ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಉಡುಪಿ ಮಲ್ಲಿಗೆ

ಚೈತನ್ಯ ಹೆಚ್. ಎಸ್., ಬಿ. ಧನಂಜಯ,
೯೪೮೦೪೫೮೦೮೩
1

ವಾಣಿಜ್ಯ ಹೂ ಬೆಳೆಗಳಲ್ಲಿ ಮುಖ್ಯವಾದುದು ಮಧುರ ಪರಿಮಳ ಬೀರುವ ಮಲ್ಲಿಗೆ, ಇದು ಮನೆಯ ಅಂಗಳದಲ್ಲಿದ್ದರಂತೋ ಇಡೀ ವಾತಾವರಣಕ್ಕೆ ಒಂದು ಶೋಭೆ. ಮಲ್ಲಿಗೆಯನ್ನು ಮುಡಿಯಲು, ಪೂಜೆಗೆ, ಅತಿಥಿ ಸತ್ಕಾರಕ್ಕೆ, ಸಭಾಂಗಣ ಅಲಂಕಾರಕ್ಕೆ ಉಪಯೋಗಿಸಲಾಗುತ್ತದೆ. ಇದಲ್ಲದೆ ಮಲ್ಲಿಗೆ ಹೂವನ್ನು ಸಂಸ್ಕರಿಸಿ ಸುಗಂಧ ತೈಲ ಉತ್ಪಾದನೆಯಲ್ಲೂ ಬಳಸಲಾಗುತ್ತದೆ.

ಉಡುಪಿ ಮಲ್ಲಿಗೆಯನ್ನು ಉಡುಪಿ ಜಿಲ್ಲೆಯಲ್ಲಿ ಸುಮಾರು ೧೧೬ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು ೮೬೪ ಟನ್ ಹೂಗಳನ್ನು ಉತ್ಪಾದಿಸಲಾಗುತ್ತದೆ. ಮಲ್ಲಿಗೆ ಕೃಷಿಕರು ಮೊಗ್ಗುಗಳನ್ನು ಬಿಡಿಸಿ, ಚೆಂಡುಗಳನ್ನು ಕಟ್ಟಿ ಸ್ಥಳೀಯ ಮಾರುಕಟ್ಟೆಗೆ ಮತ್ತು ವಿಮಾನ ಮೂಲಕ ಮುಂಬಯಿ, ದೆಹಲಿ, ಅಹಮದಾಬಾದ್ ನಗರಗಳಿಗೆ ಮತ್ತು ಸೌದಿ ದೇಶಗಳಿಗೆ ಕಳುಹಿಸುತ್ತಾರೆ. ಕರಾವಳಿ ಪ್ರದೇಶದ ಸಣ್ಣ ಹಿಡುವಳಿದಾರರಿಗೆ ಮಲ್ಲಿಗೆ ಕೃಷಿ ಒಂದು ವರದಾನ ಎನ್ನಬಹುದು. ಕರಾವಳಿ ಪ್ರದೇಶಕ್ಕೆ ಸೀಮಿತವಾದಂತಹ ಪ್ರಭೇದವಾಗಿರುವ ಹಾಗೂ ಸ್ಥಳೀಯ ಮುಖ್ಯ ವಾಣಿಜ್ಯ ಹೂ ಬೆಳೆಯಾಗಿರುವ ಉಡುಪಿ ಮಲ್ಲಿಗೆ, ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಉಡುಪಿ ಮಲ್ಲಿಗೆ ತನ್ನ ವಿಶಿಷ್ಟವಾದ ಪರಿಮಳ, ವಿಶೇಷ ಗುಣಮಟ್ಟ ಹಾಗೂ ಜನಪ್ರಿಯತೆಯಿಂದ ಭೌಗೋಳಿಕ ಮೂಲಕ ಗುರುತಿಸುವಿಕೆಯಾದ ಭೌಗೋಳಿಕ ಸಂಕೇತ (ಜಿ.ಐ) Geographical Indication(GI) ಅನ್ನು ಪಡೆದಿದ್ದು ಕರ್ನಾಟಕ ರಾಜ್ಯದಲ್ಲಿ ಭೌಗೋಳಿಕ ಸಂಕೇತ ಪಡೆದ ಕೆಲವೇ ಬೆಳೆಗಳಲ್ಲಿ ಇದೂ ಒಂದಾಗಿದೆ.

ಉಡುಪಿ ಮಲ್ಲಿಗೆಯ ಗುಣಲಕ್ಷಣಗಳು

ಉಡುಪಿ ಮಲ್ಲಿಗೆಯ ವೈಜ್ಞಾನಿಕ ಹೆಸರು ಜಾಸ್ಮಿನಿಯಮ್ ಸಾಂಬ್ಯಾಕ್ ’ಅನಿಯಾನಮ್’. ಸಾಮಾನ್ಯವಾಗಿ ಇದು ಪೊದೆಯಾಕಾರದಲ್ಲಿ ಬೆಳೆಯುವ ತಳಿಯಾಗಿದ್ದು ಎಲೆಗಳು ಅಂಡಾಕಾರ ಅಥವಾ ಹೃದಯಾಕಾರವಿರುತ್ತದೆ. ಹೂಗಳಲ್ಲಿ ಸುಗಂಧದ ಅಂಶ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಬೇಗ ಬಾಡುವುದಿಲ್ಲ. ಇದರ ಮೊಗ್ಗುಗಳು ಕೊಯ್ಲು ಮಾಡಿದ ೧೦-೧೨ ಘಂಟೆಗಳವರೆಗೂ ಅರಳುವುದಿಲ್ಲ ಮತ್ತು ಬಾಡುವುದಿಲ್ಲ. ಹಾಗಾಗಿ ದೂರದ ನಗರಗಳಿಗೆ ಹೂಗಳನ್ನು ಕಳಿಸುವುದು ಸುಲಭ. ಈ ತಳಿಯ ಗಿಡಗಳು ವರ್ಷ ಪೂರ್ತಿ ಹೂ ಬಿಡುತ್ತವೆ. ಅದರಲ್ಲೂ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಹಾಗೂ ಡಿಸೆಂಬರ್ ಮತ್ತು ಫೆಬ್ರ್ರವರಿ ತಿಂಗಳುಗಳಲ್ಲಿ ಅತೀ ಹೆಚ್ಚು ಹೂ ಬಿಡುತ್ತವೆ. ಉಳಿದ ಅವಧಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೂ ಬಿಡುವುದನ್ನು ಕಾಣಬಹುದು.

ಉಡುಪಿ ಮಲ್ಲಿಗೆ ಕರಾವಳಿಯ ಎಲ್ಲಾ ಪ್ರದೇಶಕ್ಕೂ ಹೊಂದಿಕೊಂಡು ಬೆಳೆಯುವ ಗುಣ ಹೊಂದಿದೆ. ಮಲ್ಲಿಗೆಯನ್ನು ಸಮತಟ್ಟಾದ ಹಾಗೂ ಬೆಟ್ಟ ಪ್ರದೇಶದ ಇಳಿಜಾರು ಪ್ರದೇಶಗಳಲ್ಲೂ ಸಹ ಬೆಳೆಯಬಹುದು. ಉತ್ತರ ಮತ್ತು ಪೂರ್ವ ದಿಕ್ಕಿನಿಂದ ಬೀಳುವ ಸೂರ್ಯನ ಬೆಳಕು ಗಿಡದ ಬೆಳವಣಿಗೆಗೆ ಸಹಕಾರಿ. ದಿನ ಪೂರ್ತಿ ಸೂರ್ಯನ ಬೆಳಕು ಮಲ್ಲಿಗೆಯ ಮೇಲೆ ಬಿದ್ದರೆ ಗಿಡದ ಬೆಳವಣಿಗೆ ಉತ್ತಮವಾಗಿರುತ್ತದೆ.

ಮಲ್ಲಿಗೆ ಸಾಮಾನ್ಯವಾಗಿ ಸಾವಯವ ಪದಾರ್ಥಗಳಿಂದ ಕೂಡಿದ ಫಲಭರಿತ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಮಲ್ಲಿಗೆಯನ್ನು ಮರಳು ಮಿಶ್ರಿತ ಕೆಂಪುಗೋಡು, ಮರಳುಮಿಶ್ರಿತ ಗೋಡು ಮಣ್ಣುಗಳಲ್ಲಿ ಬೆಳೆಯಬಹುದು. ಈ ಬೆಳೆ ಬೆಳೆಯುವ ಜಾಗದಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲದೆ ಬಸಿದು ಹೋಗುವಂತಿರಬೇಕು. ಬೇರಿನ ಭಾಗದಲ್ಲಿ ನೀರು ಹೆಚ್ಚು ಕಾಲ ನಿಂತರೆ ಗಿಡಗಳು ಸಾಯುತ್ತವೆ. ಜೇಡಿಮಣ್ಣ್ಣು ಮತ್ತು ಅಧಿಕ ಮರಳು ಮಿಶ್ರಿತ ಮಣ್ಣುಗಳಿದ್ದರೆ ಮಲ್ಲಿಗೆ ಬೆಳೆಗೆ ಯೋಗ್ಯವಲ್ಲ.

8

ಸಸ್ಯಾಭಿವೃದ್ಧಿ

ಮಲ್ಲಿಗೆ ತಳಿಯ ಸಸ್ಯಾಭಿವೃದ್ಧಿ ನಿರ್ಲಿಂಗ ರೀತಿಯಲ್ಲಿ ಮಾಡಬಹುದು. ಮಳೆಗಾಲದ ಸಮಯದಲ್ಲಿ ಕಾಂಡದ ತುಂಡುಗಳಿಂದ ಅಥವಾ ಗೂಟಿ ಪದ್ಧತಿಯಿಂದ ಕೂಡಾ ಸಸ್ಯಾಭಿವೃದ್ಧಿ ಮಾಡಬಹುದು. ಇಲ್ಲಿ ಕಾಂಡದ ತುಂಡುಗಳ ಆಯ್ಕೆ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಮೃದು ಅಥವಾ ಮಧ್ಯದ ಗಾತ್ರದ ೧೨ ರಿಂದ ೧೫ ಸೆಂ.ಮೀ. ಉದ್ದವಿರುವ ಕಾಂಡದ ತುಂಡುಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಇವುಗಳನ್ನು ೨೦೦೦ ಪಿ.ಪಿ.ಎಂ ಐಬಿಎ (ಇಂಡೋಲ್ ಬಿಟೊರಿಕ್ ಆಮ್ಲ) ದ್ರಾವಣದಲ್ಲಿ ಐದು ನಿಮಿಷಗಳ ಕಾಲ ಬುಡ ನೆನೆಯುವಂತೆ ಅದ್ದಿದ ನಂತರ ಮಣ್ಣು, ಗೊಬ್ಬರ ಮತ್ತು ಮರಳು (೧:೧:೧)

ಮಿಶ್ರಣ ತುಂಬಿದ ಪ್ಲಾಸ್ಟಿಕ್ ತೊಟ್ಟೆ(ಕವರ್)ಗಳಲ್ಲಿ ಅಥವಾ ಸಸಿ ಮಡಿಯಲ್ಲಿ ನೆಡಬಹುದು. ಆದರೆ ಈ ಕಾಂಡದ ತುಂಡುಗಳ ಮೇಲೆ ಹೆಚ್ಚಿನ ಬಿಸಿಲು ಬೀಳದಂತೆ ನೆರಳು ಒದಗಿಸಬೇಕು. ಈ ಕಾಂಡದ ತುಂಡುಗಳು ಚಿಗುರಿ ಸರಿಯಾಗಿ ಬೇರು ಬಿಡಲು ೩೦ ರಿಂದ ೪೫ ದಿನ ತೆಗೆದುಕೊಳ್ಳುತ್ತದೆ. ನಂತರ ಇದನ್ನು ಬಿಸಿಲು ಬೀಳುವ ಜಾಗಕ್ಕೆ ವರ್ಗಾಯಿಸಬೇಕು.

ಮಲ್ಲಿಗೆ ಗಿಡಗಳ ನಾಟಿ ವಿಧಾನ

ಆಯ್ಕೆ ಮಾಡಿಕೊಂಡ ಪ್ರದೇಶವನ್ನು ಸ್ವಚ್ಛ ಮಾಡಿಕೊಂಡು, ನಂತರ ಸೂಕ್ತ ಅಂತರದಲ್ಲಿ ಅಂದರೆ ಸಾಲಿನಿಂದ ಸಾಲಿಗೆ ೮ ಅಡಿ ಮತ್ತು ಗಿಡದಿಂದ ಗಿಡಕ್ಕೆ ೮ ಅಡಿ ಅಂತರವನ್ನು ನೀಡಬೇಕಾಗುತ್ತದೆ. ೨ ಅಡಿ ಅಗಲ ಮತ್ತು ಆಳದ ಗುಣಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಕರಾವಳಿ ಪ್ರದೇಶದಲ್ಲಿ ಉಡುಪಿ ಮಲ್ಲಿಗೆ ಗಿಡದ ಬೆಳವಣಿಗೆ ಚೆನ್ನಾಗಿರುವುದರಿಂದ, ಗುಣಿ ತೆಗೆದ ಒಂದೆರಡು ವಾರಗಳ ನಂತರ ಮೇಲ್ಮಣ್ಣಿನ ಜೊತೆ ೨೦ ಕಿ.ಗ್ರಾಂ ನಷ್ಟು ಚೆನ್ನಾಗಿ ಕಳಿತ ಪುಡಿಯಾದ ಕೊಟ್ಟಿಗೆ ಗೊಬ್ಬರ ಅಥವಾ ಎಲೆ ಗೊಬ್ಬರವನ್ನು ಮಿಶ್ರ ಮಾಡಿ ತುಂಬಬೇಕು. ನಂತರ ಪ್ಲಾಸ್ಟಿಕ್ ತೊಟ್ಟ್ಟೆಯಲ್ಲಿ ಬೆಳೆಸಿದ ಮಲ್ಲಿಗೆ ಗಿಡವನ್ನು ಹೊರತೆಗೆದು ಗುಣಿಯ ಮಧ್ಯಭಾಗದಲ್ಲಿ ನೆಟ್ಟು ನೀರನ್ನು ಕೊಡಬೇಕು. ನಾಟಿಯನ್ನು ಸಂಜೆಯ ತಂಪು ಹೊತ್ತಿನಲ್ಲಿ ಮಾಡುವುದು ಸೂಕ್ತ.

ನೀರಿನ ನಿರ್ವಹಣೆ

ಉಡುಪಿ ಮಲ್ಲಿಗೆ ವರ್ಷ ಪೂರ್ತಿ ಹೂ ಬಿಡುವುದರಿಂದ, ಪ್ರತೀ ದಿನ ಅಥವಾ ೨-೩ ದಿನಗಳಿಗೊಮ್ಮೆ ನೀರು ಕೊಡುವುದು ಸೂಕ್ತ. ಹೂ ಬಿಡುವ ಅವಧಿಯಲ್ಲಿ ಪ್ರತೀ ದಿನ ಸ್ವಲ್ಪ ಪ್ರಮಾಣದಲ್ಲಿ ನೀರು ಕೊಡುವುದು ಒಳ್ಳೆಯದು. ಮಲ್ಲಿಗೆಗೆ ನೀರನ್ನು ಹನಿ ನೀರಾವರಿ ಮುಖಾಂತರ ನೀಡುವಾಗ ಪ್ರತೀ ದಿನ ೬-೮ ಲೀ. ನಷ್ಟು ನೀರನ್ನು ಒದಗಿಸಬೇಕು. ಮಳೆಗಾಲದಲ್ಲಿ ಸರಾಗವಾಗಿ ನೀರು ಬಸಿದು ಹೋಗಲು ಸೂಕ್ತ ಆಳದ ಬಸಿಗಾಲುವೆಯನ್ನು ನಿರ್ಮಿಸುವುದು ಒಳ್ಳೆಯದು.

ಬೆಳೆ ನಿರ್ವಹಣೆ

ಮೊಗ್ಗು ಚಿವುಟುವುದು: ಮಲ್ಲಿಗೆ ಗಿಡಗಳು ನಾಟಿ ಮಾಡಿದ ಹೊಸ ಚಿಗುರಿನ ಜೊತೆ ಹೂಗಳನ್ನು ಬಿಡುತ್ತವೆ. ಆದರೆ ಗಿಡ ಚೆನ್ನಾಗಿ ಬೆಳೆಯುವ ಮುಂಚೆಯೇ ಹೂಗಳನ್ನು ಅರಳಲು ಬಿಟ್ಟರೆ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಗಿಡ ನೆಟ್ಟ ೬ ತಿಂಗಳವರೆಗೆ ಮೊಗ್ಗುಗಳನ್ನು ಚಿವುಟಿ ಹಾಕಬೇಕು.

18

ಬಳ್ಳಿಯ ಸ್ವಚ್ಛತೆ ಮತ್ತು ಸವರುವಿಕೆ: ಪ್ರತೀ ವರ್ಷ ಬಳ್ಳಿಯನ್ನು ಸ್ವಚ್ಛ ಮಾಡುವುದು ಮುಖ್ಯ. ರೋಗ ಮತ್ತು ಕೀಟ ಬಾಧೆಗೆ ತುತ್ತಾದ, ಒಣಗಿರುವ, ಒತ್ತಾಗಿ ಬೆಳೆದ ಗೆಲ್ಲುಗಳನ್ನು ಸವರಿ ಗಿಡಕ್ಕೆ ಚೆನ್ನಾಗಿ ಗಾಳಿ, ಬೆಳಕು ಆಡುವ ಹಾಗೆ ನೋಡಿಕೊಳ್ಳಬೇಕು. ಗಿಡದಲ್ಲಿ ಆಗಾಗ ಮೂಡುವ ನೀರು ಕಂದುಗಳನ್ನು (ಹಬ್ಬುವ ಗೆಲ್ಲುಗಳು) ತುದಿ ಕತ್ತರಿಸಿ ತೆಗೆಯುತ್ತಿರಬೇಕು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಿಂದ, ಸತತವಾಗಿ ಮೂರು ವರ್ಷದಿಂದ ಉಡುಪಿ ಮಲ್ಲಿಗೆಯಲ್ಲಿ ಸವರುವಿಕೆಯ ಸಮಯ ಮತ್ತು ವಿಧಾನ ಕುರಿತು ರೈತರ ಕ್ಷೇತ್ರದಲ್ಲಿ ತಂತ್ರಜ್ಞಾನ ಪರಿಶೀಲನಾ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದು, ಇದರ ಪ್ರಕಾರ ಉಡುಪಿ ಮಲ್ಲಿಗೆಯನ್ನು ನವೆಂಬರ್ ತಿಂಗಳಲ್ಲಿ ನೆಲದಿಂದ ೨ ಅಡಿ ಎತ್ತರದವರೆಗೆ ಸವರುವುದರಿಂದ, ಕಡಿಮೆ ಹೂವು ಬಿಡುವ ಚಳಿಗಾಲದ ತಿಂಗಳುಗಳಾದ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಹೆಚ್ಚಿನ ಹೂವುಗಳನ್ನು ಪಡೆಯಬಹುದು ಎಂದು ತಿಳಿದು ಬಂದಿದೆ ಹಾಗೂ ಆ ಸಮಯದಲ್ಲಿ ಮಲ್ಲಿಗೆಯ ಬೆಲೆ ಹೆಚ್ಚಿರುವುದರಿಂದ ರೈತರು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಗೆಲ್ಲುಗಳನ್ನು ಕತ್ತರಿಸಿದ ನಂತರ, ಕತ್ತರಿಸಿದ ಭಾಗಕ್ಕೆ ಬೋರ್ಡೊ ಮುಲಾಮು ಹಚ್ಚಿ ಉಪಚರಿಸಬೇಕು. ಉಡುಪಿ ಮಲ್ಲಿಗೆಗೆ ವರ್ಷದ ಎಲ್ಲಾ ತಿಂಗಳುಗಳಲ್ಲ್ಲಿ ಬೇಡಿಕೆ ಇರುವುದರಿಂದ, ಒಂದೇ ಬಾರಿ ಎಲ್ಲಾ ಗಿಡಗಳನ್ನು ಸವರಿದರೆ ಹೂ ಪಡೆಯಲು ಒಂದು ತಿಂಗಳು ಕಾಯಬೇಕಾಗುತ್ತದೆ. ಆದ್ದರಿಂದ ರೈತರು ಒಂದೇ ಬಾರಿ ಗಿಡಗಳನ್ನು ಸವರುವ ಬದಲು ಗಿಡ ನೆಟ್ಟ ೩ ವರ್ಷಗಳ ನಂತರ, ಪ್ರತಿ ೫ ರಿಂದ ೧೦ ಗಿಡಗಳಂತೆ ಹಂತ ಹಂತವಾಗಿ ಸವರುವುದು ಒಳ್ಳೆಯದು. ಈ ವಿಧಾನದಲ್ಲಿ ಸವರಿದ ಗಿಡಗಳಿಂದ ಬಲಿಷ್ಠವಾದ ಮತ್ತು ಆರೋಗ್ಯಯುತವಾದ ಗೆಲ್ಲುಗಳು ಉತ್ಪತ್ತಿಯಾಗಿ ಹೂಗಳ ಗುಣಮಟ್ಟವು ಉತ್ತಮವಾಗಿರುತ್ತದೆ. ಅಲ್ಲದೆ ಗಿಡಗಳಿಗೆ ಉತ್ತಮ ಆಕಾರವನ್ನು ಕೊಡಲು ಸಾಧ್ಯವಾಗುತ್ತದೆ. ಗಿಡಗಳ ಸವರುವಿಕೆಯಿಂದ ಗಿಡಗಳು ಪುನಃಶ್ಚೇತನಗೊಂಡು ಹೊಸ ಚಿಗುರೊಡೆದು ಹೆಚ್ಚು ಹೂ ಬಿಡಲು ಪ್ರಾರಂಭಿಸುತ್ತವೆ.

ಪೋಷಕಾಂಶಗಳ ನಿರ್ವಹಣೆ: ಕರಾವಳಿಯ ಮಣ್ಣು ಹುಳಿಯಾಗಿರುವುದರಿಂದ ಮಣ್ಣಿನ ರಸಸಾರವನ್ನು ಸರಿಯಾದ ಪ್ರಮಾಣದಲ್ಲಿಡಲು ಹಾಗೂ ಗಿಡಗಳಿಗೆ ಒದಗಿಸಿದ ಪೋಷಕಾಂಶಗಳು ಬಳ್ಳಿಗೆ ದೊರಕಲು ಪ್ರತೀ ವರ್ಷ ರಸಗೊಬ್ಬರಗಳನ್ನು ಕೊಡುವ ೧೫ ದಿನಗಳ ಮುಂಚೆ ಪ್ರತಿ ಗಿಡದ (ಮೂರು ವರ್ಷದ) ಬುಡಕ್ಕೆ ೨೫೦ - ೫೦೦ ಗ್ರಾಂ ಪುಡಿ ಸುಣ್ಣವನ್ನು ಮಣ್ಣಿನಲ್ಲಿ ಬೆರೆಸುವುದರಿಂದ ಮಣ್ಣಿನ ರಸಸಾರವನ್ನು ತಟಸ್ಥಕ್ಕೆ ತರಲು ಸಾಧ್ಯವಾಗುತ್ತದೆ. ೩ ವರ್ಷದ ನಂತರದ ಮಲ್ಲಿಗೆ ಗಿಡಗಳಿಗೆ ವರ್ಷಕ್ಕೆ ಮೇ-ಜೂನ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ೨ ಸಮ ಪ್ರಮಾಣದ ಕಂತುಗಳಲ್ಲಿ ರಾಸಾಯನಿಕ ಗೊಬ್ಬರಗಳಾದ ಬೇವು ಲೇಪಿತ ಯೂರಿಯಾ ೧೩೦ ಗ್ರಾಂ, ಶಿಲಾ ರಂಜಕ ೪೮೦ ಗ್ರಾಂ ಹಾಗೂ ಮ್ಯುರೇಟ್ ಆಫ್ ಪೊಟ್ಯಾಶ್ ೨೦೦ ಗ್ರಾಂ ಒದಗಿಸಬೇಕು. ಇದರ ಜೊತೆಗೆ ೧ ಕೆ.ಜಿ ಬೇವಿನ ಹಿಂಡಿ ಮತ್ತು ೨೦ ಕೆ.ಜಿ ಸಾವಯವ ಗೊಬ್ಬರವನ್ನು ಮಲ್ಲಿಗೆ ಗಿಡದ ಬುಡದಿಂದ ೧ ಅಡಿ ದೂರದಲ್ಲಿ ವೃತ್ತಾಕಾರವಾಗಿ ತೆಗೆದ ಕಣಿಯಲ್ಲಿ ಹಾಕಬೇಕು.

ಉಡುಪಿ ಮಲ್ಲಿಗೆಯನ್ನು ಬಾಧಿಸುವ ಪ್ರಮುಖ ರೋಗ ಮತ್ತು ಕೀಟಗಳು

ಎಲೆ ಚುಕ್ಕೆ ರೋಗ

ಉಷ್ಣಾಂಶದಲ್ಲಿ ವ್ಯತ್ಯಾಸವಾದಾಗ ಮತ್ತು ತೇವಾಂಶದ ವಾತಾವರಣ ಇದ್ದಾಗ ಈ ರೋಗ ಹರಡು ತ್ತದೆ. ಈ ರೋಗಕ್ಕೆ ತುತ್ತಾದ ಗಿಡಗಳಲ್ಲಿ ಆರಂಭದಲ್ಲಿ ಎಲೆಗಳ ಮೇಲೆ ಸಣ್ಣ ಸಣ್ಣ ಚುಕ್ಕೆಗಳು ಕಂಡುಬರುತ್ತದೆ. ರೋಗದ ಬಾಧೆ ತೀವ್ರವಾದಾಗ ಈ ಚುಕ್ಕೆಗಳು ದೊಡ್ಡದಾಗಿ ವಿಲೀನಗೊಂಡು ಮಚ್ಚೆಗಳಾಗಿ ಎಲೆಗಳು ಒಣಗಿ ಉದುರುತ್ತವೆ. ಈ ಚುಕ್ಕೆಗಳ ಮಧ್ಯಭಾಗದಲ್ಲಿ ಬಿಳುಪಾಗಿದ್ದು ಸುತ್ತಲೂ ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ.

ಹತೋಟಿ: ಮಲ್ಲಿಗೆ ಬೆಳೆಯುವ ತೋಟವನ್ನು ಶುಚಿಯಾಗಿ ಇಡಬೇಕು. ರೋಗದ ಹತೋಟಿಗೆ ಪ್ರತಿ ಲೀಟರ್ ನೀರಿಗೆ ೧ ಗ್ರಾಂ ಕಾರ್ಬೆನ್‌ಡೈಜಿಮ್ ಅಥವಾ ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು.

ಸೊರಗು ರೋಗ

ಈ ರೋಗವು ಮಣ್ಣು ಜನ್ಯವಾಗಿದ್ದು, ತೇವಾಂಶ ಜಾಸ್ತಿ ಇರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಆರಂಭದಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ರೋಗ ತೀವ್ರವಾದಾಗ ಎಲೆಗಳೆಲ್ಲ ಒಣಗಿ ಉದುರಿ ಹೋಗುತ್ತವೆ. ನಂತರ ಗಿಡ ಸಂಪೂರ್ಣವಾಗಿ ಸೊರಗಿ ಸಾಯುತ್ತವೆ.

ಇಂತಹ ಸೊರಗಿದ ಗಿಡದ ಬೇರನ್ನು ಕಿತ್ತು ನೋಡಿದಾಗ ಬೇರಿನಲ್ಲಿ ಕಂದು ಬಣ್ಣದ ಮಚ್ಚೆಯನ್ನು ಕಾಣಬಹುದು.

ಹತೋಟಿ: ಭೂಮಿಯಲ್ಲಿ ನೀರು ಚೆನ್ನಾಗಿ ಬಸಿದು ಹೋಗುವ ಹಾಗೆ ನೋಡಿ ಕೊಳ್ಳಬೇಕು. ರೋಗಕ್ಕೆ ತುತ್ತಾದ ಗಿಡದ ಬುಡಕ್ಕೆ ೧ ಗ್ರಾಂ ಕಾರ್ಬನ್‌ಡೈಜಿಮ್ ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ಗಿಡದ ಭಾಗಕ್ಕೆ ಎರಡರಿಂದ ಐದು ಲೀಟರ್‌ನಷ್ಟು ದ್ರಾವಣವನ್ನು ಹಾಕಬೇಕು.

ಬಿಳಿ ನೊಣ: ಬಿಳಿ ನೊಣಗಳು ಎಲೆಗಳ ಕೆಳ ಭಾಗದಲ್ಲಿ ಅವಿತು ಕೊಂಡು ರಸವನ್ನು ಹೀರುತ್ತವೆ. ಇದರಿಂದ ಗಿಡಗಳ ಬೆಳೆವಣಿಗೆಯು ಕುಗ್ಗುತ್ತದೆ. ಇವುಗಳು ಎಲೆಗಳ ಮೇಲೆ ಸಿಹಿ ದ್ರವವನ್ನು ಸ್ರವಿಸುವುದರಿಂದ ಅದರ ಎಲೆ ಮತ್ತ್ತು ದಂಟಿನ ಮೇಲೆ ಕಪ್ಪು ಪಾಚಿ ಬೆಳೆಯುತ್ತದೆ. ಇದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯುಂಟಾಗಿ ಇಳುವರಿಯಲ್ಲಿ ಕುಂಠಿತವಾಗುತ್ತದೆ.

ಹತೋಟಿ ಕ್ರಮ: ಈ ಕೀಟದ ಬಾಧೆ ಕಂಡೊಡನೆ ೨.೦ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ೨೫ ಇ.ಸಿ. ಅಥವಾ ೨ ಮಿ.ಲೀ. ಮೆಲಾಥಿಯನ್ ೫೦ ಇ.ಸಿ. ಮತ್ತು ೩ ಗ್ರಾಂ ನೀರಿನಲ್ಲಿ ಕರಗುವ ಗಂಧಕ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಎಲೆ ಮತ್ತು ಮೊಗ್ಗು ತಿನ್ನುವ ಹುಳು : ಹಸಿರು ಮರಿ ಕೀಟವು ಎಳೆ ಎಲೆಗಳನ್ನು ಮಡಚಿ ಹಸಿರು ಭಾಗವನ್ನು ತಿನ್ನುತ್ತದೆ. ಅಲ್ಲದೆ ಕೆಲವು ಸಂದರ್ಭದಲ್ಲಿ ಮೊಗ್ಗುಗಳನ್ನು ಒಟ್ಟುಗೂಡಿಸಿ ಹೆಣೆದು ತಿನ್ನುವುದನ್ನು ಕಾಣಬಹುದು.

ಹತೋಟಿ ಕ್ರಮ: ೧.೫ ಮಿ.ಲೀ. ಮೊನೋಕ್ರೊಟೋಪಾಸ್ ೩೬ ಎಸ್.ಎಲ್. ಅಥವಾ ೨ ಮಿ.ಲೀ. ಮೆಲಾಥಿಯಾನ್ ೫೦ ಇ.ಸಿ. ಕೀಟನಾಶಕವನ್ನು ಪ್ರತೀ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ

ಮಲ್ಲಿಗೆ ಗಿಡಗಳನ್ನು ನಾಟಿ ಮಾಡಿದ ೬ ನೇ ತಿಂಗಳ ನಂತರ ಹೂ ಕೊಯ್ಲು ಮಾಡಲು ಪ್ರಾರಂಭಿಸಬಹುದು. ನಾಟಿ ಆರಂಭದಿಂದಲೇ ಸೂಕ್ತ ತಾಂತ್ರಿಕತೆ ಅಳವಡಿಸಿಕೊಂಡು, ಕೃಷಿ ಮಾಡಿದರೆ ಮೊದಲ ವರ್ಷವೇ ಆರ್ಥಿಕ ಇಳುವರಿ ಪ್ರಾರಂಭವಾಗಿ ಸುಮಾರು ೧೫ ರಿಂದ ೨೦ ವರ್ಷಗಳವರೆಗೆ ಮಲ್ಲಿಗೆಯ ಹೆಚ್ಚು ಇಳುವರಿ ಪಡೆಯಬಹುದು. ಎಲ್ಲಾ ಬೇಸಾಯ ಕ್ರಮಗಳನ್ನು ಅನುಸರಿಸಿದರೆ ಪ್ರತೀ ಒಂದು ಗಿಡದಲ್ಲಿ ಮೊದಲನೇ ವರ್ಷ ೦.೫ ಕಿ.ಗ್ರಾಂ, ಎರಡನೇ ವರ್ಷ ೧.೫ ಕಿ.ಗ್ರಾಂ ೩ ನೇ ವರ್ಷ ೨.೫ ಕಿ.ಗ್ರಾಂ ಹಾಗೂ ೪ ನೇ ವರ್ಷ ೩ ಕಿ.ಗ್ರಾಂ ಹೂವಿನ ಇಳುವರಿ ಪಡೆಯಬಹುದು. ಮಲ್ಲಿಗೆ ಮೊಗ್ಗುಗಳು ಅರಳುವ ಮುಂಚೆ ಹೂ ಬಿಡಿಸಿ, ಸ್ಥಳೀಯ ಮಾರುಕಟ್ಟೆಯ ನಿಯಮಾನುಸಾರವಾಗಿ ಚೆಂಡುಗಳನ್ನು(ಮಾಲೆಗಳನ್ನು) ಬಾಳೆ ನೂಲಿನಲ್ಲಿ/ದಾರದಿಂದ ಕಟ್ಟಿ ಮಾರುಕಟ್ಟೆಗೆ ಕಳುಹಿಸಬಹುದು.

--ಚೈತನ್ಯ ಹೆಚ್. ಎಸ್., ೯೪೮೦೪೫೮೦೮೩ ಮತ್ತು ಬಿ. ಧನಂಜಯ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಉಡುಪಿ