ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಚೆಂಡು ಹೂ ಬೆಳೆಯ ಸುಧಾರಿತ ಬೇಸಾಯ

ಬಾಲಾಜಿ ಶ್ರೀಧರ ಕುಲಕರ್ಣಿ
೯೪೪೯೩೮೪೯೫೦
1

ಮೆಕ್ಸಿಕೊ ದೇಶ ಮೂಲದ, ಅಸ್ಟರೇಸಿ ಕುಟುಂಬಕ್ಕೆ ಸೇರಿದ ಚೆಂಡು ಹೂ, ನಮ್ಮ ದೇಶದಲ್ಲಿ ಬೆಳೆಯುವ ವಾಣಿಜ್ಯ ಪುಷ್ಪಗಳಲ್ಲೊಂದು. ನಮ್ಮ ದೇಶದಲ್ಲಿ ಹೆಚ್ಚಿನ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು ೭ ಸಾವಿರ ಹೆ. ಪ್ರದೇಶದಲ್ಲಿ, ಇದರ ಕೃಷಿ ಮಾಡಲಾಗುತ್ತಿದೆ.

ದಿನೇ ದಿನೇ ಇದರ ಕ್ಷೇತ್ರ ವಿಸ್ತಾರವಾಗುತ್ತಿದ್ದು, ಬೇಡಿಕೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ, ಈ ಬೆಳೆಯನ್ನು ಸುಲಭವಾಗಿ ಬೇಸಾಯ ಮಾಡಬಹುದಾಗಿದ್ದು, ಎಲ್ಲಾ ಹವಾಗುಣಕ್ಕೆ ಹೊಂದಿಕೊಳ್ಳುತ್ತದೆ. ಅದಲ್ಲದೇ ಇದರ ಹೂಗಳು ಹಲವಾರು ಉಪಯೋಗಗಳನ್ನು ಹೊಂದಿವೆ.

ಉಪಯೋಗ

ಬಿಡಿ ಹೂಗಳನ್ನು ಹಾರ ತಯಾರಿಸಲು, ದೇವರ ಪೂಜೆಗೆ, ವೇದಿಕೆ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ದಸರಾ, ದೀಪಾವಳಿ ಹಬ್ಬಗಳಲ್ಲಿ ಹೂ ಹಾಗೂ ಹೂ ಇರುವ ಇಡೀ ಸಸ್ಯವನ್ನೇ ಕಿತ್ತು ಅಂಗಡಿ ಪೂಜೆ, ತುಳಸಿ ಪೂಜೆ, ಲಕ್ಷ್ಮಿ ಪೂಜೆ ಇತ್ಯಾದಿಗಳಲ್ಲಿ ಉಪಯೋಗಿಸುತ್ತಾರೆ.

ಚೆಂಡು ಹೂವನ್ನು ಉದ್ಯಾನವನದಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಚೆಂಡು ಹೂ ಗಿಡದ ಬೇರುಗಳು ದುಂಡಾಣು ಜಂತು (Nematode) ನಿಯಂತ್ರಿಸುವ ಗುಣ ಹೊಂದಿರುವುದರಿಂದ ಹಾಗೂ ಮುಖ್ಯ ಬೆಳೆಗೆ ಬರುವ ಕಾಯಿ ಕೊರಕ ಕೀಟ (bud borer) ಬಾಧೆ ಕಡಿಮೆ ಮಾಡಲು ಬಲೆ ಬೆಳೆಯಾಗಿ (Trap Crop) ತರಕಾರಿ, ಹಣ್ಣು ಮತ್ತು ಕೃಷಿ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಸುವರು. ಚೆಂಡು ಹೂವುಗಳಿಂದ ಬಣ್ಣವನ್ನು ತೆಗೆದು ಕೋಳಿಗಳ ಆಹಾರದಲ್ಲಿ ಬಳಸುವರು. ಹೂವುಗಳು ಔಷಧಿ ಗುಣ ಹೊಂದಿರುವುದರಿಂದ, ಹೂಗಳ ರಸವನ್ನು ರಕ್ತ ಶುದ್ಧೀಕರಣಕ್ಕಾಗಿ, ಕಣ್ಣು ನೋವು, ಹುಣ್ಣು, ಕಿವಿ ನೋವು, ಮೂಲ್ಯವಾಧಿ ಮುಂತಾದವುಗಳನ್ನು ಗುಣಪಡಿಸಲು ಬಳಸುತ್ತಾರೆ. ಹೂದಳಗಳನ್ನು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಹೂವಿನಿಂದ ತೆಗೆದ ಲ್ಯುಟಿನ್ ಎಣ್ಣೆಯುಕ್ತ ದ್ರಾವಣವನ್ನು ಬೇಕರಿ ಆಹಾರ ಪದಾರ್ಥ ತಯಾರಿಕೆಯಲ್ಲಿ, ಡೈರಿ ಪದಾರ್ಥಗಳಲ್ಲಿ, ತಂಪು ಪಾನಿಯ ಪೇಯಗಳಲ್ಲಿ ಬಳಸುತ್ತಾರೆ. ಲ್ಯುಟಿನ್ ಪೌಡರನ್ನು ಮಾಂಸಾಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವುದುಂಟು. ಚೆಂಡು ಹೂವಿನ ಬೀಜದಿಂದ ತೆಗೆದ ಎಣ್ಣೆಯು ಸೊಳ್ಳೆಗಳ ನಿಯಂತ್ರಣ (Masquito repellam) ಗುಣ ಹೊಂದಿರುವುದರಿಂದ ಸೊಳ್ಳೆ ಬತ್ತಿ ಹಾಗೂ ದ್ರಾವಣ ತಯಾರಿಕೆಯಲ್ಲಿ ಬಳಸುತ್ತಾರೆ.

ಚೆಂಡು ಹೂವಿನಿಂದ ತೆಗೆದ ಪದಾರ್ಥಕ್ಕೆ ರಫ್ತು ಮಾಡಲು ಸಾಕಷ್ಟು ಅವಕಾಶ ಇರುವುದರಿಂದ, ತಮಿಳುನಾಡಿನಲ್ಲಿ ಈ ಉದ್ದಿಮೆ ಸಾಕಷ್ಟು ಹರಡಿದ್ದು ಪ್ರತಿ ವರ್ಷ ಸುಮಾರು ೨೫-೩೦ ಸಾವಿರ ಟನ್‌ಗಳಷ್ಟು ಚೆಂಡು ಹೂವುಗಳನ್ನು ಈ ಉದ್ದಿಮೆಯಲ್ಲಿ ಬಳಸುವರು. ಪ್ರತಿ ವರ್ಷ ಸುಮಾರು ೧೦ ಕೋಟಿಗಿಂತಲೂ ಹೆಚ್ಚು ಮೌಲ್ಯದ ಚೆಂಡು ಹೂವಿನಿಂದ ತೆಗೆದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತದೆ.

ಬೇಸಾಯ: ಇದನ್ನು ಎಲ್ಲಾ ವಾತಾವರಣದಲ್ಲಿ ಬೆಳೆಯಬಹುದಾದರೂ ಉಷ್ಣಾಂಶ ಹಾಗೂ ಸಮಶೀತೋಷ್ಣ ಪ್ರದೇಶದ ಹವಾಗುಣ ಒಳ್ಳೆಯದು. ದಿನದ ಉಷ್ಣಾಂಶ ೨೧-೨೮೦ ಸೆ. ರಾತ್ರಿಯ ಉಷ್ಣಾಂಶ ೧೮೦ ಸೆ. ಹಾಗೂ ವಾತಾವರಣದ ಶೇ. ೬೦-೬೫ ಆರ್ದ್ರತೆ ಉತ್ತಮ. ಈ ಬೆಳೆಗೆ ಬೆಳಕು ಸಾಕಷ್ಟಿರಬೇಕು. ನೇರ ಸುಡು ಬಿಸಿಲು ಅಥವಾ ಹೆಪ್ಪುಗಟ್ಟುವ ಚಳಿ ಇದ್ದರೆ ಸಸ್ಯಕ್ಕೆ ಹಾನಿ ಆಗುತ್ತದೆ.

ಕಾಲ: ಚೆಂಡು ಹೂವನ್ನು ಎಲ್ಲಾ ಕಾಲದಲ್ಲಿ / ವರ್ಷವಿಡಿ ಬೆಳೆಯಬಹುದು. ಜೂನ್ ಜುಲೈ, ಅಕ್ಟೋಬರ್ - ನವೆಂಬರ್, ಜನವರಿ - ಫೆಬ್ರುವರಿ ಉತ್ತಮ.

ಮಣ್ಣು: ಈ ಬೆಳೆಯನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದಾದರೂ, ಫಲವತ್ತಾದ ನೀರು ಬಸಿದು ಹೋಗುವ ಕೆಂಪು ಮಿಶ್ರಿತ ಗೋಡು ಮಣ್ಣು ತುಂಬಾ ಸೂಕ್ತ. ಮಣ್ಣಿನ ರಸಸಾರ ೬-೭.೫ ಇದ್ದರೆ ಹೆಚ್ಚು ಉತ್ತಮ.

ತಳಿ: ಚೆಂಡು ಹೂವಿನಲ್ಲಿ ಮುಖ್ಯವಾಗಿ ಎರಡು ಗುಂಪುಗಳಿವೆ.

ಅ) ಆಫ್ರಿಕನ್ ಚೆಂಡು ಹೂ (Tegetes erecta) ಈ ಗುಂಪಿನ ತಳಿಗಳು ಎತ್ತರವಾಗಿದ್ದು, (೩ ರಿಂದ ೩.೫ ಅಡಿ) ಹೂ ಗಾತ್ರ ಕೂಡಾ ದೊಡ್ಡದು.

೧. ಪೂಸಾ ಬಸಂತಿ ಗೇಂಡಾ: ಹಳದಿ ಬಣ್ಣ ದೊಡ್ಡ ಗಾತ್ರ, ಡಬಲ್, ಹೆಚ್ಚು ಇಳುವರಿ ಕೊಡುವ ತಳಿ
೨. ಪೂಸಾ ನಾರಂಗಿ ಗೇಂಡಾ: ಕಿತ್ತಳೆ ಬಣ್ಣದ ದೊಡ್ಡ ಗಾತ್ರದ ಡಬಲ್ಸ್ ತಳಿ

ಈ ತಳಿಗಳನ್ನು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IಂಖI) ಬಿಡುಗಡೆಗೊಳಿಸಿದೆ. ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬಿಡುಗಡೆ ಮಾಡಿದ ತಳಿಗಳು.

ಅರ್ಕಾ ಬಂಗಾರ ಮತ್ತು ಅರ್ಕಾ ಬಂಗಾರ ೨: ಹಳದಿ ಬಣ್ಣದ ಹೆಚ್ಚು ಇಳುವರಿ ಕೊಡುವ ತಳಿಗಳು

ಅರ್ಕಾ ಅಗ್ನಿ : ಕೇಸರಿ ಬಣ್ಣದ ಹೆಚ್ಚು ಇಳುವರಿ ಕೊಡುವ ತಳಿ.

ಬ) ಫ್ರೆಂಚ್ ಮೇರಿಗೊಲ್ಡ್ (Tegetes petula): ಗಿಡ್ಡ, ಪೊದೆಯಾಕಾರ, ೧೫-೪೫ ಸೆಂ.ಮೀ. ಎತ್ತರ, ಸಣ್ಣ ಹೂ ಕಿತ್ತಳೆ, ಹಳದಿ, ಮಿಶ್ರ ಬಣ್ಣ.

೧. ಪೂಸಾ ಅರ್ಪಿತಾ: ಕಿತ್ತಳೆ ಬಣ್ಣದ ಹೂವುಗಳು
೨. ಪೂಸಾ ದೀಪ್: ಕಡು ಕೆಂಪು ಬಣ್ಣ

20

ಇತ್ತೀಚೆಗೆ ಕೆಲವು ರೈತರ ಖಾಸಗಿ ಕಂಪನಿಗಳಾದ ಇಸ್ಟ ವೇಸ್ಟ್, ಸಿಜೆಂಟಾ, ನಾಮಧಾರಿ, ಇಂಡೊ-ಅಮೇರಿಕನ್ ಹೈಬ್ರೀಡ್ ಸೀಡ್ಸ್ ಇತ್ಯಾದಿಗಳು ಬಿಡುಗಡೆ ಮಾಡಿದ ಹೈಬ್ರಿಡ್ ತಳಿಗಳನ್ನು ಬೆಳೆಸುತ್ತಿದ್ದಾರೆ. ಉದಾ: ಮ್ಯಾಕ್ಸಿಮಾ ಎಲ್ಲೊ, ಆರೋ ಗೊಲ್ಡ್, ಇಂಕಾ ಆರೇಂಜ್, ಇಂಕಾ ಎಲ್ಲೊ, ಡಬಲ್ ಆರೇಂಜ್, ಯಲ್ಲೊ ಮ್ಯಾಜಿಕ್ ಮತ್ತು ಟೆನಿಸ್ ಬಾಲ್ ಇತ್ಯಾದಿ.

ಸಸ್ಯಾಭಿವೃದ್ಧಿ

ಅ) ಬೀಜದಿಂದ

ಚೆಂಡು ಹೂವನ್ನು ಬೀಜದಿಂದ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ತಳಿಗಳಾದಲ್ಲಿ ೮೦ ಗ್ರಾಂ ಎಕರೆಗೆ ಬೀಜ ಬೇಕು ಏರು ಮಡಿ (೬ ಮೀ. ಉದ್ದ, ೧.೨ ಮೀ. ಅಗಲ, ೧೦ ಸೆಂ.ಮೀ. ಎತ್ತರ) ಸಿದ್ಧಗೊಳಿಸಿ, ಪ್ರತಿ ಮಡಿಗೆ ೩೦ ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಅರ್ಧ ಕಿ.ಗ್ರಾಂ ೧೫:೧೫:೧೫ ಮಿಶ್ರಣ ಹರಡಿ, ಸಾಲುಗಳಲ್ಲಿ ತೆಳುವಾಗಿ ಬಿತ್ತನೆ ಮಾಡಬೇಕು. ಮೇಲೆ ತೆಳುವಾಗಿ ಕೊಟ್ಟಿಗೆ ಗೊಬ್ಬರ ಹರಡಬೇಕು. ರೋಸ್ ಹೆಡ್ ಕ್ಯಾನ್‌ನಿಂದ ನೀರು ಸಿಂಪಡಿಸಬೇಕು. ೩ ರಿಂದ ೪ ವಾರಗಳಲ್ಲಿ ಸಸಿ ನಾಟಿಗೆ ಲಭ್ಯವಾಗುತ್ತವೆ. ಇತ್ತೀಚಿಗೆ ಪ್ಲಾಸ್ಟಿಕ್ ಪ್ರೋಟ್ರೇಗಳಲ್ಲಿ ಕೋಕೋ ಪೀಟ್ ಮಾಧ್ಯಮದಲ್ಲಿ ಸಸಿ ಬೆಳೆಸುವುದು ಜನಪ್ರಿಯವಾಗುತ್ತಿದೆ. ೯೮ ಕಪ್‌ಗಳಿರುವ ಟ್ರೇಗೆ ೧-೧.೨೫ ಕಿ.ಗ್ರಾಂ ಮಾಧ್ಯಮ ಬೇಕು. ನಿರ್ಜೀವಿಕರಿಸಿದ ಮಾಧ್ಯಮ ಉಪಯೋಗಿಸಬೇಕು. ಹೈಬ್ರೀಡ್ ತಳಿಯ ಬೀಜವಂತೂ ತುಂಬಾ ಖರ್ಚಿನದಾಗಿರುವುದರಿಂದ ಒಂದೊಂದೆ ಬೀಜವನ್ನು ಒಂದು ಕಪ್‌ನಲ್ಲಿ ನಾಟಿ ಮಾಡಬೇಕು. ಟ್ರೇಗಳನ್ನು ಒಂದರ ಮೇಲೊಂದು ಹೊಂದಿಸಿ ಪ್ಲಾಸ್ಟಿಕ್ ಹಾಳೆ ಹೊದಿಸಿ ಗಾಳಿಯಾಡದಂತೆ ಮೂರು ದಿನ ಇರಿಸಬೇಕು. ನಂತರ ಅವುಗಳನ್ನು ಏರು ಮಡಿಯ ಮೇಲೆ ಪ್ಲಾಸ್ಟಿಕ್ ಹಾಳೆ ಹಾಸಿ ಇರಿಸಬೇಕು. ದಿನಕ್ಕೆ ೨ ಸಾರಿ ನೀರುಣಿಸಬೇಕು. ಸಸಿ ಬಿತ್ತಿದ ೧೦ ದಿನಗಳ ನಂತರ ನೀರಿನಲ್ಲಿ ಕರಗುವ ೧೯:೧೯:೧೯ ರಾಸಾಯನಿಕ ಗೊಬ್ಬರವನ್ನು ಪ್ರತಿ ಲೀ. ನೀರಿಗೆ ೨ ಗ್ರಾಂ ಬೆರಸಿ ಕರಗಿಸಿ ಕೊಡಬೇಕು. ಪ್ರತಿ ೧೦ ದಿನಗಳಿಗೊಮ್ಮೆ ಪುನರಾವರ್ತಿಸಬೇಕು. ಈ ರೀತಿ ಮಾಡುವುದರಿಂದ ಒಂದೇ ತೆರನಾದ ಸದೃಢ ಸಸಿ ಸಿಗುವಂತಾಗುತ್ತದೆ.

ಬ) ಕಾಂಡದ ತುಂಡುಗಳಿಂದ

ಚೆಂಡೂ ಹೂವಿನ ಸಸ್ಯವನ್ನು ಬೀಜವಲ್ಲದೇ ತುದಿ ಕಾಂಡದಿಂದಲೂ ಸಸ್ಯಾಭಿವೃದ್ಧಿ ಮಾಡಬಹುದು. ಸದೃಢವಾಗಿ ಬೆಳೆದ ಸಸ್ಯಗಳಿಂದ ಹೂ ಬಿಡುವುದಕಿಂತಲೂ ಮುಂಚೆ ತುದಿ ಕಾಂಡವನ್ನು ೨-೩ ಎಲೆಗಳ ಜೊತೆಗೆ ಬ್ಲೇಡ್‌ನಿಂದ ತೆಗೆದು ಕೋಕೋ ಪೀಟ್ ತುಂಬಿದ ಪ್ರೋಟ್ರೇಗಳಲ್ಲಿ ನಾಟಿ ಮಾಡಬೇಕು. ೨೫-೩೦ ದಿನಗಳ ನಂತರ ಬೇರು ಬಿಟ್ಟ ತುದಿ ಕಾಂಡದ ಸಸ್ಯಗಳನ್ನು ನಾಟಿಗೆ ಉಪಯೋಗಿಸಬಹುದು.

27

ಭೂಮಿ ಸಿದ್ಧತೆ ಮತ್ತು ನಾಟಿ

ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಪ್ರತಿ ಎಕರೆಗೆ ೮ ಟನ್ ಕೊಟ್ಟಿಗೆ ಗೊಬ್ಬರ ಹಾಕಿ ಹದ ಮಾಡಬೇಕು. ನಂತರ ೬೦ ಸೆಂ.ಮೀ. ಅಂತರದಲ್ಲಿ ಬೋದುಗಳನ್ನು ತೆಗೆದು ಅವುಗಳ ಒಂದು ಬದಿಯಲ್ಲಿ ೪೫ ಸೆಂ. ಮೀ. ಅಂತರದಲ್ಲಿ ಸಸಿ ನಾಟಿ ಮಾಡಬೇಕು.

ಕೆಲವು ರೈತರು ಹೈಬ್ರಿಡ್ ತಳಿಗಳನ್ನು ೩ ಅಡಿ ೩ ಅಡಿ ಅಂತರದಲ್ಲಿ ನಾಟಿ ಮಾಡುತ್ತಾರೆ.

ಏರು ಮಡಿ ಬೇಸಾಯ

೧ ಮೀ. ಅಗಲ, ೨೦ ಸೆಂ.ಮೀ. ಎತ್ತರದ ಏರು ಮಡಿ ತಯಾರಿಸಿ ಕಾಲುದಾರಿಗಾಗಿ ಒಂದೂವರೆ ಅಡಿ (ಎರಡು ಮಡಿಗಳ ಮಧ್ಯೆ)ಜಾಗ ಬಿಡಬೇಕು. ನಂತರ ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ (ಯು.ವ್ಹಿ. ನಿರೋಧಕ, ೧.೨-೧.೫ ಮೀ. ಅಗಲ, ೩೦ ಮೈಕ್ರಾನ್) ಮಡಿಯ ಮೇಲೆ ಹೊದಿಸಬೇಕು. ಡ್ರೀಪ್‌ರ‍್ಸ್‌ಗಳನ್ನು ೪೦ ಸೆಂ.ಮೀ. ಅಂತರದಲ್ಲಿ ಜೋಡಿಸಬೇಕು.

ಪೋಷಕಾಂಶ ಪ್ರತೀ ಎಕರೆಗೆ ಶಿಫಾರಸ್ಸು

ತಳಿಗಳಾದಲ್ಲಿ ೪೦ : ೨೪ : ೨೪ ಕಿ.ಗ್ರಾಂ
ಹೈಬ್ರಿಡ್ ೯೦ : ೨೪ : ೨೪ ಕಿ.ಗ್ರಾಂ

ನಾಟಿ ಸಮಯದಲ್ಲಿ ಶಿಫಾರಸ್ಸು ಮಾಡಿದಲ್ಲಿ ಅರ್ಧ ಪ್ರಮಾಣದ ಸಾರಜನಕ, ಪೂರ್ಣ ರಂಜಕ, ಪೊಟ್ಯಾಷ್ ಒದಗಿಸಬೇಕು. ಇನ್ನುಳಿದ ಅರ್ಧ ಪ್ರಮಾಣದ ಸಾರಜನಕ ೩೦ ದಿನಗಳ ನಂತರ ತುದಿ ಚಿವುಟುವ ಸಮಯದಲ್ಲಿ ನೀಡಬೇಕು.

36

ರಸಾವರಿ ಮುಖಾಂತರ: ಡ್ರಿಪ್ ನೀರಿನ ಜೊತೆಗೆ ಪೋಷಕಾಂಶಗಳನ್ನು ಒದಗಿಸಲು ಈ ಕೆಳಕಂಡ ಕೋಷ್ಟಕದಲ್ಲಿರುವಂತೆ ಪೋಷಕಾಂಶಗಳನ್ನು ರೈತರು ಬೆಳೆಗೆ ನೀಡುತ್ತಿದ್ದಾರೆ.

ಬೆಳೆಯ ಹಂತ ಪ್ರಮಾಣ (ಕಿ.ಗ್ರಾಂ/ವಾರಕ್ಕೆ/ಎಕರೆಗೆ
ಗೊಬ್ಬರ ೧೯:೧೯:೧೯ ಯೂರಿಯಾ
೨ ವಾರದ ನಂತರ ಮುಂದೆ ೩ ವಾರದವರೆಗೆ (ಬೆಳವಣಿಗೆ ಹಂತ) ೬ ಕಿ.ಗ್ರಾಂ ೧೨ ಕಿ.ಗ್ರಾಂ
ಹೂ ಬಿಡುವ ಸಮಯ ಮುಂದೆ ೪ ವಾರದವರೆಗೆ (೫ ವಾರದ ನಂತರ) ೯ ಕಿ.ಗ್ರಾಂ ೮ ಕಿ.ಗ್ರಾಂ
೯ ವಾರದ ನಂತರ ಮುಂದೆ ೩ ವಾರದವರೆಗೆ ೭ ಕಿ.ಗ್ರಾಂ ೭ ಕಿ.ಗ್ರಾಂ
ಒಟ್ಟು ೧೦ ವಾರಗಳು ೭೫ ಕಿ.ಗ್ರಾಂ ೭೮ ಕಿ.ಗ್ರಾಂ

- ವಾರಕ್ಕೆ ಶಿಫಾರಸ್ಸು ಮಾಡಿದ್ದನ್ನು ೨ ಭಾಗ ಮಾಡಿ, ವಾರಕ್ಕೆ ಎರಡು ಸಲದಂತೆ ಕೊಡಬೇಕು. ನಾಟಿ ಮಾಡಿದ ೨೧ ದಿನಗಳ ನಂತರ ರಸಾವರಿ ಪ್ರಾರಂಭಿಸಿ ಹೂ ಕೊನೆಯ ಕೊಯ್ಲಿನ ಪೂರ್ವ ೨ ವಾರದವರೆಗೆ ಕೊಡಬೇಕು. ಅಂದರೆ ೪ ತಿಂಗಳ ಬೆಳೆ ಅವಧಿಯಲ್ಲಿ ಒಟ್ಟು ೨೦ ಸಲ ರಸಾವರಿ ಕೊಡಬೇಕು.

ಎಲೆಗಳ ಮೇಲೆ ಸಿಂಪರಣೆ: ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ೫ಗ್ರಾಂ/ಲೀ. ನಂತೆ ೩೦ ದಿನಗಳ ಅಂತರದಲ್ಲಿ ೩ ಬಾರಿ ಎಲೆಗಳ ಮೇಲೆ ಸಿಂಪಡಿಸಬೇಕು.

ನೀರು: ಮಣ್ಣು ಮತ್ತು ಹವಾಗುಣವನ್ನನುಸರಿಸಿ ಪ್ರತೀ ೪-೬ ದಿನಕ್ಕೊಮ್ಮೆ ನೀರು ಹಾಯಿಸಬೇಕು.

ಹನಿ ನೀರಾವರಿ ಮೂಲಕವಾದಲ್ಲಿ ಪ್ರತಿದಿನ ಪ್ರತಿ ಚದರ ಮೀಟರ್‌ಗೆ ೮ಲೀ. (ಮೊದಲ ಒಂದು ತಿಂಗಳು) ಕೊಡಬೇಕು. ನಂತರ ಪ್ರತಿ ಚ.ಮೀ. ಗೆ ೧೨ ಲೀ. ಪ್ರತಿ ದಿನ ಕೊಡಬೇಕು. ಅಂದರೆ ೩೦ ನಿಮಿಷ ಮೊದಲು ಒಂದು ತಿಂಗಳ ಪ್ರತಿ ದಿನ, ನಂತರ ೪೫ ನಿಮಿಷ ಪ್ರತಿ ದಿನ, ಡ್ರಿಪ್ ಆನ್ ಮಾಡಬೇಕು.

ತುದಿ ಚಿವುಟುವುದು: ನಾಟಿ ಮಾಡಿದ ೩೦-೪೦ ದಿನಗಳ ನಂತರ ತುದಿಯನ್ನು ಚಿವುಟುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.

ಬೋದಿನಲ್ಲಿ ನಾಟಿ ಮಾಡಿದ್ದರೆ ೧ ತಿಂಗಳ ನಂತರ, ೧೫ ದಿನಗಳ ಅಂತರದಲ್ಲಿ ೨-೩ ಸಾರಿ ಕಳೆ ಕಿತ್ತು ಮಣ್ಣು ಏರಿಸಬೇಕು.

ಪ್ರಚೋದಕಗಳ ಬಳಕೆ

೧. ಸೈಕೋಸಿಲ್ (CCC) ೩೦೦೦ ಪಿಪಿಎಂ (೩ ಮಿ.ಲೀ./ಲೀ.) ಸಿಂಪರಣೆ ಯಿಂದ ಹೆಚ್ಚಿನ ಅವಧಿಯವರೆಗೆ ಹೂ ಪಡೆಯಬಹುದು.
೨. ಜಿ.ಎ. ೧೦೦ ಪಿಪಿಎಂ (೧ಗ್ರಾಂ/೧೦ಲೀ.) ಸಿಂಪರಿಸಿ ಹೆಚ್ಚಿನ ಇಳುವರಿ ಪಡೆಯಬಹುದು.

ಪ್ರಚೋದಕಗಳನ್ನು ನಾಟಿ ಮಾಡಿದ ೧೫ ದಿನಗಳ ನಂತರ ಪ್ರತೀ ೧೦ ದಿನಗಳ ಅಂತರದಲ್ಲಿ ೨-೩ ಸಾರಿ ಕೊಡಬಹುದು.

48

ಸಸ್ಯ ಸಂರಕ್ಷಣೆ

ಚೆಂಡು ಹೂವಿಗೆ ಬರುವ ಮುಖ್ಯ ಕೀಟಗಳೆಂದರೆ

೧. ಥ್ರಿಪ್ಸ್ ನುಸಿ: ಈ ಕೀಟವು ಚಿಗುರು, ಹೀಚು ಮತ್ತು ಹೂಗಳ ಮೇಲೆ ಉಜ್ಜಿ ಹೊರಸೂಸುವ ರಸವನ್ನು ಸೇವಿಸುತ್ತದೆ. ಇದರಿಂದ ಎಲೆಗಳು ಮುದುಡಿ ಒಣಗುವುದಲ್ಲದೇ, ಹೂಗಳ ಮೇಲೆ ಕೆರೆದು ರಸ ಹೀರುವುದರಿಂದ ಹೊರಮೈ ಒಣಗಿ ಒರಟಾಗುತ್ತದೆ ಮತ್ತು ಬಿಳಿ ಮಚ್ಚೆಗಳಾಗುತ್ತದೆ. ಇಂತಹ ಹೂಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುವುದಿಲ್ಲ.

• ಥ್ರಿಪ್ಸ್ ನುಸಿಗಳನ್ನು ನಿಯಂತ್ರಿಸಲು ಹಳದಿ ಅಂಟು ಬಲೆಗಳನ್ನು ಉಪಯೋಗಿಸುತ್ತಾರೆ.
• ಹೆಚ್ಚಿನ ಥ್ರಿಪ್ಸ್ ನುಸಿ ಬಾಧೆಯನ್ನು ತಡೆಯಲು ಹೂ ಬಿಡುವ ಸಮಯದಲ್ಲಿ ಪ್ರತೀ ಲೀಟರ್ ನೀರಿನಲ್ಲಿ ೧ ಮಿ.ಲೀ. ಮೋನೋಕ್ರೋಟೊಪಾಸ್ ಅಥವಾ ೧ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ೨೫ ಇ.ಸಿ. ಅಥವಾ ಇಮಿಡಾಕ್ಲೋಪ್ರೀಡ್ ೦.೨೫ ಮಿ.ಲೀ. ಬೆರೆಸಿ ಸಿಂಪಡಿಸಬೇಕು.
• ವರ್ಟಿಸಿಲಿಯಮ್ ಲೆಕಾನಿ ಶಿಲೀಂಧ್ರ ಕೀಟನಾಶಕವನ್ನು ೫ ಗ್ರಾಂ/ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
• ಗಿಡಗಳ ಪಾತಿಯನ್ನು ಸ್ವಚ್ಛವಾಗಿಡಬೇಕು.

೨. ಹಿಟ್ಟು ತಿಗಣೆ : ಈ ಕೀಟವು ಗುಂಪು ಗುಂಪಾಗಿ ಗಿಡದ ಎಳೆಯ ರೆಂಬೆ, ಎಲೆಗಳು ಹಾಗೂ ಹೂಗಳ ಮೇಲೆ ಬಿಳಿಯ ಹಿಟ್ಟಿನ ರೂಪದಲ್ಲಿ ಮೆತ್ತಿಕೊಂಡಿರುವುದು ಕಂಡುಬರುತ್ತದೆ.

ಈ ಕೀಟಗಳು ರಸ ಹೀರುವುದರಿಂದ ಗಿಡಗಳು ಸೊರಗಿ, ಹಳದಿಯಾಗಿ ಕ್ರಮೇಣ ಒಣಗುತ್ತವೆ. ಮೊಗ್ಗುಗಳು ಹೂವಾಗುವ ಮೊದಲೇ ಬಾಡಿ ನೆಲಕ್ಕೆ ಬೀಳುತ್ತವೆ.

• ಈ ಕೀಟವನ್ನು ಹತೋಟಿ ಮಾಡಲು ೫ ಗ್ರಾಂ ಮೀನಿನ ಎಣ್ಣೆಯ ಸಾಬೂನು (ಮಿನಾರ್ಕ) ಮತ್ತು ೧ ಮಿ.ಲೀ. ಡೈಕ್ಲೋರ್‌ವಾಸ್ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಪ್ರೋಫೆನೋಫಾಸ್ (೨ ಮಿ.ಲೀ./ಲೀ.) ಅಥವಾ ೧ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ೨೫ ಇ.ಸಿ. ಸಿಂಪಡಿಸಬೇಕು.
• ಸೂಕ್ತ ಭಕ್ಷಕ (ಕ್ರೀಪ್ಟೊಲೇಮಸ್ ಮೋಟ್ರೋಜೇರಿ) ಕೀಟಗಳನ್ನು ಬಿಡುಗಡೆ ಮಾಡಬೇಕು.
• ಬಾಧೆಗೊಳಗಾದ ಭಾಗಗಳನ್ನು ತೆಗೆದು ನಾಶಪಡಿಸಬೇಕು.

೩. ಸಸ್ಯ ಹೇನುಗಳು(ಎಪಿಡ್ಸ್) : ಈ ಕೀಟಗಳು ಹೊಸ ಚಿಗುರುಗಳ ಮೇಲೆ ಹೆಚ್ಚಾಗಿ ಕಂಡುಬರುತ್ತವೆ. ಎಲೆಗಳ ಟೊಂಗೆ, ಎಲೆ, ಮೊಗ್ಗು ಹಾಗೂ ಹೂಗಳಿಂದ ರಸವನ್ನು ಹೀರುತ್ತವೆ. ಹಾನಿಗೊಳಗಾದ ಎಲೆಗಳು ಮುರುಟಾಗಿ ಕಪ್ಪು ಶಿಲೀಂಧ್ರ ವೃದ್ಧಿಯಾಗಿಸುತ್ತದೆ. ಇದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ಕುಂಠಿತವಾಗುವುದು.

• ಈ ಕೀಟವನ್ನು ನಿಯಂತ್ರಿಸಲು ಡೈಮಿಥೋಯೇಟ್ ೧.೭ ಮಿ.ಲೀ. ಅಥವಾ ೦.೨೫ ಮಿ.ಲೀ. ಇಮಿಡಾಕ್ಲೋಪ್ರಿಡ್ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
• ಹಾನಿಗೊಳಗಾದ ಭಾಗಗಳನ್ನು ಹುಳು ಸಮೇತ ಚಿವುಟಿ ತೆಗೆದು ಹಾಕಬೇಕು.

೪. ಶಲ್ಕ ಕೀಟಗಳು: ಈ ಕೀಟಗಳು ಕಂದು ಬಣ್ಣದಾಗಿದ್ದು ಎಲೆಗಳಿಗೆ, ಎಲೆಯ ರೆಂಬೆಗಳಿಗೆ ಹರಡುತ್ತವೆ. ದೇಹದ ಮೇಲೆ ಮೇಣದ ವಸ್ತು ಆವರಿಸಿರುತ್ತದೆ. ಹೆಣ್ಣು ಮತ್ತು ಅಪ್ಸರೆ ಶಲ್ಕ ಕೀಟಗಳು ಅಧಿಕ ಪ್ರಮಾಣದಲ್ಲಿ ರಸವನ್ನು ಹೀರುವುದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡದಲ್ಲಿ ಮೊಗ್ಗಾಗುವುದನ್ನು ತಡೆಗಟ್ಟುತ್ತವೆ.

ಈ ಕೀಟವನ್ನು ನಿಯಂತ್ರಿಸಲು ೧.೭೫ ಮಿ.ಲೀ. ಡೈಮಿಥೋಯೇಟ್ ಹಾಗೂ ೨.೫ ಗ್ರಾಂ ಫಿಶ್ ಆಯಿಲ್ ರೇಸಿನ್ ಸೋಪನ್ನು ಮಿಶ್ರಣ ಮಾಡಿ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

೫. ಮೈಟ್ ನುಸಿ: ಈ ನುಸಿಗಳು ಎಲೆಗಳಿಂದ ಮತ್ತು ಹೂಗಳಿಂದ ರಸವನ್ನು ಹೀರುತ್ತವೆ. ಇದರಿಂದ ಎಲೆಗಳ ಮೇಲೆ ಹಳದಿ ಚುಕ್ಕೆಗಳಾಗುತ್ತವೆ, ನಂತರ ಒಣಗುತ್ತವೆ, ಹೂಗಳು ಬೆಳೆಯದೆ ಚಿಕ್ಕದಾಗಿ ಗೊಂಚಲುಗಳಾಗುತ್ತವೆ.

• ಬಾಧೆಗೊಳಗಾದ ರೆಂಬೆಗಳನ್ನು, ಹೂಗಳನ್ನು ಕಿತ್ತು ಸುಡಬೇಕು.
• ಚಿಗುರಿನ ಮೇಲೆ ಹಾನಿ ಕಾಣಿಸಿದ ಕೂಡಲೆ ೦.೧ ಗ್ರಾಂ ಅಸಿಫೇಟ್ ಅಥವಾ ೨.೫ ಮಿ.ಲೀ. ಡೈಕೋಫಾಲ್ ಅಥವಾ ೧.೦೦ ಮಿ.ಲೀ. ಅಬಾಮೆಕ್ಟಿನ್ ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಈ ಕೀಟದ ಹಾವಳಿ ಹೆಚ್ಚಾಗಿ ಕಂಡುಬಂದಲ್ಲಿ ೧೫ ದಿವಸಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪಡಿಸಬೇಕು.

೬. ಮೊಗ್ಗು ಕೊರೆಯುವ ಹುಳು (bud borer): ಇದು ಬಹು ಬೆಳೆ ಪೀಡೆಯಾಗಿದ್ದು, ಸುಮಾರು ೨೬೦ ಬೆಳೆಗಳಿಗೆ ತಗಲುತ್ತದೆ. ಮೊದಲು ಹೂವಿನ ಮೊಗ್ಗು ಮತ್ತು ಹೂವುಗಳನ್ನು ಕೊರೆದು ತಿನ್ನುವುದರಿಂದ ಹೂಗಳನ್ನು ಹಾಳು ಮಾಡುತ್ತದೆ.

• ಮಾಗಿ ಉಳುಮೆ ಮಾಡಬೇಕು.
• ಮೊಟ್ಟೆ ಪರೋಪ ಜೀವಿಗಳಾದ ಟೈಕೋಗ್ರಾಮ್ ಕಿಲೊನಿಸ್ ಅನ್ನು ಬಿಡುಗಡೆ ಮಾಡಬೇಕು (ಸುಮಾರು ೧ ಲಕ್ಷ /ಎಕರೆಗೆ).
• ಮರಿ ಹುಳುಗಳು ಕಾಣಿಸಿಕೊಂಡಾಗ HaNPV@೨೫೦ ಎಲ್.ಇ (೧.೦ ಮಿ.ಲೀ. ಒಂದು ಲೀಟರ್‌ಗೆ) ನಂಜು ರೋಗಾಣುಗಳ ದ್ರಾವಣವನ್ನು ಸಿಂಪಡಿಸಬೇಕು.
• ಮೋಹಕ ಬಲೆಗಳನ್ನು ಹೊಲಗಳಲ್ಲಿ ಇಡುವುದರಿಂದ ಪತಂಗಗಳನ್ನು ನಿಯಂತ್ರಿಸಬಹುದು. (ಎಕರೆಗೆ ನಾಲ್ಕು ಬಲೆಗಳು)
• ಈ ಕೀಟವನ್ನು ನಿಯಂತ್ರಿಸಲು ೨ ಮಿ.ಲೀ. ಕ್ವಿನಾಲ್‌ಫಾಸ್ ೨೫ ಇ.ಸಿ. ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

ಚೆಂಡು ಹೂವಿಗೆ ಬರುವ ರೋಗಗಳು

೧. ಬುಡ ಕೊಳೆ ರೋಗ: ರೋಗಕ್ಕೆ ತುತ್ತಾದ ಗಿಡಗಳು ಹಳದಿ ಬಣ್ಣಕ್ಕೆ, ನಂತರ ಕಂದು ಬಣ್ಣಕ್ಕೆ ತಿರುಗಿ ಸಾಯುತ್ತವೆ.

ನಿರ್ವಹಣಾ ಕ್ರಮಗಳು: ಬುಡ ಕೊಳೆ ರೋಗ ನಿಯಂತ್ರಿಸಲು ೧ ಗ್ರಾಂ ಕಾರ್ಬನ್‌ಡೈಜಿಮ್ ೫೦ ಡಬ್ಲೂ.ಪಿ. ಅಥವಾ ೨ ಮಿ.ಲೀ. ಟಿಲ್ಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಭೂಮಿಗೆ ಹಾಕಬೇಕು.

೨. ಎಲೆ ಮುಟುರು ರೋಗ: ಹಳದಿ ಮಿಶ್ರಿತ ಹಸಿರು ಭಾಗವನ್ನು ಎಲೆಯಲ್ಲಿ ಕಾಣಬಹುದು. ಎಲೆಗಳ ಅಂಚುಗಳು ಮುದುಡಿಕೊಂಡಿರುತ್ತವೆ. ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ನಿರ್ವಹಣಾ ಕ್ರಮಗಳು: ಎಲೆ ಮುಟುರು ರೋಗಕ್ಕೆ ತುತ್ತಾದ ಸಸಿಗಳನ್ನು, ಕಿತ್ತು ಹಾಕಿ ನಾಶಪಡಿಸಿ ರೋಗ ಹರಡುವುದನ್ನು ತಡೆಗಟ್ಟಬೇಕು ಇದು ಕೀಟದಿಂದ ಹರಡುತ್ತದೆ ಕೀಟಗಳ ಹತೋಟಿಗೆ ೨ ಮಿ.ಲೀ. ಡೈಮಿಥೋಯೇಟ್ ಅಥವಾ ಬೇವಿನ ಎಣ್ಣೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

೩. ಎಲೆ ಚುಕ್ಕೆ ಮತ್ತು ಅಂಗಮಾರಿ ರೋಗ: ಇದು ಅಲ್ಟರ್‌ನೇರಿಯಾ ಶಿಲೀಂಧ್ರದಿಂದ ಬರುವ ರೋಗ. ಎಲೆಗಳ ಮೇಲೆ ಚುಕ್ಕೆಗಳಾಗಿ ಹೂವಿನ ಮೊಗ್ಗು, ದಳಗಳನ್ನೂ ಇವು ಆವರಿಸಿಕೊಳ್ಳುತ್ತವೆ.

ನಿರ್ವಹಣಾ ಕ್ರಮಗಳು: ತೀವ್ರ ಬಾಧೆಗೊಳಗಾದ ಎಲೆ, ಮೊಗ್ಗು, ಹೂವುಗಳನ್ನು ತೆಗೆದು ಹಾಕಿ ಬೆಳೆಗೆ ಮ್ಯಾಂಕೋಜೆಬ್ (೩ ಗ್ರಾಂ/ಲೀ.) ಅಥವಾ ಕವಚ್(೨ ಗ್ರಾಂ/ಲೀ.) ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ

ಸಸಿ ನಾಟಿ ಮಾಡಿದ ಸುಮಾರು ೪೫ ದಿನಗಳಲ್ಲಿ ಗಿಡ ದಲ್ಲಿ ಹೂ ಮೊಗ್ಗು ಕಾಣಿಸಿ ಕೊಳ್ಳುತ್ತವೆ. ಅನಂತರ ೧೫-೨೦ ದಿನಗಳಲ್ಲಿ ಕೊಯ್ಲು ಮಾಡಬಹುದು. ಹೂವು ಪೂರ್ಣ ಗಾತ್ರಕ್ಕೆ ವೃದ್ಧಿ ಹೊಂದಿ, ದಳಗಳು ಬಿರಿದಾಗ ಬಿಡಿ ಬಿಡಿಯಾಗಿ ಕಿತ್ತು ತೆಗೆಯಬೇಕು. ಅಧಿಕ ಹೂವಿನ ಇಳುವರಿ ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳವರೆಗೆ ಸಿಗುತ್ತದೆ. ದಿನದ ತಂಪು ಹೊತ್ತಿನಲ್ಲಿ ಹೂ ಕಟಾವು ಮಾಡುವುದು ಸೂಕ್ತ. ಪ್ರತಿ ಎಕರೆಗೆ ಸರಾಸರಿ ೮-೧೦ ಟನ್ ಇಳುವರಿ ಪಡೆಯಬಹುದು.

ಸಾಗಾಣಿಕೆ ಮತ್ತು ಮಾರಾಟ

ಕೊಯ್ಲು ಮಾಡಿದ ಹೂಗಳನ್ನು ಸಡಿಲವಾಗಿ ಹೆಣೆದ ಬಿದಿರಿನ ಬುಟ್ಟಿಗಳಲ್ಲಿ ತುಂಬಿ ಸ್ಥಳಿಯ ಅಥವಾ ದೂರದ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ತುಂಬಿ ಕಳುಹಿಸುವುದು ತುಂಬಾ ಸೂಕ್ತ. ಕಡಿಮೆ ಕ್ಷೇತ್ರದಲ್ಲಿ ಬೆಳೆದಾಗ ಅದರಲ್ಲೂ ಪ್ರಮುಖ ಹಬ್ಬಗಳಾದ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಸಮಯದಲ್ಲಿ, ಹೂವಿನ ಇಳುವರಿ ಬರುವಂತೆ ನಾಟಿ ಸಮಯದಲ್ಲಿ ಹೊಂದಾಣಿಕೆ ಮಾಡಿ ಬೆಳೆದಾಗ, ಸ್ಥಳಿಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಹೆಚ್ಚಿನ ಕ್ಷೇತ್ರದಲ್ಲಿ ಬೆಳೆದಾಗ ಸ್ಥಳಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಪಡೆಯುವುದು ಕಷ್ಟ. ಈ ನಿಟ್ಟಿನಲ್ಲಿ ಒಪ್ಪಂದ ಕೃಷಿ ಆಧಾರದ ಮೇಲೆ ಕೆಲವು ಕಂಪನಿಗಳು ಹಾಗೂ ಪ್ರಗತಿ ಪರ ರೈತ ಸಂಘಟನೆಗಳು, ಚೆಂಡು ಹೂವಿನ ಬೆಳೆಗಾರರಿಗೆ ತಾಂತ್ರಿಕ ಮಾಹಿತಿ ನೀಡಿ, ಬೇಕಾದ ಸಸಿಗಳನ್ನು ಪೂರೈಸುವುದರ ಜೊತೆಗೆ, ಕೊಯ್ಲು ಮಾಡಿದ ಹೂವುಗಳನ್ನು ದೂರದ ಮಾರುಕಟ್ಟೆಗೆ ಸುಲಭವಾಗಿ ಮುಟ್ಟಿಸುವ ಮತ್ತು ಬಂದಂತಹ ಆದಾಯವನ್ನು ಬ್ಯಾಂಕ್ ಖಾತೆಗೆ, ನೇರವಾಗಿ ಜಮಾ ಮಾಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಮುಂಬಯಿ ಮಾರುಕಟ್ಟೆಯಲ್ಲಿ ನೂರಕ್ಕಿಂತಲೂ ಅಧಿಕ ಖರೀದಿದಾರರಿದ್ದು, ಮಾರಾಟ ಮಾಡಲು ಸಾಕಷ್ಟು ಅವಕಾಶಗಳಿವೆ.

ಅಂದಾಜು ಆರ್ಥಿಕತೆ (ರೂ./ಎಕರೆಗೆ)

ಕ್ರ.ಸಂ. ಸಾಮಗ್ರಿ ಖರ್ಚು(ರೂ.ಗಳಲ್ಲಿ)
೧ ಸಸ್ಯ ಸಾಮಗ್ರಿ ೧೫,೦೦೦=೦೦
೨ ಬೇಸಾಯ ಸಾಮಗ್ರಿ (ಗೊಬ್ಬರ ಔಷಧಿ ಇತ್ಯಾದಿ) ೨೫,೦೦೦=೦೦
೩ ಆಳುಗಳ ಖರ್ಚು ೨೦,೦೦೦=೦೦
೪ ಕೊಯ್ಲು, ಸಾಗಾಣಿಕೆ ಮತ್ತು ಮಾರುಕಟ್ಟೆ ಖರ್ಚು(ಸಾಗಾಣಿಕೆ ೧೨ ಕಿ.ಗ್ರಾಂ ಕ್ರೇಟ್‌ಗೆ ೭೦ ರೂ. ಕಮೀಷನ್ ೧೫%) ೧,೦೦,೦೦೦=೦೦
ಒಟ್ಟು ೧,೬೦,೦೦೦=೦೦

ಆದಾಯ

ಇಳುವರಿ : ೮ ಟನ್
ಸರಾಸರಿ ದರ : ರೂ. ೩೦/ ಕಿ.ಗ್ರಾಂ
ಆದಾಯ : ೨,೪೦,೦೦೦=೦೦
ನಿವ್ವಳ ಲಾಭ : ೨,೪೦,೦೦೦=೦೦ - ೧,೬೦,೦೦೦=೦೦ =೮೦,೦೦೦

--ಬಾಲಾಜಿ ಶ್ರೀಧರ ಕುಲಕರ್ಣಿ, ೯೪೪೯೩೮೪೯೫೦, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ