ ಹೆಕ್ಟೇರ್ಗೆ ೨೦-೨೫ ಕಿ.ಗ್ರಾಂ ಕಬ್ಬಿಣದ ಸಲ್ಫೇಟ್. ಸತುವಿನ ಕೊರತೆ ಕಂಡುಬಂದಲ್ಲಿ ಸತುವಿನ ಸಲ್ಫೇಟ್ಅನ್ನು ಮಣ್ಣಿಗೆ ೧೦-೧೨ ಕಿ.ಲೊ. ಒದಗಿಸಬೇಕು ಅಥವಾ ಶೇ.೦.೨೫-೦.೫ ಸತುವಿನ ಸಲ್ಫೇಟ್ ಸಿಂಪಡಿಸಬೇಕು

8