ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
೯೪೪೯೬೨೩೨೭೫
1

ಮಲೆನಾಡ ಮಡಿಲಲ್ಲಿರುವ ಕುಪ್ಪಳ್ಳಿ ಹೆಸರನ್ನು ಕೇಳದವರೇ ಇಲ್ಲ. ಕುವೆಂಪು ಅವರ ಕಾರಣಕ್ಕೆ ಈ ಊರು ರಾಷ್ಟ್ರ ಪ್ರಸಿದ್ಧಿ ಪಡೆದಿದೆ. ಈ ಊರಿನ ರೈತ ಶ್ರೀ ಕೆ.ಪಿ.ರವಿ ಸಾವಯವ ಕೃಷಿಯಲ್ಲಿ ಸಾಧನೆಗೈದು ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ರವಿಯವರಿಗೆ ದೂರದ ದೇಶ ದುಬೈನಲ್ಲಿ ಕೈತುಂಬಾ ಸಂಬಳ ಉದ್ಯೋಗದ ಆಕರ್ಷಣೆಯ ನಡುವೆಯೂ, ಇವರಿಗೆ ಕೃಷಿಯ ಸೆಳೆತ ತನ್ನೂರಿಗೆ ತಂದು ನಿಲ್ಲಿಸಿತು. ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಲೇಬೇಕೆಂಬ ನಿರ್ಧಾರದೊಂದಿಗೆ ಕುಪ್ಪಳ್ಳಿಯಲ್ಲಿ ಕೃಷಿ ಮಾಡಲು ಆರಂಭಿಸಿದರು.ಇಂದು ಭತ್ತದ ಕೃಷಿಯೆಂದರೆ ಅದು ನಷ್ಟದ ಬಾಬತ್ತು ಎಂದು ಕೆಲ ರೈತರು ಗದ್ದೆಗಳನ್ನು ಹಾಳುಗೆಡುತ್ತಿರುವ ಈ ಸಂದರ್ಭದಲ್ಲಿ ಇವರು ಭತ್ತ ಬೆಳೆಯಲು ಮುಂದಾದರು. ಇದನ್ನು ನೋಡಿದ ಗ್ರಾಮಸ್ಥರು ರವಿಯವರ ಕೃಷಿ ಚಟುವಟಿಕೆಯ ಮೇಲೆ ಸೋಜಿಗದಿಂದ ನೋಡತೊಡಗಿದರು. ಆದರೆ ಆಹಾರ ಬೆಳೆಯಿಲ್ಲದಿದ್ದರೆ ಕೃಷಿಗೆ ಅರ್ಥವಿಲ್ಲ ಎಂಬ ಇವರ ದೃಢ ನಿಲುವು ಹಲವರಿಗೆ ಅಚ್ಚರಿ ಮೂಡಿಸಿತ್ತು. ಆದರೂ ಇವರು ಧೃತಿಗೆಡದೆ ಕೃಷಿ ಕಾಯಕದಲ್ಲಿ ಮುಂದಾದರು. ಸಾವಯವ ಪದ್ಧತಿಯನ್ನು ಅನುಸರಿಸಿ ಭತ್ತದ ಬೆಳೆಯಲ್ಲಿ ಅತಿ ಹೆಚ್ಚು ಇಳುವರಿ ತೆಗೆದು ಇತರ ರೈತರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇರುವ ಅಲ್ಪ ಜಮೀನಿನಲ್ಲಿ ಇವರು ಅಡಿಕೆ ತೋಟವನ್ನು ಸ್ವಲ್ಪಮಟ್ಟಿಗೆ ಮಾಡಿದ್ದಾರೆ. ಈ ತೋಟದಲ್ಲಿ ಕಾಳುಮೆಣಸನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಇವರು ೨೦೦೧ರಲ್ಲಿ ೭ ಎಕರೆ ಭೂಮಿಯನ್ನು ಕೊಂಡು ಎರಡು ಎಕರೆಯಲ್ಲಿ ತೋಟಗಾರಿಕೆ ಮಾಡಿ, ಉಳಿದ ೫ ಎಕರೆ ಭೂಮಿಯಲ್ಲಿ ಭತ್ತದ ಬೆಳೆ ಬೆಳೆಯುತ್ತಿದ್ದಾರೆ. ಇವರು ೭ ಎಮ್ಮೆಗಳು, ಒಂದು ಹಸುವನ್ನು ಸಾಕಿ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಹಸುವಿನ ಸಗಣಿ ಗಂಜಲಕ್ಕಿಂತ ಎಮ್ಮೆಯ ಸಗಣಿ, ಗಂಜಲವೂ ಜಮೀನಿಗೆ ಪರಿಣಾಮಕಾರಿ ಎಂಬುದು ಇವರು ಕಂಡುಕೊಂಡ ಸತ್ಯ. ಇದರಿಂದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿಯೇ ಬೆಳೆಯುತ್ತಾರೆ. ಭತ್ತದ ಮಾರಾಟಕ್ಕೆ ತಾವೇ ಮಾರುಕಟ್ಟೆಯನ್ನು ಸಹ ಕಂಡುಕೊಂಡಿದ್ದಾರೆ.ಇವರ ವಿಶೇಷತೆಯೆಂದರೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವಂತಹ ಕ್ರಿಯಾಶೀಲ ವ್ಯಕ್ತಿತ್ವ ಇವರದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷರಾಗಿ ತೀರ್ಥಹಳ್ಳಿ ಸುತ್ತಮುತ್ತಲಿನ ರೈತರಿಗೆ ಕೃಷಿಯಲ್ಲಿ ನೆರವು ನೀಡುವಂತಹ ಆಪದ್ಭಾಂದವರಾಗಿದ್ದಾರೆ. ಕೂಲಿಕಾರ್ಮಿಕರ ಅಭಾವವಿರುವುದರಿಂದ ಟ್ರ್ಯಾಕ್ಟರ್ ಮತ್ತು ಟಿಲ್ಲರ್ಗಳನ್ನು ಇವರು ಉಪಯೋಗಿಸುತ್ತಿದ್ದಾರೆ.ರವಿಯವರು ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರಾಗಿದ್ದಾರೆ. ಇಡೀ ತಾಲ್ಲೂಕಿನಲ್ಲಿ ಸಾವಯವ ಪೋಷಕಾಂಶಗಳ ಬಳಕೆ, ಸಾವಯವ ಉತ್ಪನ್ನಗಳ ಮಾರುಕಟ್ಟೆಯ ಬಗ್ಗೆ ಸಾಕಷ್ಟು ಮಾಹಿತಿ ಹಾಗೂ ನೆರವನ್ನು ನೀಡುತ್ತಾ ಬಂದಿರುವವರಲ್ಲಿ ಇವರು ಪ್ರಮುಖರಾಗಿದ್ದಾರೆ. ವಿಶೇಷವಾಗಿ ಕೃಷಿಯಲ್ಲಿ ಬರುವಂತಹ ನೂತನ ತಂತ್ರಜ್ಞಾನ ಕುರಿತಂತೆ ರೈತರಿಗೆ ಮಾಹಿತಿಯನ್ನು ತಲುಪಿಸುವಲ್ಲಿ ಸದಾ ಉತ್ಸುಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪ್ರಗತಿಶೀಲ ವ್ಯಕ್ತಿತ್ವವುಳ್ಳ ರೈತ ಶ್ರೀ ಕೆ.ಪಿ.ರವಿ ಕುಪ್ಪಳ್ಳಿಯವರನ್ನು ಸಾವಯವ ಕೃಷಿ ಕುರಿತ ಮಾಹಿತಿಗಾಗಿ ಸಂಪರ್ಕಿಸಿ.

ಶ್ರೀ ಕೆ.ಪಿ.ರವಿ, ಕುಪ್ಪಳಿ ಗ್ರಾಮ, ತೀರ್ಥಹಳ್ಳಿ(ತಾ), ಶಿವಮೊಗ್ಗ(ಜಿ). 9481986410