ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಚಿತ್ರ ಲೇಖನ

ಪೈರಿಲ್ಲಾ- ಕಬ್ಬಿನ ಏರೋಪ್ಲೇನ್ ತಿಗಣೆ

image_
ಡಾ. ಎಸ್. ಟಿ. ಪ್ರಭು,
9448182225
1

ಪೈರಿಲ್ಲಾ ಎಂಬುದು ಕಬ್ಬಿನ ರಸ ಹೀರುವ ತಿಗಣೆ. ಇದರ ವೈಜ್ಞಾನಿಕ ಹೆಸರು ’ಪೈರಿಲ್ಲಾ ಪರ್ಪೂಯಸಿಲ್ಲಾ’. ಪ್ರೌಢ ಮತ್ತು ಮರಿ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟೊಟ್ಟಾಗಿ ಕಬ್ಬಿನ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಎಲೆಗಳು ಸ್ವಲ್ಪ ಅಲುಗಾಡಿದರೂ ಸಹ ತಕ್ಷಣ ಎತ್ತರಕ್ಕೆ ಜಿಗಿಯುತ್ತವೆ. ಆದ್ದರಿಂದ ಇದನ್ನು ’ಕಬ್ಬಿನ ಜಿಗಿಹುಳು’ ಎಂದೂ ಕರೆಯುತ್ತಾರೆ. ಈ ಕೀಟಗಳು ಇತರೆ ಬೆಳೆಗಳಾದ ಜೋಳ, ಗೋಧಿ, ಭತ್ತ, ಮಾವು, ಓಟ್ಸ್, ಬಾರ್ಲಿತಯಲ್ಲೂ ಸಹ ಬಾಧೆಯನ್ನು ಉಂಟು ಮಾಡುತ್ತವೆ. ಇವುಗಳ ಹಾವಳಿ ನಮ್ಮ ರಾಜ್ಯದಲ್ಲಿ ಕೆಲವೊಮ್ಮೆ ಕಂಡುಬಂದರೂ, ಪಂಜಾಬ್, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ

3

ಪ್ರೌಢ ಹುಳುಗಳು ೧ ರಿಂದ ೧.೫ ಸೆಂ.ಮೀ. ಉದ್ದವಿದ್ದು ಒಣ ಹುಲ್ಲಿನ ಬಣ್ಣದವಾಗಿರುತ್ತವೆ. ಬೆನ್ನಿನ ಮೇಲೆ ೨ ಜೊತೆ ರೆಕ್ಕೆಗಳು ಮನೆ ಛಾವಣಿಯಂತೆ ಹರಡಿಕೊಂಡಿರುತ್ತವೆ ಮತ್ತು ತಲೆಯು ಉದ್ದನಾಗಿ ಮುಂದೆ ಚಾಚಿಕೊಂಡು ಕೊಕ್ಕಿನ ರೂಪದಲ್ಲಿ ಕಾಣಿಸುತ್ತದೆ. ಆದ್ದರಿಂದಲೇ ಈ ಕೀಟಗಳನ್ನು ’ಏರೋಪ್ಲೇನ್ ತಿಗಣೆ’ ಗಳೆಂದು ಕರೆಯುವುದುಂಟು. ತಾಯಿ ಕೀಟವು ಸುಮಾರು ೬೦೦ ರಿಂದ ೮೦೦ ತೆಳು ಹಸಿರು ಬಣ್ಣದ ಮೊಟ್ಟೆಗಳನ್ನು ಗುಂಪು ಗುಂಪಾಗಿ ಇಡುತ್ತದೆ. ಈ ಮೊಟ್ಟೆಗಳನ್ನು ಬಿಳಿ ಬಣ್ಣದ ಹತ್ತಿಯಂತಹ ಮೇಣವನ್ನು ಸ್ರವಿಸಿ ರಕ್ಷಣೆಗಾಗಿ ಮುಚ್ಚುತ್ತದೆ. ಮೊಟ್ಟೆಯಿಂದ ಹೊರಬಂದ ಮರಿ ತಿಗಣೆಗಳು ಬಿಳಿ ಬಣ್ಣದವಿದ್ದು ತಮ್ಮ ಬೆನ್ನಿನ ಹಿಂಭಾಗದ ತುದಿಯಲ್ಲಿ ಸತತವಾಗಿ ಮೇಣವನ್ನು ಸ್ರವಿಸುತ್ತಿರುತ್ತವೆ. ಈ ಮೇಣವು ಎರಡು ಕವಲೊಡೆದ ಬಾಲಗಳಂತೆ ಮರಿಗಳ ಹಿಂಭಾಗದಲ್ಲಿ ಯಾವಾಗಲೂ ನೂಲಿನ ಎಳೆಗಳಂತೆ ಅಂಟಿಕೊಂಡಿರುತ್ತವೆ. ಈ ಕೀಟವು ತನ್ನ ಜೀವನಚಕ್ರವನ್ನು ಎರಡು ತಿಂಗಳಲ್ಲಿ ಪೂರ್ಣ ಗೊಳಿಸಿ ಕಬ್ಬು ಕಟಾವು ಆಗುವುದರೊಳಗೆ ೪ ರಿಂದ ೫ ಸಂತತಿಗಳನ್ನು ಮುಗಿಸುತ್ತದೆ

5

ಪ್ರೌಢ ಮತ್ತು ಮರಿಹುಳುಗಳು ಎರಡೂ ಸೇರಿ ಕಬ್ಬಿನ ಎಲೆಗಳಿಂದ ಸತತವಾಗಿ ರಸವನ್ನು ಹೀರುತ್ತವೆ. ಈ ಹಾವಳಿಯಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಂಡು ಬೆಳೆ ಕುಗ್ಗುತ್ತದೆ. ಕಬ್ಬಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿ ಕಬ್ಬಿನ ರಸದ ಗುಣಮಟ್ಟದಲ್ಲಿಯೂ ಸಹ ಇಳಿಕೆಯಾಗುತ್ತದೆ ಅಂದರೆ ಸುಕ್ರೋಸ್ ಅಂಶ ಕಡಿಮೆಯಾಗುತ್ತದೆ. ಈ ಕೀಟಗಳು ಸತತವಾಗಿ ದ್ರವರೂಪದ ಆಹಾರವನ್ನು ಹೀರು ವುದರಿಂದ ತಮ್ಮ ದೇಹದಲ್ಲಿನ ಹೆಚ್ಚಾದ ತೇವಾಂಶವನ್ನು ಹೊರ ಹಾಕುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಸತತವಾಗಿ ದ್ರವರೂಪದ, ಸಕ್ಕರೆಯಿಂದ ಕೂಡಿದ ಸಿಹಿ ಅಂಟು ಪದಾರ್ಥವನ್ನು ಮಲದ ರೂಪದಲ್ಲಿ ಹೊರ ಚೆಲ್ಲುತ್ತವೆ. ಇತರೆ ಎಲೆಗಳ ಮೇಲೆ ಈ ಅಂಟು ದ್ರವವು ಶೇಖರಣೆಯಾಗಿ ಅದರ ಮೇಲೆ ಕಪ್ಪು ಬಣ್ಣದ ಕಾಡಿಗೆ (ಬೂಸ್ಟು) ಶಿಲೀಂಧ್ರ ಬೆಳೆಯುವುದು ಈ ಕೀಟದ ಹಾವಳಿಯ ಅತಿಯಾದ ತೀವ್ರತೆಯನ್ನು ತಿಳಿಸುತ್ತದೆ

ಕೀಟದ ನಿರ್ವಹಣೆ:

  • ಬೆಳೆ ಕಟಾವು ನಂತರ ಹೊಲದಲ್ಲಿರುವ ಕಬ್ಬಿನ ರವುದಿಯನ್ನು ನಾಶ ಮಾಡಬೇಕು. ಹೆಚ್ಚಿನ ರವುದಿಯನ್ನು ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು.
  • ಕೀಟಗಳ ಸಂಖ್ಯೆ ತೀವ್ರವಾಗಿದ್ದಾಗ ಕಬ್ಬಿನ ಎಲೆಗಳನ್ನು ಮರಿ ಮತ್ತು ಮೊಟ್ಟೆಗಳ ಸಮೇತ ಕಿತ್ತು ನಾಶಮಾಡಬೇಕು.
  • ಪೈರಿಲ್ಲಾ ಕೀಟಗಳಿಗೆ ಶತ್ರುಕೀಟವಾಗಿ ’ಎಪಿರಿಕೇನಿಯಾ’ ಎಂಬ ಪತಂಗ ಜಾತಿಯ ಮರಿಗಳು ನೈಸರ್ಗಿಕವಾಗಿ ಪರತಂತ್ರ ಜೀವಿಯಾಗಿ ಆಕ್ರಮಣ ಮಾಡುವುದರಿಂದ ಈ ಕೀಟಗಳ ಸಂಖ್ಯೆಯು ಕಡಿಮೆಯಾಗುತ್ತದೆ.
  • ಬೆಳೆಯು ಎಳೆಯದಿದ್ದಾಗ ಹಾಗು ಸಿಂಪರಣೆ ಮಾಡಲು ಸರಾಗವಿದ್ದರೆ (ಜೋಡಿ ಸಾಲು ಪದ್ದತಿಯಲ್ಲಿ) ಮೆಲಥಿಯಾನ್ ಕೀಟನಾಶಕ ವನ್ನು ಪ್ರತಿ ಲೀಟರ್ ನೀರಿಗೆ ೨ ಮಿ.ಲೀ.ನಂತೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.
  • 12