ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಕದಂಬ ಹಣ್ಣು (ಫ್ಯಾಷನ್ ಫ್ರೂಟ್)

ಮಾನ್ಯ, ಹೆಚ್. ಎಂ.
೭೦೨೨೯೧೨೩೦೯
1

ಫ್ಯಾsಸಿಫ್ಲೋರಾ ಎಡ್ಯುಲಿಸ್ (ನೇರಳೆ), ಫ್ಯಾಸಿಫ್ಲೋರಾ ಫ್ಲೇವಿಕಾರ್ಪ(ಹಳದಿ) ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಈ ಹಣ್ಣು ಫ್ಯಾಸಿಪ್ಲೋರೇಸಿಯೆ ಕುಟುಂಬಕ್ಕೆ ಸೇರಿದ್ದು ಬ್ರೆಜಿಲ್ ಇದರ ಮೂಲವಾಗಿದೆ. ಈ ಹಣ್ಣಿನಲ್ಲಿ ೨ ಪ್ರಭೇದಗಳಿದ್ದು ಹಳದಿ ಮತ್ತು ನೇರಳೆ/ಕೆನ್ನೀಲಿ ಬಣ್ಣವನ್ನು ಹೊಂದಿದ್ದು, ಹಣ್ಣುಗಳು ಅಂಡಾಕಾರವಾಗಿ ಅಥವಾ ಗುಂಡಾಕಾರವಾಗಿರುತ್ತವೆ. ಎಳೆಯ ಕಾಯಿಗಳು ಹಸಿರು ಬಣ್ಣದಿಂದ ಕೂಡಿದ್ದು ಹಣ್ಣಾದಾಗ ಹಳದಿ ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತವೆ. ಹಣ್ಣಿನ ತಿರುಳು ಹಳದಿ ಬಣ್ಣವಿದ್ದು ಚಿಕ್ಕ, ಚಿಕ್ಕ ಲೋಳೆಯಂತಹ ಕಪ್ಪು ಬೀಜಗಳಿರುತ್ತವೆ.ಉಪಯೋಗ ಮತ್ತು ಗುಣಗಳು: ಈ ಹಣ್ಣುಗಳನ್ನು ಜ್ಯಾಮ್, ಜೆಲ್ಲಿ, ತಂಪು ಪಾನೀಯಗಳ ಮೌಲ್ಯವರ್ಧನೆಯಲ್ಲಿ ಬಳಸುತ್ತಾರೆ. ಈ ಹಣ್ಣು ’ಎ’ ಮತ್ತು ’ಸಿ’ ಜೀವಸತ್ವಗಳಿಂದ ಸಂಪದ್ಬರಿತವಾಗಿದ್ದು ಕ್ಯಾನ್ಸರನ್ನು ತಡೆಯುವ ಶಕ್ತಿಯಿದೆ. ಈ ಹಣ್ಣು ಜೀರ್ಣಕ್ರಿಯೆಯಲ್ಲಿಯೂ ಪ್ರಮುಖ ಪಾತ್ರವಹಿಸುವುದಲ್ಲದೆ, ದೃಷ್ಟಿಯ ವೃದ್ದಿಗೆ, ಚರ್ಮದ ಆರೋಗ್ಯಕ್ಕೆ, ರಕ್ತದೊತ್ತಡ ಕಡಿಮೆ ಮಾಡಲು, ಮೂಳೆಗಳ ಬೆಳವಣಿಗೆಗೆ ಮತ್ತು ಅಸ್ತಮಾ ರೋಗಕ್ಕೆ ರಾಮಬಾಣವಾಗಿದೆ. ಈ ಹಣ್ಣಿನಲ್ಲಿ ರೈಬೋಪ್ಲೆವಿನ್, ನಿಯಾಸಿನ್, ಕಬ್ಬಿಣ, ಮೆಗ್ನೀಶಿಯಂ, ರಂಜಕ, ಪೊಟ್ಯಾಷ್, ನಾರಿನ ಅಂಶ, ಪ್ರೋಟೀನ್ ಅಂಶಗಳು ಅಧಿಕವಾಗಿರುತ್ತವೆ (ಕೋಷ್ಟಕ:೧). ವಾತಾವರಣ: ಈ ಹಣ್ಣಿನ ಬಳ್ಳಿಯು ಉಷ್ಣವಲಯ ಮತ್ತು ಅರೆಉಷ್ಣವಲಯದ ೧೦೦೦-೧೨೫೦ ಮಿ.ಮೀ. ಮಳೆ ಬೀಳುವ ಪ್ರದೇಶಗಳಿಗೆ ಚೆನ್ನಾಗಿ ಹೊಂದುತ್ತದೆ ಮತ್ತು ಎಲ್ಲಾ ರೀತಿಯ ಮಣ್ಣುಗಳಿಗೆ ಹೊಂದಿಕೊಂಡು ಬೆಳೆಯುವ ವಿಶೇಷ ಗುಣವನ್ನು ಹೊಂದಿದ್ದು, ನೀರು ನಿಲ್ಲುವಂತಹ ಪ್ರದೇಶ ಸೂಕ್ತವಾಗಿರುವುದಿಲ್ಲ. ಸಸ್ಯಾಭಿವೃದ್ಧಿ: ಬೀಜಗಳಿಂದ ಮತ್ತು ಕಾಂಡದ ತುಂಡುಗಳಿಂದ ಗಿಡಗಳನ್ನು ಅಭಿವೃದ್ದಿಪಡಿಸಬಹುದಾಗಿದ್ದು, ಜೂನ್-ಜುಲೈ ತಿಂಗಳು ನಾಟಿಗೆ ಸೂಕ್ತ ಸಮಯವಾಗಿದೆ. ಬೀಜಗಳನ್ನು ಆಯ್ಕೆ ಮಾಡುವಾಗ ಉತ್ತಮ ಹಣ್ಣುಗಳಿಂದ ತೆಗೆದ ತಿರುಳನ್ನು ಮೂರು ದಿನಗಳ ಕಾಲ ಶೇಖರಿಸಿಟ್ಟು ನಂತರ ಬೀಜಗಳನ್ನು ಬೇರ್ಪಡಿಸಿ ನಂತರ ಪ್ಲಾಸ್ಟಿಕ್ ಚೀಲಗಳಲ್ಲಿ ಬಿತ್ತನೆ ಮಾಡಿ ಸಸಿಗಳನ್ನು ಬೆಳೆಸಬಹುದು. ಈ ಬಳ್ಳಿಗಳನ್ನು ಹಿತ್ತಲಲ್ಲಿ, ಬೇಲಿಯ ಮೇಲೆ ಹಬ್ಬಿಸಬಹುದು, ಹೂವುಗಳು ಆಕರ್ಷಕ ಮತ್ತು ಸುವಾಸನೆಯಿಂದ ಕೂಡಿದ್ದು, ಅಲಂಕಾರಿಕ ಬಳ್ಳಿಯಾಗಿಯೂ ಸಹ ಬೆಳೆದು ಕೈತೋಟದ ಅಂದವನ್ನು ಹೆಚ್ಚಿಸಬಹುದು. ಕೊಯ್ಲು ಮತ್ತು ಇಳುವರಿ: ಹಣ್ಣುಗಳು ನಾಟಿ ಮಾಡಿದ ೯ ತಿಂಗಳ ನಂತರ ಕೊಯ್ಲಿಗೆ ಬರುತ್ತವೆ, ಅತ್ಯಧಿಕ ಇಳುವರಿಯನ್ನು ಒಂದೂವರೆ ವರ್ಷದ ನಂತರ ಪಡೆಯಬಹುದು. ಇದು ಬಹುವಾರ್ಷಿಕ ಬೆಳೆಯಾಗಿದ್ದು, ಆರು ವರ್ಷದವರೆಗೂ ಇಳುವರಿಯನ್ನು ಕೊಡುತ್ತದೆ. ಒಂದು ಬಳ್ಳಿಯಿಂದ ೪-೭ ಕೆ.ಜಿ. ಹಣ್ಣನ್ನು ಒಂದು ಕೊಯ್ಲಿನಲ್ಲಿ ಪಡೆಯಬಹುದು. ಜೂನ್-ಆಗಸ್ಟ್ ಮತ್ತು ನವೆಂಬರ್-ಜನವರಿಯಲ್ಲಿ ಈ ಹಣ್ಣುಗಳು ಹೆಚ್ಚಾಗಿ ದೊರಕುತ್ತವೆ.