ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಕೀಟ ವಿಜ್ಞಾನಿ ಡಾ.ಎಂ.ಪುಟ್ಟರುದ್ರಯ್ಯ (೧೯೦೯-೧೯೮೩)

ಎಂ. ಸಿ. ಮಲ್ಲಿಕಾರ್ಜುನ
೯೭೪೦೩೬೯೩೨೭
1

ಮನುಷ್ಯ ನಾಗರೀಕತೆಯ ಅಳಿವು, ಉಳಿವು ಹಾಗೂ ಪ್ರಗತಿ ಕೀಟ ಪ್ರಭೇದಗಳ ಮೇಲೆ ಅವಲಂಬಿಸಿದಷ್ಟು ಇನ್ನಾವ ಪ್ರಭೇದ ಗಳ ಮೇಲೂ ಅವಲಂಬಿಸಿಲ್ಲ. ಈ ಕೀಟಗಳಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಪ್ರಭೇದ ಗಳಿರುವುದನ್ನು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಭೂಮಿಯ ಮೇಲೆ ವಾಸಿಸುವ ಕೋಟ್ಯಾಂತರ ಮನುಷ್ಯರೆಲ್ಲರೂ ಒಂದೇ ಒಂದು ಪ್ರಭೇದಕ್ಕೆ ಸೇರಿದ್ದಾರೆ ಎಂದು ತಿಳಿದಾಗ ಕೀಟ ಪ್ರಪಂಚ ಪ್ರಭೇದದ (ಹತ್ತು ಲಕ್ಷಕ್ಕೂ ಹೆಚ್ಚು) ಮಹತ್ವ ತಿಳಿಯುತ್ತದೆ. ಕೀಟ ವಿಜ್ಞಾನಿಯಾಗಿ ಡಾ. ಎಂ. ಪುಟ್ಟರುದ್ರಯ್ಯನವರು ಈ ಕೀಟ-ಪೀಡೆಗಳ ಸಂಶೋಧನೆ, ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಅಪರಿಮಿತ ಸಾಧನೆಗೈದ ಮೇಧಾವಿಯಾಗಿದ್ದಾರೆ.

ಡಾ.ಎಂ. ಪುಟ್ಟರುದ್ರಯ್ಯ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ ೧೬-೧೨-೧೯೦೯ರಲ್ಲಿ ಶ್ರೀ ಮುನಿಯಯಪ್ಪ ಮತ್ತು ಶ್ರೀಮತಿ ಪುಟ್ಟಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಬಾಲ್ಯ ವಿದ್ಯಾಭ್ಯಾಸವನ್ನು ತನ್ನ ಅಜ್ಜನ ಊರಾದ ಮಾಗಡಿಯಲ್ಲಿ ಪೂರೈಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಹಾಗೂ ಎರಡು ವರ್ಷದ ಇಂಟರ್‌ಮೀಡಿಯೇಟ್ ಅನ್ನು (೧೯೨೯ರಲ್ಲಿ) ಪೂರೈಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ. (ಹಾನರ್ಸ್) ಪದವಿಯನ್ನು ಪ್ರಾಣಿ ಶಾಸ್ತ್ರ ವಿಷಯದಲ್ಲಿ (೧೯೩೨ರಲ್ಲಿ) ಪಡೆದರು.

ಅನಂತರದಲ್ಲಿ ಮೈಸೂರು ಸರ್ಕಾರದ ಕೃಷಿ ಇಲಾಖೆಯಲ್ಲಿ ಕೀಟತಜ್ಞರಾಗಿ ಸೇವೆಗೆ ಸೇರಿದ್ದು, ರೈತರ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು. ಇವರು ಬೆಂಗಳೂರು, ಮಂಡ್ಯ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಲಾಖೆಯ ಆದೇಶದ ಮೇರೆಗೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡು ೧೯೪೦ರಿಂದ ೧೯೪೪ರವರೆಗೆ ನಾಲ್ಕು ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಕಾಫಿ ಬೆಳೆಯ ಕಾಂಡಕೊರೆಯುವ ಹುಳುವಿನ ’ಪೀಡೆ ಹತೋಟಿ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೆ ತಂದರು. ಇಲ್ಲಿ ಕಾಫಿ ಬೆಳೆಗೆ ಸಂಬಂಧಿಸಿದ ಕಾಂಡ ಕೊರೆಯುವ ಕೀಟದ ನಿವಾರಣೆಗೆ ಇವರು ಕೈಗೊಂಡ ಸಂಶೋಧನೆ ಹಾಗೂ ನಿವಾರಣಾ ಕ್ರಮಗಳು ರೈತರಿಗೂ ಹಾಗೂ ಸರ್ಕಾರಕ್ಕೂ ಮೆಚ್ಚುಗೆಯಾಗಿತ್ತು. ಅನಂತರದಲ್ಲಿ ರೈತರ ಸಮಸ್ಯೆಗಳಿಗೆ ಸರಳ ಪರಿಹಾರ ಕಂಡುಕೊಳ್ಳಲು ಸರ್ಕಾರವು ಉನ್ನತ ವ್ಯಾಸಂಗಕ್ಕೆ ೧೯೪೮ರಲ್ಲಿ ಇವರನ್ನು ಅಮೇರಿಕಾಕ್ಕೆ ಕಳುಹಿಸಿತು. ಕೇವಲ ೨ ವರ್ಷದಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಎಂ.ಎಸ್. ಪದವಿ ಮತ್ತು ಕೀಟಶಾಸ್ತ್ರ ವಿಭಾಗದಲ್ಲಿ ಮುಸುಕಿನ ಜೋಳದಲ್ಲಿ ‘ತೆನೆಕೊರೆಯುವ ಹುಳು ಹಿಲಿಯೋಥಿಸ್ ಜಿಯಾ ಮತ್ತು ಹಿಲಿಯೋಥಿಸ್ ಫ್ಲಾಕ್ಸಿಫೇಗ’ ವಿಷಯದಲ್ಲಿ ಸಂಶೋಧನೆ ಕೈಗೊಂಡು ಪಿಹೆಚ್.ಡಿ.ಪದವಿಯನ್ನು ಪಡೆದರು. ಇವರು ಕೀಟಶಾಸ್ತ್ರಜ್ಞರಾಗಿ ಪ್ರಾಯೋಗಿಕ ಕೀಟಗಳ ನಿರ್ವಹಣೆ, ಸಮಗ್ರ ಕೀಟ ಹತೋಟಿ ನಿರ್ವಹಣೆ ಕುರಿತಂತೆ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಮರ್ಥವಾಗಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದರು.

ಮೈಸೂರು ಸರ್ಕಾರವು ೧೯೫೧ರಲ್ಲಿ ಕೃಷಿ ಇಲಾಖೆಯ ಜಂಟಿ ಕೀಟಶಾಸ್ತ್ರಜ್ಞರ ಹುದ್ದೆಗೆ ಇವರಿಗೆ ಬಡ್ತಿ ನೀಡಿತು. ಪುನಃ ಅವರಿಗೆ ೧೯೫೪ರಲ್ಲಿ ಬಡ್ತಿ ನೀಡಿ, ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕೃಷಿ ಇಲಾಖೆಯ ಸರ್ಕಾರದ ಕೀಟಶಾಸ್ತ್ರಜ್ಞರಾಗಿ ನೇಮಕ ಮಾಡಿತು. ಸಸ್ಯ ಸಂರಕ್ಷಣೆಯ ಸಮಸ್ಯೆಗಳನ್ನು ಅರಿತು ರೈತರಿಗೆ ತಕ್ಷಣ ಪರಿಹಾರವನ್ನು ನೀಡುವ ಸಲುವಾಗಿ ರಾಜ್ಯದ ಮುಖ್ಯ ಸಸ್ಯ ಸಂರಕ್ಷಣಾ ಅಧಿಕಾರಿಯಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಹೆಸರಾಗಿದ್ದರು. ರಾಜ್ಯದ ಎಲ್ಲಾ ಭಾಗಗಳಿಗೆ ಪ್ರವಾಸ ಮಾಡಿ, ರೈತರ ಕೀಟ-ಪೀಡೆ ಸಮಸ್ಯೆಗಳನ್ನು ಅರಿತು ತಕ್ಷಣ ಪರಿಹಾರ ಕ್ರಮಗಳನ್ನು ಶಿಫಾರಸ್ಸು ಮಾಡುತ್ತಿದ್ದರು. ಇದರಿಂದಾಗಿ ಅಂದಿನ ದಿನಗಳಲ್ಲಿ ರಾಜ್ಯದ ದಕ್ಷಿಣ ಭಾಗ ಹಾಗೂ ಉತ್ತರ ಭಾಗದ ರೈತರಿಗೆ ಡಾ. ಪುಟ್ಟರುದ್ರಯ್ಯನವರು ಒಬ್ಬ ಉತ್ತಮ ಸಸ್ಯ ಸಂರಕ್ಷಣಾ ತಜ್ಞರಾಗಿ ಮನೆಮಾತಾಗಿದ್ದರು. ಇದರ ಜೊತೆಗೆ ಜೈವಿಕ ಹತೋಟಿ ಕ್ರಮ ಅನುಸರಿಸಿ ಪರಿಸರದಲ್ಲೇ ಕೀಟಗಳ ನಿಯಂತ್ರಣಮಾಡುವ ವಿಧಾನವನ್ನು ಕಂಡು ಹಿಡಿದು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.

ಅನಂತರದಲ್ಲಿ ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತು ಕೃಷಿ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಸಮರ್ಥವಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು. ಡಾ. ಪುಟ್ಟರುದ್ರಯ್ಯ ಒಬ್ಬ ಜನಪ್ರಿಯ ಶಿಕ್ಷಕರಾಗಿದ್ದರು, ಅವರು ವಿಷಯವನ್ನು ಎಲ್ಲರಿಗೂ ತಿಳಿಯುವಂತೆ ಸರಳೀಕರಿಸಿ ತಿಳಿ ಹೇಳುತ್ತಿದ್ದರು. ಅಷ್ಟೆ ಅಲ್ಲದೆ ಅವರು ತಮ್ಮನ್ನು ಅನ್ವಯಿಕ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಯಲ್ಲಿ ಮಾರ್ಗದಶನ ನೀಡಿ, ಮೇಲ್ವಿಚಾರಣೆ ನಡೆಸಿ ಅತ್ಯುತ್ತಮ ಪ್ರಬಂಧಗಳನ್ನು ಹೊರತಂದಿದ್ದಾರೆ. ಇವರು ಭತ್ತ, ಜೋಳ, ರಾಗಿ ಮತ್ತು ದ್ವಿದಳ ಧಾನ್ಯಗಳ ಬೆಳೆಗಳಿಗೆ ಬೀಳುವ ಕೀಟ-ಪೀಡೆಗಳ ನಿಯಂತ್ರಣದ ಬಗ್ಗೆ ರೈತರಿಗೆ ಉಪಯುಕ್ತವಾದ ಸುಮಾರು ೫೦ಕ್ಕೂ ಹೆಚ್ಚು ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಜೊತೆಗೆ ಕೀಟಶಾಸ್ತ್ರಕ್ಕೆ ಸಂಬಂಧಿಸಿದಂತೆ, ೨೦೦ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಬೋಧನಾ ಕ್ರಮ, ಸರಳ ಜೀವನ ಹಾಗೂ ಸಂಶೋಧನೆಗಳಿಂದ ಪ್ರಭಾವಿತರಾದ ಇವರ ವಿದ್ಯಾರ್ಥಿಗಳು ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ. ಒಬ್ಬ ಕೀಟವಿಜ್ಞಾನಿಯಾಗಿ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಂದ ತತ್ವ, ಸಿದ್ಧಾಂತ ಹಾಗೂ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬಲ್ಲದು.

--ಎಂ. ಸಿ. ಮಲ್ಲಿಕಾರ್ಜುನ, ೯೭೪೦೩೬೯೩೨೭, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ