ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಆಲಿವ್ ಹಣ್ಣು

ಗಜಾನನ ಗುಂಡೆವಾಡಿ
೭೦೬೫೧೫೭೬೯೩
1

ಆಲಿವ್ (ಓಲಿಯಾ ಯುರೊಪಿಯಾ) ಎಂಬುದು ಒಂದು ಓಲಿಯೆಸೀ ಕುಟುಂಬಕ್ಕೆ ಸೇರಿದ ವಿಶಿಷ್ಟ ಹಣ್ಣಿನ ಮರವಾಗಿದೆ. ಆಲಿವ್ ಹಣ್ಣು ಮೆಡಿಟರೇನಿಯನ್ ಪ್ರದೇಶದಲ್ಲಿ ಉಗಮವಾಗಿದೆ. ಇದನ್ನು ಆಲಿವ್ ತೈಲ ಮತ್ತು ಉಪ್ಪಿನಕಾಯಿ ಉತ್ಪಾದನೆಗೆ ಮೆಡಿಟರೇನಿಯನ್ ಪ್ರದೇಶದಲ್ಲಿ ಪ್ರಮುಖ ಕೃಷಿ ಬೆಳೆಯಾಗಿ ಬೆಳೆಯುತ್ತಾರೆ. ಆಲಿವ್ ಮರವು ಮೆಡಿಟರೇನಿಯನ್, ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಕಂಡುಬರುತ್ತದೆ. ವಿಶ್ವದಲ್ಲಿ ಆಲಿವ್ ಬೆಳೆಯುವಲ್ಲಿ ಸ್ಪೇನ್ ದೇಶ ಮೊದಲನೇ ಸ್ಥಾನದಲ್ಲಿದೆ. ಆಲಿವ್ ಮರಗಳು ಬಹಳ ದೃಢವಾಗಿದ್ದು, ಬರಗಾಲ, ರೋಗ ಹಾಗೂ ಬೆಂಕಿಗಳನ್ನು ನಿರೋಧಿಸಬಲ್ಲವು. ಇವು ಬಿಳಿಯ ಬಣ್ಣದ ಹೂವುಗಳನ್ನು ಸಾಮಾನ್ಯವಾಗಿ ಕಳೆದ ವರ್ಷದ ಮರದ ರೆಂಬೆಯ ಕೊನೆಯಲ್ಲಿ ಬಿಡುತ್ತವೆ. ಆಲಿವ್ ಹಣ್ಣುಗಳು ಹಸಿರಿನಿಂದ ನೇರಳೆ ಬಣ್ಣಕ್ಕೆ ತಿರುಗಿದಾಗ ಹಣ್ಣಿನ ಕೊಯ್ಲು ಮಾಡಲಾಗುತ್ತದೆ. ಇವು ಬಹಳ ವರ್ಷಗಳ ಕಾಲ ಬದುಕಬಲ್ಲವು. ಯಾಕೆಂದರೆ ಇದರ ಬೇರು ವ್ಯವಸ್ಥೆಯು ಸದೃಢವಾಗಿದ್ದು, ಭೂಮಿಯ ಮೇಲಿನ ಭಾಗವು ನಾಶವಾದರು, ಮರವು ಪುನರ್ಬೆಳವಣಿಗೆಯಾಗುವ ಸಾಮರ್ಥ್ಯವನ್ನು ಹೊಂದಿದೆ. ಉಪಯೋಗಗಳು: ಆಲಿವ್ ತೈಲ, ಉಪ್ಪಿನಕಾಯಿ ಮತ್ತು ಹಣ್ಣುಗಳಿಗಾಗಿ ಆಲಿವ್ ಮರವನ್ನು ಬೆಳೆಸಲಾಗುತ್ತದೆ. ಆಲಿವ್ ಹಣ್ಣುಗಳು ಮತ್ತು ಆಲಿವ್ ತೈಲ ಸೇವಿಸುವುದರಿಂದ ಹಲವಾರು ಆರೋಗ್ಯಕ್ಕಾಗುವ ಅನುಕೂಲಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ಪುಷ್ಟಿ ನೀಡುತ್ತವೆ. ಆಲಿವ್ ಎಣ್ಣೆಯನ್ನು ವಿಶ್ವದ ಸರ್ವಶ್ರೇಷ್ಠ ಅಡುಗೆ ಎಣ್ಣೆ ಎಂದು ಪರಿಗಣಿಸಲಾಗುತ್ತದೆ ಯಾಕೆಂದರೆ ಇದು ಹೆಚ್ಚಿನ ಸಂಖ್ಯೆಯಲ್ಲಿ ಬಹುಅಪರ್ಯಾಪ್ತ ಕೊಬ್ಬಿನ ಆಮ್ಲವನ್ನು ಹೊಂದಿದೆ. ಆಲಿವ್ಗಳನ್ನು ಈಗ ನವೀಕರಿಸಬಹುದಾದ ಇಂಧನ ಮೂಲವನ್ನಾಗಿ ಕೂಡ ಬಳಸುವುದನ್ನು ಕಾಣಲಾಗುತ್ತಿದೆ. ಮಣ್ಣು ಮತ್ತು ಹವಾಗುಣ: ಆಲಿವ್ ಬೆಳೆಯು ಕಮರಿ ಮತ್ತು ಜೇಡಿಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಪ್ರಸ್ತುತ ರೈತರು ಆಲಿವ್ ಸಾಗುವಳಿಯನ್ನು ರಾಜಸ್ಥಾನದ ಬಿಕಾನೆರ್ ಜಿಲ್ಲೆಯಲ್ಲಿ ಕೈಗೊಳ್ಳುತ್ತಿದ್ದಾರೆ. ಇದನ್ನು ಸರಾಸರಿ ಸಮುದ್ರ ಮಟ್ಟಕ್ಕಿಂತ ೮೦೦ ರಿಂದ ೧೪೦೦ ಮೀ. ಮೇಲಿನ ಮಟ್ಟದವರೆಗೆ ಬೆಳೆಯಬಹುದು. ಇದು ೭೦ಸೆ ಯಿಂದ ೩೫೦ಸೆ ವರೆಗಿನ ತಾಪಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ

ತಳಿಗಳು: ಎರಡು ವಿಧಗಳಾಗಿ ವಿಂಗಡಿಸಲಾಗಿದೆ: ೧.ತೈಲ: ಕಾರೋಲೆ, ಪೆಂಡೊಲಿನೊ, ಕಾಣಿನೊ, ಬೊಸಾನಾ, ೨.ಉಪ್ಪಿನಕಾಯಿ: ಮಿಶನ್, ಅಸ್ಕೋಳನೊ, ಕೊರತಿನ

ಬೇಸಾಯ ಕ್ರಮಗಳು: ಆಲಿವ್ ಸಸಿ ತಯಾರಿಕೆಯನ್ನು ಬಡ್ಡಿಂಗ್ ಅಥವಾ ಕಸಿ ಕಟ್ಟುವ ಮುಖಾಂತರ ಸಸಿ ತಯಾರಿಸಲಾಗುತ್ತದೆ. ವಿವಿಧ ದಪ್ಪದ ಕೊಂಬೆಗಳನ್ನು ೧ ಮೀಟರ್ (೩.೩ ಅಡಿ)ಉದ್ದದವರೆಗೆ ಕತ್ತರಿಸಿ, ಗೊಬ್ಬರದ ಮಣ್ಣಲ್ಲಿ ಆಳವಾಗಿ ನೆಡಲಾಗುತ್ತದೆ. ಇವು ಅಲ್ಪಕಾಲದಲ್ಲೇ ಸಸ್ಯಗಳಂತೆ ಬೆಳೆಯುತ್ತವೆ. ದೊಡ್ಡ ಹಣ್ಣಿನ ಫಸಲಿಗಾಗಿ ಪರಾಗಸ್ಪರ್ಶದ ಅಗತ್ಯವಿದೆ. ದೊಡ್ಡ ಆಲಿವ್ ಮರ ತೋಪುಗಳಲ್ಲಿ ಪೆಂಡೊಲಿನೊ ಆಲಿವ್ ಮರಗಳನ್ನು ಪರಾಗಸ್ಪರ್ಶಕ ವಾಹಕವನ್ನಾಗಿ ಬಳಸಲಾಗುತ್ತಿದೆ. ಹಣ್ಣುಗಳ ಕೊಯ್ಲು ಮತ್ತು ಸಂಸ್ಕರಣೆ: ಆಲಿವ್ ಹಣ್ಣುಗಳು ಹಸಿರಿನಿಂದ ನೇರಳೆ ಬಣ್ಣಕ್ಕೆ ತಿರುಗಿದಾಗ ಹಣ್ಣಿನ ಕೊಯ್ಲು ಮಾಡಲಾಗುತ್ತದೆ. ಶರತ್ಕಾಲ ಅಥವಾ ಚಳಿಗಾಲದಲ್ಲಿ ಆಲಿವ್ ಹಣ್ಣುಗಳನ್ನು ಕೊಯ್ಲು ಮಾಡಲಾಗುತ್ತದೆ. ಮರದ ಕೊಂಬೆಗಳನ್ನು ಅಲುಗಾಡಿಸಿ ಅಥವಾ ಇಡೀ ಮರವನ್ನು ಅಲ್ಲಾಡಿಸಿ, ಬಹುತೇಕ ಆಲಿವ್ಗಳಿಂದ ಫಸಲು ಸಂಗ್ರಹಿಸಲಾಗುತ್ತದೆ. ನೆಲದ ಮೇಲೆ ಬಿದ್ದಿರುವ ಆಲಿವ್ ಹಣ್ಣುಗಳನ್ನು ಬಳಸಿದಲ್ಲಿ ಕಳಪೆ ಗುಣಮಟ್ಟದ ತೈಲ ಲಭಿಸುತ್ತದೆ. ಏಣಿಯ ಮೇಲೆ ನಿಂತು, ಆಲಿವ್ ಹಣ್ಣುಗಳನ್ನು ಹಿಂಡಿ, ಕೊಯ್ಲು ಮಾಡುವವರು ಸೊಂಟಕ್ಕೆ ಧರಿಸಿದ ಚೀಲದಲ್ಲಿ ತುಂಬುವುದು ಇನ್ನೊಂದು ವಿಧಾನವಾಗಿದೆ. ಆಲಿ-ನೆಟ್ ಎಂಬ ಕೊಡೆಯಂತಹ ಸಾಧನವನ್ನು ಮರದ ಕಾಂಡದ ಸುತ್ತಲೂ ಸುತ್ತಿ, ಕಾರ್ಮಿಕರು ಅದರಿಂದ ಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಅತಿವೇಗವಾಗಿ ತಿರುಗುವ ದೊಡ್ಡ ಗಾತ್ರದ ಇಕ್ಕೆಲಗಳುಳ್ಳ ಆಲಿವಿಯೆರಾ ಎಂಬ ವಿದ್ಯುತ್ ಸಾಧನದ ಮೂಲಕ ಮರದಿಂದ ಹಣ್ಣುಗಳನ್ನು ತೆಗೆಯುವುದು ನಾಲ್ಕನೆಯ ವಿಧಾನವಾಗಿದೆ. ತೈಲಕ್ಕಾಗಿ ಬಳಸಬೇಕಾದ ಹಣ್ಣುಗಳನ್ನು ಸಂಗ್ರಹಿಸಲು ಈ ಪದ್ಧತಿಯನ್ನು ಬಳಸಲಾಗಿದೆ. ಟೆಬಲ್ ಆಲಿವ್ ಪ್ರಭೇದಗಳನ್ನು ಕೊಯ್ಲು ಮಾಡುವುದು ಕಷ್ಟ. ಏಕೆಂದರೆ ಕೊಯ್ಲು ಮಾಡುವವರು ಹಣ್ಣು ಒಡೆಯದಂತೆ ಎಚ್ಚರ ವಹಿಸಬೇಕು. ಕೆಲಸಗಾರರ ಕುತ್ತಿಗೆಗೆ ತಗುಲಿ ಹಾಕಿರುವ ಬುಟ್ಟಿಗಳನ್ನು ಬಳಸಿ ಹಣ್ಣುಗಳನ್ನು ಕಟಾವು ಮಾಡಲಾಗುತ್ತದೆ. ಇಳುವರಿ: ಹಣ್ಣಿನಲ್ಲಿರುವ ತೈಲದ ಅಂಶವು ಕೃಷಿ-ಪ್ರಭೇದಗಳ ಪ್ರಕಾರ ಬಹಳಷ್ಟು ವ್ಯತ್ಯಾಸವಾಗುತ್ತದೆ. ಬೀಜಕೋಶದಲ್ಲಿ ಸಾಮಾನ್ಯವಾಗಿ ೬೦-೭೦% ರಷ್ಟು ತೈಲವಿರುತ್ತದೆ. ಪ್ರತಿ ಮರಕ್ಕೆ ಸರಾಸರಿಯಾಗಿ ೧.೫ರಿಂದ ೨.೨ ಕೆ.ಜಿ ಯಷ್ಟು ತೈಲದ ಇಳುವರಿ ದೊರೆಯುತ್ತದೆ

ಹಣ್ಣಿನ ಸಂಸ್ಕರಣೆ: ೧.ಹುದುಗುವಿಕೆ ವಿಧಾನ: ಆಲಿವ್ಗಳು ಸಹಜವಾಗಿ ಕಹಿ ಹಣ್ಣುಗಳಾಗಿರುತ್ತವೆ. ಇವುಗಳನ್ನು ರುಚಿಯಾಗಿಸಬೇಕಾದಲ್ಲಿ, ಯಾವುದೇ ಕ್ಷಾರ ದ್ರಾವಣ ಅಥವಾ ಲವಣ ಜಲದೊಂದಿಗೆ ಹುದುಗುವಿಕೆಗೆ (ಫರ್ಮಂಟೇಶನ್) ಗುರಿಪಡಿಸಲಾಗುತ್ತದೆ ಅಥವಾ ಸಂಸ್ಕರಿಸಲಾಗುತ್ತದೆ. ಆಲೊರೊಪೀನ್ ಎಂಬ ಕಹಿ ಕಾರ್ಬೊಹೈಡ್ರೇಟ್ನ್ನು ತೆಗೆಯಲು, ಹಸಿರು ಹಾಗೂ ಕಪ್ಪು ಬಣ್ಣದ ಆಲಿವ್ಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ಚೆನ್ನಾಗಿ ತೊಳೆಯಲಾಗುತ್ತದೆ. ಈ ಪ್ರಕ್ರಿಯೆಯ ವೇಗ ವರ್ಧಿಸಲು, ಕೆಲವೊಮ್ಮೆ ಆಲಿವ್ಗಳನ್ನು ಫುಡ್ ಗ್ರೇಡ್ ಸೊಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ನೆನೆಸಲಾಗುತ್ತದೆ. ಹಸಿರು ಆಲಿವ್ಗಳನ್ನು ಉಪ್ಪು ನೀರಿನ ದ್ರಾವಣದಲ್ಲಿ ಪ್ಯಾಕ್ ಮಾಡುವ ಮುಂಚೆ ಕೆಲ ಸಮಯ ಹುದುಗುವಿಕೆಗೆ ಅವಕಾಶ ನೀಡಲಾಗುತ್ತದೆ. ಹಲವು ವಿಧಾನಗಳ ಮೂಲಕ ಆಲಿವ್ ಹಣ್ಣುಗಳನ್ನು ಸಂಸ್ಕರಿಸಬಹುದಾಗಿದೆ: ಅತಿಕ್ಷಾರ-ದ್ರಾವಣ ಸಂಸ್ಕರಣ, ಉಪ್ಪು ನೀರು ಸಂಸ್ಕರಣ ಹಾಗೂ ಸಿಹಿನೀರು ಸಂಸ್ಕರಣ. ಉಪ್ಪು-ಸಂಸ್ಕರಣ (ಒಣ-ಸಂಸ್ಕರಣ)ಎಂದರೆ, ಕನಿಷ್ಠ ಪಕ್ಷ ಸುಮಾರು ಒಂದು ತಿಂಗಳ ಕಾಲ ಹಣ್ಣುಗಳನ್ನು ಬರೀ ಉಪ್ಪಿನಲ್ಲಿ ಕಟ್ಟಿಡಕಲಾಗುತ್ತದೆ. ಈ ರೀತಿ ಆಲಿವ್ ಹಣ್ಣುಗಳು ಉಪ್ಪಿನ ರುಚಿ ಮತ್ತು ಸುಕ್ಕಿನಿಂದ ಕೂಡುತ್ತವೆ. ಉಪ್ಪು ನೀರು ಸಂಸ್ಕರಣವೆಂದರೆ, ಕೆಲವು ದಿನಗಳ ಕಾಲ ಆಲಿವ್ಗಳನ್ನು ಉಪ್ಪುನೀರಿನ ದ್ರಾವಣದಲ್ಲಿ ನೆನೆಸಿಡುವುದು. ತಾಜಾ ನೀರು ಸಂಸ್ಕರಣ ಎಂದರೆ, ನೀರು ತುಂಬಿದ ಒಂದು ಬೋಗುಣಿಯಲ್ಲಿ ಹಣ್ಣುಗಳನ್ನು ನೆನೆಸಲಾಗುತ್ತದೆ. ಪ್ರತಿದಿನವೂ ಈ ನೀರನ್ನು ಬದಲಾಯಿಸಲಾಗುತ್ತದೆ

ಆಲಿವ್ ತೈಲ ಹೊರತೆಗೆಯುವಿಕೆ: ಆಲಿವ್ ತೈಲವನ್ನು ಪೂರ್ತಿ ಹಣ್ಣನ್ನು ಒತ್ತಿ ಉತ್ಪಾದಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅಡುಗೆ, ಸೌಂದರ್ಯವರ್ಧಕಗಳು, ಔಷಧ ವಸ್ತುಗಳು ಮತ್ತು ಸಾಬೂನುಗಳಲ್ಲಿ ಹಾಗೂ ಸಾಂಪ್ರದಾಯಿಕ ಎಣ್ಣೆ ದೀಪಗಳಿಗಾಗಿ ಒಂದು ಇಂಧನವಾಗಿ ಬಳಸಲಾಗುತ್ತದೆ. ಆಲಿವ್ ಎಣ್ಣೆಯನ್ನು ವಿಶ್ವದಾದ್ಯಂತ ಬಳಸಲಾಗುತ್ತದೆ