ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಡೈಜಿ - ಬಹು ಬಾಳಿಕೆಯ ಹೂವಿನ ಬೆಳೆ

ಎ.ಎಂ.ಶೀರೋಳ, ಪವನಕುಮಾರ ಪಿ., ಬಾಲಾಜಿ ಕುಲಕರ್ಣಿ
೯೪೪೯೩೮೪೯೫೦
1

ಡೈಜಿ (ಅಸ್ಟರ್ ಅಮೆಲಸ್) ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವಾಗುತ್ತಿರುವ ವಾಣಿಜ್ಯ ಪುಷ್ಪಗಳಲ್ಲೊಂದು. ಡೈಜಿ ಹೂಗಳನ್ನು ಹೂದಾನಿಗಳಲ್ಲಿ ಅಲಂಕಾರಕ್ಕಾಗಿ ಜೋಡಿಸಲು ಹಾಗೂ ಹೂಗುಚ್ಛ ತಯಾರಿಸಲು ಹೆಚ್ಚಾಗಿ ಬಳಸುತ್ತಾರೆ. ಇದೊಂದು ಬಹುವಾರ್ಷಿಕ ಸಸ್ಯವಾಗಿದ್ದು, ವರ್ಷವಿಡೀ ಹೂ ಬಿಡುತ್ತದೆ. ಹೀಗಾಗಿ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಹೂಪಾತಿಗಳಲ್ಲಿ ಕೂಡಾ ಬೆಳೆಯುತ್ತಾರೆ.

ಮಣ್ಣು: ಈ ಬೆಳೆಯನ್ನು ಎಲ್ಲಾ ತರಹದ ಮಣ್ಣಿನಲ್ಲಿ ಬೆಳೆಯಬಹುದಾದರೂ, ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪುಗೋಡು ಮಣ್ಣು ತುಂಬಾ ಸೂಕ್ತ.

ನಾಟಿಕಾಲ: ಈ ಬೆಳೆಯನ್ನು ನಿರಂತರವಾಗಿ ಹೂ ಪಡೆಯಲು ವರ್ಷದ ಯಾವುದೇ ಸಮಯದಲ್ಲಿ ನಾಟಿ ಮಾಡಬಹುದಾದರೂ, ಜೂನ್ - ಜುಲೈ ತಿಂಗಳುಗಳು ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಪ್ರಮಾಣದ ಹೂಗಳನ್ನು ಪಡೆಯಲು ಸೂಕ್ತವಾಗಿದೆ.

ತಳಿಗಳು: ಡೈಜಿಯಲ್ಲಿ ನೀಲಿ, ತಿಳಿ ನೀಲಿ, ಸ್ಟಾರ್ ನೀಲಿ, ಬಿಳಿ, ವೈಟಟಾಲ್, ಸ್ಟಾರ್ ಬಿಳಿ, ಪಿಂಕ್, ಪರ್ಪಲ್ ಮಲ್ಟಿಪೆಟಲ್ ಮುಂತಾದ ವಿವಿಧ ವರ್ಣಗಳ ತಳಿಗಳಿವೆ.

ಸಸ್ಯಾಭಿವೃದ್ಧಿ

ಡೈಜಿಯನ್ನು ಸಸಿಗಳ ಪಕ್ಕದಲ್ಲಿ ಬರುವ ಕಂದುಗಳನ್ನು ಉಪಯೋಗಿಸಿ ಸಸ್ಯಾಭಿವೃದ್ಧಿ ಮಾಡಬಹುದು.

ಬೇಸಾಯ ಸಾಮಗ್ರಿಗಳು ಪ್ರತಿ ಹೆಕ್ಟೇರಿಗೆ

೧. ಮರಿ ಸಸಿಗಳು ೧,೧೧,೧೧೧
೨. ಕೊಟ್ಟಿಗೆ ಗೊಬ್ಬರ ೨೦ ಟನ್
೩. ರಾಸಾಯನಿಕ ಗೊಬ್ಬರ ಸಾರಜನಕ ೧೫೦ ಕಿ.ಗ್ರಾಂ
ರಂಜಕ ೧೦೦ ಕಿ.ಗ್ರಾಂ
ಪೊಟ್ಯಾಷ್ ೬೦ ಕಿ.ಗ್ರಾಂ

ಬೇಸಾಯ ಕ್ರಮಗಳು

ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಪ್ರತಿ ಹೆಕ್ಟೇರಿಗೆ ೨೦ ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ನಂತರ ೩೦ ಸೆಂ.ಮೀ. ಅಂತರದಲ್ಲಿ ಏರು ಮಡಿ ಅಥವಾ ಸಮತಟ್ಟಾದ ಮಡಿಗಳನ್ನು ತಯಾರಿಸಿ ೩೦ ಸೆಂ.ಮೀ. ಅಂತರದಲ್ಲಿ ಮರಿಸಸಿಗಳನ್ನು ನಾಟಿ ಮಾಡಿ ನೀರು ಹಾಯಿಸಬೇಕು.

ಪ್ರತಿ ಹೆಕ್ಟೇರಿಗೆ ಶಿಫಾರಸ್ಸು ಮಾಡಿದ ಪ್ರಮಾಣದ ಅರ್ಧ ಸಾರಜನಕ ಮತ್ತು ಪೂರ್ತಿ ರಂಜಕ ಹಾಗೂ ಪೊಟ್ಯಾಷ್‌ಗಳನ್ನು ಒದಗಿಸುವ ರಸಗೊಬ್ಬರಗಳನ್ನು ಮೂಲ ಗೊಬ್ಬರವಾಗಿ ನಾಟಿಗೆ ಮೊದಲು ಕೊಡಬೇಕು. ನಾಟಿ ಮಾಡಿದ ೪-೬ ವಾರಗಳ ನಂತರ ಉಳಿದ ಅರ್ಧ ಪ್ರಮಾಣದ ಸಾರಜನಕವನ್ನು ಮೇಲುಗೊಬ್ಬರವಾಗಿ ಬೆಳೆಗೆ ಒದಗಿಸಬೇಕು.

ನೀರಾವರಿ ಮತ್ತು ಅಂತರ ಬೇಸಾಯ

ಮಣ್ಣು ಮತ್ತು ವಾತಾವರಣಕ್ಕನುಸಾರವಾಗಿ ನೀರು ಒದಗಿಸಬೇಕು. ಕಳೆ ನಿಯಂತ್ರಣ ಮಾಡಬೇಕು.

15

ಸಸ್ಯ ಸಂರಕ್ಷಣಾ ಕ್ರಮಗಳು (ಕೀಟಗಳು / ರೋಗಗಳು)

ಕೀಟಗಳು: ಡೈಜಿ ಬೆಳೆಗೆ ಪ್ರಮುಖ ಕೀಟಗಳ ಬಾಧೆ ಕಡಿಮೆ. ಕೆಲವೊಮ್ಮೆ ರಸ ಹೀರುವ ಕೀಟಗಳ ಬಾಧೆ ಕಂಡುಬರುತ್ತದೆ. ಇವುಗಳನ್ನು ಸೂಕ್ತ ಅಂತರವ್ಯಾಪಿ ಕೀಟನಾಶಕಗಳ ಸಿಂಪರಣೆಯಿಂದ ಹತೋಟಿ ಮಾಡಬಹುದು. ಉದಾ: ಡೈಮಿಥೊಯೇಟ್ (೧.೭ಮಿ.ಲೀ./ಲೀ.), ಮೊನೊಕ್ರೋಟೊಫಾಸ್ (೧.೦ಮಿ.ಲೀ./ಲೀ.)

ಈ ಬೆಳೆಗೆ ಬೂದು ರೋಗ ಬಾಧಿಸುತ್ತಿದ್ದು, ಬೂದು ಬಣ್ಣದ ಕಲೆಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ನಂತರ ಎಲೆಗಳು ಒಣಗುತ್ತವೆ. ಈ ರೋಗದ ನಿರ್ವಹಣೆಗೆ ಪ್ರತಿ ಲೀಟರ್ ನೀರಿಗೆ ೩ ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಬೆರೆಸಿ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ

ನಾಟಿ ಮಾಡಿದ ೬೦ ದಿನಗಳ ನಂತರ ಹೂ ಗೊಂಚಲುಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಹೂಗೊಂಚಲಿನಲ್ಲಿನ ಪ್ರತಿಶತ ೭೫ ರಷ್ಟು ಹೂಗಳು ಅರಳಿದಾಗ, ಉದ್ದವಾದ ದೇಟಿನೊಂದಿಗೆ ಹೂಗಳನ್ನು ಕತ್ತರಿಸಿ ಕೂಡಲೇ ನೀರಿನಲ್ಲಿ ಇಡಬೇಕು. ಪ್ರತಿ ಹೆಕ್ಟೇರ್ ಡೈಜಿ ಬೆಳೆಯಿಂದ ವರ್ಷಕ್ಕೆ ಸುಮಾರು ೧೦-೧೧ ಲಕ್ಷ ಗುಣಮಟ್ಟದ ಹೂಗೊಂಚಲುಗಳನ್ನು ಪಡೆಯಬಹುದು. ಕೊಯ್ಲು ನಂತರ ಹೂವಿನ ಬಾಳಿಕೆಯನ್ನು ಹೆಚ್ಚಿಸಲು ಹೂದಾನಿಗಳಲ್ಲಿ ಶೇಕಡ ೨ರ ಸಕ್ಕರೆ ದ್ರಾವಣದ ಜೊತೆಗೆ ೮ ಹೈಡ್ರಾಕ್ಸಿ ಕ್ವಿನೊಲಿನ್ ಸಲ್ಫೇಟ್ (ಶೇ.೦.೪) ಅಥವಾ ಅಲ್ಯುಮಿನಿಯಂ ಸಲ್ಫೇಟ್ (ಶೇ.೦.೪) ಬಳಸಬೇಕು.

ಖರ್ಚು/ಆದಾಯ

ಒಂದು ಹೆಕ್ಟೇರ್‌ಗೆ ಸರಾಸರಿ ೧೦ ಲಕ್ಷ ಹೂಗೊಂಚಲುಗಳು ಪಡೆಯಬಹುದು. ಸರಾಸರಿ ಒಂದು ಗೊಂಚಲಿಗೆ ೨ ರೂ.ನಂತೆ ದರವಿದ್ದರೆ ೨೦ ಲಕ್ಷ ಒಟ್ಟು ಆದಾಯ ಬಂದರೆ ಅದರಲ್ಲಿ ಖರ್ಚು ಸುಮಾರು ೮ ಲಕ್ಷ ತೆಗೆದರೆ ಹೆಕ್ಟೇರಿಗೆ ೧೦ ರಿಂದ ೧೨ ಲಕ್ಷ ನಿವ್ವಳ ಆದಾಯ ದೊರಕಬಹುದು.

--ಎ.ಎಂ.ಶೀರೋಳ, ಪವನಕುಮಾರ ಪಿ. ಮತ್ತು ಬಾಲಾಜಿ ಕುಲಕರ್ಣಿ, ೯೪೪೯೩೮೪೯೫೦ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ.