ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ನಾಟಿಪಶುವೈದ್ಯ

ಸೊರವು ಬಿಡದ ರಾಸುಗಳು

ಡಾ. ರವಿಕುಮಾರ್, ಪಿ
೯೦೦೮೫೯೮೮೩೨
1

ಹೈನು ರಾಸುಗಳಲ್ಲಿ ಕಂಡುಬರುವ ತೊಂದರೆಗಳು ತರಹೇವಾರಿ. ನವಮಾಸಗಳ ಕಾಲಗರ್ಭವನ್ನು ಹೊತ್ತ ಹಸು ಈಯುವ ಸಮಯ ಸಮೀಪಿಸಿದಾಗ ರೈತನಿಗಾಗುವ ಹರ್ಷ ಅಷ್ಟಿಷ್ಟಲ್ಲ. ಮನೆಯಲ್ಲಿ ಸಾಕಷ್ಟು ಕರಾವು ಇದ್ದು ಒಂದಿಷ್ಟನ್ನು ಡೈರಿಗೆ ಹಾಕಲೂ ಸಾಧ್ಯವಾದರೆ ನಮ್ಮ ಪಶುಪಾಲಕನನ್ನು ಹಿಡಿಯುವವರೇ ಇಲ್ಲ. ಮನೆಯವರ ಆರೋಗ್ಯ, ಮಕ್ಕಳ ದೇಹ ಪುಷ್ಠಿಗೂ ಸಾಕಷ್ಟು ಹಾಲು, ತಿಂಗಳ ಕೊನೆಗೆ ಸಣ್ಣ ಪುಟ್ಟ ಖರ್ಚುಗಳಿಗೂ ಒಂದಿಷ್ಟು ದುಡ್ಡು. ಆದರೆ ಅನೇಕ ವೇಳೆ ರೈತನ ಲೆಕ್ಕಾಚಾರ ತಲೆಕೆಳಗಾಗುತ್ತವೆ. ಹೈನುಗಾರಿಕೆಯಲ್ಲಿ ತಲೆದೋರುವ ಅನಿರೀಕ್ಷಿತ ಸಮಸ್ಯೆಗಳು ಅವನನ್ನು ಹೈರಾಣಾಗಿಸುತ್ತವೆ. ಅಂತಹ ಹಲವು ತೊಂದರೆಗಳಲ್ಲಿ ಹಸು ಸೊರವು ಬಿಡಲು ನಿರಾಕರಿಸುವುದೂ ಒಂದು. ವೈಜ್ಞಾನಿಕ ವಿಶ್ಲೇಷಣೆಗಳ ಪ್ರಕಾರ ಕರು ತನ್ನ ಹಲ್ಲು ಹಾಗೂ ನಾಲಿಗೆಗಳಿಂದ ಮೊಲೆತೊಟ್ಟುಗಳನ್ನು ಚೀಪಿದಾಗ ಮೆದುಳಿನಿಂದ ಆಕ್ಸಿಟೋಸಿನ್ ಎಂಬ ಊತಕ ಉತ್ಪತ್ತಿಯಾಗಿ ಹಸುವು ಸೊರವು ಬಿಡುತ್ತದೆ. ಈ ಕ್ಷಣದಿಂದ ಸರಿಸುಮಾರು ಎಂಟು ನಿಮಿಷಗಳೊಳಗಾಗಿ ಹಾಲನ್ನು ಸಂಪೂರ್ಣವಾಗಿ ಹಿಂಡಿ ತೆಗೆಯಬೇಕು, ಏಕೆಂದರೆ ಈ ಊತಕದ ಕಾರ್ಯಾವಧಿ ಅಷ್ಟು ನಿಮಿಷಗಳ ಕಾಲ ಮಾತ್ರ. ತಡವಾದಲ್ಲಿ ಒಂದಿಷ್ಟು ಹಾಲು ಕೆಚ್ಚಲಿನಲ್ಲೇ ಉಳಿದು ಮುಂದೆ ಕೆಚ್ಚಲುಬಾವಿನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಹೈನುತಳಿಗಳಾದ ಎಚ್.ಎಫ್, ಜೆರ್ಸಿ ಹಸುಗಳಲ್ಲಿ ಕರು ಕೆಚ್ಚಲಿಗೆ ಬಾಯಿ ಹಾಕದಿದ್ದಾಗ್ಯೂ ಹಾಲು ಕರೆಯುವವರು ಕೆಚ್ಚಲನ್ನು ತೊಳೆದು ನಯವಾಗಿ ಮಸಾಜ್ ಮಾಡಿದಾಗಲೂ ಸೊರವು ಬಿಡುವ ಪ್ರವೃತ್ತಿಯುಂಟು. ಕೆಲವೊಂದು ಸಂದರ್ಭಗಳಲ್ಲಿ ಹೈನು ರಾಸುಗಳು ಹಲವಾರು ಕಾರಣ ಗಳಿಂದಾಗಿ ಸೊರವು ಬಿಡಲು ನಿರಾಕರಿಸಬಹುದು. ವಿಶೇಷವಾಗಿ ನಮ್ಮ ದೇಸೀ ಹಸುಗಳಲ್ಲಿ ಹಾಗೂ ಎಮ್ಮೆಗಳಲ್ಲಿ ಈ ಸಮಸ್ಯೆ ಹೆಚ್ಚು

ಸೊರವು ಬಿಡದಿರಲು ಕಾರಣಗಳು: ೧. ಕೆಲವೊಮ್ಮೆ ಹಸು ಅಥವಾ ಎಮ್ಮೆ ಗಾಬರಿ ಗೊಳಗಾಗಿದ್ದಲ್ಲಿ ಸೊರವು ಬಿಡಲು ನಿರಾಕರಿಸುತ್ತವೆ. ಸ್ಥಳ ಬದಲಾವಣೆಯಾದಾಗ, ಆಹಾರದಲ್ಲಿ ಏಕಾಏಕಿ ಬದಲಾವಣೆಯಾದಾಗ ಅಥವಾ ಹಾಲು ಕರೆಯುವ ವ್ಯಕ್ತಿಯೇ ಬದಲಾದಾಗ ಹೀಗಾಗಬಹುದು. ಗಾಬರಿಯಾದಾಗ ಹೊರಸೂಸುವ ಎಪಿನೆಫ್ರೀನ್ ಊತಕವು ಓಕ್ಸಿಟೋಸಿನ್ ಊತಕದ ಬಿಡುಗಡೆಗೆ ಅಡ್ಡಿಪಡಿಸುತ್ತದೆ. ೨. ತನ್ನ ಕರು ಮರಣ ಹೊಂದಿದಾಗ ಎಮ್ಮೆ/ದೇಸೀ ಹಸು ಸಾಮಾನ್ಯವಾಗಿ ಸೊರವು ಬಿಡಲು ನಿರಾಕರಿಸುತ್ತದೆ. ಮನೋವೈಜ್ಞಾನಿಕ ಕಾರಣ ಗಳಿಂದಾಗಿ ಆಕ್ಸಿಟೋಸಿನ್ ಊತಕ ಉತ್ಪಾದನೆ ಯಾಗುವುದಿಲ್ಲ. ೩. ಕೆಲವು ವೇಳೆ ಮೊಲೆ ತೊಟ್ಟು ಅಥವಾ ನಾಳಗಳಲ್ಲಿ ಗಾಯಗಳಾದಾಗಲೂ ಹಸು ಸೊರವು ಬಿಡಲು ನಿರಾಕರಿಸಬಹುದು

ಲಕ್ಷಣಗಳು: ೧. ವಿಶೇಷವೆಂದರೆ ಈ ಸಂದರ್ಭಗಳಲ್ಲಿ ಹಸು/ ಎಮ್ಮೆಯ ಕೆಚ್ಚಲಿನಲ್ಲಿ ಸಾಕಷ್ಟು ಹಾಲು ಸಂಗ್ರಹವಿದ್ದರೂ ಅದು ಸೊರವು ಬಿಡಲು ಹಾಗೂ ಹಾಲು ಕರೆಯಲು ನಿರಾಕರಿಸುತ್ತದೆ. ೨. ಕೆಚ್ಚಲಿಗೆ ಕೈ ಹಾಕಿದಾಗ/ಬಲವಂತದಿಂದ ಹಾಲು ಕರೆಯಲು ಪ್ರಯತ್ನಿಸಿದರೆ ಒದೆಯುತ್ತದೆ

ಚಿಕಿತ್ಸೆ: ಮಿಶ್ರತಳಿ ರಾಸುಗಳಲ್ಲಿ ಹಸು ಸೊರವು ಬಿಡಿಸಲು ಕರುವನ್ನು ಬಿಡುವುದನ್ನು ಆರಂಭದಿಂದಲೇ ತಪ್ಪಿಸಬಹುದು; ಅಂದರೆ ಕರುವಿಗೆ ಬೇರೆಯಾಗಿ ಹಾಲು ಕರೆದಿಡಬೇಕು, ಕೆಚ್ಚಲಿಗೆ ಬಿಡಬಾರದು. ದೇಸೀ ರಾಸುಗಳು ಹಾಗೂ ಎಮ್ಮೆಗಳು ಹಾಲು ಕರೆಯುವ ಸಂದರ್ಭಗಳಲ್ಲಿ ಗಾಬರಿಗೊಳಗಾಗದಂತೆ ಎಚ್ಚರ ವಹಿಸಬೇಕು. ಕರುಗಳ ಮರಣವನ್ನು ತಪ್ಪಿಸಬೇಕು. ಹಲವು ರೈತರು ತಮ್ಮ ರಾಸುಗಳು ಸೊರವು ಬಿಡದಿದ್ದಾಗ ತಾವೇ ಆಕ್ಸಿಟೋಸಿನ್ ಚುಚ್ಚುಮದ್ದು ನೀಡಿ ಹಾಲು ಕರೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದು ರಾಸುಗಳ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳನ್ನು ಬೀರುತ್ತದೆ. ಪಶುವೈದ್ಯರ ಹೊರತಾಗಿ ಇತರರು ಇಂತಹ ಚುಚ್ಚುಮದ್ದುಗಳನ್ನು ಉಪಯೋಗಿಸುವುದು ಶಿಕ್ಷಾರ್ಹ ಅಪರಾಧವೂ ಹೌದು. ಇತ್ತೀಚೆಗೆ ಸರ್ಕಾರಗಳು ಸಹ ಈ ಔಷಧದ ಉಪಯೋಗವನ್ನು ನಿರ್ಬಂಧಿಸಿವೆ

ಮನೆಮದ್ದುಗಳು: ೧. ಸೊರವಿನ ಗೆಡ್ಡೆ/ಶತಾವರಿ ಗೆಡ್ಡೆ (Asparagus racemosus): ಒಂದು ಬೊಗಸೆಯಷ್ಟು ಸೊರವಿನ ಗೆಡ್ಡೆಯನ್ನು ದಿನಕ್ಕೆ ಮೂರು ಸಲದಂತೆ ನಾಲ್ಕು ದಿನಗಳ ಕಾಲ ನೀಡಬಹುದು. ೨. ಉಮ್ಮತ್ತಿನ ಗಿಡ (Datura metel): ಉಮ್ಮತ್ತಿನ ಗಿಡದ ಕಾಯೊಂದನ್ನು ಬಿಸಿ ಬೂದಿಯಲ್ಲಿ ಬೇಯಿಸಿ ನಂತರ ಅಕ್ಕಿ ತೌಡಿನ ಜೊತೆ ಜಜ್ಜಿ ಉಂಡೆ ಮಾಡಿ ಒಂದೇ ಬಾರಿ ತಿನ್ನಿಸಬೇಕು. ಇದನ್ನು ತಿನ್ನಿಸಿದ ದಿನ ರಾಸುಗಳನ್ನು ಹೊರಗೆ ಬಿಡಬಾರದು, ಮನೆಯಲ್ಲೇ ಕಟ್ಟಬೇಕು

(ಗ್ರಂಥ ಋಣ: ಮೂಲಿಕಾ ಪಶುವೈದ್ಯ ಬೈಫ್ ಸಂಸ್ಥೆಯ ಪ್ರಕಟಣೆ)