ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ದಾರಿದೀಪ

ಡೈರಿ ಮುಖ್ಯ ಕಸುಬು, ಕೃಷಿ ಉಪಕಸುಬು

image_
ಕೆ.ಸಿ.ಶಶಿಧರ
1

ನಗರಮುಖಿ ಯುವ ಜನಾಂಗದ ಮಧ್ಯ ವಿಖ್ಯಾತ್ಕುಮಾರ್ ಶೆಟ್ಟಿ ವಿಭಿನ್ನ ಎನಿಸುತ್ತಾರೆ. ಕಂಪ್ಯೂಟರ್ ಸೈನ್ಸ್ ಓದಿ ರಾಜಧಾನಿಯಲ್ಲಿ ಅತ್ಯುತ್ತಮ ನೌಕರಿ, ಪತ್ನಿ ನಂದನಿಶಾ ಅವರು ಸಹ ಎಂ.ಬಿ.ಎ ಮಾಡಿದ್ದಾರೆ. ಹೀಗಿರುವಾಗ ಈ ಯುವಕ ಹಳ್ಳಿಯೆಡೆ ತಿರುಗಿ ನೋಡಿದ್ದು ಅವರ ಸಂಸ್ಕಾರ, ಸಂಸ್ಕೃತಿಗಳಿಗೆ ಹಿಡಿದ ಕನ್ನಡಿ. ಅಪ್ಪ ೨೦ ಎಕರೆ ಜಮೀನು ನೋಡಿಕೊಂಡು ಕುಟುಂಬ ಕಟ್ಟಿದರು. ಓದಿ ಬೆಂಗಳೂರು ನೌಕರಿ ಸೇರಿ ಅಪ್ಪ ಅಮ್ಮಂದಿರನ್ನು ನೋಡಿಕೊಳ್ಳಬೇಕಾದಂತಹ ಸಂದರ್ಭ ಬಂದಾಗ, ಅವರನ್ನು ಬೆಂಗಳೂರಿಗೆ ಬನ್ನಿ ಎನ್ನದೆ, ಅವರನ್ನ ನೋಡಿಕೊಳ್ಳಲು ಬೆಂಗಳೂರಿನ ಬಾಂಧವ್ಯ ಕಳೆದುಕೊಂಡು ಹಳ್ಳಿಗೆ ಮರಳಿದ ಈ ಯುವಕ, ನನ್ನ ಮುಂದಿನ ದಾರಿ ಕೃಷಿಯೇ ಎಂದು ನಿರ್ಧರಿಸಿದ. ಆದರೆ ಎಲ್ಲರಂತೆ ಆಲೋಚಿಸದೆ ವಿಭಿನ್ನ ಚಿಂತನೆ ನಡೆಸಿ, ಕೃಷಿಗೆ ಪೂರಕವಾಗಿ ಹೈನು ಉದ್ಯಮ ಅಲ್ಲ; ಹೈನು ಉದ್ಯಮಕ್ಕೆ ಕೃಷಿ ಪೂರಕ ಆಗುವ ವ್ಯವಸ್ಥೆ ನಿರ್ಮಾಣ ಮಾಡ ಹೊರಟರು. ಕಾರಣ ಹಸುಗಳ ಮೇಲೆ ಬಾಲ್ಯದಿಂದಲೇ ಇದ್ದ ಪ್ರೀತಿ. ಬಹಳಷ್ಟು ಜನ ಹೈನುಗಾರಿಕೆ ಮಾಡಿದರೂ ಜೀವನಕ್ಕೆ ಇದನ್ನು ಮುಖ್ಯ ಉದ್ಯಮವಾಗಿ ನೋಡುವವರು ಕಡಿಮೆ.ನಿರ್ಧಾರ ಡೈರಿಯೆಂದು ಆದ ಮೇಲೆ ಜಮೀನಿನಲ್ಲಿ ಬೋರ್ ತೆಗೆಸಿ ನೀರಿನ ವ್ಯವಸ್ಥೆ ಮಾಡಿದರು. ಹತ್ತಾರು ಡೈರಿ ಸುತ್ತಿ ಬಂದು, ಸ್ವತಃ ಡೈರಿ ವಿನ್ಯಾಸ ಮಾಡಿ ಕಟ್ಟಿದರು. ಇಂದು ೩೨ ಹಸುಗಳಿವೆ, ೧೦ ಮಣಕ/ಕಡ್ಡಗಳಿವೆ. ಯಾವುದೇ ಒಂದು ಸಂದರ್ಭದಲ್ಲಿ ೪-೫ ಕರೆಯದ ಹಸುಗಳಿರುತ್ತವೆ. ಸರಾಸರಿ ನಿತ್ಯ ೩೦೦ ಲೀಟರ್ ಹಾಲನ್ನು, ಹಾಲು ಒಕ್ಕೂಟಕ್ಕೆ ಕೊಡುತ್ತಾರೆ.

3

ಡೈರಿಯಲ್ಲಿ ಈ ದಂಪತಿಗಳನ್ನು ನೋಡಿದರೆ ಇವರು ಐಟಿ ಉದ್ಯೋಗಿಗಳಾಗಿ ಬಂದವರಾ ಎನ್ನುವ ಅನುಮಾನ ಕಾಡುತ್ತದೆ. ಡೈರಿಯ ಎಲ್ಲಾ ಕೆಲಸಗಳನ್ನು ಸ್ವತಃ ಮಾಡುತ್ತಾರೆ. ಡೈರಿಯ ೫೦ ಭಾಗ ಕೆಲಸ ನಾವಿಬ್ಬರೂ ಮಾಡುತ್ತೇವೆ. ಉಳಿದದ್ದು ಕೂಲಿಯವರು ಮಾಡುತ್ತಾರೆ ಎನ್ನುತ್ತಾರೆ.

ಒಂದು ಯಶಸ್ವಿ ಡೈರಿಯಾಗಲು ಮುಖ್ಯವಾದ ಅಂಶಗಳನ್ನು ಅವರ ಹಲವು ಅನುಭವದ ಮಾತುಗಳಲ್ಲಿ ಹೇಳುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ಅಂದ್ರೆ ಪ್ರತಿಯೊಂದು ಹಸುವು ವರ್ಷಕ್ಕೊಂದು ಕರು ಹಾಕಲೇಬೇಕು. ಇದರಲ್ಲಿ ವ್ಯತ್ಯಯ ಗುರುತಿಸಲು ಸಮಯ ವ್ಯರ್ಥ ಮಾಡಬಾರದು ಅನ್ನುತ್ತಾರೆ. ಇವರಂತೂ ಕರು ಹಾಕಿದ ನಂತರ ಮೂರು ತಿಂಗಳಿಗೆ ಗಬ್ಬ ಕಟ್ಟುವಂತೆ ಯೋಜಿಸುತ್ತಾರೆ. ಇದಕ್ಕಿಂತ ಮುಂಚೆ ಬೇಡ ಎನ್ನುವುದು ಇವರ ಸಲಹೆ. ಗಬ್ಬ ನಿಲ್ಲದಿದ್ದರೆ ತಕ್ಷಣ ಪಶುವೈದ್ಯರ ಮೊರೆ ಹೋಗಿ ಸೂಕ್ತ ಚಿಕಿತ್ಸೆ ಮಾಡಿಸುತ್ತಾರೆ. ಕೆಲವೊಮ್ಮೆ ಅಂಡಾಣು ಉತ್ಪತ್ತಿಯಲ್ಲಿ ವ್ಯತ್ಯಾಸ ಆಗುತ್ತೆ. ಆಗ ಹಾರ್ಮೋನ್ ಇಂಜಕ್ಷನ್ ನೀಡಿ ೧೦ ರಿಂದ ೧೨ ದಿನದ ನಂತರ ೪೮ ಗಂಟೆಗಳ ಅಂತರದಲ್ಲಿ ಎರಡು ಬಾರಿ ಕೃತಕ ಗರ್ಭಧಾರಣೆ ಮಾಡುತ್ತಾರೆ. ಇವರು ಹೇಳುವುದನ್ನು ಕೇಳಿ ಏನ್ ಸಾರ್ ನೀವು ಪಶುವೈದ್ಯರಂತೆ ಕಾಣುತ್ತೀರಾ ಅಂದ್ರೆ ಹಾಗೇನಿಲ್ಲ ಸಾರ್ ೫ ವರ್ಷದ ಅನುಭವ. ಇಂದು ಡೈರಿಯ ಬಹುಪಾಲು ಟ್ರೀಟ್ಮೆಂಟ್ ನಾವೇ ಮಾಡುತ್ತೇವೆ. ಮೊದಲೆರಡು ವರ್ಷ ಕಲಿಕೆ ಕಷ್ಟ ಆಯ್ತು. ಈಗ ಎಲ್ಲಾ ಸುಗಮವಾಗಿದೆ ಅಂತಾರೆ

6

ಡೈರಿ ಮಾಡಿದ್ರೆ ಮಕ್ಕಳು ಸಾಕಿದ ರೀತಿ. ಎಲ್ಲೂ ಅಡ್ಡಾಡೋಕೆ ಆಗಲ್ಲಾ ಅಂತಾರೆ. ಅಂದ್ರೆ ಹಾಗೇನಿಲ್ಲ ನಾವು ಪ್ರವಾಸ ಹೋಗ್ತೀವಿ. ಬೇರೆ ಎಲ್ಲಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ತೀವಿ. ಕಾರಣ ನಾವು ಇದನ್ನು ಉದ್ಯಮದ ರೀತಿ ನಡೆಸ್ತಿವಿ. ನಮ್ಮ ಆಳುಗಳು ಎಲ್ಲಾ ನೋಡಿಕೊಳ್ಳುತ್ತಾರೆ. ಅವರಿಗೆ ಪೂರ್ಣ ತರಬೇತಿ ನಾವೇ ನೀಡಿದ್ದೇವೆ. ಮೊದಲು ಎರಡು ವರ್ಷ ಕಷ್ಟ ಆಯಿತು. ಈಗ ಎಲ್ಲಿ ಬೇಕಾದರೂ ಹೋಗುತ್ತೇವೆ. ಎಲ್ಲಾ ಯೋಜನಾ ಬದ್ಧವಾಗಿಯೇ ಮಾಡುತ್ತೇವೆ. ಆದ್ರೆ ಒಂದೆರಡು ಹಸು ಸಾಕೋವ್ರಿಗೆ ಈ ರೀತಿ ತೊಂದರೆ ಇರುತ್ತೆ. ೨೦ಕ್ಕಿಂತ ಕಡಿಮೆ ಸಾಕೋದು ಲಾಭದಾಯಕ ಅಲ್ಲ ಅನ್ನುವುದು ವಿಖ್ಯಾತ್ ಅವರ ಅಭಿಪ್ರಾಯ.ಇವರು ಹಲವಾರು ರೈತರಿಗೆ ದಾರಿದೀಪವಾಗಿದ್ದಾರೆ. ಹೊಸಬರಿಗೆ ನಿಮ್ಮ ಸಲಹೆ ಅಂತ ಕೇಳಿದ್ರೆ ಹಲವಾರು ಉಪಯುಕ್ತ ಮಾಹಿತಿ ಒದಗಿಸುತ್ತಾರೆ. ಮೊದಲು ಎರಡು ವರ್ಷ ಧೃತಿಗೆಡಬಾರದು. ಒಟ್ಟು ಬಂಡವಾಳದಲ್ಲಿ ಪ್ರತಿಶತ ೫೦ರಷ್ಟು ನಮ್ಮದು ಉಳಿದದ್ದು ಸಾಲ. ಆದರೆ ಒಳ್ಳೆದು. ಇಲ್ಲವಾದರೆ ಬ್ಯಾಂಕ್ ಬಡ್ಡಿ ಹೆಚ್ಚು ಆಗುತ್ತೆ. ರಿಪೇಮೆಂಟ್ ಕನಿಷ್ಠ ೭ ವರ್ಷ ನಿಗದಿ ಮಾಡಿಕೊಳ್ಳೋದು ಒಳ್ಳೆಯದು. ಒಂದೆರಡು ಹಸು ಕೊಳ್ಳೋರಿಗೆ ಬೇರೆ ತರಹ. ಆದ್ರೆ, ಡೈರಿ ಉದ್ಯಮ ಅಂತ ಹೇಳಿ ೨೦-೩೦ ಹಸು ಸಾಕೋದಾದ್ರೆ ಬ್ಯಾಂಕ್ ಸಹಕಾರ ಇಲ್ಲ.ಬಡ್ಡಿ ಕಮರ್ಷಿಯಲ್ ಬೆಲೆ. ಇವೆಲ್ಲಾ ಬದಲಾಗಬೇಕಿದೆ.ಪಶುಗಳಿಗೆ ಬೇಕಾಗುವ ಆಹಾರ ವ್ಯವಸ್ಥೆ ಬಹಳ ಚೆನ್ನಾಗಿ ಮಾಡಿಕೊಂಡಿದ್ದಾರೆ. ೮ ಎಕರೆಯಲ್ಲಿ ಮೇವಿನ ಬೆಳೆ ಬೆಳೆದಿದ್ದಾರೆ. ಅo-೩, ಅo-೪ ನೇಪಿಯರ್ಗಳನ್ನು ೪೫ ದಿನಕ್ಕೊಮ್ಮೆ ಕಟಾವು ಮಾಡಿದರೂ ನಿತ್ಯ ಹಸಿರು ಮೇವು ದೊರೆಯುವಂತೆ ಬಿತ್ತನೆ ದಿನಾಂಕಗಳನ್ನು ಹೊಂದಿಸಿಕೊಂಡಿದ್ದಾರೆ(ಸ್ಟ್ಯಾಗರ್ಡ್ ಪ್ಲಾಂಟಿಂಗ್). ಕೆ.ಎಂ.ಎಫ್ನಿಂದ ಪಶು ಆಹಾರ, ಮಿನರಲ್ ಮಿಕ್ಸ್ ಕೊಳ್ಳುತ್ತಾರೆ. ಹಿಂಡಿ, ಜೋಳ ಮಾರುಕಟ್ಟೆಯಿಂದ ಕೊಳ್ಳುತ್ತಾರೆ. ಹಸಿ ಹುಲ್ಲು ಪ್ರಮುಖವಾಗಿದ್ದು, ಅದನ್ನು ತುಂಡರಿಸಿ ಕೊಡುತ್ತಾರೆ. ಇವರು ಬೆಳೆವ ಹಸಿ ಹುಲ್ಲಿಗೆ ಯಾವುದೇ ಗೊಬ್ಬರ ಹೊರಗಿನಿಂದ ತಂದು ಕೊಡುವುದಿಲ್ಲ. ಬದಲಿಗೆ ತಮ್ಮ ಡೈರಿಯ ಸ್ಲರಿಯನ್ನು ಒಂದು ಕಟಾವು ಅವಧಿ(೪೫)ಯಲ್ಲಿ ಎರಡು ಬಾರಿ ಹರಿಸುತ್ತಾರೆ.

8

ಡೈರಿ ಲಾಭದಾಯಕವೆ? ಅಂದ್ರೆ ೨೦ ಹಸು ಸಾಕಿದ್ರೆ ಹಾಲಿನಿಂದ ತಿಂಗಳಿಗೆ ೫೦ ಸಾವಿರ ಬರುತ್ತೆ. ೩೦ ಸಾಕಿದ್ರೆ ಲಕ್ಷ ದಾಟುತ್ತೆ ಅಂತ ಹೆಮ್ಮೆಯಿಂದ ಹೇಳ್ತಾರೆ. ಇದು ಹಾಲಿನ ಆದಾಯ ಮಾತ್ರ. ಟಿಪ್ಪರ್ ಲೋಡ್ ಸಗಣಿಗೆ ೩ರಿಂದ ೪ ಸಾವಿರ ಸಿಗುತ್ತೆ. ಇದನ್ನು ರೈತರು ಕೊಳ್ಳುತ್ತಾರೆ. ಕಾರಣ ಸಗಣಿ ಜೊತೆ ಹುಲ್ಲು, ಸೊಪ್ಪು, ಬೆಡ್ಡಿಂಗ್ ಯಾವುದೂ ಮಿಕ್ಸ್ ಆಗಿರುವುದಿಲ್ಲ. ಅದಕ್ಕೆ ಬಹಳ ಜನ ಕಾಂಪೋಸ್ಟ್ ತಯಾರಿಕೆಗೆ ಇದನ್ನು ಕೊಳ್ಳುತ್ತಾರೆ. ಜೊತೆಗೆ ನನ್ನ ೨೦ ಎಕರೆಗೆ ಬೇಕಾಗುವ ಪೋಷಕಾಂಶಕ್ಕೆ ಮೂಲ ನನ್ನ ಡೈರಿಯೇ. ನೋಡಿ ಈ ರೀತಿ ಪೋಷಕಾಂಶ ನಿರ್ವಹಣೆಯಿಂದ ಒಂದು ಮೆಣಸಿನ ಬಳ್ಳಿ ನಮ್ಮ ತೋಟದಲ್ಲಿ ಸತ್ತಿಲ್ಲ. ಎಲ್ಲಾ ಬೆಳೆಗಳ ಆರೋಗ್ಯಪೂರ್ಣ ಬೆಳವಣಿಗೆ ನೀವು ಗಮನಿಸಬಹುದು ಅಂತಾರೆ ವಿಖ್ಯಾತ್. ಇವರ ನಿರ್ವಹಣೆ, ಕೌಶಲ್ಯ ನೋಡಿದರೆ ನಿಜಕ್ಕೂ ಎಂ.ಬಿ.ಎ ಓದಿದರ ಛಾಪು ಹಾಗೂ ಸಾಫ್ಟ್ವೇರ್ ಲಾಜಿಕ್ಗಳು ಕೃಷಿಗೆ ಅಳವಡಿಸಿ ಹೊಸ ಅನುಭವಗಳನ್ನು ಡೈರಿಗೆ ಕಟ್ಟಿಕೊಟ್ಟಿರುವುದು ಕಾಣಸಿಗುತ್ತದೆ. ಈ ವಾತಾವರಣಕ್ಕೆ ಹಸುಗಳಿಗೆ ದಿನಕ್ಕೆ ನಾಲ್ಕು ಬಾರಿ ಸ್ನಾನ ಮಾಡಿಸುವುದು ಉತ್ತಮ ಎಂದು ಕಂಡುಕೊಂಡಿದ್ದಾರೆ. ಬೆಳಿಗ್ಗೆ ೭.೦೦ ರಿಂದ, ೧೦.೩೦ ಹಾಗೂ ಮಧ್ಯಾಹ್ನ ೧ ಮತ್ತು ಸಂಜೆ ೬ ಗಂಟೆಗೆ ಹಸುಗಳಿಗೆ ಸ್ನಾನ ಮಾಡಿಸುತ್ತಾರೆ. ಅಬ್ಬಾ! ಇವರ ನಿರ್ವಹಣಾ ಕೌಶಲ್ಯ ನೋಡಿಯೇ ತಿಳಿಯಬೇಕು. ಇವರ ಪರಿಪೂರ್ಣ ಮಾರ್ಗದರ್ಶನದಲ್ಲಿ ಹತ್ತಾರು ಡೈರಿಗಳು ಪ್ರಾರಂಭವಾಗಿವೆ. ಡೈರಿ ಉದ್ಯಮದ ಮೇಲೆ ಹಾಲ್ಬೆಳಕು ಚೆಲ್ಲುವ ಇವರ ಕಾರ್ಯದ ಸದುಪಯೋಗ ನೀವು ಪಡೆದುಕೊಳ್ಳಬಹುದು. ಆದರೆ ಕೌತುಕ ತಣಿಸಿಕೊಳ್ಳಲು ಕರೆ ಮಾಡದೆ ಈ ಕಾಯಕ ಕೈಗೊಳ್ಳುವ ಒಲವಿದ್ದಲ್ಲಿ ಇವರಿಗೆ ದೂರವಾಣಿ ಕರೆ ಮಾಡಿ, ಭೇಟಿ ಮಾಡಿ ಇವರೊಬ್ಬ ಸಹೃದಯಿ ಮಾರ್ಗದರ್ಶಿ

101112

ಸಂಪರ್ಕ ವಿಳಾಸ: ವಿಖ್ಯಾತ್ ಕುಮಾರ್ ಶೆಟ್ಟಿ, ೯೯೬೪೫೨೨೦೦೯, ನಂದನಿಶಾ ವಿ. ಶೆಟ್ಟಿ, ವಿಮಲ ಡೈರಿ ಫಾರಂ, ಹೆಗ್ಗುಂಜೆ, ಪೋಸ್ಟ್ ಮಂದಾರ್ತಿ