ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಔಷಧಿ ಸಸ್ಯಗಳು

ಲಾವಂಚ

image_
ಡಾ. ಯಶಸ್ವಿನಿ ಶರ್ಮ
9535228694
1

ಉಶೀರ ಅಥವಾ ಖಸ್ ಹುಲ್ಲು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಲಾವಂಚಕ್ಕೆ ವೈಜ್ಞಾನಿಕವಾಗಿ ’ಕ್ರೈಸೋಪೋಗಾನ್ ಝೈಜನಾಯಿಡ್ಸ್’ ಎಂಬ ಹೆಸರಿದೆ. ಪೋಯೇಸೀ ಕುಟುಂಬಕ್ಕೆ ಸೇರಿದ ಈ ಸಸ್ಯ ಹುಲ್ಲಿನ ಜಾತಿಗೆ ಸೇರಿದೆ. ತೆಳ್ಳಗೆ ಗುಂಪಾಗಿ ಬೆಳೆಯುವ ಈ ಸಸ್ಯದ ಬೇರು ಸುವಾಸನೆಯುಕ್ತವಾಗಿದ್ದು, ಔಷಧಿ ಹಾಗೂ ಸುಗಂಧ ದ್ರವ್ಯಗಳಲ್ಲಿ ಉಪಯೋಗಿಸುತ್ತಾರೆ. ಒಣಗಿದ ಬೇರು ಶೇ. ೧ ರಷ್ಟು ಸುಗಂಧ ತೈಲ ಹೊಂದಿರುತ್ತದೆ. ಇದನ್ನು ಭಟ್ಟಿ ಇಳಿಸುವಿಕೆಯ ಮೂಲಕ ಬೇರ್ಪಡಿಸಲಾಗುತ್ತದೆ. ಎಣ್ಣೆಯಲ್ಲಿ ಪರಿಮಳ ಕಡಿಮೆ ಇದ್ದು, ಇದು ಕಡುಕೆಂಪಾಗಿ ದಪ್ಪವಾಗಿರುತ್ತದೆ. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಮೂಲವಸ್ತುವಾಗಿ ಉಪಯೋಗಿಸುತ್ತಾರೆ. ಬೇರು ಹರಡಿಕೊಂಡು ಬೆಳೆಯುವುದರಿಂದ ಲಾವಂಚವನ್ನು ಮಣ್ಣಿನ ಸವಕಳಿ ತಡೆಗಟ್ಟಲು, ಬದುಗಳಲ್ಲಿ, ತೋಟ/ಗುಡ್ಡಗಳ ಇಳಿಜಾರಿನಲ್ಲಿ ಬೆಳೆಸುತ್ತಾರೆ. ಭಟ್ಟಿ ಇಳಿಸಿದ ಬೇರಿನಿಂದ ವಿವಿಧ ಕರಕುಶಲ ಸಾಮಗ್ರಿಗಳು ಚಪ್ಪಲಿ, ಟೋಪಿ, ಕಿಟಕಿಯ ಪರದೆಗಳು, ನೆಲಹಾಸುಗಳು ಇತ್ಯಾದಿ. ಹುಲ್ಲನ್ನು ಗುಡಿಸಲುಗಳಿಗೆ ಹೊದೆಸಲು ಉಪಯೋಗಿಸಿದರೆ ಹೂಗುಚ್ಚವನ್ನು ಅಲಂಕಾರಿಕ ಬಾಸ್ಕೆಟ್, ಕಸಬರಿಗೆ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಲಾವಂಚದ ಬೇರು ತಂಪುಕಾರಕವಾಗಿದ್ದು, ನೀರಿನ ಶುದ್ಧೀಕರಣದಲ್ಲಿ ಬಳಸಲಾಗುತ್ತದೆ. ಲಾವಂಚ ತೈಲ ವಾತಾಹಾರಕ ಹಾಗೂ ಗಂಟುನೋವುಗಳಲ್ಲಿ ಬಹು ಪರಿಣಾಮಕಾರಿಯಾಗಿದೆ

ಇದೊಂದು ಬಹುವಾರ್ಷಿಕ ಹುಲ್ಲಿನ ಬೆಳೆಯಾಗಿದ್ದು, ಎಲ್ಲ ತರಹದ ಮಣ್ಣಿನಲ್ಲಿಯೂ ೨೧-೪೪ಲಿ ಸೆ. ಉಷ್ಣಾಂಶವಿರುವ ಕಡೆ ಬೆಳೆಯಬಹುದು. ಬೇರಿರುವ ಕಂದುಗಳನ್ನು ೬೦ x ೪೫ ಸೆಂ.ಮೀ. ಅಂತರದಲ್ಲಿ ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡುವುದು ಸೂಕ್ತ. ಹೆಕ್ಟೇರಿಗೆ ೧೦ ಟನ್ ಕೊಟ್ಟಿಗೆ ಗೊಬ್ಬರದ ಜೊತೆ ೨೫ ಕೆ.ಜಿ. ಸಾರಜನಕ, ರಂಜಕ ಮತ್ತು ಪೊಟ್ಯಾಷ್ಯುಕ್ತ ರಸಗೊಬ್ಬರ ಒದಗಿಸಬೇಕು. ೬ ತಿಂಗಳ ನಂತರ ಇನ್ನೊಮ್ಮೆ ೨೫ ಕೆ.ಜಿ. ಸಾರಜನಕಯುಕ್ತ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಬೇಕು. ಮಳೆ ಹಾಗೂ ತೇವಾಂಶ ಹೆಚ್ಚಿರುವ ಪ್ರದೇಶದಲ್ಲಿ ನೀರಾವರಿ ಅವಶ್ಯವಿಲ್ಲ. ಒಣಪ್ರದೇಶದಲ್ಲಿ ೮-೧೦ ನೀರಾವರಿ ಕೊಡುವುದರಿಂದ ಇಳುವರಿ ಹೆಚ್ಚುತ್ತದೆ. ನಾಟಿ ಮಾಡಿದ ೧೮ ತಿಂಗಳಿಗೆ ಬೇರುಗಳು ಕೊಯ್ಲಿಗೆ ಬರುತ್ತವೆ. ಡಿಸೆಂಬರ್-ಫೆಬ್ರವರಿ ತಿಂಗಳು ಬೇರನ್ನು ಕೊಯ್ಲು ಮಾಡಲು ಸಕಾಲ. ಒಂದು ದಿನ ಮೊದಲು ಹೊಲಕ್ಕೆ ನೀರು ಹಾಯಿಸಿ ಟ್ರಾಕ್ಟರ್ ಅಥವಾ ಜೆಸಿಬಿ ಮೂಲಕ ಗಿಡಗಳನ್ನು ಬೇರುಸಹಿತ ನೆಲದಿಂದ ಎಬ್ಬಿಸಬೇಕು. ನಂತರ ಬೇರುಗಳನ್ನು ಕಾಂಡದಿಂದ ಬೇರ್ಪಡಿಸಿ ನೀರಿನಲ್ಲಿ ತೊಳೆದು ಒಣಗಿಸಿ ಶೇಖರಿಸಿಡಬಹುದು ಇಲ್ಲವೇ ಭಟ್ಟಿ ಇಳಿಸಿ ಎಣ್ಣೆ ತೆಗೆಯಬಹುದು. ಹೆಕ್ಟೇರಿಗೆ ೩-೪ ಟನ್ ಒಣಬೇರಿನ ಇಳುವರಿ ಮತ್ತು ೩೦-೪೦ ಕೆ.ಜಿ. ಎಣ್ಣೆ ಸಿಗುತ್ತದೆ