ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಕನಕಾಂಬರದಲ್ಲಿ ನಿಖರ ಬೇಸಾಯ

ಜೀವನ್ ಯು.
೯೮೪೫೦೧೫೭೬೮
1

ಸಾಮಾನ್ಯವಾಗಿ ರೈತರು ಸ್ವಲ್ಪ ಜಮೀನಿನಲ್ಲಿ ಕಡಿಮೆ ಖರ್ಚು ಬಯಸುವ ಬೆಳೆಯನ್ನು ಹುಡುಕುವುದು ಸಹಜ. ಈ ನಿಟ್ಟಿನಲ್ಲಿ ಕನಕಾಂಬರ ಒಂದು ಉತ್ತಮ ಬೆಳೆಯಾಗಿದ್ದು, ಮಧ್ಯಮ ಹಾಗೂ ಸಣ್ಣ ರೈತರು ಇದನ್ನು ಹಳ್ಳಿ ಹಾಗೂ ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಕನಕಾಂಬರ ಬಿಡಿ ಹೂವಿಗಾಗಿ ಹೆಸರುವಾಸಿ ಪಡೆದಿದ್ದು, ಹೆಚ್ಚಿನದಾಗಿ ಹಾರ ಮಾಡಲು ಹಾಗೂ ದೇವರ ಪೂಜೆಗಳಿಗೆ ಬಳಸುವುದು ನಿತ್ಯ ರೂಢಿಯಲ್ಲಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈ ಹೂವನ್ನು ಬಯಸುವ ಹಾಗೂ ಬಳಸುವ ಜನರು ಸಾಕಷ್ಟು ಇರುವುದರಿಂದ, ಇದರ ಬೇಡಿಕೆಯು ಮಾರುಕಟ್ಟೆಯಲ್ಲಿ ನಿರಂತರವಾಗಿರುತ್ತದೆ.

ಕನಕಾಂಬರವು ದೀರ್ಘಕಾಲಿಕ ಹಾಗೂ ಹೆಚ್ಚು ಸೂರ್ಯನ ಬೆಳಕನ್ನು ಬಯಸುವ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ಹೂ ಕಟಾವು ಮಾಡುವುದು ಕಷ್ಟಕರವಾಗಿದ್ದು ಮತ್ತು ಸೊರಗು ರೋಗದ ಬಾಧೆಯಿಂದ ಬೆಳೆ ನಾಶವಾಗುತ್ತಿರುವುದರಿಂದ, ಈ ಬೆಳೆಯ ಎಕರೆವಾರು ಕಡಿಮೆಯಾಗುತ್ತಿದೆ.

ಈ ನಿಟ್ಟಿನಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬಹಳಷ್ಟು ಸಂಶೋಧನೆ ಮಾಡಿದ್ದು, ಇಲ್ಲಿನ ಡಾ. ಸಿ. ಅಶ್ವಥ್ ಅವರು ರೈತರಿಗಾಗಿ ಐದು ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳೆಂದರೆ ಅರ್ಕ ಅಂಬರ, ಅರ್ಕ ಕನಕ, ಅರ್ಕ ಶ್ರೀಯ, ಅರ್ಕ ಶ್ರಾವ್ಯ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಹೊಸ ತಳಿ ಅರ್ಕ ಚೆನ್ನ. ಈ ತಳಿಗಳ ವಿಶೇಷತೆ ಎಂದರೆ, ಸ್ಥಳಿಯ ತಳಿಗಳಿಗಿಂತ ಮೂರು ಪಟ್ಟು ಹೆಚ್ಚಿನ ಇಳುವರಿ, ದಪ್ಪ ಹೂ, ಬಲಿಷ್ಟ ಕಾಂಡ ಮತ್ತು ಸೊರಗು ರೋಗ ನಿರೋಧಕ ಶಕ್ತಿ ಹೊಂದಿವೆ. ಈ ತಳಿಗಳು ಬೀಜಗಳಾಗಿ ಪರಿವರ್ತನೆ ಹೊಂದದ ಕಾರಣ ಬಿಡಿಸಲು ಸುಲಭ ಹಾಗೂ ಅಧಿಕ ಇಳುವರಿ ಪಡೆಯಬಹುದು.

ಮಣ್ಣು: ಎಲ್ಲಾ ವಿಧದ ಮಣ್ಣಿನಲ್ಲಿಯು ಬೆಳೆಯಬಹುದಾಗಿದ್ದು ಮರಳು ಮಿಶ್ರಿತ ಫಲವತ್ತಾದ ಕೆಂಪು ಮಣ್ಣು ಈ ಬೆಳೆಗೆ ಬಹಳ ಸೂಕ್ತ. ರಸಸಾರ (೬-೭) ಇದ್ದರೆ ಒಳ್ಳೆಯದು.

ನಾಟಿ ಮಾಡುವ ಸಮಯ: ಸಾಮಾನ್ಯವಾಗಿ ಮಳೆಗಾಲದ ಕೊನೆಯಲ್ಲಿ ಅಂದರೆ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳುಗಳು ನಾಟಿ ಮಾಡಲು ಒಳ್ಳೆಯ ಕಾಲ.

ಸಸ್ಯಾಭಿವೃದ್ಧಿ: ಸಸಿಗಳನ್ನು ಕಾಂಡದ ತುಂಡುಗಳಿಂದ ಹಾಗೂ ಬೀಜಗಳಿಂದ ಅಭಿವೃದ್ಧಿಪಡಿಸಬಹುದು, ಒಂದು ಎಕರೆಗೆ ಸುಮಾರು ೧.೫ ಯಿಂದ ೨.೦ ಕೆ.ಜಿ. ಬೀಜಗಳು ಬೇಕಾಗುತ್ತದೆ. ವಾಣಿಜ್ಯವಾಗಿ ಬೆಳೆಯಲು ಇಚ್ಛಿಸುವವರು ಕಾಂಡದ ತುಂಡುಗಳನ್ನು ಬಳಸುವುದು ಸೂಕ್ತ. ಈ ಕಾಂಡದ ತುಂಡುಗಳು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟದಲ್ಲಿ ದೊರೆಯುತ್ತದೆ.

ನಾಟಿ ಮಾಡುವುದು ಹಾಗೂ ಪೋಷಕಾಂಶಗಳ ನಿರ್ವಹಣೆ

ಭೂಮಿಯನ್ನು ೩-೪ ಸಲ ಚೆನ್ನಾಗಿ ಉಳುಮೆ ಮಾಡಿ ಹದಗೊಳಿಸಿ ನಂತರ ಏರುಮಡಿಗಳನ್ನು ಮಾಡಬೇಕು. ಪ್ರತಿ ಎಕರೆಗೆ ೧೦ ಟನ್ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ತಯಾರಾದ ಮಡಿಗಳಲ್ಲಿ ಪ್ರತಿ ಎಕರೆಗೆ ೧೬ ಕೆ.ಜಿ. ಸಾರಜನಕ, ೨೪ ಕೆ.ಜಿ. ರಂಜಕ ಹಾಗೂ ೨೪ ಕೆ.ಜಿ. ಪೊಟ್ಯಾಷ್‌ಯುಕ್ತ ಗೊಬ್ಬರಗಳನ್ನು ನಾಟಿಗೆ ಮುಂಚೆ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ನಂತರ ಬೇರು ಬಿಟ್ಟಿರುವ ಕಾಂಡದ ತುಂಡುಗಳನ್ನು ೬೦ ಸೆಂ.ಮೀ. ಅಂದರೆ ೨ ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಸಾಲಿನಿಂದ ಸಾಲಿಗೆ ೨ ಅಡಿ ಬಿಡಬೇಕು. ಈ ಅಂತರದಲ್ಲಿ ಎಕರೆಗೆ ಸುಮಾರು ೬೦೦೦-೬೫೦೦ ಗಿಡಗಳನ್ನು ನೆಡಬಹುದು. ನಾಟಿ ಮಾಡಿದ ೩ ತಿಂಗಳ ನಂತರ ಹಾಗೂ ೯ ತಿಂಗಳ ನಂತರ ಪ್ರತಿ ಬಾರಿಯು ೧೨ ಕೆ.ಜಿ. ಸಾರಜನಕವನ್ನು ಮೇಲುಗೊಬ್ಬರವಾಗಿ ಒದಗಿಸಬೇಕು. ಆಗಾಗ್ಗೆ ಬರುವ ಕಳೆಗಳನ್ನು ನಿಯಂತ್ರಿಸಬೇಕು.

ನೀರಾವರಿ: ಮಣ್ಣು ಮತ್ತು ವಾತಾವರಣಕ್ಕನುಸಾರವಾಗಿ ಬೆಳೆಗೆ ಪ್ರತಿ ೪ ರಿಂದ ೫ ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಯಾವುದೇ ಕಾರಣಕ್ಕೂ ಮಡಿಗಳಲ್ಲಿ ನೀರು ನಿಲ್ಲದಿರುವ ಹಾಗೆ ನೋಡಿಕೊಳ್ಳಬೇಕು.

ಸಸ್ಯ ಸಂರಕ್ಷಣೆ ಕ್ರಮಗಳು

ಹಿಟ್ಟು ತಿಗಣೆ, ಶಲ್ಕ ಕೀಟ, ಹೇನು ಹಾಗೂ ಎಲೆ ತಿನ್ನುವ ಹುಳುಗಳ ಬಾಧೆ ಸಾಮಾನ್ಯವಾಗಿ ಈ ಬೆಳೆಯಲ್ಲಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ೧ ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ ೫೦ ಇಸಿ ಅಥವಾ ೧೦ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ೨೫ ಇಸಿ ಇಲ್ಲವೆ ೧.೦ ಮಿ.ಲೀ. ಮೊನೊಕ್ರೊಟೋಫಾಸ್ ೩೬ ಎಸ್.ಎಲ್. ಪ್ರತಿ ಲೀಟರ್‌ಗೆ ಬೆರೆಸಿ ಸಿಂಪಡಿಸಬೇಕು.

ಬೇರು ಕೊಳೆ ರೋಗ: ನಿರೋಧಕ ಶಕ್ತಿಯುಳ್ಳ ಅರ್ಕ ತಳಿಗಳನ್ನು ಬೆಳೆಗೆ ಆಯ್ಕೆ ಮಾಡುವುದರಿಂದ ಮುನ್ನೆಚ್ಚರಿಕೆಯಾಗಿ ಈ ರೋಗ ತಡೆಗಟ್ಟಬಹುದು. ಆದಷ್ಟು ಮಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಉತ್ತಮ. ಒಂದು ವೇಳೆ ಈ ರೋಗ ಕಂಡುಬಂದಲ್ಲಿ ರೋಗದ ನಿಯಂತ್ರಣಕ್ಕಾಗಿ ಪ್ರೋಪಿಕೋನಜೋಲ್ ೧ ಮಿ.ಲೀ. ಪ್ರತಿ ಲೀಟರ್‌ಗೆ ಬೆರೆಸಿ ಸಿಂಪರಣೆ ಹಾಗೂ ಬುಡಕ್ಕೆ ಸಹ ಸುರಿಯಬೇಕು.

ದುಂಡಾಣು ರೋಗದ ನಿರ್ವಹಣೆಗಾಗಿ ಫೋರೇಟ್ ಹರಳನ್ನು ಒಂದು ಗ್ರಾಂನಂತೆ ಪ್ರತಿ ಗಿಡಕ್ಕೆ ಹಾಕಬೇಕು.

ಕೊಯ್ಲು ಮತ್ತು ಇಳುವರಿ

ನಾಟಿ ಮಾಡಿದ ನಾಲ್ಕು ತಿಂಗಳ ನಂತರ ಹೂಗಳು ಬಿಡಲು ಸಿದ್ಧವಾಗುತ್ತದೆ. ಇದೊಂದು ದೀರ್ಘಕಾಲಿಕ ಬೆಳೆಯಾಗಿದ್ದು, ಹೆಚ್ಚೆಚ್ಚು ವರ್ಷ ಬಾಳಿಕೆ ಬರುತ್ತದೆ. ಆರ್ಥಿಕ ದೃಷ್ಟಿಯಿಂದ ಸುಮಾರು ಐದರಿಂದ ಆರು ತಿಂಗಳ ನಂತರವಷ್ಟೆ ಕೊಯ್ಲು ಮಾಡುವುದು ಉತ್ತಮ. ಅಲ್ಲಿಯವರೆಗೂ ಬರುವ ಹೂಗಳನ್ನು ಕೈಯಲ್ಲಿ ಚಿವುಟಬೇಕು. ಇದರಿಂದ ಗಿಡವನ್ನು ದಷ್ಟಪುಷ್ಟವಾಗಿಡಲು ಸಾಧ್ಯ.

ವರ್ಷವಿಡೀ ಹೂಗಳ ಇಳುವರಿ ಪಡೆಯಬಹುದು. ಆದರೆ ಮಳೆಗಾಲದಲ್ಲಿ ಸ್ವಲ್ಪ ಕಡಿಮೆ ಹಾಗೂ ಬೇಸಿಗೆ ಕಾಲದಲ್ಲಿ ಹೆಚ್ಚು ಇಳುವರಿ ಪಡೆಯಬಹುದು. ಎಕರೆಗೆ ಸುಮಾರು ೧.೫ ೨.೦ ಟನ್ ಇಳುವರಿ ಪಡೆಯಬಹುದು.

18

ಕೊಯ್ಲೋತ್ತರ ನಿರ್ವಹಣೆ

ಸಾಮಾನ್ಯವಾಗಿ ತೆಳುವಾಗಿ ಎಳೆದ ಗೋಣಿ ಚೀಲದ ತುಂಡುಗಳಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಸ್ಥಳೀಯ ತಳಿ ಮತ್ತು ಅರ್ಕ ಕನಕಾಂಬರ (ಹೈಬ್ರಿಡ್) ಬೇಸಾಯದ ಖರ್ಚು ಮತ್ತು ಆದಾಯ (ರೂ./ಎಕರೆಗೆ) ೩ ವರ್ಷಗಳಿಗೆ

ನಿರಂತರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಸರಾಸರಿ ೨೫೦-೩೦೦ ರೂ.ಗಳು ಇರುತ್ತದೆ. ಹಬ್ಬದ ದಿನಗಳಲ್ಲಿ ೧೦೦೦-೧೫೦೦ ರೂ.ಗಳು ಪ್ರತಿ ಕೆ.ಜಿ.ಗೆ ಸಿಕ್ಕಿದ ನಿದರ್ಶನವು ಇದೆ. ಆದ್ದರಿಂದ ಮಾರುಕಟ್ಟೆಯ ಜ್ಞಾನವನ್ನು ಇಟ್ಟುಕೊಂಡು ಹೂಗಳನ್ನು ಬೆಳೆದು ಮಾರಾಟ ಮಾಡುವುದು ಹೆಚ್ಚು ಲಾಭದಾಯಕ.

--ಜೀವನ್ ಯು.೧, ೯೮೪೫೦೧೫೭೬೮ ಮತ್ತು ಭವಿಷ್ಯ೨ ಕೃಷಿ ವಿಶ್ವವಿದ್ಯಾಲಯ, ತ್ರಿಶೂರ್, ಕೇರಳ೧ ಹಾಗೂ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾಂತೀಯ ಕ್ಷೇತ್ರ, ವಿಟ್ಲ೨