ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಮಣ್ಣ ಮಡಿಲಲ್ಲಿ

ಬೀಜ ಕುಟುಂಬದ ಯಜಮಾನ

image_
ಕೆ.ಸಿ.ಶಶಿಧರ
1

ಕರ್ನಾಟಕದಲ್ಲಿ ಬೀಜೋತ್ಪಾದನೆ ಮಾಡುವ ಸಾವಿರಾರು ರೈತರಿಗೊಬ್ಬ ಯಜಮಾನನಿದ್ದಾನೆ. ಆ ಯಜಮಾನ ಬೀಜೋತ್ಪಾದನೆ ಮಾಡಿ ದೇಶಕ್ಕೆ ಉತ್ತಮ ಬೀಜ ನೀಡಿ, ಆ ಮೂಲಕ ದೇಶದ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಬೇಕೆನ್ನುವ, ರೈತರನ್ನೆಲ್ಲಾ ಒಗ್ಗೂಡಿಸುತ್ತಾನೆ. ಉತ್ತಮ ಬೀಜ ಉತ್ಪಾದಿಸುವ ವಿಧಿ ವಿಧಾನಗಳನ್ನು ರೈತರಿಗೆಲ್ಲಾ ತಿಳಿ ಹೇಳುತ್ತಾನೆ. ಹೊಸಬರಿಗೆ ಈ ಕಾರ್ಯಕ್ಕೆ ಇಳಿಯಲು ಪ್ರೋತ್ಸಾಹಿಸುತ್ತಾನೆ. ಬೀಜ ಬೆಳೆಯುವ ರೈತರ ಮಧ್ಯ ಬಾಂಧವ್ಯ ಬೆಳೆಸಿ ಅವರಿಗೆ ಬೆಂಬಲವಾಗಿ ನಿಲ್ಲುತ್ತಾನೆ. ಈ ಕಾರ್ಯ ಮಾಡುವುದರಲ್ಲಿ ದೇಶದಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಈ ಯಜಮಾನ ಯಾರು? ಈ ಬಗ್ಗೆ ಪ್ರಶ್ನಿಸುವಂತಿಲ್ಲ ಕಾರಣ, ಆ ಯಜಮಾನ ಪ್ರಶ್ನಾತೀತ. ಆ ಯಜಮಾನನ ಸ್ಥಾನ ಅಲಂಕರಿಸಿರುವುದು ನಮ್ಮ ರಾಜ್ಯದ ಹೆಮ್ಮೆಯ ಧಾರವಾಡ ಕೃಷಿ ವಿಶ್ವವಿದ್ಯಾಲಯ. ರೈತರ ಸಹಭಾಗಿತ್ವದಲ್ಲಿ ಬೀಜೋತ್ಪಾದನೆ ಕೈಗೊಂಡಿರುವ ವಿಶ್ವವಿದ್ಯಾಲಯವು ಕೇವಲ ಕೆಲವು ನೂರು ರೈತರಿಂದ ಬೀಜೋತ್ಪಾದನೆ ಪ್ರಾರಂಭಿಸಿ ಇಂದು ತನ್ನ ಕುಟುಂಬದಲ್ಲಿ ಸಾವಿರಕ್ಕೂ ಮಿಗಿಲಾಗಿ ಸದಸ್ಯರನ್ನು ಒಳಗೊಂಡಿದೆ. ೨೦೧೨-೧೩ರಲ್ಲಿ ಅತಿ ಹೆಚ್ಚು ರೈತರನ್ನು ತೊಡಗಿಸಿಕೊಂಡು ದೇಶದ ಅಗ್ರಗಣ್ಯ ಬೀಜೋತ್ಪಾದಕ ಸಂಸ್ಥೆಯಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಪ್ರಶಸ್ತಿಯನ್ನು ೨೦೧೩-೧೪ರಲ್ಲಿ ತನ್ನ ಮುಡಿಗೇರಿಸಿಕೊಂಡಿದೆ. ಕಳೆದೆರಡು ವರ್ಷಗಳ ಸತತ ಬರಗಾಲದಿಂದ ಉತ್ಪಾದನೆ ಕಡಿಮೆಯಾಗಿದೆ. ಆದರೂ ದೇಶದ ಅಗ್ರಗಣ್ಯ ಸ್ಥಾನವನ್ನು ಬ್ರೀಡರ್ ಸೀಡ್ ಕ್ಷೇತ್ರದಲ್ಲಿ ಕಾಯ್ದುಕೊಂಡಿದೆ. ಸೋಯಾ ಬ್ರೀಡರ್ ಸೀಡ್ ಅನ್ನು ಮಧ್ಯ ಪ್ರದೇಶಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಳಿಸುತ್ತಿದೆ. ನಮ್ಮ ರಾಜ್ಯದ ಈ ಬೀಜ ಕುಟುಂಬ ಉತ್ಪಾದಿಸಿದ ಬೀಜ ದೇಶಾದ್ಯಂತ ವ್ಯಾಪಿಸಿದೆ

3

ಅಬ್ಬಾ! ಇಷ್ಟೊಂದು ವಿಷಯ ಕೇಳಿದ ಮೇಲೆ ಇಂದಿನ ವಿಶೇಷಾಧಿಕಾರಿಗಳಾದ ಡಾ. ಎಸ್.ಎಲ್. ಮಡಿವಾಳರಿಗೆ ಒಂದು ಪ್ರಶ್ನೆ ಕೇಳಿದೆ. ಉತ್ತಮ ಬೀಜ ಒದಗಿಸುವಲ್ಲಿ ಖಾಸಗಿ ಕಂಪನಿಗಳೇ ಮುಂದೆ ವಿಶ್ವವಿದ್ಯಾಲಯಗಳ ಸಾಧನೆ ಗೌಣ ಅನ್ನುವರಲ್ಲ, ಇದಕ್ಕೆ ಹೊರತಾಗಿದೆಯೇ ನಿಮ್ಮ ಕೇಂದ್ರ?

5

ಸಾರ್ ಪ್ರೈವೇಟ್ನವರು ದುಡ್ಡಿರುವ ಬೆಳೆ, ಗಾತ್ರದಲ್ಲಿ ಕಡಿಮೆ - ಬೆಲೆ ಹೆಚ್ಚಿರುವ ಬೆಳೆಗಳಿಗೆ ಆದ್ಯತೆ ನೀಡುತ್ತಾರೆ. ಅವರು ಶೇಂಗಾ, ಸೋಯಾಬೀನ್ ಇಂತಹ ಬೆಳೆ, ತಳಿಗಳಿಗೆ ಕೈ ಹಾಕುವುದಿಲ್ಲ. ಅಲ್ಲಿ ಲಾಭ ಇದೆ ಆದ್ರೆ ಪ್ರಮಾಣ ಕಡಿಮೆ. ಈ ಬೆಳೆಗಳಿಗೆ ೧ ಕ್ಕೆ ೧.೫ ಯಿಂದ ೨ರಷ್ಟು ಹಣ ಬಂದ್ರೆ ಅವರು ಬೀಜೋತ್ಪಾದನೆ ಕೈಗೊಳ್ಳುವ ಬೆಳೆಗಳಿಗೆ ೧ ಕ್ಕೆ ೫ರಿಂದ ೧೦ ಪಾಲು ಲಾಭ ವಿರುತ್ತದೆ. ತಳಿಯ ಬೀಜಗಳನ್ನು ೨-೩ ವರ್ಷ ಬಳಸಬಹುದು. ಅದೇ ಹೈಬ್ರೀಡ್ ಆದರೆ ಒಮ್ಮೆ ಮಾತ್ರ ಬಳಸಬಹುದು. ಆದ್ದರಿಂದ ಖಾಸಗಿಯವರು ಹೈಬ್ರೀಡ್ ಬೀಜಕ್ಕೆ ಆದ್ಯತೆ ನೀಡುತ್ತಾರೆ ಅಂತ ವಿವರಿಸಿದರು. ಈ ಬೀಜ ಕುಟುಂಬದಿಂದ ದೇಶದ ಸಹಸ್ರಾರು ಬೆಳೆಗಾರರ ಇಳುವರಿ ಪ್ರತಿಶತ ೧೫ರಿಂದ ೨೦ ರಷ್ಟು ಹೆಚ್ಚಾಗಿದೆ. ಹೀಗೆ ಕೇವಲ ಬೀಜ ಬೆಳೆಗಾರರಿಗೆ ಮಾತ್ರವಲ್ಲದೆ ಸಾಮಾನ್ಯ ಬೆಳೆಗಾರರಿಗೂ ಈ ಕುಟುಂಬದ ನೆರವು ಸಿಕ್ಕಿದೆ. ದೇಶದ ಆಹಾರ ಉತ್ಪಾದನೆಗೂ ಬೆಂಬಲ ಒದಗಿಸುತ್ತಿದೆ. ಬೀಜ ಕುಟುಂಬದ ವ್ಯವಸ್ಥೆಯಲ್ಲಿ ಹೊಸ ತಳಿಗಳು ರೈತರಿಗೆ ತಲುಪಲು ಬಹಳ ಸಹಕಾರಿ ಎಂಬುದು ಡಾ. ಮಡಿವಾಳರ್ರವರ ಅಭಿಮತ.ಇಂತಹ ಬಹುದೊಡ್ಡ ವ್ಯವಸ್ಥೆ ಒಂದು ಖಾಸಗಿ ಕಂಪೆನಿ ತರ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಡಿವಾಳರ್ ಅವರ ನೇತೃತ್ವದಲ್ಲಿ ೭ ಜನ ವಿಜ್ಞಾನಿಗಳು ಹಾಗೂ ೧೧ ಮಂದಿ ಸಿಬ್ಬಂದಿ ಇರುವ ಈ ಕೇಂದ್ರ ನೂರಾರು ಜನರಿಗೆ ಉದ್ಯೋಗ ಒದಗಿಸಿದೆ. ಎಲ್ಲಾ ಕೂಲಿ ಕಾರ್ಮಿಕರು, ಮೇಲ್ವಿಚಾರಕರ ಹಾಗೂ ಇತರೆ ಗುತ್ತಿಗೆ ಕಾರ್ಮಿಕರ ವೇತನ ಈ ಕೇಂದ್ರವೇ ನೀಡುತ್ತಿದೆ.ಈ ಕೇಂದ್ರದ ವೈಶಿಷ್ಟ್ಯ ಎಂದರೆ ಇದು ವಿಶ್ವವಿದ್ಯಾಲಯದಿಂದ ಹಣಕಾಸು ನೆರವನ್ನು ಪಡೆದುಕೊಳ್ಳುವುದಿಲ್ಲ. ಬದಲಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಣ ಒದಗಿಸುತ್ತದೆ. ಇದು ಈ ಕೇಂದ್ರದ ಸಾಧನೆಗೆ ಹಿಡಿದ ಕೈಗನ್ನಡಿ. ಅಯ್ಯೋ! ಬರಿ ಕೇಂದ್ರ ಲಾಭ ಗಳಿಸಿದರಾಯಿತೆ ಈ ಕುಟುಂಬದ ಸದಸ್ಯರು? ಈ ಪ್ರಶ್ನೆಗೆ ಉತ್ತರ ಅರಸಿ ಹಲವು ಸದಸ್ಯರನ್ನು ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಪಡೆಯಲಾಯಿತು

7

ಧಾರವಾಡದ ಹೊಸಎಲ್ಲಾಪುರ, ಹೊಸ ಓಣಿಯಲ್ಲಿರುವ ಧರಣೇಂದ್ರ ನ್ಯಾಮಣ್ಣವರ್(೯೮೮೦೧೪೪೦೮೪) ಇವರ ಹೊಲಕ್ಕೆ ಹೋಗುತ್ತಿದ್ದಂತೆ ಆತ್ಮೀಯವಾಗಿ ಬರಮಾಡಿಕೊಂಡರು. ಸರ್ರಾ ವಿಶ್ವವಿದ್ಯಾಲಯದ ಕಡಿಂದ ಬಂದಿರಿ ಅಂದ್ರೆ ನಾವೆಲ್ಲಾ ಕೆಲಸ ಬಿಟ್ಟು ಕಾಯುತಿವಿ ಸರಾ, ಅವ್ರು ಅಷ್ಟು ಸಹಕಾರ ನಿಡ್ಯಾರ್ರಿ, ಹಾಗೆ ಬಂದಾಗೊಮ್ಮೆ ಏನಾರಾ ಒಂದ ಸಲಹೆ ಒಗೆದೆ ಹೊಕ್ತಾರಿ. ಅಂತ ಹೇಳ್ತಿದಂಗೆ ನಮ್ಮ ಜೊತೆ ಬಂದಿದ್ದ ಕ್ಷೇತ್ರ ಸಹಾಯಕ ಮಂಜುನಾಥ್ ಕಲಾಲ್ ನ್ಯಾಮಣ್ಣ ನೋಡಿಲ್ಲಿ ಈ ಎತ್ರ ಬಂದ ಗಿಡ ಕೀಳ್ ಅಂತ ಹೇಳಿನಲ್ಲೂ ಮಾರಾಯಾ ಇವತ್ತೆ ಕೆಲಸ ಮಾಡು ಅಂದ್ರು. ಧರಣೇಂದ್ರ ಅವರು ಕಳೆದ ೧೦ ವರ್ಷದಿಂದ ಬೀಜ ಕುಟುಂಬದ ಸದಸ್ಯ. ಈ ಸಾಲಿನಲ್ಲಿ ೧೦ ಎಕರೆ ಸೋಯಾ ಬ್ರೀಡರ್ ಸೀಡ್, ೧೦ ಎಕರೆ ಫೌಂಡೇಶನ್ ಸೀಡ್ ಬೆಳಿತಿದ್ದಾರೆ. ಇವರಿಗೆ ವಿಶ್ವವಿದ್ಯಾಲಯ ಮಾರುಕಟ್ಟೆ ಬೆಲೆಗಿಂತ ಪ್ರತಿಶತ ೧೫ರಷ್ಟು ಹೆಚ್ಚುವರಿ ಬೆಲೆ ನೀಡುತ್ತಂತೆ. ಮಾರುಕಟ್ಟೆ ಬೆಲೆ ಏರಿಳಿತ ಇರುತ್ತೆ. ಆದರೆ ಇಲ್ಲಿ ನಿಗದಿತ ಬೆಲೆ ಸಿಗುತ್ತೆ. ಅದು ನಮಗೆ ಲಾಭ. ಸಾದ ಬೆಳೆ ಮಾಡುವುದಕ್ಕಿಂತ ಬೀಜ ಬೆಳೆದರೆ ಕ್ವಿಂಟಾಲ್ಗೆ ೫೦೦ ರಿಂದ ೬೦೦ ರೂ. ಜಾಸ್ತಿ ಸಿಗುತ್ತೆ. ಧರಣೇಂದ್ರ ಅವರು ಯಾವ ಬೆಳೆ ಬೆಳೆದ್ರೂ ಕೆಲಸ ಮಾಡದು ಇದ್ದದ್ದೇರೀ, ಬೀಜ ಬೆಳೆದಾಗ ಹೆಚ್ಚಿನ ಕಾಳಜಿ ಬೇಕ್ರೀ, ಸ್ವಲ್ಪ ಕೆಲಸ ಹೆಚ್ಚೇರೀ, ಯುನಿವರ್ಸಿಟಿಯವರು ಎಲ್ಲಾ ಹೇಳಿಕೊಡ್ತಾರ್ರಿ, ಒಟ್ಟಿಗೆ ನಮಗೆ ಪಾಯದೆ ಐತ್ರಿ ಅಂತಾರೆ

ಬ್ರೀಡರ್ ಸೀಡ್ಗೆ ಕೇಂದ್ರ ಸರ್ಕಾರ ಇತರೆ ಬೀಜಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸುವ ಗುರಿಗೆ ಅನುಸಾರ ವಾರ್ಷಿಕ ಬೀಜ ಬೆಳೆಯುವ ಯೋಜನೆ ಸಿದ್ಧವಾಗುತ್ತದೆ. ನಂತರ ಸಂಪರ್ಕ ರೈತರ ನೆರವಿನೊಂದಿಗೆ ಉತ್ಪಾದಿಸಿ ಮಾರಾಟ ಮಾಡಲಾಗುತ್ತದೆ. ಧಾರವಾಡದ ಕೃಷಿಮೇಳದ ಯಶಸ್ಸಿನ ಸಿಂಹಪಾಲು ಬೀಜಕೇಂದ್ರಕ್ಕೆ ಸೇರಬೇಕು. ಬೀಜ ಕೊಳ್ಳಲೆಂದೇ ಬಹುಪಾಲು ರೈತರು ಮೇಳಕ್ಕೆ ಆಗಮಿಸುತ್ತಾರೆ. ಇದರ ಜೊತೆ ಇತ್ತೀಚೆಗೆ ಬೀಜ ಮೇಳ ಸಹ ಆಯೋಜಿಸಲಾಗುತ್ತಿದೆ. ಈ ಬೀಜದ ಯಜಮಾನನ ಯಶಸ್ಸು ಇನ್ನಿತರರಿಗೆ ಮಾದರಿ

10

ಜೈ ಜವಾನ್ - ಜೈ ಕಿಸಾನ್: ಧಾರವಾಡ ಕೃಷಿ ವಿಶ್ವವಿದ್ಯಾಲಯ ೧೯೯೬ರಲ್ಲಿ ಬೀಜೋತ್ಪಾದನೆಗೆಂದು ವಿಶೇಷ ಕೇಂದ್ರ ಸ್ಥಾಪಿಸಿ ಅದಕ್ಕೆ ವಿಶ್ವವಿದ್ಯಾಲಯ ಮಟ್ಟದ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಿ ಗುಣಮಟ್ಟದ ಬೀಜ ಒದಗಿಸಲು ಸಂಕಲ್ಪ ಮಾಡಿತು. ಇದು ಚಿಂತಕ ಪದ್ಮಭೂಷಣ ಡಾ. ಎಂ. ಮಹದೇವಪ್ಪನವರ ಕನಸಿನ ಕೂಸು. ಈ ಕೂಸನ್ನು ಮುಂಬಂದ ಎಲ್ಲಾ ಕುಲಪತಿಗಳು ಚೆನ್ನಾಗಿ ಪೋಷಿಸಿದರು. ಇಂದಿನ ಕುಲಪತಿಗಳಾದ ಡಾ. ಡಿ.ಪಿ.ಬಿರಾದಾರ್ ಅವರು ಇನ್ನೊಂದು ಹೊಸ ಹೆಜ್ಜೆ ಇಟ್ಟು ಜೈ ಜವಾನ್-ಜೈ ಜೈ ಕಿಸಾನ್ ಎಂಬ ವಿನೂತನ ಕಾರ್ಯ ಯೋಜಿಸಿದ್ದಾರೆ

12

ದೇಶ ಸೇವೆ ಮಾಡಿ ನಿವೃತ್ತರಾದ ಯೋಧರನ್ನು ಬೀಜೋತ್ಪಾದನೆಯ ಮೂಲಕ ಮತ್ತೊಮ್ಮೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಲ್ಪಿಸಿ ಕೊಡಲಿದೆ ಈ ಯೋಜನೆ. ಮಾಜಿ ಯೋಧರು ಬೀಜೋತ್ಪಾದನೆ ತೆಗೆದುಕೊಳ್ಳಲು ಇಚ್ಛಿಸಿದರೆ ಅವರಿಗೆ ವಿಶ್ವವಿದ್ಯಾಲಯ ವಿಶೇಷ ನೆರವು ಒದಗಿಸಲಿದೆ. ಬೀಜೋತ್ಪಾದನೆಯಲ್ಲಿ ಸೇವಾ ನಿಷ್ಠತೆ, ಕಾರ್ಯತತ್ಪರತೆಗಳು ಬಹಳ ಮುಖ್ಯವಾಗಿದ್ದು, ಇವು ಯೋಧರ ಅವಿಭಾಜ್ಯ ವಿಷಯಗಳಾದ್ದರಿಂದ ಬೀಜೋತ್ಪಾದನೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗುತ್ತದೆ ಎನ್ನುವ ಆಶಯ ಹೊತ್ತು ಯೋಜನೆ ರೂಪಿಸಲಾಗಿದೆ. ಹೀಗೆ ಪ್ರತಿಯೊಬ್ಬ ಕುಲಪತಿಗಳು, ಬೀಜ ವಿಭಾಗದ ವಿಶೇಷ ಅಧಿಕಾರಿಗಳ ಶ್ರಮದಿಂದಾಗಿ ಈ ಕೇಂದ್ರ, ದೇಶದಲ್ಲಿಯೇ ಅತ್ಯುತ್ತಮ ಬೀಜೋತ್ಪಾದನಾ ಕೇಂದ್ರವಾಗಿದೆ.