ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಕೃಷಿರಂಗ

ಬಿತ್ತಿದಂತೆ ಬೆಳೆ

ಡಾ. ಮುರಳೀಧರ ಕಿರಣಕೆರೆ
೯೪೪೮೯೭೧೫೫೦

ವೈದ್ಯರು: ಹಂಗೇನೂ ಆಗಲ್ಲ ತಿಮ್ಮ. ನಿಮ್ಮಸು ಸೈಜು ನೋಡಿ ಅದಕ್ಕೆ ಯಾವ ತಳಿಯ ವೀರ್ಯ ಸೂಕ್ತ ಅಂತ ತಿಳ್ಕಂಡೇ ನಾವು ಇಂಜಕ್ಷನ್ನು ಮಾಡದು. ಗರ್ಭದ ಇಂಜಕ್ಷನ್ನು ಮಾಡ್ಸಿದ್ರೆ ದೊಡ್ಡ ಕರು ಹುಟ್ಟಿ ಹೆರಿಗೆಗೆ ತೊಂದ್ರೆ ಆಗುತ್ತೆ ಅನ್ನೋದೆಲ್ಲ ಜನಗಳ ತಪ್ಪು ಕಲ್ಪನೆ ಅಷ್ಟೆ.

ತಿಮ್ಮ: ಸ್ಸಾ, ನೀವು ಹೇಳಿದ್ದು ಒಪ್ದೆ. ಆದ್ರೆ ಇಂಜಕ್ಷನ್ನು ಮಾಡ್ಸಿದ್ರೆ ಬರೇ ಗಂಡು ಕರುಗಳೇ ಹುಟ್ತವೆ ಅಂತ ರಾಮ ಹೇಳ್ತಿದ್ದ.

ವೈದ್ಯರು: ಇದೂ ತಪ್ಪು ತಿಳುವಳಿಕೆ ತಿಮ್ಮ. ಕೃತಕ ಗರ್ಭಧಾರಣೆಯಿಮದ ಹುಟ್ದ ಕರುಗಳಲ್ಲಿ ಗಂಡು, ಹೆಣ್ಣು ಹೆಚ್ಚು ಕಮ್ಮಿ ಸಮ - ಸಮ ಇರ್ತವೆ. ಈಗ್ನೋಡು ಗರ್ಭಕ್ಕೆ ಇಂಜಕ್ಷನ್ನು ಕೊಟ್ಟಿದ್ದು, ಕರು ಹುಟ್ಟಿದ್ದು ಎಲ್ಲಾ ನಾವು ಒಂದು ಪುಸ್ತಕದಲ್ಲಿ ಬರೆದಿಡ್ತೀವಿ. ಲೆಕ್ಕ ಹಾಕಿದ್ರೆ ಹೆಣ್ಣು-ಗಂಡು ಕರುಗಳು ಹೆಚ್ಚು ಕಮ್ಮಿ ಸಮ ಆಗಿರ್ತವೆ. ತಿಮ್ಮ, ನಾ ಯಾತಕ್ಕೆ ನಿಂಗೆ ಇಷ್ಟೆಲ್ಲ ವಿವರವಾಗಿ ಹೇಳ್ತಿದ್ದೀನಿ ಅಂದ್ರೆ ಈ ಕೃತಕ ಗರ್ಭಧಾರಣೆ ಸೌಲಭ್ಯ ತುಂಬಾ ಒಳ್ಳೇದು. ಎಲ್ಲಾ ರೈತ್ರು ಇದ್ರ ಉಪ್ಯೋಗ ಪಡ್ಕಂಡು ಜಾನುವಾರು ತಳಿನ ಅಭಿವೃದ್ಧಿ ಮಾಡ್ಕೋಬೇಕು ಅಂತ, ತಿಳೀತಾ?

ತಿಮ್ಮ: ನೀವು ಹೇಳಿದ್ಮೇಲೆ ಆಯ್ತು ಸ್ಸಾ. ನಂಗೆ ಪೂರಾ ನಂಬಿಕೆ ಬಂತು. ಸುಮ್ನೆ ಯಾರ್ಯಾರದ್ದೋ ಮಾತು ಕೇಳಿ ನಾವು ಹಾಳಾಗ್ತಿದ್ವಿ.

ವೈದ್ಯರು: ಸರಿ ತಿಮ್ಮ, ಹಸುನ ಆಸ್ಪತ್ರೆಗೆ ಹೊಡ್ಕಂಡು ಹೋಗು. ನಂಗೆ ಇಲ್ಲೊಂದು ಚಿಕಿತ್ಸೆ ಮಾಡೊದು ಉಂಟು. ಮುಗಿಸ್ಕಂಡು ಬರ್ತೀನಿ (ವೈದ್ಯರು ಬೈಕು ಸ್ಟಾರ್ಟ್ ಮಾಡಿ ಹೊರಡುತ್ತಾರೆ)

ತಿಮ್ಮ: ಆಯ್ತು ಸ್ಸಾ ನಾ ನೇರವಾಗಿ ಆಸ್ಪತ್ರೆಗೆ ಹೋಗ್ತೀನಿ.

ದೃಶ್ಯ ೪: (ಕೃತಕ ಗರ್ಭಧಾರಣೆಯಿಂದ ಚಂದ್ರಿ ಗರ್ಭಧರಿಸಿದ್ದಾಳೆ. ಒಂಬತ್ತು ತಿಂಗಳ ಆರೈಕೆ, ಪಾಲನೆ ಪೋಷಣೆ ನಡೆಯುತ್ತಿದೆ). ಬಳೆಯ ತೊಡಸಿ ಹೂವ ಮುಡಿಸಿ, ಆರತಿ ಬೆಳಗಿರಿ ಬಸುರಿಗೆ, ಮುದ್ದಾದ ನಮ್ಮ ಚಂದ್ರಿಗೆ, ಮೈಕೈ ತುಂಬಿದೆ ಕೆಚ್ಚಲು ಇಳಿದೆಬೇಗನೆ ಆಗಲಿ ಸುಖ ಹೆರಿಗೆ, ಅಂದಾದ ಚೆಂದಾದ ಚಂದ್ರಿಗೆ, (ಚಂದ್ರಿಯ ಕರುಹಾಕಿದ ಸಿಹಿ ಸುದ್ದಿಯನ್ನೊತ್ತು ಪಶುಚಿಕಿತ್ಸಾಲಯದ ವೈದ್ಯರ ಕೊಠಡಿಗೆ ತಿಮ್ಮ ತಿಮ್ಮಿಯೊಂದಿಗೆ ಪ್ರವೇಶಿಸುತ್ತಾನೆ.)

ತಿಮ್ಮ ಮತ್ತು ತಿಮ್ಮಿ: ನಮ್ಸ್ಕಾರ ಸ್ಸಾ

ವೈದ್ಯರು : ಓ ಗಂಡ-ಹೆಂಡ್ತಿ ಒಟ್ಟಾಗಿ ಬಾಳಾ ಖುಷಿಲಿ ಬಂದಂಗೆ ಇದೆ. ಬನ್ನಿ ಕೂತ್ಕಳಿ. ಮುಖ ನೋಡಿದ್ರೆ ಲಾಟರಿ ಹೊಡ್ದಂಗೆ ಕಾಣುತ್ತೆ. ಏನ್ವಿಷ್ಯ?

ತಿಮ್ಮಿ : ಚಂದ್ರಿ ರಾತ್ರಿ ಸಲೀಸಾಗಿ ಹಡೀತು ಸ್ಸಾ, ಹೆಣ್ಗರು. ತಾಯಿ ಮಗ್ನು ಚೆನ್ನಾಗವೆ.

ವೈದ್ಯರು : ಅಂದ್ರೆ ಕೊಟ್ಗೆಲಿ ಲಾಟ್ರಿ ಹೊಡೀತು. ಅಲ್ವೊ ತಿಮ್ಮ ಗರ್ಭ ಕಟ್ಟಕೆ ಇಂಜಕ್ಷನ್ನು ಮಾಡಿದ್ರೆ ಕರು ಹಾಕಕ್ಕೆ ತೊಂದ್ರೆ ಆಗುತ್ತೆ, ಹುಟ್ಟೋ ಕರು ಯಾವಾಗ್ಲೂ ಗಂಡೆ ಅಂತ ಅವತ್ತು ಅಳ್ತಿದ್ದಿಯಲ್ಲ. ಇವತ್ತು ನೀವು ಗಂಡ-ಹೆಂಡ್ತಿ ಏನು ಹೇಳ್ತೀರಿ?

ತಿಮ್ಮ : ಅತ್ತು ವಿಷ್ಯ ಗೊತ್ತಿಲ್ದೆ ಮಾತಾಡಿದ್ದು ಸ್ಸಾ, ಅದೆಲ್ಲ ಮರ್ತುಬಿಡಿ. ಒಟ್ನಲ್ಲಿ ನಿಮ್ ಕೈಗುಣದಿಂದ ಎಲ್ಲೂ ತೊಂದ್ರೆ ಆಗ್ಲಿಲ್ಲ ಸ್ಸಾ. ಕರೂನೂ ಸಲೀಸಾಗಿ ಹಾಕ್ತು. ಕಸನೂ ಬಿತ್ತು. ಒಳ್ಳೆ ಜಾತಿ ಕರು ಸ್ಸಾ. ಮೈ-ಕೈ ತುಂಬ್ಕೊಂಡು ಗುಂಡ್ಗುಂಡುಗಿದೆ. ಒಳ್ಳೆ ಚಿನ್ನದ ಮೈಬಣ್ಣ, ಉದ್ದುದ್ದ ಕೈ-ಕಾಲು, ಕೈ ತೊಳಕ್ಕೊಂಡು ಮುಟ್ಬೇಕು ಹಂಗಿದೆ ಮರಿ ಚಂದ್ರಿ. ನೋಡ್ತಾ ಇದ್ರೆ ನಮ್ ದೃಷ್ಟಿನೆ ತಾಗಂಗಿದೆ ನಿಮ್ಕರುಗೆ ಸ್ಸಾ

ವೈದ್ಯರು : ತಿಮ್ಮ ಅದು ನನ್ಕರು ಅಲ್ಲ. ಒಳ್ಳೆಯ ಜಾತಿಯ ಹೋರಿಯ ವೀರ್ಯದಿಂದ ಹುಟ್ಟಿದ್ದು. ಮತ್ತೆ ನೀನು, ನಿನ್ನ ಹೆಂಡ್ತಿ ಹೋದಲೆಲ್ಲಾ ಡಾಕ್ಟ್ರು ಕರು .... ಡಾಕ್ಟ್ರು ಕರು ಅಂತ ಡಂಗುರ ಹೊಡಿಬೇಡಿ. ಅದ್ಸರಿ ಸ್ವೀಟು ಎಲ್ಲಿ? ಮೈಸೂರು ಪಾಕನೊ, ಹಾಲಿನ ಪೇಡಾನೋ ತಗೊಂಡು ಬರ್ತೀರಿ ಅಂದ್ಕೊಂಡ್ರೆ ಬರಿಗೈಲಿ ಒಸಗೆ ತಂದಿದ್ದೀರಿ.

ತಿಮ್ಮಿ : ನೀವು ಮನೆಲೆ ಒಳ್ಳೆ ಸಿಹಿ ಮಾಡ್ಕಂಡು ತಿನ್ನಿ ಅಂತ ಗಿಣ್ಣಾಲು ತಂದಿದ್ದೀವಿ ಸ್ಸಾ (ಕೈ ಚೀಲದಿಂದ ಒಂದು ದೊಡ್ಡ ಉಗ್ಗ ತೆಗೆದು ವೈದ್ಯರ ಮೇಜಿನ ಮೇಲಿಡುವಳು)

ವೈದ್ಯರು : ನಮ್ಮನೆಲಿ ಯಾರೂ ಗಿಣ್ಣು ತಿನ್ನಲ ತಿಮ್ಮಕ್ಕ. ಹಂಗೆ ನೀವು ಕೂಡ ಗಿಣ್ಣು ತಿನ್ಬಾರ್ದು

ತಿಮ್ಮ : ಅದ್ಯಾಕೆ ಸ್ಸಾ ನೀವು ತಿನ್ನಲ್ಲ? ಗಿಣ್ಣು ಸಖತ್ತು ರುಚಿ ಇರುತ್ತೆ. ನಮ್ಮಲ್ಲಿ ಎಮ್ಮೆ-ದನ ಯಾವ್ದೆ ಕರು ಹಾಕಿದ್ರೂ ನಮ್ಗೊಂತರ ಹಬ್ಬ. ಬೇಜಾನು ಗಿಣ್ಣು ಮಾಡ್ಕಂಡು ಪಟ್ಟಾಗಿ ಹೊಡಿತೀವಿ. ನೀವು ಒಂದ್ಸಲ ರುಚಿ ನೋಡಿ ಸ್ಸಾ. ಆಮೇಲೆ ಯಾರ ಮನೆಲಿ ದನ ಕರು ಹಾಕಿದ್ರೂ ಗಿಣ್ಣಾಲು ತಂದ್ಕೊಡಕ್ಕೆ ಆರ್ಡರ್ ಮಾಡ್ತೀರಿ ನೋಡಿ

ವೈದ್ಯರು : ಅದು ಹಂಗಲ್ಲ ತಿಮ್ಮ. ಈ ಗೀಬು ಅಂದ್ರೆ ಗಿಣ್ಣು ಹಾಲು ವಿಶೇಷ ರೀತಿಯ ಹಾಲು. ಅದು ತಾಯಿ ತನ್ನ ಎಳೆಗರುವಿಗಾಗಿಯೇ ಉತ್ಪತ್ತಿ ಮಾಡುವ ಹಾಲು. ಅದು ತಾಯಿ ತನ್ನ ಎಳೆಗರುವಿಗಾಗಿಯೇ ಉತ್ಪತ್ತಿ ಮಾಡುವ ಹಾಲು. ಕರುಗಳಿಗೆ ಇದುವ ಅಮೃತ ಸಮಾನ. ಕರುಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳೂ, ರೋಗ ಬರದಂತೆ ತಡೆಗಟ್ಟುವ ಎಲ್ಲಾ ಅಂಶಗಳು ಈ ಗಿಣ್ಣಾಲಿನಲ್ಲಿ ಇರ್ತವೆ. ಅದಕ್ಕೆ ನಾವು ಹೇಳದು ಕರು ಹುಟ್ಟಿದ ತಕ್ಷಣ ತಾಯಿ ಕೆಚ್ಚಲು ಸರ್ಯಾಗಿ ತೊಳೆದು ಹಾಲುಣಿಸಬೇಕು. ಅದ್ರಲ್ಲೂ ಮೊದ್ಲು ಅರ್ಧ ಗಂಟೇಲಿ ಕರು ಗೀಬು ಉಂಡಷ್ಟು ಒಳ್ಳೇದು. ಹಾಲು ಬೇಗ್ನೆ ರಕ್ತಕ್ಕೆ ಸೇರುತ್ತೆ. ಕರು ಹೊಟ್ಟೆ ತುಂಬಾ ಉಂಡ್ಮೇಲಷ್ಟೇ ಉಳಿದ ಹಾಲನ್ನು ಕರೆಯಬೇಕು ಗೊತ್ತಾಯ್ತಾ?

ತಿಮ್ಮಿ: ನೀವು ಹೇಳಿದ್ದು ತಿಳೀತು ಸ್ಸಾ. ಆದ್ರೆ ಗಿಣ್ಣಾಲು ಉಣಿಸಿದ್ರೆ ಕರುಗೆ ಹೊಟ್ಟೆ ಹುಳ ಜಾಸ್ತಿಯಾಗಿ ಸಾಯುತ್ತೆ ಅಂತಾರೆ. ಅದ್ಕೆ ಸ್ಸಾ ಕರುಗೆ ಸ್ವಲ್ಪ ಮಾತ್ರ ಹಾಲು ಬಿಡದು.

ವೈದ್ಯರು: ನೀವು ತಿಳ್ಕಂಡಿರೋದು ತಪ್ಪು ತಿಮ್ಮಕ್ಕ. ಗೀಬು ಉಂಡಷ್ಟೂ ಕರು ದಷ್ಟಪುಷ್ಟವಾಗಿ ಬೆಳೆಯುತ್ತೆ ಹೊರ್ತು ಹೊಟ್ಟೆ ಹುಳ ಜಾಸ್ತಿಯಾಗಲ್ಲ. ಒಮ್ಮೊಮ್ಮೆ ಕರು ತಾಯಿಯ ಗರ್ಭದಲ್ಲಿರುವಾಗ ಜಂತು ಹುಳುಗಳು ತಾಯಿಯಿಂದ ಕರುವಿಗೆ ದಾಟೋದು ಉಂಟು. ಆಮೇಲೆ ಕರು ಹುಟ್ಟಿದ್ಮೇಲೆ ಬೇರೆ ಎಮ್ಮೆ-ದನಗಳ ಸಂಪರ್ಕದಿಂದ, ಸಗಣಿಯಿಂದ ಹುಳುಗಳ ಮೊಟ್ಟೆಗಳು ಕರು ದೇಹ ಸೇರಿ ಜಂತುಗಳಾಗಿ ಬೆಳಿತವೆ. ಇದಕ್ಕೆ ಕರು ಹುಟ್ಟಿ ಒಂದು ತಿಂಗಳಿಗೆ ಜಂತುನಾಶಕ ಔಷಧ ಕುಡಿಸಬೇಕು. ನಂತರದ ಆರು ತಿಂಗಳವರೆಗೂ ಪ್ರತಿ ತಿಂಗಳು ನಿಯಮಿತವಾಗಿ ಜಂತುನಾಶಕ ಔಷಧ ಕುಡಿಸಬೇಕು. ಆರು ತಿಂಗಳಿಂದ ಒಂದು ವರ್ಷದವರೆಗೂ ಪ್ರತಿ ಎರಡು ತಿಂಗಳಿಗೊಮ್ಮೆ ಔಷಧಿ ಕೊಟ್ಟು, ನಂತರ ವರ್ಷಕ್ಕೆರಡು ಸರಿ ಜಂತುನಾಶಕ ಔಷಧಿ ಕೊಟ್ಟರೆ ಸಾಕು, ಕರು ಚೆನ್ನಾಗಿ ಬೆಳೆಯುತ್ತೆ

ತಿಮ್ಮ: ಇದೆಲ್ಲಾ ನಿಜವಾಗ್ಲು ನಮ್ಗೆ ಗೊತ್ತೇ ಇರ್ಲಿಲ್ಲ ಸ್ಸಾ. ಗಿಣ್ಣಾಲು ಪೂರಾ ಹಿಂಡಿ ನಾವು ಕರುಗೆ ಮೋಸ ಮಾಡ್ತಿದ್ವು. ವೈದ್ಯರು: ಹೌದು ತಿಮ್ಮ ನೀವೆಲ್ಲ ಗೊತ್ತಿಲ್ದೆ ಪಾಪದ ಕೆಲಸ ಮಾಡ್ತಿದ್ದೀರಿ. ಅದ್ರಲ್ಲೂ ನೋಡು ಮನುಷ್ಯರಿಗೊಂದು ಪ್ರಾಣಿಗೊಂದು ನ್ಯಾಯ.

ತಿಮ್ಮ: ಹಂಗಂದ್ರೆ ಏನು ಸ್ಸಾ?, ವೈದ್ಯರು: ನೋಡು ತಿಮ್ಮ ನಿಮ್ಗೆ ಮಗುವಾದ್ರೆ ತಕ್ಷಣ ತುಡು ಉಣ್ಸಕ್ಕೆ ಹೇಳಲ್ವಾ?, ತಿಮ್ಮ: ಸ್ಸಾ ನಾನು ಗಂಡ್ಗಣ್ಸು, ನಂಗೆಂತ ಮಗು ಹುಟೋದೆ?, ತಿಮ್ಮಿ: ರೀ....... ಸುಮ್ನೆ ಕೇಳ್ಕಳಿ. ಮಗು ಆಗದು ಹೆಂಗಸ್ರಿಗೆ ಮಾತ್ರ.ವೈದ್ಯರು: ಮಗುವಿಗೆ ತಾಯಿ ಮೊಲೆ ಹಾಲು ಹ್ಯಾಗೆ ಶ್ರೇಷ್ಠನೋ ಹಾಗೆ ಹಸುವಿನ ಹಾಲು ಕರುವಿಗೆ ಅಮೃತ ಸಮಾನ. ಮೂರು ತಿಂಗ್ಳು ಕರುಗೆ ಚೆನ್ನಾಗಿ ಹಾಲು ಉಣ್ಸಿ, ಹಿಂಡಿ-ಹುಲ್ಲು ಚೆನ್ನಾಗಿ ಕೊಡಿ. ಇನ್ನೊಂದು ವರ್ಷದಲ್ಲೇ ನಿಮ್ ಮರಿ ಚಂದ್ರಿಗೆ ಬೆದೆಗೆ ಬರುತ್ತೆ.ತಿಮ್ಮ: ಸ್ಸಾ, ನೀವು ಒಳ್ಳೆ ಅರ್ಥ ಆಗಂಗೆ ಪಾಠ ಮಾಡ್ತಿರಿ. ನಮ್ ಐಸ್ಕೂಲಿಗೆ ನೀವೆ ಮೇಷ್ಟ್ರಾಗಿದ್ರೆ ನನ್ ಮಗ ಹತ್ನೇ ಕ್ಸಾಸಲ್ಲಿ ಢುಮ್ಕಿ ಹೊಡಿತ್ತಿರ್ಲಿಲ್ಲ. ವೈದ್ಯರು: ರೈತರಿಗೆ ತಿಳಿಸಿ ಹೇಳದು ನನ್ನ ಕರ್ತವ್ಯ ತಿಮ್ಮ. ನೋಡು ನಮ್ ಹೊಲದಲ್ಲಿ ಯಾವ ಜಾತಿ ಬೀಜ ಬಿತ್ತನೆ ಮಾಡ್ತಿವಿ, ಹ್ಯಾಗೆ ಬಿತ್ತನೆ ಮಾಡ್ತಿವಿ, ಹ್ಯಾಗೆ ಪಾಲನೆ ಮಾಡ್ತಿವಿ ಹಾಗೆ ಫಸಲು ಬರೋದು ಅಲ್ವಾ? ತಿಮ್ಮ: ಕರೆಕ್ಟು ಸ್ಸಾ. ವೈದ್ಯರು: ಅದಕ್ಕೆ ಹೇಳೋದಲ್ವಾ, ’ಬಿತ್ತಿದಂತೆ ಬೆಳೆ’ಅಂತ? ತಿಮ್ಮ ಮತ್ತು ತಿಮ್ಮಿ: ಹೌದು ಸ್ವಾಮಿ, ಬಿತ್ತಿದಂತೆ ಬೆಳೆ, ನೀವು ಹೇಳೋದು ನಿಜ. ನಾಟಿ ಹಸನಾದಾಗ ಹುಲುಸಾದ ಫಸಲು, ಒಳ್ಳೆಯ ತಳಿಯಿಂದ ಬಿಂದಿಗೆ ಹಾಲು, ಇಂದಿನ ಕರುವೇ ನಾಳಿನ ಹಸು, ಗರ್ಭಧಾರಣೆಯಿಂದ ಕನಸೆಲ್ಲ ನನಸು, ರೈತರ ಕೈ ತುಂಬ ಕಾಸಿನ ಸೊಗಸು