ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಗುಲಾಬಿ ಸಂರಕ್ಷಿತ ಬೇಸಾಯ

ನಟರಾಜ ಎಸ್. ಕೆ. ಕೀರ್ತಿಮಾಲ ನಾಯಕ. ಹನುಮಂತಪ್ಪ ಎಮ್.
೯೭೪೩೫೫೫೬೬೭
1

ಪುಷ್ಪಗಳ ರಾಣಿ ಎಂಬ ಖ್ಯಾತಿ ಪಡೆದ ಗುಲಾಬಿ ಪುಷ್ಪಕುಲದಲ್ಲಿಯೇ ಅತೀ ಮಹತ್ವದ ಸ್ಥಾನವನ್ನು ಪಡೆದಿದೆ. ಹೂಗಳನ್ನು ಮಾಲೆ ಮಾಡಲು, ಕೇಶಾಲಂಕಾರಕ್ಕಾಗಿ, ದೇಟು ಸಹಿತ ಕತ್ತರಿಸಿದ ಹೂಗಳನ್ನು ಪುಷ್ಪಗುಚ್ಚ ತಯಾರಿಸಲು, ಹೂದಾನಿಯಲ್ಲಿ ಇರಿಸಲು, ವೇದಿಕೆ ಅಲಂಕರಿಸಲು ಇತ್ಯಾದಿಯಾಗಿ ಬಳಸುತ್ತಾರೆ.

ಗುಲಾಬಿಯ ಸಂರಕ್ಷಿತ ಬೇಸಾಯ: ಭಾರತದಲ್ಲಿ ಗುಲಾಬಿಗಳನ್ನು ಹಸಿರುಮನೆಯಲ್ಲಿ ಬೆಳೆಸುವ ವಿಧಾನವು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಂಡಳಿಗಳ ಅನುದಾನ ಕಾರ್ಯಕ್ರಮಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಗುಲಾಬಿಯನ್ನು ಭಾರತದಲ್ಲಿ ೧೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ವಿಧ ವಿಧವಾದ ತಳಿಗಳನ್ನು ಉಪಯೋಗಿಸಿ ಬೆಳೆಯುತ್ತಾರೆ, ಇದನ್ನು ವಿದೇಶಕ್ಕೆ ರಫ್ತು ಸಹ ಮಾಡುತ್ತಾರೆ. ಉತ್ತಮ ವಾತಾವರಣವನ್ನು ಹೊಂದಿರುವ ನಗರ ಪ್ರದೇಶಗಳಾದ ಬೆಂಗಳೂರು, ಕೋಲಾರ, ತುಮಕೂರು, ಬಳ್ಳಾರಿ, ಬೆಳಗಾವಿ ಹಾಗು ಇತರೆ ಜಿಲ್ಲೆಗಳಲ್ಲಿ ಸಂರಕ್ಷಿತ ಗುಲಾಬಿ ಕೃಷಿಯು ಪ್ರಗತಿಯಲ್ಲಿದೆ.

ರಫ್ತು ಮಾಡಲು ಹೂವಿನ ಗುಣಮಟ್ಟವು ಯಾವುದೇ ಚುಕ್ಕಿಯಿಲ್ಲದೆ ಉತ್ತಮ ಬಣ್ಣವನ್ನು ಹೊಂದಿರಬೇಕು. ಕಾಂಡದ ಉದ್ದ, ಹಸಿರು ಎಲೆಗಳು ರೋಗದಿಂದ ಕೂಡಿರಬಾರದು. ಈ ಎಲ್ಲ ಗುಣಗಳು ಬೇಕೆಂದರೆ ಗಿಡಗಳನ್ನು ಹಸಿರು ಮನೆಗಳಲ್ಲಿ ಬೆಳೆಯುವುದು ಸೂಕ್ತ. ಒಂದು ಹಸಿರುಮನೆಯನ್ನು ನಿರ್ವಹಣೆ ಮಾಡಬೇಕಾದರೆ ಕನಿಷ್ಟ ೫೦೦m2 ಜಾಗವನ್ನು ಹೊಂದಿರಬೇಕು.

ಮಣ್ಣು ಮತ್ತು ಹವಾಮಾನ

`ಗುಲಾಬಿ ಬೇಸಾಯಕ್ಕೆ ನೀರು ಬಸಿಯುವ ಮರಳು ಮಿಶ್ರಿತ ಗೋಡುಮಣ್ಣು, ೫೦ ಸೆಂ.ಮೀ. ಆಳದಲ್ಲಿ ಸಾವಯವ ಅಂಶ ಇರುವ ಮಣ್ಣು ಸೂಕ್ತ. ಸಾಮಾನ್ಯವಾಗಿ ೫.೫-೬.೫ ರಸಸಾರವಿರುವ ಮಣ್ಣಿನಲ್ಲಿ ಉತ್ತಮ ಗುಲಾಬಿ ಇಳುವರಿ ಪಡೆಯಬಹುದು. ಮಣ್ಣು: ಮರಳು: ಕೊಟ್ಟಿಗೆ ಗೊಬ್ಬರ ಇವುಗಳು ೨:೧:೧ ಅನುಪಾತದಲ್ಲಿ ಇರಬೇಕು.

ರಾತ್ರಿ ಉಷ್ಣಾಂಶವು ೧೫oಅ ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಹಗಲಿನ ಹೊತ್ತು ೨೬-೨೮o ಸೆ. ಉಷ್ಣಾಂಶತೆ ಇರುವುದು ಸೂಕ್ತ. ಈ ಬೆಳೆಗೆ ಸಮಶೀತೋಷ್ಣ ಹವಾಗುಣ ಇರಬೇಕು, ಒಂದು ವೇಳೆ ಉಷ್ಣತೆ ಹೆಚ್ಚಿದಲ್ಲಿ ಶಿಲೀಂಧ್ರ ರೋಗ ಹಾಗೂ ರಸ ಹೀರುವ ಕೀಟಗಳ ಬಾಧೆ ಹೆಚ್ಚಾಗುತ್ತದೆ.

ತಳಿಗಳು

೧. ಉದ್ದ-ಕಾಂಡದ ಗುಲಾಬಿ: ಸಾಮಾನ್ಯವಾಗಿ ಈ ತಳಿಯಲ್ಲಿ ೫೦-೧೨೦cm ಉದ್ದವಾದ ಕಾಂಡಗಳನ್ನು ಒಳಗೊಂಡಿರುತ್ತದೆ ಮತ್ತು ೯೦-೧೪೦ ಕಾಂಡ ಪ್ರತಿ ವರ್ಷಕ್ಕೆ ಪ್ರತಿ ಮೀಟರ್‌ಗೆ ಉತ್ಪಾದನೆಯನ್ನು ಕೊಡುತ್ತದೆ. ಉದಾ: ಹ್ಯಾಪಿ ಹವರ್, ಗ್ರ್ಯಾಂಡ್ ಗಾಲಿ, ಪ್ಯಾಷನ್, ಫಸ್ಟ್ ರೇಡ್, ಗ್ರ್ಯಾಂಡ್ ಫಿಕ್ಸ್, ನೋಬಿಲೇಸ್, ತೀನೇಕೇ.

೨. ಮಧ್ಯಮ- ಕಾಂಡದ ಗುಲಾಬಿ: ಸಾಮಾನ್ಯವಾಗಿ ಈ ತಳಿಯಲ್ಲಿ ೫೦-೭೦cm ಉದ್ದವಾದ ಕಾಂಡಗಳನ್ನು ಒಳಗೊಂಡಿರುತ್ತದೆ ಮತ್ತು ೨೨೦ ಹೂಗಳನ್ನು ಪ್ರತಿ ವರ್ಷಕ್ಕೆ ಉತ್ಪಾದನೆಯನ್ನು ಕೊಡುತ್ತದೆ. ಉದಾ: ಜಾಗುರ್, ಗೋಲ್ಡನ್ ಟೈಮ್ಯಾ, ಲಾಮ್‌ಬಾಡ, ಗಾಬ್‌ರೀಲ್ಲ.

೩. ಸಣ್ಣ-ಕಾಂಡದ ಗುಲಾಬಿ: ಈ ತಳಿಯ ಉತ್ಪಾದನೆಯು ೨೫೦-೩೫೦ ಕಾಂಡವನ್ನು ಪ್ರತಿ ಪ್ರದೇಶಕ್ಕೆ ಪ್ರತಿ ವರ್ಷಕ್ಕೆ ಪ್ರತಿ m2 ಕೊಡುತ್ತದೆ ಮತ್ತು ಈ ಕಾಂಡದ ಉದ್ದವು ೩೦-೫೦ ಸೆಂ.ಮೀ. ಇರಬೇಕು. ಉದಾ: ಮೊಬ್ರೀಯ, ಕಾರೊನ, ಕ್ಯಾಲಿಪ್ ಸೋ.

ಸಸ್ಯಾಭಿವೃದ್ಧಿ

• ಕಣ್ಣುಕಸಿ ಮಾಡಿದ ಗಿಡಗಳನ್ನು ನಾಟಿಗೆ ಉಪಯೋಗಿಸುವುದು. • ಕಾಂಡಕಸಿ ಮಾಡುವುದು ಗುಲಾಬಿಯಲ್ಲಿ ಸೂಕ್ತವಾಗಿರುತ್ತದೆ. ೬-೮ ತಿಂಗಳಿನ ಸಸ್ಯಗಳನ್ನು ನಾಟಿ ಮಾಡುವುದಕ್ಕೆ ಉಪಯೋಗಿಸುತ್ತಾರೆ. • ಉದಾ: ರೋಸ್ ಇಂಡಿಕಾ ಆರ್. ಮಲ್ಟಿ ಪ್ಲೋರ, ಆರ್. ಕಾನಿಯಾ

ನಾಟಿಮಾಡುವುದು

ನಾಟಿಯನ್ನು ಹಸಿರುಮನೆಯಲ್ಲಿ ಚೆನ್ನಾಗಿ ಸಿದ್ದಮಾಡಿರುವ ಬೆಡ್‌ಗಳ ಮೇಲೆ ಮಾಡುವುದು ಸೂಕ್ತ. ಬೆಡ್‌ಗಳ ಅಗಲ ೧.೦-೧.೧ ಮೀ. ಇರಬೇಕು ಮತ್ತು ಸಾಲಿನಿಂದ ಸಾಲಿಗೆ ೩೦-೪೦ ಸೆಂ.ಮೀ. ಅನ್ನು ಕಾಪಾಡಬೇಕು. ಗಿಡದಿಂದ ಗಿಡಕ್ಕೆ ೧೫-೧೭ ಸೆಂ.ಮೀ. ಅಂತರವನ್ನು ಕಾಪಾಡಬೇಕು. ಈ ವಿಧಾನದಲ್ಲಿ ಪ್ರತಿ ಚದರ ಮೀಟರ್‌ಗೆ ೧೪ ಗಿಡಗಳನ್ನು ನಾಟಿ ಮಾಡಬಹುದು. ಅದೇ ರೀತಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ೬೦-೮೦ ಸಾವಿರ ಗಿಡಗಳನ್ನು ನಾಟಿ ಮಾಡಬಹುದು. ಸಾಮಾನ್ಯವಾಗಿ ನಾಟಿಯನ್ನು ಏಪ್ರಿಲ್, ಮೇ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಗಿಡದ ಗಾತ್ರದ ಮೇಲೆ ನಾಟಿಯನ್ನು ಮಾಡುತ್ತಾರೆ. ಮೊದಲನೆ ನಾಟಿ ಕ್ರಿಸ್‌ಮಸ್‌ಕ್ಕಿಂತ ಮುಂಚೆ ಮಾಡಬೇಕು. ನಾಟಿಮಾಡಲು ಮಣ್ಣು ತೇವಾಂಶದಿಂದ ಕೂಡಿರಬೇಕು. ನಾಟಿಮಾಡಿದ ನಂತರ ನೀರನ್ನು ರೋಸ್ ಕ್ಯಾನ್ ಮೂಲಕ ಕೊಡಬೇಕು. ಇದರಿಂದ ಗಾಳಿ ಚೀಲಗಳು ಬೇರುಗಳ ಸುತ್ತಲೂ ಶೇಖರಣೆಯಾಗುತ್ತದೆ.

ನಾಟಿ ಮಾಡಿದ ನಂತರ ಹಸಿರುಮನೆಯನ್ನು ಸರಿಯಾದ ಉಷ್ಣತೆ ಮತ್ತು ತೇವಾಂಶದಿಂದ ಇರುವಂತೆ ನೋಡಿಕೊಳ್ಳುವುದು. ಏಕೆಂದರೆ ಇದು ಸಸ್ಯದ ಬೆಳವಣಿಗೆಗೆ ಉಪಯೋಗವಾಗುತ್ತದೆ. ಷೇಡ್‌ನೆಟ್‌ಗಳು (ಶೇ. ೨೫-೫೦) ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತು ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಕಾಂಡವನ್ನು ಬಗ್ಗಿಸುವುದು (Bending)

ನಾಟಿ ಮಾಡಿದ ನಾಲ್ಕು ವಾರಗಳ ನಂತರ ತಾಯಿ ಕಾಂಡಗಳನ್ನು ಬಗ್ಗಿಸಬೇಕು. ಇದರಿಂದ ಒಳ್ಳೆಯ ದಷ್ಟಪುಷ್ಟವಾದ ಕಾಂಡಗಳು ಬೆಳೆಯುತ್ತವೆ. ಅದರಲ್ಲಿ ಉತ್ತಮ ಕಾಂಡದಲ್ಲಿ ಐದು ಎಲೆಗಳ ನಂತರ ತುದಿಯನ್ನು ಚಿವುಟುವುದು. ಕಾಂಡವು ಸಾಧಾರಣವಾಗಿದ್ದರೆ ಮೂರು ಎಲೆಗಳ ನಂತರ ತುದಿಯನ್ನು ಚಿವುಟುವುದು. ೪೫ ದಿನಗಳ ನಂತರ ಈ ರೀತಿ ಚಿವುಟಿದ ಕಾಂಡಗಳಿಗೆ ಹೆಚ್ಚು ಪೋಷಕಾಂಶಗಳನ್ನು ಸರಬರಾಜು ಮಾಡಿ ಉತ್ತಮ ಗುಣಮಟ್ಟದ ಎರಡು ಹೂವುಗಳನ್ನು ಪ್ರತಿ ಕಾಂಡದಿಂದ ಪಡೆಯಬಹುದು.

19

ಕಾಂಡ ಬಗ್ಗಿಸುವ ವಿಧಾನಗಳು

ಮೊಗ್ಗು ಚಿವುಟುವುದು: ಉತ್ತಮ ಗುಣಮಟ್ಟದ ಹೂವು ಪಡೆಯಲು

ಕ್ಯಾಪಿಂಗ್: ಮೊಗ್ಗಿನ ಆಕಾರವನ್ನು ಕಾಪಾಡಲು ಮತ್ತು ತ್ವರಿತವಾಗಿ ಹೂವು ಅರಳುವುದನ್ನು ತಡೆಗಟ್ಟಲು ನೈಲಾನ್ ದಾರದಿಂದ ಮಾಡಿದ ಕ್ಯಾಪ್‌ಗಳನ್ನು ಬಳಸುತ್ತಾರೆ.

ಸವರುವುದು (Pruning): ಗಿಡದ ಆಕಾರವನ್ನು ಕಾಪಾಡಲು ಮತ್ತು ಕೀಟ ಮತ್ತು ರೋಗಬಾಧೆಯನ್ನು ಕಡಿಮೆಗೊಳಿಸಲು ಸವರುವಿಕೆಯನ್ನು ಕೈಗೊಳ್ಳುತ್ತಾರೆ ಹಾಗು ಬೇಡಿಕೆ ಕಡಿಮೆ ಇರುವಾಗಲೂ ಸಹ ಗಿಡಗಳನ್ನು ಸವರಬಹುದು. ರೋಗದಿಂದ ಕೂಡಿದ, ಇತರೆ ಕಾಂಡಗಳಿಗೆ ಅಡ್ಡಲಾಗಿರುವ ಕಾಂಡಗಳನ್ನು ಸವರುವುದು. ಸವರುವಿಕೆಯನ್ನು ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ಮತ್ತು ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಸವರಬೇಕು. ಈ ರೀತಿ ಸವರಿದ ನಂತರ ೪೫ ದಿನಗಳಲ್ಲಿ ಹೊಸ ಕಾಂಡ ಮತ್ತು ಹೂಗಳನ್ನು ಪಡೆಯಬಹುದು.

ಪೋಷಕಾಂಶ: ಬೆಡ್‌ಗಳನ್ನು ತಯಾರಿಸುವಾಗ ಮಣ್ಣಿನ ಜೊತೆ ಸಾವಯವ ಗೊಬ್ಬರವನ್ನು ೧೫ ಕೆ.ಜಿ./ಮೀ೨ ನಂತೆ ಸೇರಿಸಬೇಕು. ರಸಗೊಬ್ಬರಗಳಾದ ೪೦೦:೩೨೦:೬೦೦ ಸಾರಜನಕ, ರಂಜಕ, ಪೊಟ್ಯಾಷ್ (NPK) ಯನ್ನು ಪ್ರತಿ ಹೆಕ್ಟೇರ್‌ಗೆ ಪ್ರತಿವರ್ಷಕ್ಕೆ ನೀಡಬೇಕು. ೧ಕೆ.ಜಿ. ಕ್ಯಾಲ್ಸಿಯಂ, ೨ ಕೆ.ಜಿ. ಸೂಪರ್ ಸಲ್ಫೇಟ್, ೧ಕೆ.ಜಿ. ಅಮೋನಿಯಂ ನೈಟ್ರೇಟ್. ೧/೨ ಕೆ.ಜಿ. ಮ್ಯೂರೇಟ್ ಪೊಟಾಷಿಯಂ ಅನ್ನು ನಾಟಿಗಿಂತ ಮುಂಚೆ ನೀಡಬೇಕು. ಮೈಕ್ರೊ ನ್ಯೂಟ್ರಿಯಂಟ್ಸ್ ೨ ಗ್ರಾಂ ಕಿಟ್ ಅಥವಾ ನ್ಯೂಟ್ರಿಯಂಟ್‌ಗಳನ್ನು ನೀಡಬೇಕು.

ಬೆಳವಣಿಗೆ ನಿಯಂತ್ರಣ

GA೩ (ಜಿಬ್ಬರ್‌ಲಿಕ್ ಆಸಿಡ್), ಬೆನೈಲ್ ಅಡಿಸೈನ್‌ಗಳನ್ನು ೫೦ppm ನಂತೆ ಪ್ರತಿ ತಿಂಗಳು ಸಿಂಪಡಿಸುವುದರಿಂದ ಹೂವಿನ ರೆಂಬೆಯ ಉದ್ದವನ್ನು ವೃದ್ಧಿಸಬಹುದು.

ನೀರಾವರಿ: ಪ್ರತಿ ದಿನವೂ ೪-೬ ಲೀಟರ್ ಪ್ರತಿ ಚದುರ ಮೀಟರ್‌ಗೆ ಹನಿ ನೀರಾವರಿ ಪದ್ಧತಿ ಮೂಲಕ ನೀಡಬೇಕು ಮತ್ತು ಮಣ್ಣು ಹವಾಮಾನಕ್ಕೆ ತಕ್ಕಂತೆ ನೀರು ಹಾಯಿಸಬೇಕು.

ಕೀಟಗಳು

೧. ಥ್ರಿಪ್ಸ್ ಮತ್ತು ಬಿಳಿ ಹೇನು: ಈ ಕೀಟ ಬಾಧೆ ಕಂಡುಬಂದಾಗ ಗಿಡಗಳಿಗೆ ೧.೭ ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ. ಅಥವಾ ೦.೫ ಮಿ.ಲೀ. ಫಾಸ್ಪಾಮಿಡಾನ್ ೮೫ ಡಬ್ಲ್ಯೂ.ಪಿ. ಅಥವಾ ೧ ಮಿ.ಲೀ. ಮೊನೋಕ್ರೊಟೋಫಾಸ್ ೩೬ ಎಸ್.ಎಲ್. ಅಥವಾ ೦.೫ ಮಿ.ಲೀ. ಡಿ.ಡಿ.ವಿ.ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪೊಂಗೆಮಿಯ ಎಣ್ಣೆಯನ್ನು ಶೇ. ೦.೫ ರಿಂದ ಶೇ. ೧ರಷ್ಟು ಕೂಡ ಸಿಂಪಡಿಸಬಹುದು. ಸಾಮಾನ್ಯವಾಗಿ ಉಷ್ಣಾಂಶವನ್ನು ಹತೋಟಿ ಇಡುವುದರಿಂದ ರಸ ಹೀರುವ ಕೀಟಗಳ ಬಾಧೆಯನ್ನು ತಡೆಗಟ್ಟಬಹುದು.

೨. ಕೆಂಪು ಜೇಡ: ಕೆಂಪು ಜೇಡದ ತಡೆಗಟ್ಟುವುದಕ್ಕೆ ಡೈಕೋಪೋಲ್ (DICOFOL) ಶೇ. ೦.೦೫ ಮತ್ತು ಅಬಾಮೇಕ್ ಟೀನ್ (abadeetin) ಶೇ. ೦.೦೨೫ ಸಿಂಪಡಿಸಬೇಕು ಅಥವಾ ಬೇವಿನ ಎಣ್ಣೆಯನ್ನು ಕೂಡ ಸಿಂಪಡಿಸಬಹುದು.

31

ರೋಗಗಳು

೧. ಬೂದಿ ರೋಗ (Powdery mildew): ಇದು ಒಂದು ಮುಖ್ಯವಾದ ರೋಗ, ಎಲೆಗಳ ಮೇಲ್ಭಾಗದಲ್ಲಿ ಬಿಳಿ ಬೂದಿಯಿಂದ ಆವೃತವಾದ ಮಚ್ಚೆಗಳು ಕಂಡುಬರುತ್ತವೆ. ರೋಗ ಅಧಿಕವಾದಾಗ ಹಳದಿ ಬಣ್ಣಕ್ಕೆ ತಿರುಗಿ ಎಲೆಗಳು ಉದುರುತ್ತವೆ. ರೋಗವನ್ನು ಹತೋಟಿ ಮಾಡಲು ಬೇಯೋಲಿಟೋನ್(ಶೇ. ೦.೦೫) ಅಥವಾ ಕಾರ್ಬನ್‌ಡೈಜಿಯಮ್(ಶೇ. ೦.೧) ಸಿಂಪರಿಸಬೇಕು

ಬೂದಿ ರೋಗದ ಲಕ್ಷಣಗಳು

೨. ಡೌನಿ ಮಿಲ್ಡಿವ್(Downy Mildew)ಎಲೆಗಳ ತಳಭಾಗದಲ್ಲಿ ಬೂದಿಯಿಂದ ಆವೃತವಾದ ಮಚ್ಚೆಗಳು ಕಂಡುಬರುತ್ತವೆ. ರೋಗ ಅಧಿಕವಾದಾಗ ಎಲೆಗಳು ನಿಧಾನವಾಗಿ ಉದುರುತ್ತವೆ. ಈ ರೋಗವನ್ನು ತಡೆಗಟ್ಟಲು ಪೋಸೆಟೈಲ್ -ಎ.ಎಲ್. (ಶೇ. ೦.೩) ಸಿಂಪಡಿಸುವುದು.

೩. ಕ್ರೌನ್ ಗಾಲ್: ಇದು ಒಂದು ಮುಖ್ಯವಾದ ಬ್ಯಾಕ್ಟೀರಿಯಾ ರೋಗ. ಈ ರೋಗವು ನರ್ಸರಿಯ ವಸ್ತುಗಳಿಂದ ಹರಡುತ್ತದೆ. ಕಾಂಡದ ಮೇಲೆ ವೃತ್ತಾಕಾರದ ಗೆಡ್ಡೆಗಳು ಬೆಳೆಯುತ್ತವೆ.

ನಿಯಂತ್ರಣ: ರೋಗಕ್ಕೆ ತುತ್ತಾದ ಗಿಡಗಳನ್ನು ನಾಶಮಾಡಬೇಕು. ಶೇ. ೦.೨೫ ಸ್ಟ್ರೆಪ್ಟೊಸೈಕ್ಲಿನ್ ಸಿಂಪಡಿಸಬೇಕು.

ಕೊಯ್ಲು: ಕೊಯ್ಲು ಒಂದು ತಳಿಯಿಂದ ಇನ್ನೊಂದು ತಳಿಗೆ ಭಿನ್ನವಾಗಿರುತ್ತದೆ. ವಿದೇಶಿ ರಫ್ತಿಗೆ ಹೂಗಳನ್ನು ಮೊಗ್ಗು ಇರುವಾಗ ಕೊಯ್ಲು ಮಾಡುತ್ತಾರೆ. ಹತ್ತಿರದ ಮಾರುಕಟ್ಟೆಗೆ ಅರ್ಧ ಭಾಗ ಅರಳಿದ ಹೂಗಳನ್ನು ಕೊಯ್ಯಬಹುದು. ಕೊಯ್ಯುವಿಕೆಯನ್ನು ಮುಂಜಾನೆ ಅಥವಾ ಸಂಜೆ ಕಾಲದಲ್ಲಿ ಮಾಡಬೇಕು. ಹೂಗಳನ್ನು ಶುದ್ಧ ನೀರು ಇರುವ ಬಕೆಟ್‌ನಲ್ಲಿ ಹಾಕಬೇಕು. ಇವುಗಳನ್ನು ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಹಾಕಿ ನಂತರ ಅವುಗಳನ್ನು ಸಾಗಾಣಿಕೆ ಮಾಡಬೇಕು.

ಇಳುವರಿ: ಒಂದು ಹೆಕ್ಟೇರ್‌ಗೆ ವಾರ್ಷಿಕ ಖರ್ಚು ರೂ. ೨೨.೪ ಲಕ್ಷ ಬರುತ್ತದೆ. ಇದರಿಂದ ೩೦.೨ ಲಕ್ಷ ಒಟ್ಟು ಆದಾಯ ಬರುತ್ತದೆ. ಇದರಿಂದ ಬರುವ ಲಾಭ ೭.೮ ಲಕ್ಷವಾಗಿರುತ್ತದೆ. ಗುಲಾಬಿ ಸಂರಕ್ಷಿತ ಬೇಸಾಯದಲ್ಲಿ ಲಾಭ ವೆಚ್ಚದ ಅನುಪಾತ ೧: ೧.೩೫ ಆಗಿರುತ್ತದೆ.

--ನಟರಾಜ ಎಸ್. ಕೆ.೧, ೯೭೪೩೫೫೫೬೬೭, ಕೀರ್ತಿಮಾಲ ನಾಯಕ೨ ಮತ್ತು ಹನುಮಂತಪ್ಪ ಎಮ್. ೩ ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ೧&೩, ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು ೨