ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಚೈನಾ ಆಸ್ಟರ್ ಹೂವಿನ ನಿಖರ ಬೇಸಾಯ

ಅವಿನಾಶ್ ಎಮ್., ಜೀವನ್ ಯು
೮೦೯೫೦೨೪೮೩೨
1

ಚೈನಾ ಆಸ್ಟರ್ ಒಂದು ಪ್ರಮುಖ ವಾರ್ಷಿಕ ಹೂವಿನ ಬೆಳೆಯಾಗಿದ್ದು, ದಕ್ಷಿಣ ಭಾರತದಲ್ಲಿ ವಾಣಿಜ್ಯ ಪುಷ್ಪವಾಗಿ ಜನಪ್ರಿಯತೆ ಹೊಂದಿದೆ. ಕಡಿಮೆ ಅವಧಿಯಲ್ಲಿ ವರ್ಷಪೂರ್ತಿ ಬೆಳೆಯಬಹುದಾದ ಪುಷ್ಪ ಬೆಳೆಯಾಗಿದೆ. ಭಾರತದಲ್ಲಿ ಇದನ್ನು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

ಇದರ ವೈಜ್ಞಾನಿಕ ಹೆಸರು ಕ್ಯಾಲಿಸ್ಟೆಫಸ್ ಚೈನೆನ್ಸಿಸ್. ಇದು ಆಸ್ಟರೇಸಿ ಸಸ್ಯ ಕುಟುಂಬಕ್ಕೆ ಸೇರಿದೆ. ಕ್ಯಾಲಿಸ್ಟೆಫಸ್ ಕುಲವು ಎರಡು ಗ್ರೀಕ್ ಪದಗಳಾದ ’ಕ್ಯಾಲಿಸ್ಟೊಸ್’ ಎಂದರೆ, ಅತ್ಯಂತ ಸುಂದರ ಮತ್ತು ಸ್ಟೆಫೊಸ್ ಎಂದರೆ ಹೂವಿನ ಕಿರೀಟ ಎಂಬ ಪದಗಳಿಂದಾಗಿದೆ.

ಚೈನಾ ಆಸ್ಟರ್ ಹೂವನ್ನು ಮುಖ್ಯವಾಗಿ ಹಾರ ಕಟ್ಟಲು, ದೇವರ ಪೂಜೆಗೆ, ವೇದಿಕೆ ಅಲಂಕರಿಸಲು ಬಳಸುತ್ತಾರೆ. ಇದಲ್ಲದೆ ಉದ್ದನೆಯ ಕಾಂಡಸಹಿತ ಕತ್ತರಿಸದ ಹೂವುಗಳನ್ನು ಪುಷ್ಪ ಗುಚ್ಚ ತಯಾರಿಕೆ, ಹೂದಾನಿಯಲ್ಲಿಡಲು ಮುಂತಾಗಿ ವಿವಿಧ ರೀತಿಯಲ್ಲಿ ಬಳಸುತ್ತಾರೆ. ಇದರಲ್ಲಿ ಪ್ರಮುಖವಾಗಿ ಗುಲಾಬಿ, ನೀಲಿ, ಬಿಳಿ, ನೇರಳೆ, ಕೆಂಪು, ಹಳದಿ ಬಣ್ಣದ ಹೂಗಳು ಕಂಡುಬರುತ್ತವೆ.

ಹವಾಗುಣ

ಚೈನಾ ಆಸ್ಟರ್ ಬೆಳೆಯನ್ನು ವರ್ಷಪೂರ್ತಿ ಬೆಳೆಯ ಬಹುದಾದರೂ, ಚಳಿಗಾಲಕ್ಕೆ ತುಂಬಾ ಸೂಕ್ತವಾದ ಬೆಳೆಯಾಗಿದೆ. ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಲು ಹಗಲಿನಲ್ಲಿ ೨೦-೩೦೦ ಸೆಂ. ಮತ್ತು ರಾತ್ರಿಯಲ್ಲಿ ೧೫-೧೭೦ ಸೆಂ. ಉಷ್ಣಾಂಶ, ಶೇ. ೫೦-೬೦ ವಾತಾವರಣದ ತೇವಾಂಶವು ಬೆಳೆಗೆ ಅನುಕೂಲಕರ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುಮಾರು ೫೦೦-೭೦೦ ಮಿ.ಮೀ. ಮಳೆಯ ಅಗತ್ಯತೆಯಿದ್ದು, ನಂತರ ಆಗಾಗ್ಗೆ ಅವಶ್ಯಕತೆಗೆ ತಕ್ಕಂತೆ ಲಘು ಪ್ರಮಾಣದ ನೀರನ್ನು ಹಾಯಿಸಬೇಕು.

ಮಣ್ಣಿನ ನಿರ್ವಹಣೆ

ಚೈನಾ ಆಸ್ಟರ್ ಬೇಸಾಯವು ಅತಿ ತೇವವುಳ್ಳ ಭೂಮಿಗೆ ಸೂಕ್ಷ್ಮ ಬೆಳೆಯಾಗಿದ್ದು, ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡು ಮಣ್ಣು ಅತಿ ಸೂಕ್ತ. ಮಣ್ಣಿನ ರಸಸಾರವು ೬.೫-೭.೫ ಇರಬೇಕು. ಮಣ್ಣು ಹೆಚ್ಚು ಫಲವತ್ತಾಗಿರಬೇಕು. ಹೆಚ್ಚು ಆಮ್ಲಯುಕ್ತ ಮಣ್ಣು ಈ ಬೆಳೆಗೆ ಯೋಗ್ಯವಲ್ಲ.

ಪ್ರಮುಖ ತಳಿಗಳು

ಚೈನಾ ಆಸ್ಟರ್‌ನಲ್ಲಿ ವಿವಿಧ ಬಣ್ಣದ ತಳಿಗಳಿವೆ. ಪೂರ್ಣಿಮ, ವೈಲೆಟ್ ಕುಷನ್, ಕಾಮಿನಿ, ಶಶಾಂಕ್, ಅರ್ಕಾ ಆದ್ಯಾ ಮತ್ತು ಅರ್ಕಾ ಅರ್ಚನ ಎಂಬ ತಳಿಗಳನ್ನು ಭಾರತೀಯ ತೋಟಗಾರಿಕೆ ಸಂಶೋಧನ ಕೇಂದ್ರ, ಹೆಸರಘಟ್ಟ ಅಭಿವೃದ್ಧಿಪಡಿಸಿದೆ. ಫುಲೆ ಗಣೇಶ ವೈಟ್, ಫುಲೆ ಗಣೇಶ ಪಿಂಕ್, ಫುಲೆ ಗಣೇಶ ಪರ್ಪಲ್, ಫುಲೆ ಗಣೇಶ ವೈಲೆಟ್ ತಳಿಗಳನ್ನು ಎಂ.ಪಿ.ಕೆ.ವಿ. ರಾಹುರೆ ಕೃಷಿ ವಿಶ್ವವಿದ್ಯಾಲಯ, ಮಹಾರಾಷ್ಟ್ರ ಅಭಿವೃದ್ಧಿಪಡಿಸಿದ್ದು, ಈ ತಳಿಗಳು ಹೆಚ್ಚು ಜನಪ್ರಿಯತೆ ಹೊಂದಿವೆ.

ನಾಟಿ ಮಾಡುವ ಕಾಲ

ನಾಟಿ ಮಾಡಲು ಮೇ ಜೂನ್ ತಿಂಗಳು ಸೂಕ್ತ. ನೀರಾವರಿ ಸೌಲಭ್ಯವಿದ್ದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲೂ ನಾಟಿ ಮಾಡಿ ಅಧಿಕ ಇಳುವರಿ ಪಡೆಯಬಹುದು.

ಸಸ್ಯಾಭಿವೃದ್ಧಿ

ಸುಮಾರು ೨೫೦ ಗ್ರಾಂ ಬೀಜದಿಂದ ಒಂದು ಎಕರೆಗೆ ಬೇಕಾಗುವಷ್ಟು ಸಸಿಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಬೀಜವನ್ನು ೧.೨ ಮೀ. ಉದ್ದ ೬೦ ಸೆಂ.ಮೀ. ಅಗಲ ಮತ್ತು ೧೦ ಸೆಂ.ಮೀ. ಎತ್ತರದ ಏರು ಮಡಿಗಳಲ್ಲಿ ಬಿತ್ತಲಾಗುತ್ತದೆ. ೧೦-೧೨ ಸೆಂ.ಮೀ. ಅಂತರ ಮತ್ತು ೫ ಸೆಂ.ಮೀ. ಆಳದಲ್ಲಿ ತೆಳುವಾಗಿ ಬಿತ್ತಿ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಮಿಶ್ರಣದಿಂದ ಮುಚ್ಚಬೇಕು. ನಂತರ ವಾಟರ್‌ಕ್ಯಾನ್‌ನಿಂದ ನಿಧಾನವಾಗಿ ನೀರನ್ನು ಸಿಂಪಡಿಸಬೇಕು.

ಬೇಸಾಯ ಕ್ರಮಗಳು/ನಾಟಿ ಮಾಡುವಿಕೆ

ಬೆಳೆಗೆ ಆಯ್ಕೆಯಾದ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಪ್ರತಿ ಒಂದು ಎಕರೆಗೆ ೪ ರಿಂದ ೫ ಟನ್‌ಗಳಷ್ಟು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಸೊರಗು ರೋಗ ತಗಲುವುದನ್ನು ತಪ್ಪಿಸಲು ಸಾಲಿನ ದಿಣ್ಣೆಗಳ ಮೇಲೆ ನಾಟಿ ಮಾಡಬೇಕು. ಸಾಮಾನ್ಯವಾಗಿ ೩೦ ಸೆಂ.ಮೀ. ೩೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡುವುದು ಉತ್ತಮ.

ಸಸಿಗಳು ೪ ರಿಂದ ೬ ವಾರಗಳಲ್ಲಿ ಮೂರರಿಂದ ನಾಲ್ಕು ಎಲೆಗಳೊಂದಿಗೆ ನಾಟಿ ಮಾಡಲು ಸಿದ್ಧವಾಗಿರುತ್ತವೆ. ತೀರಾ ಮುಂಚಿತವಾಗಿ ಅಥವಾ ತಡವಾದ ಹಂತಗಳಲ್ಲಿ ಸಸಿಗಳನ್ನು ನಾಟಿ ಮಾಡುವುದು ಯೋಗ್ಯವಲ್ಲ. ಮುಂಜಾನೆ ಅಥವಾ ಸಂಜೆ ತಂಪಾದ ಸಮಯದಲ್ಲಿ ನಾಟಿ ಮಾಡುವುದು ಸೂಕ್ತ.

ರಾಸಾಯನಿಕ ಗೊಬ್ಬರಗಳು

ಸರಿಯಾದ ಬೆಳವಣಿಗೆ, ಇಳುವರಿ ಮತ್ತು ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಲು ರಾಸಾಯನಿಕ ಗೊಬ್ಬರಗಳ ಬಳಕೆ ಅತಿ ಮುಖ್ಯ. ಪ್ರತಿ ಎಕರೆಗೆ ೭೨ ಕೆ.ಜಿ. ಸಾರಜನಕ, ೫೦ ಕೆ.ಜಿ ರಂಜಕ ಮತ್ತು ೨೪ ಕೆ.ಜಿ. ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳನ್ನು ಹಾಕಬೇಕು. ಅದರಲ್ಲಿ ೩೬ ಕಿ.ಗ್ರಾಂ ಸಾರಜನಕ, ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಅನ್ನು ಭೂಮಿಯನ್ನು ಸಿದ್ಧಪಡಿಸುವ ಸಮಯದಲ್ಲಿ ಹಾಕಬೇಕು. ಉಳಿದ ೩೬ ಕಿ.ಗ್ರಾಂ ಸಾರಜನಕವನ್ನು ನಾಟಿ ಮಾಡಿದ ೪೦ ದಿನಗಳಲ್ಲಿ ಹಾಕಬೇಕು.

ನೀರು ನಿರ್ವಹಣೆ

ಈ ಬೆಳೆಗೆ ನೀರಿನ ಅವಶ್ಯಕತೆಯು ಹವಾಮಾನ, ನಾಟಿ ಮಾಡುವ ಕಾಲ ಮತ್ತು ಮಣ್ಣಿನ ವಿಧವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ೭ ರಿಂದ ೧೦ ದಿನಗಳಿಗೊಮ್ಮೆ ನೀರನ್ನು ಹಾಯಿಸಬೇಕು.

ಸಸ್ಯ ಪ್ರಚೋದಕಗಳ ಬಳಕೆ

ಚೈನಾ ಆಸ್ಟರ್‌ನಲ್ಲಿ ಹೂವುಗಳ ಸಂಖ್ಯೆ ಮತ್ತು ಹೂ ಬಿಡುವ ಅವಧಿಯನ್ನು ಹೆಚ್ಚಿಸಲು ೨೦೦-೩೦೦ ಪಿ.ಪಿ.ಎಂ ಸಾಂಧ್ರತೆಯ ಜಿ.ಎ ೩ ದ್ರಾವಣವನ್ನು ತುದಿ ಚಿವುಟಿದ ೧೫ ದಿನಗಳಾದ ನಂತರ ಸಿಂಪರಣೆ ಮಾಡಬೇಕು.

ತುದಿ ಚಿವುಟುವಿಕೆ

ನಾಟಿ ಮಾಡಿದ ಒಂದು ತಿಂಗಳ ನಂತರ ತುದಿ ಚಿವುಟುವುದರಿಂದ ಗಿಡವು ಹೆಚ್ಚು ಕವಲೊಡೆದು ಹೂವಿನ ಬೆಳವಣಿಗೆ ವೃದ್ಧಿಯಾಗಿ ಇಳುವರಿ ಹೆಚ್ಚುತ್ತದೆ.

ಕೊಯ್ಲು ಮತ್ತು ಇಳುವರಿ

ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಲು ಕೊಯ್ಲು ಪ್ರಮುಖ ಪಾತ್ರ ವಹಿಸುತ್ತದೆ. ಸಸಿಗಳನ್ನು ನಾಟಿ ಮಾಡಿದ ಸುಮಾರು ೧೦-೧೨ ವಾರಗಳಲ್ಲಿ ಹೂವುಗಳನ್ನು ಕೊಯ್ಲು ಮಾಡಬಹುದು. ಅಲಂಕಾರ, ಪೂಜೆ ಮತ್ತು ಮಾಲೆ ಮಾಡಲು ಪೂರ್ತಿಯಾಗಿ ಅರಳಿದ ಬಿಡಿ ಹೂವುಗಳನ್ನು ಕೊಯ್ಲು ಮಾಡಲಾಗುತ್ತದೆ.

ಪುಷ್ಪಗುಚ್ಚವನ್ನು ತಯಾರಿಸಲು ಮತ್ತು ಹೂದಾನಿಯಲ್ಲಿಡಲು ಶೇ. ೬೦ ಭಾಗ ಅರಳಿದ ಹೂವುಗಳನ್ನು, ಕಾಂಡದ ಜೊತೆಗೆ ಅಥವಾ ನೆಲದಿಂದ ಸ್ವಲ್ಪ ಮೇಲೆ ಇಡೀ ಸಸ್ಯವನ್ನು ಕತ್ತರಿಸಲಾಗುತ್ತದೆ. ದಿನದ ತಂಪು ಹೊತ್ತಿನಲ್ಲಿ ಕಟಾವು ಮಾಡುವುದು ಸೂಕ್ತ.

ಚೈನಾ ಆಸ್ಟರ್ ಬೇಸಾಯದಿಂದ ಎಕರೆಗೆ ಸರಾಸರಿ ೭-೮ ಟನ್ ಇಳುವರಿ ಪಡೆಯಬಹುದು. ಸಸ್ಯ ಸಂರಕ್ಷಣೆ ಕ್ರಮಗಳು

30

ಹೂವು ತಿನ್ನುವ ಹುಳು: ಈ ಕೀಟಗಳ ಬಾಧೆ ಕಂಡಲ್ಲಿ ಇಂಡಾಕ್ಸ್‌ಕಾರ್ಬ್ ೦.೫ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಕಾಂಡ ಕೊರೆಯುವ ಹುಳು: ಮರಿ ಹುಳುಗಳು ಗಿಡದ ಕಾಂಡ ಮತ್ತು ಕೊಂಬೆಗಳ ಮೇಲೆ ರಂಧ್ರಗಳನ್ನು ಮಾಡಿರುತ್ತವೆ. ಈ ಸಂಧರ್ಭದಲ್ಲಿ ಪ್ರ್ರೊಫೆನೊಫೋಸ್ ೧ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ರಸಹೀರುವ ಕೀಟಗಳಾದ ಹೇನು ಮತ್ತು ಥ್ರಿಪ್ಸ್ ಹಾವಳಿ ಹೂ ಬಿಡುವ ಹಂತದಲ್ಲಿ ಅತಿ ಹೆಚ್ಚು ಕಂಡುಬರುವುದು.

ಮುನ್ನೆಚ್ಚರಿಕೆಯಾಗಿ ಮೊಗ್ಗು ಕಚ್ಚುವ ಹಂತದಲ್ಲಿ ಡೈಮೆಥೊಯೇಟ್ ೨ ಮಿ.ಲೀ. ಅಥವಾ ಇಮಿಡಾಕ್ಲೋಪ್ರಿಡ್ ೦.೫ ಮಿ.ಲೀ. ಪ್ರತಿ ಲೀಟರ್‌ಗೆ ಬೆರೆಸಿ ಸಿಂಪರಣೆ ಮಾಡುವುದು ಬಹಳ ಒಳ್ಳೆಯದು. ಹೂವುಗಳನ್ನು ಮುಖ್ಯವಾಗಿ ಮಾರುಕಟ್ಟೆ ಮಾಡುವುದರಿಂದ, ಗುಣಮಟ್ಟವನ್ನು ಕಾಪಾಡಲು ಹೂ ಬಿಟ್ಟ ನಂತರ ಸಹ ಅಸಿಟಮಪ್ರಿಡ್ ೦.೪ ಗ್ರಾಂ ಪ್ರತಿ ಲೀಟರ್‌ಗೆ ಬೆರೆಸಿ ಸಿಂಪಡಿಸಿದರೆ ಗುಣಮಟ್ಟವನ್ನು ಕಾಪಾಡಬಹುದು.

ಸೊರಗು ರೋಗ ಕಂಡುಬಂದಲ್ಲಿ ಪ್ರೊಪಿಕೋನೋಜೊಲ್ ೧ ಮಿ.ಲೀ. ಪ್ರತಿ ಲೀಟರ್‌ಗೆ ಬೆರೆಸಿ ಸಿಂಪರಣೆ ಹಾಗೂ ಬುಡಕ್ಕೆ ಸುರಿಯಬೇಕು. ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು.

ಎಲೆ ಚುಕ್ಕೆ ರೋಗ ಉಲ್ಬಣವಾದಾಗ ಹೆಕ್ಸಕೋನೋಜೊಲ್ ೧. ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಚಳಿಗಾಲವೇ ಈ ಬೆಳೆಯ ಮುಖ್ಯ ಕಾಲವಾದಾಗ, ಸಾಮಾನ್ಯವಾಗಿ ಬೂದಿರೋಗ ಕಾಣಿಸಿಕೊಳ್ಳುತ್ತದೆ. ಪ್ರತಿ ಲೀಟರ್ ನೀರಿಗೆ ನೀನಲ್ಲಿ ಕರಗುವ ಗಂಧಕವನ್ನು ೩ ಗ್ರಾಂನಂತೆ ಬೆರೆಸಿ ಸಿಂಪರಣೆ ಮಾಡಬೇಕು. ನಂತರ ಮೂರು ನಾಲ್ಕು ದಿನಗಳಾದ ಬಳಿಕ ಮೈಕ್ಲೊಬುಟಾನಿಲ್ ೦.೫ ಗ್ರಾಂ ಪ್ರತಿ ಲೀಟರ್‌ಗೆ ಬೆರೆಸಿ ಸಿಂಪಡಿಸಿದರೆ ಸಂಪೂರ್ಣವಾಗಿ ಹತೋಟಿ ಮಾಡಬಹುದು.

ಚೈನಾ ಆಸ್ಟರ್ ಬೆಳೆಯ ಖರ್ಚು ಮತ್ತು ಆದಾಯ

ಕ್ರ. ಸಂ. ಎಕರೆಗೆ ವೆಚ್ಚ (ರೂ.)
೧ ಬೀಜಗಳ ವೆಚ್ಚ ೮,೦೦೦/-
೨ ಗೊಬ್ಬರಗಳು ೧೫,೦೦೦/-
೩ ರೋಗ ಮತ್ತು ಕೀಟನಾಶಕಗಳು ೧೦,೦೦೦/-
೪ ಆಳುಗಳು ೪೦,೦೦೦/-
೫ ಸ್ಥಿರ ಸಂಪನ್ಮೂಲಗಳ ಖರ್ಚು ೨೦,೦೦೦/-
ಒಟ್ಟು ಖರ್ಚು ೯೩,೦೦೦/-

ಆದಾಯ

ಇಳುವರಿ ಎಕರೆಗೆ ೭-೮ ಟನ್‌ಗಳು-
ಒಟ್ಟು ಆದಾಯ ೭,೫೦೦  ೨೦ ರೂ. ಪ್ರತಿ ಕೆ.ಜಿ.ಗೆ-
ನಿವ್ವಳ ಆದಾಯ ೧,೫೦,೦೦೦/--
೫೭,೦೦೦/--

--ಅವಿನಾಶ್ ಎಮ್.೧, ೮೦೯೫೦೨೪೮೩೨ ಮತ್ತು ಜೀವನ್ ಯು೨. ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟೆ೧, ಕೃಷಿ ವಿಶ್ವವಿದ್ಯಾಲಯ, ತ್ರಿಶೂರ್, ಕೇರಳ೨