ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಬದುಕು ಅರಳಿಸಿದ ಸೇವಂತಿಗೆ

ಸಾರ್ಥಕ್, ರಕ್ಷಿತ್ ಎಸ್., ಅಶ್ವಿನಿ ಎಂ. ಎನ್.
೮೧೦೫೧೪೩೪೧೫
1

ಮನುಷ್ಯನ ದಿನನಿತ್ಯದ ಜೀವನದಲ್ಲಿ ಹೂಗಳು ಮಹತ್ವದ ಪಾತ್ರ ವಹಿಸುತ್ತವೆ. ಮನುಷ್ಯ ಹುಟ್ಟಿದಾಗಿನಿಂದ ಆರಂಭವಾಗುವ ಹೂಗಳೊಂದಿಗಿನ ಈ ಒಡನಾಟ, ಹಬ್ಬ-ಹರಿದಿನಗಳು, ದೇವರಪೂಜೆ, ಮದುವೆ-ಸಮಾರಂಭಗಳು. ಹೀಗೆ ಮುಂದುವರಿದು ಕಡೆಗೆ ಸಾವಿನಲ್ಲೂ ಜೊತೆಯಾಗಿರುತ್ತದೆ. ಕೆಲವರ ಖುಷಿ ಹೂಗಳನ್ನು ನೋಡುವುದರಲ್ಲಿ ಅಡಗಿದ್ದರೆ, ಮತ್ತೆ ಕೆಲವರಿಗೆ ಅವುಗಳನ್ನು ಬೆಳೆಸುವುದರಲ್ಲಿ ಅಡಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೂಗಳ ಬಗೆಗಿನ ಮಾಹಿತಿ ಜನರಿಗೆ ಹೇರಳವಾಗಿ ದೊರೆಯುತ್ತಿದ್ದೂ, ಅವುಗಳ ಪ್ರಾಮುಖ್ಯತೆ ಹಾಗೂ ಬೇಡಿಕೆ ಅರಿತ ಕೆಲವು ರೈತರು ತಮ್ಮ ದೈನಂದಿನ ಕೃಷಿಯಲ್ಲಿ ಪುಷ್ಪಕೃಷಿಯನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಬಹಳಷ್ಟು ರೈತರು ಅದರಲ್ಲಿ ತೃಪ್ತಿದಾಯಕ ಲಾಭ ಪಡೆದು ಇತರ ರೈತರಿಗೂ ಮಾದರಿಯಾಗಿದ್ದಾರೆ. ಇಂತಹ ಪ್ರಗತಿಪರ ರೈತರಲ್ಲಿ ಒಬ್ಬರಾದ ಚಿತ್ರದುರ್ಗ ಜಿಲ್ಲೆಯ ಪಿ.ಸಿ. ಶ್ರೀನಿವಾಸ್‌ರವರು ಸೇವಂತಿಗೆ ಕೃಷಿಯನ್ನು ೩೦ ವರ್ಷಗಳಿಂದ ತಮ್ಮ ಜೀವನದ ಒಂದು ಭಾಗವಾಗಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

3

ಪಿ. ಸಿ. ಶ್ರೀನಿವಾಸ್‌ರವರು(೯೭೪೧೨೭೬೬೮೦) ಮೂಲತಃ ಚಿತ್ರದುರ್ಗ ಜಿಲ್ಲೆಯ ಹುಣಸೇಕಟ್ಟೆ ಗ್ರಾಮದವರು. ಡಿಪ್ಲೊಮೋ ವ್ಯಾಸಂಗವನ್ನು ಪೂರ್ಣಗೊಳಿಸಿರುವ ಇವರಿಗೆ, ಐದನೇ ತರಗತಿಯಿಂದಲೂ ಕೃಷಿ ಬಗ್ಗೆ ಇನ್ನಿಲ್ಲದ ಒಲವು. ಆಗಿನಿಂದಲೇ ತಂದೆಯೊಡನೆ ಕೂಡಿ ಬೇಸಾಯದ ಕೆಲಸಗಳನ್ನು ಮಾಡುತ್ತಿದ್ದರು. ವ್ಯಾಸಂಗದ ನಂತರ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಏಳು ಎಕರೆ ಜಾಗದಲ್ಲಿ, ಒಂದು ಎಕರೆಯಲ್ಲಿ ಅಗಸೆ(ಸಸ್ಬೇನಿಯಾ) ಬೆಳೆ, ಒಂದು ಎಕರೆ ಈರುಳ್ಳಿ, ಎರಡು ಎಕರೆ ಸೇವಂತಿಗೆ, ಒಂದು ಎಕರೆ ಬೆಂಡೆ, ಅರ್ಧ ಎಕರೆ ರಾಗಿ ಉಳಿದ ಭಾಗದಲ್ಲಿ ಕಾಲಕ್ಕೆ ತಕ್ಕಂತೆ ದವಸ-ಧಾನ್ಯಗಳನ್ನು ಬೆಳೆಯುವುದರ ಜೊತೆಗೆ ಕುರಿಸಾಕಾಣಿಕೆ ಮತ್ತು ಹೈನುಗಾರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೀಗೆ ಸಮಗ್ರ ಬೇಸಾಯ ಪದ್ಧತಿಯನ್ನು ರೂಢಿಸಿಕೊಂಡಿರುವ ಇವರು ಬೆಳೆಗೆ ಬೇಕಾಗುವ ಗೊಬ್ಬರವನ್ನು ಹೈನುಗಾರಿಕೆಯಿಂದ ಪಡೆಯುತ್ತಾರೆ. ಏಕಬೆಳೆ ಪದ್ಧತಿಯನ್ನು ಮಾತ್ರ ನಂಬುವುದಕ್ಕಿಂತ, ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡುವುದರಿಂದ ನೈಸರ್ಗಿಕ ಏರುಪೇರುಗಳು ಮತ್ತು ಮಾರುಕಟ್ಟೆಯ ಏರುಪೇರುಗಳಿಂದ ರೈತನಿಗೆ ನಷ್ಟ ಉಂಟಾಗದಂತೆ ಸರಿದೂಗಿಸಬಹುದು ಎಂಬುದು ಶ್ರೀನಿವಾಸ್‌ರವರು ಸಾಬೀತು ಪಡಿಸಿದ್ದಾರೆ. ಸಧ್ಯಕ್ಕೆ ಸೇವಂತಿಗೆ ಬೇಸಾಯದಲ್ಲಿ ತೃಪ್ತಿದಾಯಕ ಲಾಭ ಪಡೆದಿರುವ ಇವರು, ಅಳವಡಿಸಿಕೊಂಡಿರುವ ಬೇಸಾಯ ಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯಾವುದೇ ಕೃಷಿಯಾಗಲಿ, ಬೆಳೆಯುವ ರೈತನಿಗೆ ತನ್ನ ಬೆಳೆ ಯಾವಾಗ ತನ್ನ ಕೈಸೇರಬೇಕು ಎಂಬುದರ ಅರಿವಿರಬೇಕು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವಂತೆ, ಬೆಳೆ ಬೆಳೆಯುವ ಕಾಲವನ್ನು ಯೋಜನೆ ಮಾಡುವುದು ಅಗತ್ಯ. ಶ್ರೀನಿವಾಸ್‌ರವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮೇ ತಿಂಗಳಿನಲ್ಲಿ ಸೇವಂತಿಗೆ ಕೃಷಿ ಆರಂಭಿಸಿ ಎರಡು ಎಕರೆ ಪ್ರದೇಶದಲ್ಲಿ, ಕೇವಲ ಆರು ತಿಂಗಳುಗಳಲ್ಲಿ ಹೆಚ್ಚಿನ ಆದಾಯ ಪಡೆದಿದ್ದಾರೆ.

5

ಮೊದಲಿಗೆ ಭೂಮಿಯನ್ನು ಉಳುಮೆ ಮಾಡಿ, ಕೊಟ್ಟಿಗೆ ಗೊಬ್ಬರವನ್ನು ಹಾಕಿ ಹದ ಮಾಡಿ ಮಡಿಗಳನ್ನು ತಯಾರಿಸಿಕೊಳ್ಳುತ್ತಾರೆ. ಮಡಿಯಿಂದ ಮಡಿಗೆ ಸುಮಾರು ೨.೫ ಅಡಿ ಮತ್ತು ಗಿಡದಿಂದ ಗಿಡಕ್ಕೆ ೧.೫ ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡುತ್ತಾರೆ. ಕಾವೇರಿ(ಕೆಂಪು ಮಿಶ್ರಿತ ನೇರಳೆ), ಪಚ್ಚೆ(ಹಳದಿ) ಹಾಗೂ ಪೂರ್ಣಿಮ ಎಂಬ ತಳಿಗಳ ೮೦೦೦ ಸಸಿಗಳನ್ನು ನಾಟಿಗೆ ಬಳಸಿದ್ದಾರೆ. ನಾಟಿ ಮಾಡಿ ೨೫ ದಿನಗಳಾದ ಬಳಿಕ ತುದಿಯನ್ನು ಚಿವುಟಿ, ತಜ್ಞರ ಸಲಹೆಯಂತೆ ಶಿಲೀಂಧ್ರನಾಶಕ ಸಿಂಪರಣೆ ಮಾಡಿ, ಮೊಗ್ಗು ಬರುವ ಹಾಗೂ ಹೂ ಅರಳುವ ಸಮಯದಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ಸಿಂಪರಣೆ ಮಾಡುತ್ತಾರೆ.

ಗಣೇಶ ಹಬ್ಬದಲ್ಲಿ ಸುಮಾರು ೫೦ ಕೆ.ಜಿ. ನಂತರ ದಸರಾ ಹಬ್ಬದಲ್ಲಿ ೨ ಟನ್ ಹಾಗೂ ದೀಪಾವಳಿಯಲ್ಲಿ ೯೦೦ ಕೆ.ಜಿ. ಇಳುವರಿ ಪಡೆದು, ಮಾರುಕಟ್ಟೆಯಲ್ಲಿ ಸರಿಸುಮಾರು ಪ್ರತಿ ಕೆ.ಜಿಗೆ ನೂರು ರೂ.ಗಳಂತೆ ಮಾರಾಟ ಮಾಡಿದ್ದಾರೆ. ಸಸಿ, ಗೊಬ್ಬರ, ಔಷಧಿ, ಕೂಲಿ ಕಾರ್ಮಿಕರು ಹಾಗೂ ಇತ್ಯಾದಿ ಸೇರಿ ಒಂದು ಲಕ್ಷದಷ್ಟು ಖರ್ಚಾಗಿದ್ದು, ಅದನ್ನು ಕಳೆದು ಸುಮಾರು ೧.೫ ಲಕ್ಷದಷ್ಟು ನಿವ್ವಳ ಆದಾಯ ಪಡೆದಿದ್ದಾರೆ. ಹಬ್ಬಗಳಲ್ಲಿ ಬಿಡಿ ಹೂವು ಮಾತ್ರವಲ್ಲದೇ ಅದನ್ನು ಕಟ್ಟಿ ಹಾರಗಳ ರೂಪದಲ್ಲಿ ಸಹ ಮಾರಾಟ ಮಾಡುತ್ತಾರೆ. ಅದರಂತೆ ಒಂದು ಮಾರಿಗೆ ೮೦-೧೦೦ ರೂ.ಗಳನ್ನು ಪಡೆದುಕೊಂಡಿದ್ದಾರೆ. ಈ ಬೆಳೆ ತುಂಬಾ ತೃಪ್ತಿ ಹಾಗೂ ಲಾಭ ತಂದಿದೆ ಎಂದು ಸಂತೋಷದಿಂದ ಹೇಳುತ್ತಾರೆ ಶ್ರೀನಿವಾಸ್‌ರವರು.

8

ಇವರ ಸಾಧನೆಯನ್ನು ಗುರುತಿಸಿ ಚಿತ್ರದುರ್ಗ ಜಿಲ್ಲೆಯ ಕೃಷಿ ಇಲಾಖೆಯು ಪ್ರಗತಿಪರ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿಜಯಕರ್ನಾಟಕ ಪತ್ರಿಕೆಯವತಿಯಿಂದ ಕೂಡ ಸನ್ಮಾನ ದೊರೆತಿದೆ. ಚಂದನ ಟಿ.ವಿಯಲ್ಲಿ ಪ್ರಸಾರವಾಗುವ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಕೂಡಾ ಇವರ ಕೃಷಿ ಚಟುವಟಿಕೆಗಳ ಬಗ್ಗೆ ಅನೇಕ ಬಾರಿ ಪ್ರಸಾರ ಮಾಡಲಾಗಿದೆ. ಇವರ ಕೃಷಿ ಚಟುವಟಿಕೆಗಳನ್ನು ಗಮನಿಸಿರುವ ನೆರೆಹೊರೆಯ ರೈತರು ಇವರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ.

--ಸಾರ್ಥಕ್ ಕಿರಿಭಾಗ, ೮೧೦೫೧೪೩೪೧೫, ರಕ್ಷಿತ್ ಎಸ್. ಮತ್ತು ಅಶ್ವಿನಿ ಎಂ. ಎನ್., ತೋಟಗಾರಿಕೆ ಮಹಾವಿದ್ಯಾಲಯ, ತ್ರಿಶೂರ್, ಕೇರಳ