ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಬೀಜ ಪ್ರಪಂಚ

ಅಗ್ನಿಶಿಖೆ (ಗೌರಿ ಹೂವು, ಗ್ಲೋರಿಯೋಸ ಹೂವು)

image_
ಡಾ. ಕೆ. ಎಸ್. ಶೇಷಗಿರಿ
9741769213
1

ಗೌರಿ ಹೂವು, ಕರಡಿ ಕಣ್ಣಿನ ಗೆಡ್ಡೆ ಎಂದೇ ಸಾಮಾನ್ಯವಾಗಿ ಪರಿಚಿತವಿರುವ ಈ ಸಸ್ಯವನ್ನು ಅನಾದಿ ಕಾಲದಿಂದಲೂ ಭಾರತೀಯ ವೈದ್ಯ ಪದ್ದತಿಯಲ್ಲಿ ಔಷಧೀಯ ಬೆಳೆಯಾಗಿ ಬಳಸಲಾಗುತ್ತಿದೆ. ಆಫ್ರಿಕಾ ಮತ್ತು ಏಷಿಯಾ ಮೂಲ ಸ್ಥಾನವಾದ ಈ ಬಳ್ಳಿಯನ್ನು ವೈಜ್ಞಾನಿಕವಾಗಿ ’ಗ್ಲೋರಿಯೊಸ ಸುಪರ್ಬ’ ಎಂದು ಕರೆಯಲಾಗುತ್ತಿದ್ದು, ಇದು ಕೋಲ್ಚಿಕೇಸಿಯೆ ಕುಟುಂಬಕ್ಕೆ ಸೇರಿದೆ. ಇದನ್ನು ಪ್ಲೇಮ್ ಲಿಲ್ಲಿ, ಟೈಗರ್ ಕ್ಲಾ, ಗ್ಲೋರಿ ಲಿಲ್ಲಿ, ಫೈರ್ ಲಿಲ್ಲಿ ಎಂದು ಕೂಡಾ ಕರೆಯುತ್ತಾರೆ. ಇದು ನೆರೆಯ ತಮಿಳುನಾಡಿನ ರಾಜ್ಯ ಹೂವು ಕೂಡ ಹೌದು. ಈ ಸಸ್ಯವನ್ನು ಪಶ್ಚಿಮಘಟ್ಟದ ಉದ್ದಕ್ಕೂ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವುದನ್ನು ನೋಡಬಹುದು. ಈ ಗಿಡದ ಎಲ್ಲಾ ಭಾಗವೂ ವಿಷಯುಕ್ತವಾಗಿದ್ದು ಸೇವಿಸಿದ ಮಾನವ ಮತ್ತು ಪ್ರಾಣಿಗಳಿಗೆ ಮಾರಕವಾಗಬಲ್ಲದು. ಇದರ ಔಷಧೀಯ ಗುಣಗಳಿಗೆ ಗೆಡ್ಡೆ ಮತ್ತು ಬೀಜದಿಂದ ದೊರೆಯುವ ’ಕೋಲ್ಚಿಸಿನ್’ ಮತ್ತು ’ಗ್ಲೋರಿಯೋಸಿನ್’ ಎಂಬ ಆಲ್ಕಲಾಯ್ಡ್ಗಳು ಕಾರಣ. ಗೌರಿಬಳ್ಳಿಯ ಗೆಡ್ಡೆ ಮತ್ತು ಬೀಜಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಬಹು ಅಮೂಲ್ಯ ಬೆಲೆಯುಳ್ಳದ್ದಾಗಿವೆ. ಔಷಧೀಯವಾಗಿ ಇದನ್ನು ಕ್ಯಾನ್ಸರ್, ಬಂಜೆತನ, ತೆರೆದ ಗಾಯಗಳ ಉಪಚಾರ, ಹಾವು ಕಚ್ಚಿದ ಸಂದರ್ಭಗಳಲ್ಲಿ, ಮೂತ್ರ ಪಿಂಡದ ಕಾಯಿಲೆ, ಸಿಡುಬು, ಕುಷ್ಠರೋಗ ಹಾಗೂ ಚರ್ಮರೋಗಗಳ ನಿವಾರಣೆಗಾಗಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಗೌರಿ ಹೂವಿನ ಗಿಡ ಸುಮಾರು ನಾಲ್ಕು ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಬಹುವಾರ್ಷಿಕ ಬಳ್ಳಿಯಾಗಿದ್ದು, ಬುಡಭಾಗದಲ್ಲಿರುವ ಗೆಡ್ಡೆಯ ಮೂಲಕ ಅಭಿವೃದ್ದಿ ಹೊಂದುತ್ತದೆ. ಎಲೆಗಳು ಸುಮಾರು ೧೦-೨೦ ಸೆಂ.ಮೀ. ಉದ್ದವಾಗಿದ್ದು ತುದಿಯಲ್ಲಿರುವ ಎಲೆಬಳ್ಳಿಗಳ ಸಹಾಯದಿಂದ ಬಳ್ಳಿ ಹಬ್ಬುತ್ತವೆ. ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಆಕರ್ಷಕ ಕೆಂಪು ಹಳದಿ ವರ್ಣದ ಹೂವುಗಳು ಅರಳುತ್ತವೆ. ಹೂವುಗಳು ಆರು ದಳಗಳನ್ನು ಹೊಂದಿದ್ದು, ಅಂಚಿನಲ್ಲಿ ಅಂಕು-ಡೊಂಕಾಗಿರುತ್ತವೆ. ಪ್ರತಿ ಬಳ್ಳಿಯು ೭೫-೧೦೦ ಹೂವುಗಳನ್ನು ಬಿಡಬಲ್ಲದ್ದಾಗಿದ್ದು ಬೆಳೆ ೧೭೦-೧೮೦ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಎಕರೆಗೆ ಸುಮಾರು ೩೦೦ಕಿ.ಗ್ರಾಂ. ಬೀಜ ಹಾಗೂ ಐದುವರ್ಷಕ್ಕೆ ಒಮ್ಮೆ ೧೦೦೦ ಕಿ.ಗ್ರಾಂ. ಗೆಡ್ಡೆ ಪಡೆಯಬಹುದು. ಸಾಮಾನ್ಯವಾಗಿ ಗೌರಿಹೂವನ್ನು ೫೦-೬೦ ಗ್ರಾಂ ತೂಕದ ಗೆಡ್ಡೆಗಳನ್ನು ನಾಟಿ ಮಾಡುವ ಮೂಲಕ ಕೃಷಿ ಮಾಡುತ್ತಾರೆ. ಬೀಜದಿಂದ ಬೆಳೆಸಿದ ಬಳ್ಳಿಗಳು ಹೂಬಿಡಲು ೩-೪ ವರ್ಷಕಾಲ ತೆಗೆದುಕೊಳ್ಳುತ್ತವೆ. ಗೆಡ್ಡೆಗಳು ’ಗಿ’ ಆಕಾರ ಹೊಂದಿದ್ದು ಎರಡೂ ತುದಿಯಲ್ಲಿ ಒಂದು ಬೆಳೆಯುವ ಕುಡಿಯನ್ನು ಹೊಂದಿರುತ್ತವೆ. ಗೆಡ್ಡೆಗಳು ಬಹಳ ಸೂಕ್ಷ್ಮವಾಗಿದ್ದು ಕುಡಿಭಾಗಕ್ಕೆ ಯಾವುದೇ ರೀತಿಯ ಹಾನಿಯಾದರೆ ಗೆಡ್ಡೆಗಳು ಮೊಳೆಯುವುದಿಲ್ಲ. ಆದ್ದರಿಂದ ಬೀಜದ ಗೆಡ್ಡೆಗಳನ್ನು ಅತಿ ಜಾಗರೂಕತೆಯಿಂದ ಬಳಸಬೇಕು. ಚಿಕ್ಕ ಗಾತ್ರದ ಗೆಡ್ಡೆಗಳು ಮೊದಲವರ್ಷ ಹೂವು ಬಿಡುವುದಿಲ್ಲವಾದ್ದರಿಂದ ಮರುವರ್ಷ ಬಿಡುತ್ತವೆ. ಉತ್ತಮ ಮೊಳಕೆ ಪಡೆಯಲು ಗೆಡ್ಡೆಗಳನ್ನು ಶೇ.೦.೧ರ ಕಾರ್ಬೆಂಡೈಜಿಮ್ನಿಂದ ಉಪಚರಿಸಿ ಬಿತ್ತನೆ ಮಾಡಬೇಕು. ಉಪಚರಿಸಿದ ಗೆಡ್ಡೆಗಳನ್ನು ಜೂನ್-ಜುಲೈ ಅವಧಿಯಲ್ಲಿ ೪೫-೬೦ಸೆಂ.ಮೀ. ಸಾಲುಗಳಲ್ಲಿ ೩೦-೪೫ಸೆಂ.ಮೀ. ಅಂತರದಲ್ಲಿ ೬-೮ಸೆಂ.ಮೀ. ಆಳದಲ್ಲಿ ನಾಟಿ ಮಾಡಬೇಕು. ಒಂದು ಎಕರೆ ಪ್ರದೇಶಕ್ಕೆ ಸುಮಾರು ೬೦೦ ಕಿ.ಗ್ರಾಂ ಬಿತ್ತನೆ ಗೆಡ್ಡೆಗಳು ಬೇಕಾಗುತ್ತವೆ