ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ದನಗಳಲ್ಲಿ ಜೊನ್ಸ್ ರೋಗ/ಪ್ಯಾರಾಟ್ಯುಬರ್ಕ್ಯುಲೋಸಿಸ್

ಡಾ. ಸತೀಶ, ಎಸ್.ಪಿ
9481622134
1

ಪಶುಪಾಲನೆಯಲ್ಲಿ ರೋಗಗಳು ಸಾಮಾನ್ಯ ಆದರೆ ವೈಜ್ಞಾನಿಕ ಪಶುಪಾಲನೆಯು ಅದರಲ್ಲೂ ಪ್ರಮುಖವಾಗಿ ಲಸಿಕೆಗಳು, ಜಂತುನಾಶಕಗಳು ಹಾಗೂ ರೋಗನಿರೋಧಕಗಳು ಎಷ್ಟೋ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿವೆ. ಆದರೂ ಕೆಲವೊಂದು ರೋಗಗಳನ್ನು ಎಷ್ಟೇ ಪ್ರಯತ್ನಪಟ್ಟರೂ ತಡೆಗಟ್ಟುವಲ್ಲಿ ವಿಫಲವಾಗಿದ್ದೇವೆ. ಅಂತಹ ಕೆಲವು ರೋಗಗಳಲ್ಲಿ ಜೋನ್ಸ್ ರೋಗ ಕೂಡ ಒಂದು. ಈ ರೋಗ ದನಕರುಗಳಿಗೆ ಹರಡದಂತೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಏಕೆಂದರೆ ಈ ರೋಗಕ್ಕೆ ಚಿಕಿತ್ಸೆಯೇ ಇರುವುದಿಲ್ಲ ಹಾಗೂ ಒಮ್ಮೆ ಈ ರೋಗ ಬಂದರೇ ಇತರೇ ಜಾನುವಾರುಗಳಿಗೆ ಬಹುಬೇಗ ಹರಡುತ್ತದೆ. ಈ ರೋಗವನ್ನು ಪ್ಯಾರಾಟ್ಯುಬರ್ಕ್ಯುಲೋಸಿಸ್ ಅಂತಲೂ ಕರೆಯುತ್ತಾರೆ. ಈ ರೋಗವು ಮೈಕೋಬ್ಯಾಕ್ಟೀರಿಯಂ ಪ್ಯಾರಾಟ್ಯುಬರ್ಕ್ಯುಲೋಸಿಸ್ (Mycobacterium paratuberculosis) ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಈ ರೋಗವು ಸಾಮಾನ್ಯವಾಗಿ ರೋಗಪೀಡಿತ ಜಾನುವಾರುಗಳ ಸಗಣಿಯಲ್ಲಿ ಹೆಚ್ಚಾಗಿರುತ್ತದೆ. ಈ ಸಗಣಿಯು ಇತರೆ ಮೇವಿನೊಂದಿಗೆ ಬೆರೆತು ಬೇರೆ ಪ್ರಾಣಿಗಳಿಗೆ ರೋಗ ಹರಡುತ್ತದೆ. ಮತ್ತೊಂದು ಪ್ರಮುಖ ವಿಷಯವೇನೆಂದರೆ ರೋಗಪೀಡಿತ ಜಾನುವಾರಿಗೆ ಹುಟ್ಟಿದ ಕರುಗಳಲ್ಲಿ ಹಾಲಿನ ಮೂಲಕ ಈ ರೋಗಾಣುಗಳು ಹರಡುತ್ತವೆ. ಆದರೂ ರೋಗದ ಲಕ್ಷಣಗಳು ಈ ಕರುಗಳು ವಯಸ್ಸಿಗೆ ಬಂದಾಗ ಗೋಚರವಾಗುತ್ತವೆ. ಅಂದರೆ ಸುಮಾರು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದಾಗ ಕಂಡುಬರುತ್ತವೆ. ಈ ರೋಗಾಣುಗಳು ಪರಿಸರದಲ್ಲಿ ಬಹಳ ಧೀರ್ಘಕಾಲ ಉಳಿಯುವುದರಿಂದ ಇವುಗಳಿಂದ ರೋಗವು ಇತರೆ ಪ್ರಾಣಿಗಳಿಗೆ ಹರಡುವುದು ಬಹಳ ವೇಗವಾಗಿರುತ್ತದೆ. ಉದಾಹರಣೆಗೆ ಒಂದು ರೋಗಪೀಡಿತ ಹಸುವು ಒಂದು ಗೋಮಾಳದಲ್ಲಿ ಸಗಣಿ ಹಾಕಿದರೆ ಆ ಸಗಣಿಯಲ್ಲಿನ ರೋಗಾಣುಗಳು ಒಂದು ವರ್ಷದ ತನಕ ಜೀವಂತ ಇದ್ದು ಇತರೆ ಹಲವು ಬೇರೆ ರಾಸುಗಳಿಗೆ ರೋಗವನ್ನು ಹರಡುತ್ತವೆ.

ರೋಗ ಲಕ್ಷಣಗಳು: 1)ದನಗಳು ಕ್ರಮೇಣವಾಗಿ ಬಡಕಲಾಗುವುದು, ಅತಿಯಾದ ಭೇದಿ, ನಿರ್ಜಲೀಕರಣ ಹಾಗೂ ಭೇದಿಯ ಯಾವುದೇ ಚಿಕಿತ್ಸೆಗೆ ಸ್ಪಂದಿಸದಿರುವುದು, 2)ವಾಸನೆರಹಿತ ಭೇದಿ, 3)ರಾಸುವು ಗರ್ಭಧರಿಸಿದ್ದರೆ ಗರ್ಭಧರಿಸಿದ ಅವಧಿಯಲ್ಲಿ ಭೇದಿಯ ಪ್ರಮಾಣ ಕಡಿಮೆ ಎನಿಸಿದರೂ, ಕರು ಜನಿಸಿದ ಬಳಿಕ ರೋಗದ ತೀವ್ರತೆ ಉಲ್ಬಣಗೊಳ್ಳುತ್ತದೆ, 4)ರಾಸುವು ಸಾಮಾನ್ಯವಾಗಿ ಮೇವನ್ನು ಬಿಡುವುದಿಲ್ಲ ಆದರೂ ಕಾಲಕ್ರಮೇಣ ಬಡಕಲಾಗುತ್ತಿರುತ್ತದೆ, 5) ಹಾಲಿನ ಇಳುವರಿ ಕಡಿಮೆಯಾಗುತ್ತದೆ, 6)ರೋಗಪೀಡಿತ ಕರುಗಳು ಆರೋಗ್ಯವಾಗಿದ್ದು ವಯಸ್ಸಿಗೆ ಬಂದಾಗ ರೋಗಲಕ್ಷಣಗಳನ್ನು ತೋರಿಸುತ್ತವೆ, 7) ಕೊನೆಗೆ ರಾಸುಗಳು ಯಾವುದೇ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪುತ್ತವೆ.

ರೋಗ ನಿಯಂತ್ರಣ ಕ್ರಮಗಳು: 1) ಬೇರೆ ಸ್ಥಳಗಳಿಂದ ಖರೀದಿಸಿ ತಂದ ರಾಸುಗಳನ್ನು ಯಾವುದೇ ಕಾರಣಕ್ಕೂ ತಕ್ಷಣ ಇತರೆ ಆರೋಗ್ಯವಂತ ರಾಸುಗಳ ಜೊತೆ ಬೆರೆಸದೇ ಒಂದು ವಾರದಿಂದ ೧೦ ದಿನಗಳ ಕಾಲ ಬೇರಡೆ ಕಟ್ಟಿ ಮೇಯಿಸಬೇಕು, 2) ಕರುಗಳನ್ನು ದೊಡ್ಡರಾಸುಗಳ ಸಗಣಿಯಿಂದ ದೂರ ಇಡಬೇಕು, 3) ಯಾವುದೇ ರಾಸುವಿಗೆ ರೋಗ ಬಂದಿರುವ ಶಂಕೆ ವ್ಯಕ್ತವಾದರೆ ಆ ರಾಸುವನ್ನು ಇತರೆ ಆರೋಗ್ಯವಂತ ರಾಸುಗಳಿಂದ ಬೇರ್ಪಡಿಸಬೇಕು, 4) ಕರುಗಳಿಗೆ ಗಿಣ್ಣು ಹಾಲು ಕುಡಿಸುವಾಗ ಹಸುವಿನ ಕೆಚ್ಚಲನ್ನು ಸೂಕ್ತ ಕ್ರಿಮಿನಾಶಕಗಳಿಂದ (ಪೊಟ್ಯಾಷಿಯಂ ಪರ್ಮಾಂಗನೇಟ್) ಶುದ್ಧಿಗೊಳಿಸಿ ಗಿಣ್ಣು ಹಾಲು ಕುಡಿಸುವುದು, 5) ಗೋಮಾಳಗಳಿಗೆ ರೋಗಗ್ರಸ್ತ ರಾಸುಗಳು ಅಥವಾ ಶಂಕಾಸ್ಪದ ರಾಸುಗಳನ್ನು ಬಿಡಬಾರದು, 6) ಯಾವುದೇ ರಾಸುವಿನಲ್ಲಿ ರೋಗ ನಿರ್ಧಾರವಾದಲ್ಲಿ ಅಂತಹ ರಾಸುವನ್ನು ಸಂಪೂರ್ಣವಾಗಿ ಬೇರ್ಪಡಿಸಿ ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿ ಇತರೆ ರಾಸುಗಳೊಂದಿಗೆ ಬಿಡಬಾರದು.