ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ತರಕಾರಿಗಳಲ್ಲಿ ಬೇರುಗಂಟು ಜಂತುರೋಗ

ಮಂಜುನಾಥಗೌಡ ಟಿ
೯೪೫೪೧೯೮೧೦೪
1

ತರಕಾರಿ ಬೆಳೆಗಳಲ್ಲಿ ಬೇರು ಗಂಟು ಜಂತು ರೋಗ ಪ್ರಮುಖವಾಗಿ ಕಂಡುಬರುತ್ತದೆ. ಈ ರೋಗಕ್ಕೆ ಸಸ್ಯ ಪರಾವಲಂಬಿ ಬೇರುಗಂಟು ಜಂತುಹುಳವು ಕಾರಣ. ವೈಜ್ಞಾನಿಕವಾಗಿ ಹೆಸರಿಸಿದ ಮೆಲಾಯ್ಡೊಗೈನೆ ಇಂಕಾಗ್ನಿಟಾ ಮತ್ತು ಮೆಲಾಯ್ಡೊಗೈನೆ ಜವಾನಿಕ ಎಂಬ ಬೇರು ಗಂಟು ಜಂತುಹುಳುಗಳು ತರಕಾರಿ ಬೆಳೆಗಳಲ್ಲಿ ವ್ಯಾಪಕವಾಗಿ ಹರಡಿದ್ದು ಬೆಳೆಹಾನಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಜಂತುಹುಳುವು ಮೊಟ್ಟೆ, ನಾಲ್ಕು ಮರಿ ಹಾಗೂ ಪ್ರೌಢಾವಸ್ಥೆ ಹಂತಗಳನ್ನು ಒಳಗೊಂಡಿದ್ದು ೩ ರಿಂದ ೪ ವಾರಗಳಲ್ಲಿ ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತದೆ. ಮುಖ್ಯವಾಗಿ ಎರಡನೇ ಮರಿಹಂತವು ಗಿಡಗಳಿಗೆ ಹಾನಿಯುಂಟು ಮಾಡುವ ಹಂತವಾಗಿದ್ದು ಬೇರಿನ ಮೂಲಕ ಪ್ರವೇಶಿಸಿ ಬೇರುಗಳಲ್ಲಿ ಗಂಟುಗಳನ್ನು ರೂಪಿಸುತ್ತದೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು, ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಗಿಡ ಸೊರಗುವಿಕೆ ಲಕ್ಷಣಗಳನ್ನು ತೋರಿಸುತ್ತದೆ. ಇದಲ್ಲದೆ ಮಣ್ಣಿನಲ್ಲಿರುವ ರೋಗಕಾರಕ ಶೀಲೀಂಧ್ರಗಳು ಹಾಗೂ ದುಂಡಾಣುಗಳಿಗೆ ಗಿಡದ ಬೇರುಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟು ರೋಗದ ತೀವ್ರತೆ ಶೇಕಡ ೪೦ ರಿಂದ ೭೦ರಷ್ಟು ಹೆಚ್ಚಿಸಿ ತೀವ್ರ ಬೆಳೆಹಾನಿ ಉಂಟುಮಾಡುತ್ತದೆ. ಆದ್ದರಿಂದ ತರಕಾರಿಗಳಲ್ಲಿ ಬೇರು ಗಂಟು ಜಂತುರೋಗ ನಿರ್ವಹಣೆ ಅತಿ ಮುಖ್ಯವಾಗಿದ್ದು, ಐ.ಸಿ.ಎ.ಆರ್-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಗಳಿಂದ ನಿರ್ವಹಣಾ ಕ್ರಮಗಳನ್ನು ಸಂಗ್ರಹಿಸಿ ವಿವರಿಸಿದ್ದು ರೈತರಿಗೆ ಯಶಸ್ವಿಯಾಗಿ ರೋಗವನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಲಿವೆ

ನಿರ್ವಹಣೆ

ಏಪ್ರಿಲ್-ಮೇ ತಿಂಗಳಿನಲ್ಲಿ ಭೂಮಿಯನ್ನು ಆಳವಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಉಷ್ಣಾಂಶ ಸೌರೀಕರಣದಿಂದ ಹೆಚ್ಚಳಗೊಂಡು ರೋಗಕಾರಕ ಶೀಲಿಂಧ್ರ ಹಾಗೂ ದುಂಡಾಣುಗಳ ಜೊತೆಗೆ ಬೇರು ಗಂಟು ಜಂತುಹುಳಗಳು ಕೂಡ ಗಣನೀಯವಾಗಿ ನಾಶವಾಗುತ್ತವೆ

ಬಿತ್ತನೆ/ನಾಟಿಗೆ ಮೊದಲು ಪ್ರತಿ ಹೆಕ್ಟೆರ್ಗೆ ೩೩ ಕಿ.ಗ್ರಾಂ ನಷ್ಟು ಫುರಡಾನ್ (ಕಾರ್ಬೊಫುರಾನ್ ೩ಜಿ) ಹರಳುಗಳನ್ನು ಬೋದುಗಳ/ ಮಣ್ಣಿನೊಳಗೆ ಸೇರಿಸಿದರೆ ಆರಂಭದ ಜಂತುಹುಳುಗಳ ಸಂಖ್ಯೆಯನ್ನು ನಾಶ ಮಾಡಬಹುದು. ಬೆಂಡೆಕಾಯಿ ಹಾಗೂ ಸೌತೆಕುಲದ ತರಕಾರಿ ಬೀಜಗಳನ್ನು ಕಾರ್ಬೊಸಲ್ವಾನ್ ೨೫ ಡಿ.ಎಸ್ ೧೨.ಗ್ರಾಂ/ಪ್ರತಿ ಕಿ.ಗ್ರಾಂ ಬೀಜಕ್ಕೆ ಅನುಗುಣವಾಗುವಂತೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸೌರಿಕರಣಗೊಂಡ ಏರುಸಸಿ ಮಡಿಗಳನ್ನು ತಯಾರಿಸಿ ಪ್ರತಿ ಮೀಟರ್ಗೆ ೦.೫ ಕಿ.ಗ್ರಾಂ.ನಷ್ಟು ಬೇವಿನಹಿಂಡಿ ಅಥವಾ ಪೊಂಗೆಮಿಯಾ ಹಿಂಡಿ ಅಥವಾ ಔಡಲದ ಹಿಂಡಿಯನ್ನು ಸಸಿಮಡಿಗೆ ಸೇರಿಸಿ ೧೫ ದಿನಗಳ ನಂತರ ಬಿತ್ತನೆ ಮಾಡಬೇಕು

ಟೊಮಾಟೊ, ಬದನೆಕಾಯಿ, ಮೆಣಸಿನಕಾಯಿಯಂಥ ತರಕಾರಿ ಬೆಳೆಗಳ ಬಿತ್ತನೆ ಬೀಜವನ್ನು ೧೫-೨೦ಗ್ರಾಂ/ಪ್ರತಿ ೧ಕಿ.ಗ್ರಾಂ ಬೀಜಕ್ಕೆ ಅನುಗುಣವಾಗುವಂತೆ ಜೈವಿಕ ನಾಶಕಗಳಾದ ಟ್ರೆಕೊಡರ್ಮಾ ಹಾರ್ಜೀಯಾನಂ, ಸುಡೋಮೊನಾಸ್ ಪ್ಲೂರೊಸೆನ್ಸ್ ಹಾಗೂ ಪೆಸಿಲೊಮೈಸಿಸ್ ಲಿಲಾಸಿನಸ್ಗಳಿಂದ ಬೀಜೋಪಚಾರ ಮಾಡಿ ಸಸಿಮಡಿಯಲ್ಲಿ ಬಿತ್ತನೆ ಮಾಡಬೇಕು. ಜೈವಿಕ ನಾಶಕಗಳಾದ ಟ್ರೈಕೊಡರ್ಮಾ ಹಾರ್ಜೀಯಾನಂ, ಸುಡೋಮೊನಾಸ್ ಪ್ಲೂರೊಸೆನ್ಸ್ ಹಾಗೂ ಪೆಸಿಲೊಮೈಸಿಸ್ ಲಿಲಾಸಿನಸ್ನಿಂದ ಅಭಿವೃದ್ಧಿಪಡಿಸಿದ ೫೦೦ ಕಿ.ಗ್ರಾಂ ಬೇವಿನ ಹಿಂಡಿ /೧ಟನ್ ಎರೆಗೊಬ್ಬರ/೨ಟನ್ ಕೊಟ್ಟಿಗೆ ಗೊಬ್ಬರವನ್ನು ನಾಟಿಯ ೧೫ ದಿನಗಳ ಮುಂಚೆ ಬೋದುಗಳಿಗೆ ಅಥವಾ ಮಣ್ಣಿಗೆ ಸೇರಿಸಬೇಕು

ಗಮನಿಸಿ: ಜೈವಿಕ ನಾಶಕಗಳಾದ ಟ್ರೈಕೊಡರ್ಮಾ ಹಾರ್ಜೀಯಾನಂ, ಸುಡೋಮೊನಾಸ್ ಪ್ಲೂರೊಸೆನ್ಸ್ ಹಾಗೂ ಪೆಸಿಲೊಮೈಸಿಸ್ ಲಿಲಾಸಿನಸ್ ಪ್ರತಿಯೊಂದು ೨.೦ಕಿ.ಗ್ರಾಂ/೨ಟನ್ ಕೊಟ್ಟಿಗೆ ಗೊಬ್ಬರ ಅಥವಾ ೧ ಟನ್ ಎರೆಗೊಬ್ಬರ ಅಥವಾ ೧ ಟನ್ ಬೇವಿನ ಹಿಂಡಿಯ ಜೊತೆಗೆ ಮಿಶ್ರಣ ಮಾಡಿ ಸೂಕ್ತ ತೇವಾಂಶದಡಿ ನೆರಳಿನಲ್ಲಿ ೧೫ ದಿನಗಳವರೆಗೆ ಪಾಲಿಇಥಿಲಿನ್/ಟಾರ್ಪಲಿನ್ ನಿಂದ ಮುಚ್ಚಿ ಅಭಿವೃದ್ಧಿಪಡಿಸಬೇಕು. ಬಿತ್ತನೆ ಅಥವಾ ನಾಟಿಯ ನಂತರ ಜೈವಿಕ ನಾಶಕಗಳಾದ ಟ್ರೈಕೊಡರ್ಮಾ, ಹಾರ್ಜೀಯಾನಂ, ಸುಡೋಮೊನಾಸ್ ಪ್ಲೂರೊಸೆನ್ಸ್ ಹಾಗೂ ಪೆಸಿಲೊಮೈಸಿಸ್ ಲಿಲಾಸಿನಸ್ ಪ್ರತಿ ಲೀಟರ್ ನೀರಿಗೆ ೫ ಗ್ರಾಂ ಅಥವಾ ೫ ಮಿ. ಲೀ ನಂತೆ ಮಿಶ್ರಣ ಮಾಡಿ ೩೦ ದಿನಗಳ ಅಂತರದಲ್ಲಿ ಗಿಡಕ್ಕೆ ಸಿಂಪರಣೆ ಅಥವಾ ಗಿಡದ ಬೇರುಗಳಿಗೆ ಉಣಿಸಬೇಕು (ಹನಿ ನೀರಾವರಿಯ ಮೂಲಕವು ಕೂಡ ಉಣಿಸಬಹುದು)