ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಲಾಭದಾಯಕ ಗ್ಲ್ಯಾಡಿಯೋಲಸ್ - ಆಕರ್ಷಕ ಹೂ ಬೆಳೆ

ಡಿ. ತಿಪ್ಪೇಶ್, ಆಶಾ, ಕೆ.ಎಂ., ಬಸವರಾಜ್ ದಳವಾಯಿ,
೯೪೪೯೬೨೦೬೦೧
1

ಗ್ಲ್ಯಾಡಿಯೋಲಸ್ ನಮ್ಮ ರಾಜ್ಯದ ಒಂದು ಮುಖ್ಯವಾದ ವಾಣಿಜ್ಯ ಹೂವಿನ ಬೆಳೆಯಾಗಿದ್ದು, ಇದನ್ನು ಕತ್ತರಿಸಿದ ಹೂವಿಗಾಗಿ ಬೆಳೆಯಲಾಗುತ್ತಿದೆ. ಇದನ್ನು ಕುಂಡಗಳಲ್ಲಿ ಹಾಗೂ ತೋಟಗಳ ಹೊರ ಅಂಚುಗಳಲ್ಲಿ ಯಶಸ್ವಿಯಾಗಿ ಬೆಳೆಯಬಹುದಾಗಿದ್ದು, ಪ್ರಮುಖವಾಗಿ ಈ ಹೂವನ್ನು ಅಲಂಕಾರಕ್ಕಾಗಿ, ಹೂದಾನಿಗಳಲ್ಲಿ ಜೋಡಿಸಲು ಹಾಗೂ ಹೂಗುಚ್ಚ ತಯಾರಿಸಲು ಬಳಸಲಾಗುತ್ತದೆ. ಇದರ ಮೂಲ ದಕ್ಷಿಣ ಆಫ್ರಿಕಾ ಆಗಿದ್ದು, ಇದನ್ನು ಎಲ್ಲ ದೇಶಗಳಲ್ಲಿ ವಾಣಿಜ್ಯ ಹೂವಿನ ಬೆಳೆಯಾಗಿ ಬೆಳೆಯುತ್ತಿದ್ದಾರೆ.

ಬೆಳೆಗೆ ಬೇಕಾಗಿರುವ ಮಣ್ಣು ಮತ್ತು ಹವಾಗುಣ: ಗ್ಲ್ಯಾಡಿಯೋಲಸ್ ಬೆಳೆಗೆ ಸುಲಭವಾಗಿ ನೀರು ಬಸಿಯುವ ಹಾಗೂ ೬-೭ ರಸಸಾರವಿರುವ ಫಲವತ್ತಾದ ಗೋಡು ಮಣ್ಣು ಅತ್ಯುತ್ತಮವಾದದ್ದು ಎಂದು ಕಂಡುಬಂದಿದ್ದು, ಇದನ್ನು ಸಾಧಾರಣ ಕಪ್ಪು ಮಣ್ಣಿನಲ್ಲಿ ಸಹ ಬೆಳಯಬಹುದಾಗಿದೆ.

ಈ ಹೂವಿನ ಬೆಳೆಗೆ ತಂಪು ಹವಾಗುಣ ಬೇಕಾಗಿದ್ದು ಎಲ್ಲಾ ಕಾಲಗಳಲ್ಲಿಯೂ ಬೆಳೆಯಬಹುದಾಗಿದ್ದು, ಜೂನ್‌ನಿಂದ ನವೆಂಬರ್‌ವರೆಗೆ ಬೆಳೆಯುವುದು ಹೆಚ್ಚು ಸೂಕ್ತವೆಂದು ಸಂಶೋಧನೆ ಮೂಲಕ ತಿಳಿದುಬಂದಿದೆ. ಅದರಲ್ಲಿಯೂ ಅಕ್ಟೋಬರ್ ತಿಂಗಳಲ್ಲಿ ಬೆಳೆಯುವುದು ಅತೀ ಸೂಕ್ತವೆಂದು ಕಂಡುಬಂದಿದೆ ಏಕೆಂದರೆ ಈ ಹೂವಿನ ಬೆಳೆಯು ಹಚ್ಚಿನ ಉಷ್ಣತೆಯನ್ನು ಸಹಿಸುವುದಿಲ್ಲ.

ತಳಿಗಳು: ಗ್ಲ್ಯಾಡಿಯೋಲಸ್‌ನಲ್ಲಿ ಹಲವಾರು ಗಾತ್ರದ, ಆಕಾರದ ಹಾಗೂ ಬಣ್ಣದ ತಳಿಗಳಿವೆ. ಅವುಗಳಲ್ಲಿ ಪ್ರಮುಖ ವಾಣಿಜ್ಯ ತಳಿಗಳೆಂದರೆ- ಸಮ್ಮರ್ ಸನ್‌ಶೈನ್, ಅರ್ಕ ತಿಲಕ್, ಅರ್ಕ ಕೇಸರ್, ಅರ್ಕ ಆರತಿ, ಅರ್ಕ ಅಮರ್, ಅರ್ಕ ದರ್ಶನ್ ವೈಟ್ ಪ್ರಾಸ್ಪರಿಟಿ, ಅರ್ಕ ನವೀನ್, ಅರ್ಕ ಗೋಲ್ಡ್, ಅರ್ಕ ಸಾಗರ್, ಮೋಹಿನಿ, ಸುಚಿತ್ರ, ಲೆಜೆಂಟ್, ಸುನಯನ, ಗೋಲ್ಡ್ ಡಸ್ಟ್, ಆಫ್ರಿಕನ್ ಸ್ಟಾರ್, ಸೂರ್ಯ ಕಿರಣ್, ಸಿಂಧೂರ್, ಪೂಸಾ ಕಿರಣ್, ಪೂಸಾ ವಿದುಶಿ, ಧನ್ವಂತರಿ, ಪ್ರಿಸಿಲ್ಲಾ, ಚಾಂದನಿ, ಊರ್ಮಿಳಾ, ಅಂಜಲಿ, ಜ್ಯೊತ್ಸ್ನ, ಶಾಗುನ್, ಪಂಜಾಬ್ ಡಾನ್, ಕಾಪರ್ ಕಿಂಗ್, ಡೆಲ್ಲಿ ಲೋಕಲ್, ಗ್ರೀನ್ ಬೇ, ಜೆಸ್ಟರ್ ಗೋಲ್ಡ್, ವೈಟ್ ಪ್ರಾಸ್ಪಾರಿಟಿ, ಅಮೇರಿಕನ್ ಬ್ಯೂಟಿ, ಪೂನಮ್, ಅರ್ಚನ, ಮಯೂರ, ತ್ರಿಲೋಕಿ, ಮೆಲೋಡಿ, ಕ್ಯಾಂಡಿಮ್ಯಾನ್, ಹಂಟಿಂಗ್ ಸಾಂಗ್, ಮುಂತಾದವುಗಳು.

6

ಸಸ್ಯಾಭಿವೃದ್ಧಿ: ಈ ಪುಷ್ಪ ಬೆಳೆಯನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಯುವಾಗ, ಮೊದಲಿಗೆ ನಾಟಿ ಮಾಡಲು ಗಡ್ಡೆಗಳನ್ನು ಉಪಯೋಗಿಸಬೇಕು. ನಾಟಿಗೆ ಉಪಯೋಗಿಸುವ ಗಡ್ಡೆಗಳು ೩.೫-೪.೦ ಸೆಂ.ಮೀ. ವ್ಯಾಸ ಹೊಂದಿರಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ ೨.೫ ಲಕ್ಷದಷ್ಟು ಗಡ್ಡೆಗಳು ಬೇಕಾಗುತ್ತವೆ. ಹೊಸದಾಗಿ ಭೂಮಿಯಿಂದ ತೆಗೆದ ಗಡ್ಡೆಗಳಲ್ಲಿ ೩ ತಿಂಗಳುಗಳ ಸುಪ್ತಾವಸ್ಥೆ ಇರುತ್ತದೆ. ಆದ್ದರಿಂದ ನಾಟಿಗೆ ಸುಪ್ತಾವಸ್ಥೆ (dormant corms) ಹಂತದಿಂದ ಹೊರಬಂದ ಗಡ್ಡೆಗಳನ್ನೆ ಬಳಸಬೇಕು.

ಬೇಸಾಯ ಕ್ರಮ: ನಾಟಿ ಮಾಡಬೇಕೆಂದಿರುವ ಭೂಮಿಯನ್ನು ೨-೩ ಬಾರಿ ಚೆನ್ನಾಗಿ ಉಳುಮೆ ಮಾಡಿ, ಪ್ರತಿ ಹೆಕ್ಟೇರಿಗೆ ೨೫ ಟನ್ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಿ ೨೦ ರಿಂದ ೩೦ ಸೆಂ.ಮೀ. ಅಂತರದಲ್ಲಿ ಸಾಲುಗಳನ್ನು ಮಾಡಿ ಪ್ರತಿ ಹೆಕ್ಟೇರಿಗೆ ೫೦ ಕಿ.ಗ್ರಾಂ ಸಾರಜನಕ, ೬೦ ಕಿ.ಗ್ರಾಂ ರಂಜಕ ಹಾಗೂ ೬೦ ಕಿ.ಗ್ರಾಂ ಪೊಟ್ಯಾಷ್‌ಯುಕ್ತ ರಸಗೊಬ್ಬರಗಳನ್ನು ಒದಗಿಸಿ ನಂತರ ಸಾಲುಗಳಲ್ಲಿ ೨೦ ಸೆಂ.ಮೀ. ಅಂತರದಲ್ಲಿ ೫ ಸೆಂ.ಮೀ. ಆಳಕ್ಕೆ ಗಡ್ಡೆಗಳನ್ನು ನೆಡಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ ನಾಟಿ ಮಾಡಲು ಸುಮಾರು ೨,೫೦,೦೦೦ ಗಡ್ಡೆಗಳು ಬೇಕಾಗುತ್ತವೆ ಹಾಗೂ ನಾಟಿ ಮಾಡಿದ ೪೫ ದಿನಗಳ ನಂತರ ಹೆಕ್ಟೇರಿಗೆ ೫೦ ಕಿ.ಗ್ರಾಂ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು.

ಅಂತರ ಬೇಸಾಯ ಮತ್ತು ನೀರಾವರಿ: ಮಣ್ಣು ಮತ್ತು ಹವಾಗುಣವನ್ನನುಸರಿಸಿ ೪-೬ ದಿನಗಳಿಗೊಮ್ಮೆ ನೀರು ಹಾಯಿಸಿ, ಆಗಾಗ್ಗೆ ಕಳೆ ನಿಯಂತ್ರಣ ಮಾಡಬೇಕು ಹಾಗೂ ಸಸಿಗಳ ಬುಡದ ಸುತ್ತಲೂ ಮಣ್ಣನ್ನು ಏರಿಸುತ್ತಿರಬೇಕು. ಜಮೀನಿನಲ್ಲಿ ಕಳೆ ನಿಯಂತ್ರಣ ಮಾಡುವುದಲ್ಲದೇ, ಸಸಿಗಳು ಎತ್ತರವಾದಾಗ ಕೋಲನ್ನು ಆಸರೆಯಾಗಿ ಕೊಟ್ಟು ಕಟ್ಟಬೇಕು.

10

ಸಸ್ಯ ಸಂರಕ್ಷಣೆ:

ಕೀಟಗಳು: ಪ್ರಮುಖವಾಗಿ ಎಲೆ ತಿನ್ನುವ ಹುಳು ಮತ್ತು ನುಶಿ ಈ ಹೂವಿನ ಬೆಳೆಯನ್ನು ಹೆಚ್ಚು ಬಾಧಿಸುತ್ತವೆ.

ರೋಗಗಳು: ಪ್ರಮುಖವಾಗಿ ಕಂದು ಕೊಳೆ ರೋಗ ಮತ್ತು ಸೊರಗು ರೋಗವು ಈ ಹೂವಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಹತೋಟಿ ವಿಧಾನ: ನಾಟಿಗೆ ಮುಂಚೆ ಗಡ್ಡೆಗಳನ್ನು ಒಂದು ಲೀಟರ್ ನೀರಿನಲ್ಲಿ ೧ ಗ್ರಾಂ ಕಾರ್ಬೆನ್‌ಡೈಜಿಮ್ ಬೆರೆಸಿದ ದ್ರಾವಣದಲ್ಲಿ ಅರ್ಧ ಗಂಟೆ ಅದ್ದಿ ತೆಗೆದು ನಾಟಿಗೆ ಬಳಸಬೇಕು. ಇದರಿಂದ ಪ್ರಮುಖ ರೋಗಗಳಿಂದ ಮುಕ್ತಿ ಪಡೆಯ ಬಹುದು ಎಲೆ ತಿನ್ನುವ ಕೀಟಗಳ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ ೨ ಮಿ.ಲೀ. ಕ್ವಿನಾಲ್‌ಫಾಸ್ (೨೫ ಇ.ಸಿ.) ಬೆರೆಸಿ ಸಿಂಪಡಣೆ ಮಾಡಬೇಕು ಹಾಗೂ ನುಶಿ ಬಾಧೆ ಇದ್ದರೆ ಪ್ರತಿ ಲೀಟರ್ ನೀರಿಗೆ ೨.೫ ಮಿ.ಲೀ. ಡೈಕೋಫಾಲ್ (೨೦ ಇ.ಸಿ.) ಬೆರೆಸಿ ಸಿಂಪಡಿಸಿ ಹತೋಟಿಗೆ ತರಬಹುದು. ಹಾಗೆಯೇ ರೋಗಗಳ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿನಲ್ಲಿ ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ೫೦ ಡಬ್ಲ್ಯು.ಪಿ. ಬೆರೆಸಿ ತಯಾರಿಸಿದ ದ್ರಾವಣವನ್ನು ಗಿಡಗಳ ಬೇರಿಗೆ ಹಾಕಬೇಕು.

ಕೊಯ್ಲಿನ ಹಂತ: ಹೂಗಳ ಕೊಯ್ಲಿನ ಹಂತವು ವಾತಾವರಣದ ಉಷ್ಣಾಂಶ, ಮಾರುಕಟ್ಟೆಯ ಅಂತರ ಇತ್ಯಾದಿಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ದೂರದ ಮಾರುಕಟ್ಟೆಗೆ ಹೂ ದಂಟಿನಲ್ಲಿರುವ ಕೆಳಗಿನ ಎರಡು ಹೂಗಳಲ್ಲಿ ಬಣ್ಣ ಕಾಣಿಸಿದಾಗ ಕಟಾವು ಮಾಡುತ್ತಾರೆ. ಚಳಿಗಾಲದಲ್ಲಿ ಈ ಹಂತಕ್ಕಿಂತ ತಡವಾಗಿಯೂ, ಬೇಸಿಗೆಯಲ್ಲಿ ಈ ಹಂತಕ್ಕಿಂತ ಮುಂಚೆ ಅಂದರೆ ಮೊಗ್ಗು ಉಬ್ಬಿದ ಮತ್ತು ದಳಗಳು ಕಾಣುತ್ತಿರುವ ಹಂತದಲ್ಲಿ ಕಟಾವು ಮಾಡಿ ನಂತರ ಕೋಣೆಯಲ್ಲಿ ಮೊಗ್ಗು ಅರಳಿಸುವ ದ್ರಾವಣದಲ್ಲಿ (ಶೇ. ೪ ರ ಸುಕ್ರೋಸ್ + ಸಿಟ್ರಿಕ್ ಆಮ್ಲ ೩೦೦ ಪಿಪಿಎಂ) ಇರಿಸಿ ಹೂ ಅರಳಿಸಬಹುದು. ಸ್ಥಳೀಯ ಮಾರುಕಟ್ಟೆಗೆ ಕೆಳಗಿನ ಒಂದು ಹೂ ಪೂರ್ತಿ ಅರಳಿದ ಹಂತದಲ್ಲಿ ಕಟಾವು ಮಾಡಬೇಕು.

ಕೊಯ್ಲು ಮತ್ತು ಇಳುವರಿ: ನಾಟಿ ಮಾಡಿದ ೭೦-೯೦ ದಿನಗಳ ನಂತರ ಹೂಗಳ ಕೊಯ್ಲು ಪ್ರಾರಂಭವಾಗುತ್ತದೆ. ಒಂದು ಹೆಕ್ಟೇರಿನಿಂದ ೨.೫ ಲಕ್ಷ ಹೂದಂಟುಗಳನ್ನು ಪಡೆಯಬಹುದು. ಒಂದು ಹೆಕ್ಟೇರಿಗೆ ೨.೫ ರಿಂದ ೫ ಲಕ್ಷ ಗಡ್ಡೆಗಳು (ಛಿoಡಿms) ಸಿಗಬಹುದು. ಇದರ ಜೊತೆಗೆ ಮರಿ ಗಡ್ಡೆಗಳು (ಕಾರ್ಮೆಲ್ಸ್) ಬಹಳ ಸಿಗುತ್ತವೆ (ಒಂದು ತಾಯಿ ಗಡ್ಡೆಗೆ ೧೦-೧೫ ಮರಿ ಗಡ್ಡೆಗಳು ಸಿಗುತ್ತವೆ).

17

ಕೊಯ್ಲೋತ್ತರ ನಿರ್ವಹಣೆ: ಹೂದಂಟಿನ ಉದ್ದ ಹಾಗೂ ಹೂತೆನೆಯಲ್ಲಿ ಹೂಗಳ ಸಂಖ್ಯೆ ಮೇಲೆ ಹೂಗಳನ್ನು ವರ್ಗೀಕರಿಸಬೇಕು. ಉತ್ಕೃಷ್ಟ ಶ್ರೇಣಿಯನ್ನು ಫ್ಯಾನ್ಸಿ ಎಂದು (> ೧೦೭ ಸೆಂ.ಮೀ. ಮತ್ತು ೧೬ ಹೂಗಳು ಕ್ರಮವಾಗಿ), ನಂತರದ ಶ್ರೇಣಿಗಳನ್ನು ಸ್ಪೆಷಲ್ (೯೬-೧೦೬ ಸೆಂ.ಮೀ. ಮತ್ತು ೧೫ ಹೂಗಳು), ಸ್ಟ್ಯಾಂಡರ್ಡ್ (೮೧-೯೫ ಸೆಂ.ಮೀ. ಮತ್ತು ೧೨ ಹೂಗಳು), ಯುಟಿಲಿಟಿ (< ೮೧ ಸೆಂ.ಮೀ. ಮತ್ತು ೧೦ ಹೂಗಳು) ಎಂದೂ ಮಾಡುತ್ತಾರೆ.

ಹೂತೆನೆಯಲ್ಲಿನ ಹೂವುಗಳು ದಂಟಿನಲ್ಲಿ ಒಂದೆ ತೆರನಾದ ಅಂತರ ಹೊಂದಿರಬೇಕು ಹಾಗೂ ಒಂದೆ ದಿಕ್ಕಿನಲ್ಲಿ ಮುಖ ಮಾಡಿರಬೇಕು ಅಂದರೆ ನೇರವಾಗಿರಬೇಕು, ಕವಲುದಂಟು ಹೊಂದಿರಬಾರದು. ಎಲೆಗಳು ನಿರ್ದಿಷ್ಟ ಉದ್ದ ಹೊಂದಿದ್ದು ಹಾಳಾಗಿರಬಾರದು.

ಪ್ಯಾಕಿಂಗ್: ದೂರದ ಮಾರುಕಟ್ಟೆಗೆ ಕಳುಹಿಸುವಾಗ ಕತ್ತರಿಸಿದ ಹೂದಂಟು ಗಳನ್ನು ೧೨ ರ ಒಂದು ಕಂತೆ ಮಾಡಿ ಸೆಲ್ಲೋಫೇನ್ ಹಾಳೆಯಿಂದ ಸುತ್ತಿ, ಸಿ.ಎಫ್.ಬಿ. ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಬೇಕು. ಪ್ರತಿ ಪೆಟ್ಟಿಗೆಯಲ್ಲಿ ೧೦ ರಿಂದ ೨೪ ಡಜನ್ ದಂಟುಗಳನ್ನು ಇಡಬಹುದು. ಸಾಗಾಣಿಕೆಯ ಹಂತದಲ್ಲಿ ಹೂಗಳನ್ನು ಮೇಲ್ಮುಖವಾಗಿರಿಸಲು ಸಹಾಯವಾಗುವಂತೆ ಪೆಟ್ಟಿಗೆಯ ಒಂದು ತುದಿಗೆ ಹೂಗಳೂ ಇನ್ನೊಂದು ತುದಿಗೆ ಅವುಗಳ ದಂಟಿನ ಕೊನೆಯೂ ಬರುವಂತೆ ಪ್ಯಾಕ್ ಮಾಡಬೇಕು.

ಸಾಗಾಣಿಕೆ: ಹೂಗಳನ್ನು ಇರಿಸಿದ ಪೆಟ್ಟಿಗೆಯನ್ನು ಹೂಗಳು ಮೇಲ್ಮುಖವಾಗಿ ಇರುವಂತೆ ಸಾಗಿಸಬೇಕು. ಸಮೀಪದ ಮಾರುಕಟ್ಟೆಗೆ ಹೂದಂಟುಗಳನ್ನು ಪ್ಯಾಕ್ ಮಾಡದೇ ನೀರಿರುವ ಬಕೇಟ್‌ನಲ್ಲಿ ಇರಿಸಿ ಕಳುಹಿಸಬಹುದು.

ಗಡ್ಡೆಗಳ ಸಂಗ್ರಹಣೆ: ಹೂ ಕೊಯ್ಲಿನ ನಂತರ ಸಸ್ಯದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಗಡ್ಡೆಗಳನ್ನು ಮರಿಗಡ್ಡೆಗಳೊಂದಿಗೆ ಅಗೆದು, ಸ್ವಚ್ಛಗೊಳಿಸಿ, ನೆರಳಿನಲ್ಲಿ ಒಣಗಿಸಿ, ಕ್ಯಾಪ್ಟಾನ್ ದ್ರಾವಣದಲ್ಲಿ ಉಪಚಾರ ಮಾಡಿ, ರಂಧ್ರವಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಇಲ್ಲವೇ ಹಾಗೆಯೇ ಸಣ್ಣ ಮರಳಿನಲ್ಲಿಶೀತಲಗೃಹ ಅಥವಾ ತಂಪಾದ ಒಣಹವೆಯಿರುವ ಕೋಣೆಯಲ್ಲಿ ಸಂಗ್ರಹಿಸಬೇಕು. ಮರಿಗಡ್ಡೆಗಳನ್ನು ಕೂಡ ಸಂಗ್ರಹಿಸಿ ೩-೪ ಸಲ ಬಿತ್ತನೆ ಮಾಡಿ ಗಡ್ಡೆಗಳನ್ನು ದೊಡ್ಡದಾಗಿಸಬಹುದು ನಂತರ ವಾಣಿಜ್ಯ ಬೆಳೆಗೆ ನಾಟಿ ಮಾಡಲು ಉಪಯೋಗಿಸಬಹುದು.

ಗ್ಲ್ಯಾಡಿಯೋಲಸ್ ಒಂದು ವಿದೇಶಿ ಹೂವಿನ ಬೆಳೆಯಾಗಿದ್ದು, ಅದರ ಸುಲಭ ಕೃಷಿ ಮೂಲಕ ರೈತರನ್ನು ತನ್ನತ್ತ ಆಕರ್ಷಿಸುತ್ತಿದ್ದು, ಇದೀಗ ದೇಶದ ಹಲವಾರು ರಾಜ್ಯಗಳಲ್ಲಿ ಈ ಹೂವಿನ ಬೆಳೆಯನ್ನು ವಾಣಿಜ್ಯವಾಗಿ ಅಳವಡಿಸಿಕೊಳ್ಳಲಾಗಿದೆ. ಹಾಗೂ ಈ ಬೆಳೆಯನ್ನು ಹೊಲಗಳಲ್ಲಿ ಹೆಚ್ಚು ಬಂಡವಾಳವಿಲ್ಲದೆ ಸುಲಭವಾಗಿ ಬೆಳೆಯಬಹುದಾಗಿದ್ದು ಹೆಚ್ಚು ಲಾಭದಾಯಕವಾಗಿ ಕಂಡುಬಂದಿದೆ. ಈ ಹೂವಿನ ಬೆಳೆಯು ಇತ್ತೀಚಿನ ದಿನಗಳಲ್ಲಿ ಅತ್ಯಂತ ಭರವಸೆಯ ಲಾಭದಾಯಕ ಹೂವಾಗಿ ಹೊರಹೊಮ್ಮುತ್ತಿದ್ದು, ಈ ಹೂವಿನ ಬೆಳೆಯನ್ನು ರೈತರು ಆರ್ಥಿಕ ಬೆಳೆಯಾಗಿ ಬೆಳೆದು ಹೆಚ್ಚು ಲಾಭ ಗಳಿಸಬಹುದಾಗಿದೆ.

--ಡಿ. ತಿಪ್ಪೇಶ್, ೯೪೪೯೬೨೦೬೦೧, ಆಶಾ, ಕೆ.ಎಂ. ಮತ್ತು ಬಸವರಾಜ್ ದಳವಾಯಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ನವಿಲೆ, ಶಿವಮೊಗ್ಗ