ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ನಮ್ಮ ವಿಶ್ವವಿದ್ಯಾಲಯ- ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹಿರಿಯೂರು (ಕೇಂದ್ರ ಒಣ ವಲಯ-೪)

------
-------
1

ಕರ್ನಾಟಕದ ಕೇಂದ್ರ ಒಣಪ್ರದೇಶ ವಲಯದಡಿಯಲ್ಲಿ ಬರುವ ಹಿರಿಯೂರು, ಬೆಂಗಳೂರು-ಪೂನಾ ಹೆದ್ದಾರಿಯ (ರಾಷ್ಟ್ರೀಯ ಹೆದ್ದಾರಿ-೪೮) ಹಿರಿಯೂರು-ಆಲೂರ್ ರಸ್ತೆಯಲ್ಲಿರುವ ಬಬ್ಬೂರು ಫಾರ್ಮ್ ಜಿಲ್ಲಾ ಕೇಂದ್ರವಾದ ಚಿತ್ರದುರ್ಗಕ್ಕೆ ೪೫ ಕಿ.ಮೀ. ದೂರದಲ್ಲಿದೆ. ಈ ಕೇಂದ್ರವನ್ನು ಮೊದಲಿಗೆ ಬೀಜೋತ್ಪಾದನಾ ಕೇಂದ್ರವಾಗಿ ೧೯೧೬ ರಲ್ಲಿ ಮದ್ರಾಸ್ ಸರ್ಕಾರದಲ್ಲಿ ಅಂದಿನ ಕೃಷಿ ನಿರ್ದೇಶಕರಾಗಿದ್ದ ಡಾ. ಲೆಸ್ಲಿ ಕೋಲ್ಮನ್ ಅವರು ಬಬ್ಬೂರ್ ಫಾರ್ಮ್‌ನಲ್ಲಿ ಆರಂಭಿಸಿದ್ದರು. ದಿನಾಂಕ ೦೧.೦೪.೨೦೧೩ ರಿಂದ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಡಿಯಲ್ಲಿ ಹಿರಿಯೂರಿನಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಕೇಂದ್ರದಡಿಯಲ್ಲಿ ಅಖಿಲ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಹರಳು ಬೆಳೆ ಸಂಶೋಧನಾ ವಿಭಾಗವು ಹರಳು ಬೆಳೆಯಲ್ಲಿ ಹಲವು ಸಂಕರಣ ತಳಿಗಳ ಅಭಿವೃದ್ಧಿ, ದ್ವಿದಳ ಧಾನ್ಯ ಬೆಳೆ ಸಂಶೋಧನಾ ವಿಭಾಗದಿಂದ ತೊಗರಿ, ಅವರೆ, ಕಡಲೆ, ಹೆಸರು, ಉದ್ದು ಇತ್ಯಾದಿ ಬೆಳೆಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಶೇಂಗಾ ಬೆಳೆಯ ನಿಖರ ಕೃಷಿಯಲ್ಲಿ ಸಮಗ್ರ ನಿರ್ವಹಣೆ ಹಾಗೂ ಕೃಷಿ ಕಾರ್ಮಿಕರ ಅಭಾವ ಪರಿಸ್ಥಿತಿಯನ್ನು ನಿರ್ವಹಿಸಲು ಟ್ರ್ಯಾಕ್ಟರ್ ಚಾಲಿತ ಸಂಯುಕ್ತ ಕೂರಿಗೆಯನ್ನು ರೈತರಿಗೆ ಪರಿಚಯಿಸಿದೆ. ಅಲ್ಲದೆ ರೈತರಿಗೆ ಕೃಷಿ ಯಂತ್ರೋಪಕರಣಗಳಾದ ಸೈಕಲ್ ವೀಡರ್, ಶೇಂಗಾ ಬಿಡಿಸುವ ಯಂತ್ರ, ಬೀಜ ತೆಗೆಯುವ ಯಂತ್ರ, ಮೆಕ್ಕೆಜೋಳ ಒಕ್ಕಣೆ ಯಂತ್ರ, ಬೀಜ ಮತ್ತು ಗೊಬ್ಬರ ಬಿತ್ತನೆ ಯಂತ್ರ ಇತ್ಯಾದಿ ಅಭಿವೃದ್ಧಿ ಪಡಿಸುತ್ತಿದೆ. ರಾಷ್ಟ್ರೀಯ ತೋಟಗಾರಿಕಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ನರ್ಸರಿ ಹಾಗೂ ಜೈವಿಕ ಗೊಬ್ಬರಗಳ ಮಾದರಿ ಘಟಕಗಳು ಹಾಗೂ ನಿರ್ವಹಣೆ ಕುರಿತು ಸಲಹೆಯನ್ನು ನೀಡುತ್ತಿದೆ.

ಕೇಂದ್ರ ವಲಯ ಒಣ ಪ್ರದೇಶದ ರೈತರಿಗಾಗಿ ಭತ್ತ, ಜೋಳ, ಹತ್ತಿ, ಮೆಕ್ಕೆಜೋಳ, ತೊಗರಿ, ಶೇಂಗಾ, ಅಲಸಂದೆ, ನವಣೆ, ರಾಗಿ, ಹರಳು ಹಾಗೂ ಇತರೆ ಬೆಳೆಗಳಲ್ಲಿ ಅನೇಕ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಅಖಿಲ ಭಾರತೀಯ ಸುಸಂಘಟಿತ ಹರಳು ಸಂಶೋಧನಾ ಪ್ರಯೋಜನಾ ವಿಭಾಗದಿಂದ ಅರುಣ, ರೋಸಿ, ಕ್ರಾಂತಿ, ಎಂ.ಸಿ.-೧, ಡಿ.ಸಿ.ಎಸ್-೯, ಜಿ.ಸಿ.ಹೆಚ್-೪, ಡಿ.ಸಿ.ಹೆಚ್-೩೨ ಮತ್ತು ಡಿ.ಸಿ.ಹೆಚ್-೧೭೭ ತಳಿ/ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹರಳು ಬೆಳೆಯ ಬೇಸಾಯ ಪದ್ಧತಿಗಳಾದ ಅಂತರ ಬೆಳೆ ಹಾಗೂ ಸಮಗ್ರ ನಿರ್ವಹಣೆಗಳ ಬಗ್ಗೆ ಸಂಶೋಧನಾ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಕಡಲೆ ಸಂಶೋಧನಾ ಪ್ರಾಯೋಜನೆ ವಿಭಾಗದಿಂದ ವಿಶಾಲ್, ಜೆ.ಜಿ-೧೧ ಮತ್ತು ಕಾಕ್-೨ ತಳಿಗಳ ಅಭಿವೃದ್ಧಿ ಜೊತೆಗೆ ಹಲವಾರು ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಗಿದೆ. ನೂರು ವರ್ಷಗಳನ್ನು ಪೂರೈಸಿರುವ ಈ ಕೇಂದ್ರವು ರಾಜ್ಯದ ಗ್ರಾಮೀಣ ಪ್ರದೇಶದ ರೈತ ಮತ್ತು ರೈತ ಮಹಿಳೆಯರ ಆಶಾಕಿರಣವಾಗಿದೆ.

--ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹಿರಿಯೂರು (ಕೇಂದ್ರ ಒಣ ವಲಯ-೪)