ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಬೆವರ ಹನಿಗೆ ಬೆಲೆಕಟ್ಟಲಾದಿತೆ

ಪ್ರದೀಪ ಬಿರಾದರ
9743064405
1

ಪ್ರತಿ ಯಶಸ್ವಿ ರೈತರ ಹಿಂದೆಲ್ಲಾ ಸಾಧನೆಯ ಕಥೆ ಇದ್ದೆ ಇದ್ದೀತು. ಈ ಸೊಗಸಿನ ಕಥೆಯ ಬಣ್ಣವೇರುವುದು ರೈತನು ಸುರಿಸಿದ ಬೆವರ ಹನಿಯಿಂದ. ಇದ್ದವರು ಸಾಧನೆ ಮಾಡುವುದು ದೊಡ್ಡದೇನಲ್ಲ. ಆದರೆ ಇಲ್ಲದವರು ಇದ್ದವರನ್ನು ಮೀರಿ ಬೆಳೆಯುವುದು ಅಪರೂಪ. ಆದರೂ ಅಭೂತಪೂರ್ವ. ಇಂತಹದೊಂದು ಸಾಧನೆಯನ್ನು ಕೊಪ್ಪಳದ ಯುವರೈತನಲ್ಲಿ ಕಾಣಬಹುದು.ಕೊಪ್ಪಳದಿಂದ ಸುಮಾರು ೩೨ ಕಿ.ಮೀ. ದೂರದ ಮುರಡಿ ಗ್ರಾಮದಲ್ಲಿ ಶ್ರೀ ಬಸವರಾಜ ಬಾಳಪ್ಪಾ ಭಂಡಾರಿ ಎಂಬ ಯುವ ರೈತ ಪ್ರಗತಿಯ ಹಾದಿಯಲ್ಲಿ ದಾಪುಗಾಲು ಹಾಕುತ್ತಾ ಮುನ್ನಡೆಯುತ್ತಿದ್ದಾನೆ. ೩೭ ವರ್ಷದ ಯುವಕ, ೪ ಜನ ಸಹೋದರರನ್ನು ಹೊಂದಿದ ಕುಟುಂಬದ ಯಜಮಾನ. ಮೂಲದಲ್ಲಿ ಕೆಂಪು ಮಣ್ಣಿನ ೨ ಎಕರೆ ಜಮೀನು ಹೊಂದಿದ್ದು, ಊರ ಮುಂದೆ ಹಾಕಿದ ಸೈಕಲ್ ಪಂಚರ್ ಶಾಪ್ನಿಂದ ಜೀವನ ಸಾಗುತ್ತಿತ್ತು ಈ ಬಡ ಕುಟುಂಬ. ತಂದೆ ಜನನಾಯಕ ಓರ್ವರ ದ್ರಾಕ್ಷಿ ತೋಟದಲ್ಲಿ ಕೂಲಿ ಆಳಾಗಿ ದುಡಿಯುತ್ತಿದ್ದ. ಸುದೈವದಿಂದ, ಅವರ ಸಹಾಯದಿಂದ ಇನ್ನೆರಡು ಎಕರೆ ಜಮೀನು ಹಿಡಿದು ಹೊಲದಲ್ಲಿ ಕೊಳವೆಬಾವಿ ಕೊರೆಸಿ ಮಾಡಲ್ಲಾ ಎಂದು ಮಗನ ಕೊರಳಿಗೆ ಹಾಕಿದ ತಂದೆ. ಮಗನಾದರೂ ಛಲವಾದಿ. ಒಂದೂವರೆ ಇಂಚು ಬಿದ್ದ ನೀರಿನಿಂದ ೨೦೧೧ರಲ್ಲಿ ೪ ಎಕರೆಗೆ ಪಪ್ಪಾಯ ನಾಟಿ ಮಾಡಿದ. ಈಗ ೨೦೦ ಟನ್ ಇಳುವರಿಯನ್ನು ಕೆ.ಜಿ ಒಂದಕ್ಕೆ ೧೨ ರೂ. ನಂತೆ ಮಾರಿ ಸುಮಾರು ರೂ. ೧೮ ಲಕ್ಷ ಲಾಭದಿಂದ ಸಂತೃಷ್ಟನಾಗದೆ ಮತ್ತೆ ೪ ಎಕರೆ ಜಮೀನು ಹಿಡಿದು ಇನ್ನೆರಡು ಕೊಳವೆಬಾವಿಗಳನ್ನು ಕೊರೆಯಿಸಿದ. ಆದರೆ, ನೀರೇನೂ ಬಹಳ ಬೀಳಲಿಲ್ಲ. ಒಂದುವರೆಯಿಂದ ಒಂದುಮುಕ್ಕಾಲು ಇಂಚು ಮಾತ್ರ. ಆದರೂ ಹಿಮ್ಮೆಟ್ಟದೆ ೪ ಎಕರೆ ದಾಳಿಂಬೆ, ೩ ಎಕರೆ ದ್ರಾಕ್ಷಿ ೨೦೧೨ರಲ್ಲಿ ನಾಟಿ ಮಾಡಿರುತ್ತಾನೆ.

3

ಸಂಪೂರ್ಣ ಹನಿ ನೀರಾವರಿ ಮತ್ತು ರಸಾವರಿಗಳನ್ನು ಬೆಳೆಯಲ್ಲಿ ಅಳವಡಿಸಿಕೊಂಡು ತೋಟಗಾರಿಕೆ ಬೇಸಾಯದಲ್ಲಿ ಸಾಹಸದಿಂದ ಮುನ್ನುಗ್ಗಿದ. ಮೊದಲಬಾರಿಗೆ ದ್ರಾಕ್ಷಿಯಿಂದ ೪.೫ ಲಕ್ಷ ಮತ್ತು ದಾಳಿಂಬೆಯಿಂದ ೬.೫ ಲಕ್ಷಗಳಿಸಿದ್ದಾಯಿತು. ಕಳೆದವರ್ಷ ಇವರು ದಾಳಿಂಬೆಯಿಂದ ೮ ಲಕ್ಷ, ದ್ರಾಕ್ಷಿಯಿಂದ ೬.೫ ಲಕ್ಷ ಗಳಿಸಿಯೂ ಆಗಿದೆ. ದ್ರಾಕ್ಷಿಯನ್ನು ಹಣ್ಣಿಗಾಗಿ ಮಾರಾಟ ಮಾಡುತ್ತಾರೆ. ಕಳೆದ ವರ್ಷ ಕಿ.ಗ್ರಾಂ ಗೆ ರೂ. ೯೦ ರಂತೆ ದಾಳಿಂಬೆಯನ್ನು ಮಾರಾಟ ಮಾಡಿದ್ದರು. ನಂತರದಲ್ಲಿ ಹೆಚ್ಚಿನ ಇಳುವರಿ ಬಂದು ಬೆಲೆ ಕುಸಿದ ಕಾರಣ ದಾಳಿಂಬೆಯನ್ನು ಕಿ.ಗ್ರಾಂ ಗೆ ರೂ. ೨೫ ರಂತೆ ಮಾರಿದ್ದೂ ಇದೆ. ಎಲ್ಲವೂ ಅನಿಶ್ಚಿತ, ತೋಟದಲ್ಲಿ ತಾವೇ ಪ್ಯಾಕ್ ಮಾಡುವ ಘಟಕವನ್ನು ಹೊಂದಿದ್ದಾರೆ.೮ ಎಕರೆಯಿಂದ ನಿವ್ವಳ ಆದಾಯ ೨೦-೨೨ ಲಕ್ಷ ರೂಪಾಯಿ ಇದ್ದಾಗಲೂ ಊರ ಮುಂದಿನ ಪಂಚರ್ ಹಾಕುವ ಅಂಗಡಿಯನ್ನೂ ನಿಭಾಯಿಸುತ್ತಿದ್ದು, ಜೊತೆಗೆ ಪ್ರತಿ ದಿನ ಬೆಳಿಗ್ಗೆ ೪ ಗಂಟೆಗೆ ಎದ್ದು ಊರ ಜನರಿಗೆ ಹಾಗೂ ಸುತ್ತಲಿನ ೨೦ ಹಳ್ಳಿಗಳಿಗೆ ದಿನಪತ್ರಿಕೆ ಹಂಚುವುದನ್ನು ಬಿಟ್ಟಿಲ್ಲವೆಂದರೆ ಯಾರೂ ನಂಬಲಿಕ್ಕಿಲ್ಲ. ಇದರಿಂದ ಬರುವ ಆದಾಯ ಪ್ರತಿದಿನ ಕೇವಲ ೧೦೦ರೂಪಾಯಿ ೨ ತಾಸಿನ ಕೆಲಸಕ್ಕೆ, ಆದರೂ ದೊಡ್ಡಸ್ಥನಕ್ಕೆ ಬಿದ್ದಿಲ್ಲ.ದುಡಿಯಬೇಕೆನ್ನುವವರಿಗೆ ಯಾವ ಕೆಲಸವೂ ಸಣ್ಣದೂ ಅಲ್ಲ-ದೊಡ್ಡದೂ ಅಲ್ಲ. ಇಷ್ಟಕ್ಕೆ ಅವರ ಕೃಷಿಯಲ್ಲಿ ದುಡಿಯುವ ಹುಮ್ಮಸ್ಸು ಕಮ್ಮಿಯಾಗಿಲ್ಲಾ. ಮತ್ತೆರಡು ಎಕರೆ ಜಮೀನು ಹಿಡಿದು ಆಪೂಸ್ ಮಾವಿನ ತಳಿಯನ್ನು ಈಗಾಗಲೇ ನೆಟ್ಟಿದ್ದಾರೆ. ಕೃಷಿಯಿಂದ ವಿಮುಖರಾಗಬೇಕೆನ್ನುವವರಿಗೆ ಇವರದೊಂದು ಅನುಕರಣೀಯ ಪಾಠ. ಕೃಷಿಯಲ್ಲಿ ಏನೂ ಇಲ್ಲವೆಂದಲ್ಲಿ ಎಲ್ಲವೂ ಇದೆ, ಮಾಡುವ ಮನಸ್ಸಿದ್ದರೆ, ದುಡಿಯುವ ಛಲವಿದ್ದರೆ, ಒಂದುವರೆ ಇಂಚು ನೀರಿದ್ದರೆ ಬಂಗಾರ ಬೆಳೆಯಬಹುದು.

5

ಎಲ್ಲಿಯ ಸೈಕಲ್ ಪಂಚರ್ ಅಂಗಡಿ, ಎಲ್ಲಿಯ ದಿನಪತ್ರಿಕೆ ಹಂಚುವಿಕೆ, ಎಲ್ಲಿಯ ದಾಳಿಂಬೆ, ದ್ರಾಕ್ಷಿ, ಮಾವಿನ ಬೇಸಾಯ, ಜೊತೆಯಲ್ಲಿ ಕುರಿಗಳು, ೫ ಜವಾರಿ ಆಕಳುಗಳು ಉಂಟು. ಬರವಿರಲಿ, ನೆರೆ ಬರಲಿ ಬಿತ್ತುವುದನವ ಬಿಡುವುದೆ ಇಲ್ಲಾ ಇದು ಬಸವರಾಜನಿಗೆ ಹೇಳಿಮಾಡಿಸಿದ ಮಾತು. ಬಸವರಾಜರವರು ನಿರಂತರವಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಂಪರ್ಕದಲ್ಲಿದ್ದು, ತಜ್ಞರ ಸಲಹೆಗಳನ್ನು ಪಡೆದು ತೋಟಗಾರಿಕೆ ಬೇಸಾಯವನ್ನು ಮಾಡುತ್ತಿದ್ದಾರೆ

ರೈತರ ಸಂಪರ್ಕ ವಿಳಾಸ: ಬಸವರಾಜ್, ೯೯೭೨೭೧೫೧೭೭, ಬಿನ್ ಹಿರೇಬಾಳಪ್ಪ, ಮುರಡಿ ಅಂಚೆ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ-೫೮೩೨೩೭