ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಚಿಂತನೆ

ಅರಣ್ಯ, ಮೋಡ ಮತ್ತು ಮಳೆ

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಅರಣ್ಯ ಮತ್ತು ಮೋಡ: ಭೂಮಿಯ ಮೇಲೆ ಸದಾ ಚಾಲನೆಯಲ್ಲಿರುವ ಜಲಚಕ್ರದಲ್ಲಿ ಅರಣ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅರಣ್ಯಗಳು ವಾತಾವರಣದ ತಾಪಮಾನ ಮತ್ತು ಬೀಸುವ ಗಾಳಿಯ ವೇಗಕ್ಕೆ ತಕ್ಕಂತೆ ಅಪಾರ ಪ್ರಮಾಣದ ನೀರನ್ನು ಬಾಷ್ಪ ವಿಸರ್ಜನೆಯ ಮೂಲಕ ವಾತಾವರಣಕ್ಕೆ ಸೇರಿಸುತ್ತಿರುತ್ತವೆ. ಜೊತೆಯಲ್ಲಿ ತೆರೆದ ಜಲಾಶಯಗಳಿಂದ ಹಾಗೂ ಸಮುದ್ರ ಪ್ರದೇಶದಿಂದಲೂ ಸಹ ನೀರು ಆವಿಯ ರೂಪದಲ್ಲಿ ವಾತಾವರಣವನ್ನು ಸೇರಿಕೊಂಡು ಗಾಳಿಯಲ್ಲಿನ ತೇವಾಂಶವು ಹೆಚ್ಚಾಗುವಂತೆ ಮಾಡುತ್ತವೆ. ಇದರಿಂದ ಹಗುರಗೊಂಡ ಗಾಳಿಯು ಮೇಲಕ್ಕೇರಿದಂತೆಲ್ಲಾ ವಿಕಸನಗೊಂಡು ಹಾಗೂ ಮೇಲಿನ ತಂಪು ವಾತಾವರಣಕ್ಕೆ ತೆರೆದುಕೊಂಡು ವೇಗವಾಗಿ ತಂಪುಗೊಂಡು ನೀರಾವಿಯು ದ್ರವೀಕರಣಗೊಂಡು ಅತಿ ಸೂಕ್ಷ್ಮ ನೀರಿನ ಕಣಗಳ ಉಂಟಾಗುವುದರಿಂದ ಮೋಡಗಳ ರಚನೆಯಾಗುತ್ತದೆ. ಘಟ್ಟ ಪ್ರದೇಶಗಳಲ್ಲಿ ಈ ಮೋಡಗಳ ಚಲನೆಗೆ ಅಡಚಣೆಯಾಗುವುದರಿಂದ ಅವುಗಳು ಮತ್ತಷ್ಟು ಮೇಲೇರಿ ಅತಿ ಶೀತಗೊಂಡು ಘಟ್ಟದ ಪಶ್ಚಿಮ ಭಾಗದಲ್ಲಿ ಹೇರಳ ಮಳೆಯನ್ನು ಸುರಿಸುತ್ತವೆ. ಈ ಹೇರಳ ಮಳೆ ಮತ್ತು ದುರ್ಗಮ ಬೆಟ್ಟಗಳಲ್ಲಿ ಮಾನವನ ಚಟುವಟಿಕೆಗಳು ಕಡಿಮೆ ಇದ್ದುದರಿಂದ ಕಾಲಾನುಕಾಲಕ್ಕೆ ಇಲ್ಲಿ ಅತಿ ದಟ್ಟವಾದ ದುರ್ಗಮ ಕಾಡುಗಳು ಬೆಳೆದು ನಿಂತಿವೆ. ಆದರೆ, ಈಚಿನ ವರ್ಷಗಳಲ್ಲಿ ಈ ಅರಣ್ಯದಲ್ಲಿ ಮಾನವನ ಕೈವಾಡವು ಅಧಿಕವಾಗಿರುವುದರಿಂದ ಅರಣ್ಯವು ನಾಶವಾಗುತ್ತಿದೆ. ಜೊತೆಯಲ್ಲಿ ಅಪರೂಪದ ಜೀವಿಗಳನ್ನೊಳಗೊಂಡ ಈ ವಿಶ್ವ ಮಾನ್ಯ ಸಂರಕ್ಷಿತ ಪ್ರದೇಶಗಳಲ್ಲಿ ಜೈವಿಕ ವೈವಿಧ್ಯತೆಯ ನಾಶವೂ ಸಹ ಅವ್ಯಾಹತವಾಗಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಹಲವಾರು ದೇಶಗಳಲ್ಲಿ ನಡೆಯುತ್ತಿರುವ ಈ ಅರಣ್ಯ ನಾಶ ಹಾಗೂ ಇತರೆ ಅನೇಕ ಆಧುನಿಕ ಜೀವನ ಶೈಲಿಯ ಕಾರಣಗಳಿಂದ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಮತ್ತಿತರೆ ಹಸಿರು ಮನೆ ಅನಿಲಗಳ ಪ್ರಮಾಣವು ಒಂದೇ ಸಮನೆ ಏರುತ್ತಿದ್ದು ಈಗಾಗಲೇ ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಬಹು ಅನಿರೀಕ್ಷಿತವಾಗಿ ಪದೇ ಪದೇ ಒಂದೇ ಸಮನೆ ಹಲವಾರು ವರ್ಷಗಳ ಬರಗಾಲವನ್ನು ಅನುಭವಿಸುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ಅರಣ್ಯೀಕರಣದಿಂದ ಸ್ವಲ್ಪ ಮಟ್ಟಿಗಾದರೂ ಮಳೆಯ ಪ್ರಮಾಣವನ್ನು ಹೆಚ್ಚಿಸುವತ್ತ ಪ್ರಯತ್ನಗಳನ್ನು ಮಾಡಬೇಕಾದ ಅವಶ್ಯಕತೆ ಇದೆ

ಮಳೆಯಿಂದ ಅರಣ್ಯವೋ, ಅರಣ್ಯದಿಂದ ಮಳೆಯೋ? ಮಳೆ ಮತ್ತು ಅರಣ್ಯದ ನಡುವೆ ಗಾಢವಾದ ಸಂಬಂಧವನ್ನು ಕಲ್ಪಿಸಲಾಗಿದೆಯಾದರೂ, ಅರಣ್ಯದಿಂದ ಮಳೆಯೋ, ಮಳೆಯಿಂದ ಅರಣ್ಯವೋ ಎನ್ನುವ ಒಂದು ಜಿಜ್ಞಾಸೆ ನಡೆದೇ ಇದೆ. ಮಾನ್ಸೂನ್ ಮಾರುತ ಅನೇಕ ಜಾಗತಿಕ ಹವಾಮಾನ ಪ್ರಕ್ರಿಯೆಗಳನ್ನವಲಂಬಿಸಿದೆ. ಚಂಡಮಾರುತಗಳೂ ಸಹ ದೊಡ್ಡ ಪ್ರಮಾಣದಲ್ಲಿ ರಚನೆಯಾಗುವಂತಹವುಗಳು. ಈ ಸಂದರ್ಭಗಳಲ್ಲಿ ರಚನೆಯಾಗುವ ಮೋಡಗಳ ಮೇಲೆ ಅರಣ್ಯಗಳ ಪ್ರಭಾವವು ಕಡಿಮೆಯೆಂದೇ ಹೇಳಬೇಕು. ಆದರೂ ಕೆಲವು ವರ್ಷಗಳಲ್ಲಿ ಮಾನ್ಸೂನ್ ದುರ್ಬಲವಿದ್ದಾಗ, ಕೇವಲ ತೆಳು ಮೋಡಗಳು ಚಲಿಸುತ್ತಿರುವಾಗ, ಅರಣ್ಯಗಳು ಅವುಗಳ ಚಲನೆಯ ವೇಗವನ್ನು ತಗ್ಗಿಸಿ, ಮೋಡಗಳಿಗೆ ಇನ್ನಷ್ಟು ತೇವಾಂಶವನ್ನು ತುಂಬಿ, ಮೋಡಗಳು ಮತ್ತಷ್ಟು ಹಗುರವಾಗಿ ಮೇಲೇರುವಂತೆ ಹಾಗೂ ಮೋಡಗಳಲ್ಲಿ ತುಮುಲಭರಿತ ಲಂಬ ಚಲನೆಯು ಅಧಿಕವಾಗುವಂತೆ ಮಾಡುವುದರ ಮೂಲಕ ಅಧಿಕ ಮಳೆಯನ್ನು ಸುರಿಸುವಂತೆ ಮಾಡುತ್ತವೆ. ಅದೇ ರೀತಿ ಮಾನ್ಸೂನ್ ಮಾರುತಗಳ ಪರಿಣಾಮವಿಲ್ಲದ ಮುಂಗಾರು ಪೂರ್ವ ಬೇಸಿಗೆ ಮಳೆಗಳು ಸುರಿಯಲು ಅರಣ್ಯಗಳು ತುಂಬಾ ಸಹಕಾರಿಯಾಗಿವೆ. ಆದ್ದರಿಂದ, ಅಧಿಕ ಮಳೆಯಿಂದ ದಟ್ಟ ಅರಣ್ಯ ಎನ್ನುವುದನ್ನು ಒಪ್ಪಲೇ ಬೇಕಾದರೂ, ಅರಣ್ಯದಿಂದ ಮಳೆ ಉಂಟಾಗುವುದನ್ನೂ ಸಹ ಒಪ್ಪಲೇ ಬೇಕು. ಆದರೂ, ಅರಣ್ಯ ಪ್ರದೇಶವು ದಟ್ಟವಾಗಿರುವ ಎಲ್ಲಾ ಪ್ರದೇಶಗಳಲ್ಲಿ ಒಂದೇ ಸಮನಾದ ಮಳೆ ಬಾರದಿರುವುದು ಹಾಗೂ, ದಟ್ಟವಾದ ಅರಣ್ಯ ಪ್ರದೇಶಗಳಲ್ಲಿಯೂ ಕೆಲವು ವರ್ಷಗಳಲ್ಲಿ ಮಳೆಯ ತೀವ್ರ ಕೊರತೆಯಾಗುವುದು ಮಳೆ ಬೀಳುವುದಕ್ಕೆ ಅರಣ್ಯದ ದಟ್ಟಣೆಯನ್ನೂ ಮೀರಿದ ಇತರೆ ಸಂಗತಿಗಳಿವೆಯೆನ್ನುವುದನ್ನು ದೃಢೀಕರಿಸುತ್ತದೆ. ಏನೇ ಆದರೂ, ದಟ್ಟ ಅರಣ್ಯಗಳು ಹಾಗೂ ತೆರೆದ ಮೇಲ್ಮೈನ ವಿಶಾಲ ಜಲಾಶಯಗಳು ಮಳೆ ಸುರಿಸಲು ಸಹಕರಿಸುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಡ

ಅರಣ್ಯಕ್ಕೆ ಪರ್ಯಾಯವಿಲ್ಲ: ಇಲ್ಲಿ ಮಳೆ ಮೊದಲೋ, ಅರಣ್ಯ ಮೊದಲೋ ಎನ್ನುವ ಜಿಜ್ಞಾಸೆ ಅಥವಾ ವಿತಂಡ ವಾದಕ್ಕಿಂತ, ಈಗಾಗಲೇ ಇರುವ ಅರಣ್ಯಗಳಿಂದ ಉತ್ತಮ ಮಳೆ ಹಾಗೂ ಇತರೆ ಅನೇಕ ಲಾಭಗಳನ್ನು ಪಡೆಯಬಹುದು ಎನ್ನುವುದನ್ನು ನಂಬಿ, ಉತ್ತಮ ಪರಿಸರಕ್ಕೆ, ಮನುಕುಲದ ಭವಿಷ್ಯಕ್ಕೆ ಅನೇಕ ದೃಷ್ಟಿಯಿಂದ ಉಪಯುಕ್ತವಾಗಿರುವ ಅರಣ್ಯವನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಕಡೆಗೆ ನಮ್ಮ ಗಮನವನ್ನು ನೀಡಬೇಕಾದ ತುರ್ತು ಅವಶ್ಯಕತೆ ಇದೆ. ಕೃಷಿ ಪ್ರದೇಶದ ವಿಸ್ತರಣೆಯು ಅರಣ್ಯ ನಾಶಕ್ಕೆ ಒಂದು ಮುಖ್ಯ ಕಾರಣವಾಗಿರುವುದರಿಂದ ಆ ರೀತಿಯಲ್ಲಿ ಅರಣ್ಯ ಒತ್ತುವರಿ ಮಾಡಿ ಕೃಷಿ ಮಾಡುವಾಗ ಕಡ್ಡಾಯವಾಗಿ ಸಾಮಾಜಿಕ ಅರಣ್ಯ ಅಥವಾ ಕೃಷಿ ಅರಣ್ಯಕ್ಕೆ ಕನಿಷ್ಠ ಅರ್ಧ ಭಾಗ ಜಮೀನನ್ನು ಮೀಸಲಿರಿಸುವ ನಿರ್ಣಯಗಳನ್ನು ಕೈಗೊಳ್ಳಬೇಕು. ಈ ರೀತಿ ಕೃಷಿ ಅರಣ್ಯವನ್ನು ಕಡ್ಡಾಯ ಮಾಡುವಾಗ ರೈತನಿಗೂ ಉಪಯುಕ್ತವಾಗುವ, ಪ್ರತಿ ವರ್ಷವೂ ನಿಗದಿತ ಆದಾಯ ತರುವ ಮಾವು, ಹಲಸು, ಸಪೋಟಾ, ಜಾಯಿಕಾಯಿ, ಹುಣಿಸೆ, ಬೇವು, ಹೊಂಗೆ, ಹಿಪ್ಪಲಿ, ರಬ್ಬರ್, ಜಟ್ರೋಪಾ ಮೊದಲಾದ ಬಹುವಾರ್ಷಿಕ ಬೆಳೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಜೊತೆಯಲ್ಲಿ ಹತ್ತಾರು ವರ್ಷಗಳಿಗೊಮ್ಮೆ ಕಟಾವು ಮಾಡಬಹುದಾದ ತೇಗ, ಮತ್ತಿ, ಶ್ರೀಗಂಧ, ಅಕೇಶಿಯಾ, ಮುಂತಾದ ಮರಗಳು ರೈತನ ಕುಟುಂಬದಲ್ಲಿ ಆಗಾಗ್ಗೆ ಬರಬಹುದಾದ ಸಾಂಧರ್ಭಿಕ ಖರ್ಚುಗಳನ್ನು ಸರಿದೂಗಿಸಲು ಸಹಕಾರಿಯಾಗುತ್ತವೆ

ಈ ಸಂದರ್ಭದಲ್ಲಿ ಅಕೇಶಿಯಾ ಸಸ್ಯದ ಬಗ್ಗೆ ವಿಶೇಷವಾದ ಒಂದು ಮಾತನ್ನು ಹೇಳಲೇ ಬೇಕು. ಜನ ಸಾಮಾನ್ಯರು ತಿಳಿದಿರುವಂತೆ ಅಕೇಶಿಯಾ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಸಸ್ಯವಲ್ಲ. ಇದು ವಾತಾವರಣದಲ್ಲಿನ ಸಾರಜನಕವನ್ನು ಸ್ಥಿರೀಕರಿಸಿ ಬಳಸಿಕೊಂಡು ಶೇ.೩.೫ಯಿಂದ ೪ ರಷ್ಟು ಅಧಿಕ ಪ್ರಮಾಣದ ಸಾರಜನಕವನ್ನುಳ್ಳ ಎಲೆಗಳನ್ನು ಉತ್ಪಾದಿಸುತ್ತದೆ. ಇತರೆ ಅನೇಕ ದ್ವಿದಳಧಾನ್ಯಗಳ ಎಲೆಗಳಲ್ಲಿ ಕಂಡುಬರುವ ಸಾರಜನಕದ ಪ್ರಮಾಣವು ಸಾಮಾನ್ಯವಾಗಿ ಪ್ರತಿಶತ ೧.೫ ಯಿಂದ ೨.೫ ಮಾತ್ರ ಇರುವುದು ಎನ್ನುವುದನ್ನು ಗಮನಿಸಿದರೆ ಇದರ ಮಹತ್ವ ಅರ್ಥವಾಗುತ್ತದೆ. ಅಕೇಶಿಯಾ ತೋಪಿನಲ್ಲ ಪ್ರತಿ ವರ್ಷ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೪ ರಿಂದ ೬ ಟನ್ ಈ ಗುಣಮಟ್ಟದ ಎಲೆಗಳು ನೆಲಕ್ಕೆ ಬೀಳುವುದರಿಂದ ಅಕೇಶಿಯಾ ಬೆಳೆದ ನೆಲವು ಕ್ರಮೇಣ ಫಲವತ್ತಾಗುತ್ತದೆ. ಎಂದರೆ, ಅಕೇಶಿಯಾ ಬೆಳೆಯುವುದರಿಂದ ಪ್ರತಿ ವರ್ಷವೂ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೧೬೦ ರಿಂದ ೨೪೦ ಕಿ.ಗ್ರಾಂ ಸಾರಜನಕವನ್ನು ಸ್ಥಿರೀಕರಿಸಿದಂತಾಗುತ್ತದೆ. ಅನೇಕರ ನಂಬಿಕೆಗೆ ವಿರುದ್ಧವಾಗಿ ಅಕೇಶಿಯಾ ಎಲೆಗಳಲ್ಲಿ ಯಾವುದೇ ತೀಕ್ಷ್ಣ ಅಪಾಯಕರ ರಾಸಾಯನಿಕಗಳಿಲ್ಲ. ದರ ಎಲೆಗಳನ್ನು ರೈತರು ಶುಂಠಿ, ಅರಶಿಣ ಬೆಳೆಗಳಿಗೆ ನೆಲಹೊದಿಕೆಯಾಗಿ ಅನೇಕ ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಬಳಸುತ್ತಿದ್ದಾರೆ. ಈ ಸಸ್ಯವು ಇತರೆ ಸಸ್ಯಗಳಿಗಿಂತ ಹೆಚ್ಚು ನೀರನ್ನು ಬಳಸಿ ಅಂತರ್ಜಲವು ಕೆಳಗಿಳಿಯುವಂತೆ ಮಾಡುತ್ತದೆ ಎನ್ನುವುದು ಒಂದು ಮಿಥ್ಯೆ. ಇಷ್ಟೇ ವೇಗದಲ್ಲಿ ಬೆಳೆಯುವ ಇತರೆ ಯಾವುದೇ ಸಸ್ಯವು ಬಳಸುವಷ್ಟೇ ಪ್ರಮಾಣದ ನೀರನ್ನು ಇದು ಬಳಸುತ್ತದೆಯೆನ್ನುವುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿದೆ. ಕೆಳಗೆ ಬಿದ್ದ ಎಲೆಗಳನ್ನು ಅಥವಾ ಮರ ಕಟಾವು ಮಾಡಿದಾಗ ದೊರೆಯುವ ಎಲೆಗಳಿಂದ ಉತ್ತಮ ಗುಣಮಟ್ಟದ ಅಧಿಕ ಸಾರಜನಕಯುಕ್ತ ಕಾಂಪೋಸ್ಟ್ ಸಹ ತಯಾರಿಸಬಹುದು. ಸಾವಯವ ಕೃಷಿಗೆ ಇದು ತುಂಬಾ ಸಹಕಾರಿ. ಈ ಬೆಳೆಯಿಂದ ಹೆಚ್ಚು ಸಾವಯವ ಸಾರಜನಕವು ಮಣ್ಣಿಗೆ ಸೇರಿದಂತೆಲ್ಲಾ ಮಣ್ಣಿನ ಸಾವಯವ ಇಂಗಾಲದ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಆ ಮೂಲಕ ಮಣ್ಣಿನಲ್ಲಿ ಅಧಿಕ ಇಂಗಾಲವನ್ನು ಸ್ಥಿರೀಕರಿಸಿ ಜಾಗತಿಕ ತಾಪಮಾನದ ಏರುವಿಕೆಯನ್ನು ತಪ್ಪಿಸಲು ಸಹಕಾರಿಯಾಗುವುದೆನ್ನುವುದನ್ನು ಮರೆಯಬಾರದು

ಏಕ ಬೆಳೆಯ ಅಕೇಶಿಯಾ ತೋಪನ್ನು ಬೆಳೆದಾಗ ಇತರೆ ಜೀವ ಸಂಕುಲಕ್ಕೆ ಸಹಕಾರಿಯಾಗಲಾರದು ಎನ್ನುವ ಅನುಮಾನದಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶವಿರುವುದರಿಂದ, ಇದನ್ನು ಏಕಬೆಳೆಯ ತೋಪಿಗಿಂತಲೂ ಬಹು ಸಸ್ಯ ಮಿಶ್ರ ತೋಪಿನಲ್ಲಿ ಒಂದು ಭಾಗವನ್ನಾಗಿ ಬೆಳೆಯಲು ಪ್ರೋತ್ಸಾಹಿಸಬೇಕು. ಈಗ ಅದರ ಬೆಳೆಗೆ ಹೇರಿರುವ ನಿರ್ಬಂಧವನ್ನು ತೆಗೆದುಹಾಕಬೇಕು ಮತ್ತು ಇದನ್ನು ಎಲ್ಲಾ ವಾತಾವರಣಗಳಲ್ಲಿಯೂ ಬೆಳೆಯಲು ಉತ್ತೇಜಿಸಬೇಕು