ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ವಿಶ್ವ ಮಣ್ಣಿನ ದಿನ - ಪ್ರಾಮುಖ್ಯತೆ, ಉದ್ದೇಶಗಳು ಮತ್ತು ನಮ್ಮ ಮುಂದಿರುವ ಸವಾಲುಗಳು

ಸಿ. ಎ. ಶ್ರೀನಿವಾಸ ಮೂರ್ತಿ,
೯೯೦೧೦೭೩೯೧೩
1

ಅಂತರರಾಷ್ಟ್ರೀಯ ಮಣ್ಣು ವಿಜ್ಞಾನಿಗಳ (International Union of Soil Scientist) ಒಕ್ಕೂಟವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವದ ಮಣ್ಣು ವಿಜ್ಞಾನದ ಸಮಾವೇಶವನ್ನು (World Soil Science Congress) ಪ್ರಪಂಚದ ಬೇರೆ ಬೇರೆ ನಗರಗಳಲ್ಲಿ ನಡೆಸುತ್ತದೆ. ಹನ್ನೆರಡನೇ ವಿಶ್ವದ ಮಣ್ಣು ವಿಜ್ಞಾನ ಸಮಾವೇಶವು ೧೯೮೨ ರಲ್ಲಿ ನವದೆಹಲಿಯಲ್ಲಿ ಏರ್ಪಟ್ಟಿತ್ತು. ಅದೇ ರೀತಿ ೧೭ನೇ ವಿಶ್ವದ ಮಣ್ಣು ವಿಜ್ಞಾನದ ಸಮಾವೇಶವನ್ನು ೨೦೦೨ರ ಡಿಸೆಂಬರ್ ಮೊದಲ ವಾರದಲ್ಲಿ ಥೈಲೆಂಡ್ ದೇಶದ ಬ್ಯಾಂಕಾಂಕ್ ನಗರದಲ್ಲಿ ಏರ್ಪಡಿಸಿದ್ದರು. ಆಗ ಆ ದೇಶದ iಹರಾಜ ಭೂಮಿ ಬೋಲ್ ಅದುಲ್ಯುದೇಜ್ನ ಮುತುವರ್ಜಿ ಮತ್ತು ಸಹಕಾರದಿಂದ ಅದು ಯಶಸ್ವಿಯಾಗಿ ಜರುಗಿತು. ಆ ಸಮಾವೇಶದಲ್ಲಿ ಸುಮಾರು ೧೧೦ ದೇಶಗಳ ೨೫೦೦ಕ್ಕೂ ಹೆಚ್ಚು ಮಣ್ಣಿನ ವಿಜ್ಞಾನಿಗಳು ಭಾಗವಹಿಸಿದ್ದರು. ಕಾಕತಾಳಿಯವೆನ್ನುವಂತೆ ಥೈಲೆಂಡ್‌ನ ಮಹಾರಾಜನ ಜನ್ಮದಿನ ಡಿಸೆಂಬರ್ ೫ ಎಂದು ವಿಜ್ಞಾನಿಗಳಿಗೆ ಗೊತ್ತಾಗಿ ಅವರೆಲ್ಲರೂ ರಾಜನ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ರಾಜನೊಂದಿಗೆ ಮಾತನಾಡಿದರು. ಆಗ ರಾಜ ವಿಜ್ಞಾನಿಗಳ ಮನವಿಯನ್ನು ನಿರಾಕರಿಸಿ ನನ್ನ ಹುಟ್ಟು ಹಬ್ಬ ಆಚರಿಸುವ ಬದಲು ಮಣ್ಣಿನ ದಿನವನ್ನು ಆಚರಿಸಿ ಎಂದಾಗ ಸಮಸ್ತ ವಿಜ್ಞಾನಿಗಳ ಸಮೂಹವು ಒಪ್ಪಿ ಮಣ್ಣಿನ ದಿನವನ್ನು ಆಚರಿಸಿದರು. ನಂತರ ಮಣ್ಣು ವಿಜ್ಞಾನಿಗಳ ಒಕ್ಕೂಟ ಮತ್ತು ವಿಶ್ವ ಸಂಸ್ಥೆಯ ಅಂಗವಾದ ಆಹಾರ ಮತ್ತು ಕೃಷಿ ಸಂಸ್ಥೆ(FAO) ಜೊತೆಗೂಡಿ ಡಿಸೆಂಬರ್ ೫ ಅನ್ನು ವಿಶ್ವ ಮಣ್ಣಿನ ದಿನ ಎಂದು ಘೋಷಿಸಲು ೨೦೧೩ರಲ್ಲಿ ವಿಶ್ವಸಂಸ್ಥೆಯ ಮುಖ್ಯ ಅಂಗವಾದ ಸಾಮಾನ್ಯ ಸಭೆಗೆ(General Assembly) ವಿನಂತಿಸಿಕೊಂಡಾಗ ಅದು ಒಪ್ಪಿಗೆ ನೀಡಿ ಡಿಸೆಂಬರ್ ೫, ೨೦೧೪ ರಂದು ವಿಶ್ವ ಮಣ್ಣಿನ ದಿನ ಎಂದು ಘೋಷಿಸಿ ಆಚರಿಸಲು ಅನುಮತಿ ನೀಡಿತು. ೨೦೧೯ರ ಡಿಸೆಂಬರ್ ೫ರಂದು ಎಂಟನೇ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಶೀರ್ಷಿಕೆ ವಿಷಯ (Theme) ವೆಂದರೆ ನಿಲ್ಲಿಸಿ ಮಣ್ಣಿನ ಸವಕಳಿ ಉಳಿಸಿ ಮುಂದಿನ ಪಿಳಿಗೆ (Stop Erosion Save our Future)

ವಿಶ್ವ ಮಣ್ಣಿನ ದಿನದ ಮೂಲ ಉದ್ದೇಶಗಳು :

ಅಂತರರಾಷ್ಟ್ರೀಯ ಮಣ್ಣು ವಿಜ್ಞಾನಿಗಳ ಒಕ್ಕೂಟವು ಜನಸಾಮಾನ್ಯರು, ಮಣ್ಣು ವಿಜ್ಞಾನಿಗಳು, ಸರ್ಕಾರಿ ಅಧಿಕಾರಿಗಳು ಅನುಸರಿಸಬೇಕಾದ ಕಾರ್ಯಸೂಚಿಗಳನ್ನು ರೂಪಿಸಿದರು. ಅವುಗಳೆಂದರೆ

೧. ಮನುಷ್ಯನ ಜೀವನದಲ್ಲಿ ಮಣ್ಣಿನ ಪಾತ್ರದ ಬಗ್ಗೆ ಶ್ರೀ ಸಾಮಾನ್ಯರಲ್ಲಿ ಮತ್ತು ನಿರ್ಣಯ ತೆಗೆದುಕೊಳ್ಳುವ ಅಧಿಕಾರಿಗಳಲ್ಲಿ ಅರಿವು ಮೂಡಿಸುವುದು.
೨. ಆಹಾರ ಭದ್ರತೆಯಲ್ಲಿ ಮಣ್ಣಿನ ಪಾತ್ರದ ಬಗ್ಗೆ, ಹವಾಮಾನ ಬದಲಾವಣೆ, ವೈಪರೀತ್ಯಗಳು ಮತ್ತು ಅದರ ಹತೋಟಿಯಲ್ಲಿ ಮಣ್ಣಿನ ಪಾತ್ರದ ಬಗ್ಗೆ, ಬಡತನ ನಿರ್ಮೂಲನೆಯಲ್ಲಿ ಮತ್ತು ಸುಸ್ಥಿರ ಪ್ರಗತಿಯಲ್ಲಿ ಮಣ್ಣಿನ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು.
೩. ಮಣ್ಣಿನ ಸಂಪನ್ಮೂಲಗಳನ್ನು ಸೂಕ್ತವಾಗಿ ನಿರ್ವಹಿಸಲು ಅಗತ್ಯವಿರುವ ಪರಿಣಾಮಕಾರಿ ನೀತಿಗಳಿಗೆ ಸೂಕ್ತವಾದ ಕ್ರಿಯಾಯೋಜನೆಗಳನ್ನು ಬೆಂಬಲಿಸುವುದು ಮತ್ತು ಅನುಷ್ಠಾನಗೊಳಿಸುವುದು.
೪. ಸುಸ್ಥಿರ ಮಣ್ಣಿನ ನಿರ್ವಹಣಾ ಚಟುವಟಿಕೆಗಳಲ್ಲಿ ಬಂಡವಾಳ ಹೂಡುವ ಕಾರ್ಯವನ್ನು ಉತ್ತೇಜಿಸುವ ಮೂಲಕ ಆರೋಗ್ಯಯುಕ್ತ ಮಣ್ಣನ್ನು ಜಮೀನು ಬಳಕೆದಾರರಿಗೆ ಒದಗಿಸುವುದು.
೫. ವರ್ಷ ೨೦೧೫ರಲ್ಲಿ ಪಟ್ಟಿ ಮಾಡಿದ ಸುಸ್ಥಿರ ಅಭಿವೃದ್ಧಿಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಉಪಕ್ರಮಗಳನ್ನು ಬಲಪಡಿಸುವುದು.
೬. ಜಾಗತಿಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ಅದರ ಉಸ್ತುವಾರಿ ಸಾಮರ್ಥ್ಯವನ್ನು ತ್ವರಿತಗತಿಯಲ್ಲಿ ಹೆಚ್ಚಿಸುವುದು.

ಎಲ್ಲಾ ಜೀವಕೋಟಿಯ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿದು ನಾವು ಸಮರೋಪಾದಿಯಲ್ಲಿ ಕಾರ್ಯನಿರತರಾಗುವುದು ಅತ್ಯವಶ್ಯಕ.

ವೈಜ್ಞಾನಿಕ ದೃಷ್ಟಿಯಲ್ಲಿ ಮಣ್ಣು

ಮಣ್ಣು ಒಂದು ನೈಸರ್ಗಿಕವಾದ ವಸ್ತು ಇದು ಭೂಮಿಯ ಮೇಲ್ಭಾಗದಲ್ಲಿ ಒಂದು ತೆಳುವಾದ ಪದರದ ರೂಪದಲ್ಲಿದೆ. ಮಣ್ಣು ಜೀವ ತುಂಬಿದ ಸಚೇತನ ವಸ್ತು ಹಾಗೂ ಸಮಸ್ತ ಜೀವಿಗಳಿಗೂ ಆಧಾರವಾಗಿದೆ. ಭೂಮಿಯ ಮೇಲ್ಭಾಗದಲ್ಲಿರುವ ಹಲವಾರು ರೀತಿಯ ಖನಿಜಗಳು ಮತ್ತು ಶಿಲೆಗಳು ನೂರಾರು ವರ್ಷಗಳ ಕಾಲ ಹವಾಕ್ರಿಯೆ ಮತ್ತು ಮಣ್ಣು ಉತ್ಪಾದಕ ಕ್ರಿಯೆಗಳಿಗೊಳಗಾಗಿ ಉತ್ಪತ್ತಿಯಾಗುವ ಜೇಡಿಕಣಗಳು ಬಂಡಿನ ಕಣಗಳು ಮತ್ತು ಮರಳಿನ ಕಣಗಳು ಇರುತ್ತವೆ. ಇದುವರೆಗೆ ಮಣ್ಣನ್ನು ತಯಾರಿಸಲು ಯಾವ ಕಾರ್ಖಾನೆಗಳಿಂದಲೂ ಸಾಧ್ಯವಾಗಿಲ್ಲ ಕೇವಲ ಒಂದು ಅಂಗುಲದಷ್ಟು ಮೇಲ್ಪದರದ ಮಣ್ಣಿನ ಉತ್ಪತ್ತಿಯಾಗಲು ೮೦೦ ರಿಂದ ೨೦೦೦೦ ವರ್ಷಗಳು ಬೇಕಾಗುತ್ತವೆ. ಆದರೆ ಕೇವಲ ಅರ್ಧ ಗಂಟೆ ಕಾಲ ಜೋರಾಗಿ ಮಳೆ ಬಂದಲ್ಲಿ ಆ ಮಣ್ಣೆಲ್ಲ ಸವಕಳಿ ಹೊಂದಿ ನಷ್ಟವಾಗುತ್ತದೆ.

ಮಣ್ಣಿನಲ್ಲಿ ನಿರವಯವ (ಖನಿಜ) ವಸ್ತುಗಳು ಶೇ. ೪೫-೪೯, ಸಾವಯವ ವಸ್ತುಗಳು (ಶೇ. ೧-೫), (ಶೇ. ೨೫) ಮತ್ತು ನೀರು (ಶೇ. ೨೫) ಇರುವುದಲ್ಲದೆ ಅಸಂಖ್ಯಾತ ಸೂಕ್ಷ್ಮ ಜೀವಿಗಳೂ ಇವೆ. ಒಂದು ಹಿಡಿ ಮಣ್ಣಿನಲ್ಲಿ ನಮ್ಮ ಭೂಮಿಯ ಮೇಲಿರುವ ಜನ ಸಂಖ್ಯೆಗಿಂತ ಜಾಸ್ತಿ ಸೂಕ್ಷ್ಮ ಜೀವಿಗಳಿವೆಯೆಂದರೆ ಆಶ್ಚರ್ಯವಿಲ್ಲ.

ಮಣ್ಣಿನ ಬಗ್ಗೆ ಏಕಿಷ್ಟು ಕಾಳಜಿ?

೧. ಪ್ರಸ್ತುತದಲ್ಲಿ ಸುಮಾರು ೮೨ ಕೋಟಿ ಜನಸಂಖ್ಯೆಗೆ ಆಹಾರ ಭದ್ರತೆ ಇಲ್ಲವಾಗಿದೆ ಮತ್ತು ೨೦೦ ಕೋಟಿ ಜನಸಂಖ್ಯೆಯು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇವುಗಳನ್ನು ಮಣ್ಣಿನಿಂದ ಮಾತ್ರ ನೀಗಿಸಲು ಸಾಧ್ಯ.
೨. ನಮ್ಮ ಭೂಮಿಯ ಮೇಲೆ ಎಲ್ಲಾ ಜೀವಿಗಳಿಗೂ ಅಗತ್ಯವಿರುವ ಆಹಾರವನ್ನು ಮಣ್ಣಿನಿಂದ ಬೆಳೆದು ಪಡೆಯಬೇಕು.
೩. ನಮ್ಮ ಭೂಮಿಯ ಮಣ್ಣು ವಾತಾವರಣ(ಗಾಳಿ)ಕ್ಕಿಂತ ಮೂರು ಪಟ್ಟು ಜಾಸ್ತಿ ಇಂಗಾಲವನ್ನು ಹಿಡಿದಿಟ್ಟಿದ್ದು ವೇಗವಾಗಿ ಬದಲಾಗುತ್ತಿರುವ ಹವಾಮಾನದ ವೈಪರೀತ್ಯವನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ.
೪. ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು ೫೫೦೦ ದಶಲಕ್ಷ ಟನ್‌ನಷ್ಟು ಫಲವತ್ತಾದ ಮೇಲ್ಪದರದ ಮಣ್ಣು ಸವಕಳಿ ಮತ್ತು ಕೊಚ್ಚಣಿಯಿಂದ ನಷ್ಟವಾಗುತ್ತದೆ. ಇದರಲ್ಲಿ ಸುಮಾರು ೨೯೦೦ ದಶಲಕ್ಷ ಟನ್‌ನಷ್ಟು ಮಣ್ಣು ಸಮುದ್ರವನ್ನು ಸೇರಿ ಶಾಶ್ವತವಾಗಿ ನಷ್ಟವಾಗುತ್ತದೆ.
೫. ಭೂ ಭಾಗದಲ್ಲಿರುವ ಮಣ್ಣಿನಲ್ಲಿ ಶೇ. ೩೩ ರಷ್ಟು ಪ್ರಮಾಣದ ಮಣ್ಣಿನ ಆರೋಗ್ಯವು ಹದಗೆಟ್ಟಿ ಈಗಾಗಲೇ ಅವನತಿಯ ಅಂಚಿನಲ್ಲಿದೆ. ಇದರ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸಬೇಕು.

ಮಣ್ಣಿನ ಫಲವತ್ತತೆ

ಒಂದು ಜಮೀನಿನ ಮಣ್ಣು ಸಸ್ಯಗಳಿಗೆ ಅವಶ್ಯವಿರುವ ೧೭ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸಮತೋಲನವಾಗಿ ಒದಗಿಸುವ ಸಾಮರ್ಥ್ಯವನ್ನು ಅದರ ಫಲವತ್ತತೆ ಎಂದು ಕರೆಯುತ್ತಾರೆ.

ಮಣ್ಣಿನ ಫಲವತ್ತತೆಯು ಅದರ ಗುಣಧರ್ಮಗಳನ್ನು ಮತ್ತು ರೈತರು ಅನುಸರಿಸುವ ನಿರ್ವಹಣಾ ಕ್ರಮಗಳನ್ನು ಅನುಸರಿಸಿರುತ್ತವೆ. ಸಾಮಾನ್ಯವಾಗಿ ಜೇಡಿಯ ಅಂಶವು ಜಾಸ್ತಿ ಇರುವ ಮಣ್ಣಿನ ಫಲವತ್ತತೆಯು ಜಾಸ್ತಿ ಇರುತ್ತದೆ. ಮರಳಿನ ಅಂಶವು ಜಾಸ್ತಿ ಇರುವ ಮಣ್ಣಿನ ಫವತ್ತತೆಯು ಕಡಿಮೆ ಇರುತ್ತದೆ. ಸಸ್ಯಗಳಿಗೆ ಅವಶ್ಯವಿರುವ ೧೭ ಪೋಷಕಾಂಶಗಳ ಪೈಕಿ ೧೪ ಪೋಷಕಾಂಶಗಳನ್ನು ಅವು ಮಣ್ಣಿನಿಂದ ಪಡೆಯುತ್ತವೆ. ಮಣ್ಣಿನ ಫವತ್ತತೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವ ಮೂಲಕ ಕಂಡುಹಿಡಿಯಬಹುದು.

ಮಣ್ಣಿನ ಆರೋಗ್ಯ

ಒಂದು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳು ಸರಿಯಾಗಿದ್ದಲ್ಲಿ, ಆ ಮಣ್ಣನ್ನು ಆರೋಗ್ಯವಂತ ಮಣ್ಣು ಎನ್ನಬಹುದು. ಆರೋಗ್ಯವಂತ ಗರ್ಭಿಣಿ ಮಹಿಳೆ ಆರೋಗ್ಯವಾಗಿರುವ ಮಗುವಿಗೆ ಜನ್ಮ ನೀಡಲು ಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಆರೋಗ್ಯವಾಗಿರುವ ಮಣ್ಣಿನಿಂದ ಆರೋಗ್ಯವಂತ ಬೆಳೆಗಳನ್ನು ಬೆಳೆದು ಪೌಷ್ಠಿಕವಾದ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯ. ನಮ್ಮ ಕೃಷಿ ವ್ಯವಸ್ಥೆಯು ಸುಸ್ಥಿರವಾಗಿರಬೇಕಾದರೆ ನಮ್ಮ ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಬರಬೇಕು. ಮಣ್ಣು ಪರೀಕ್ಷೆ ಮಾಡುವ ಮೂಲಕ ನಮ್ಮ ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು.

ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಹದಗೆಡಲು ಕಾರಣಗಳು

ಜಾಗತೀಕರಣ ಮತ್ತು ಔದ್ಯೋಗಿಕರಣದಿಂದಾಗಿ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಮೇಲಿನ ಒತ್ತಡವು ಹೆಚ್ಚುತ್ತಾ ಹೋಗಿದೆ. ಇದರ ಜೊತೆಗೆ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರವನ್ನು ಒದಗಿಸಲು ಹೆಚ್ಚಿನ ರೈತರು ಜಾಸ್ತಿ ಇಳುವರಿ ಕೊಡುವ ತಳಿಗಳನ್ನು ಬೆಳೆಯುವುದರ ಜೊತೆಗೆ ಅಸಮತೋಲನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾ ಹೋದರು ಆದರೆ ಅವರು ಬಳಸುವ ಸಾವಯವ ಗೊಬ್ಬರದ ಪ್ರಮಾಣ ಕಡಿಮೆಯಾಯಿತು. ಇದರ ಜೊತೆಗೆ ಅವೈಜ್ಞಾನಿಕ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟ ಮತ್ತು ಶಿಲೀಂಧ್ರ ನಾಶಕಗಳನ್ನು ಬಳಸುವುದು ಜಾಸ್ತಿಯಾಗಿ ಮಣ್ಣಿನ ಆರೋಗ್ಯ ಹದಗೆಟ್ಟಿದೆ ಎನ್ನಬಹುದು. ಇದಲ್ಲದೆ ಸಾಂಧ್ರಬೇಸಾಯ (Intensive Agriculture) ಪದ್ಧತಿಯಲ್ಲಿ ೨-೩ ಬೆಳೆಗಳನ್ನು ಬೆಳೆಯುವುದರ ಮೂಲಕ ಹೆಚ್ಚಿನ ಇಳುವರಿ ಪಡೆದಿದ್ದೇನೋ ಸರಿ ಆದರೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನೂ ಸಹ ಮಣ್ಣಿನಿಂದ ಹೊರ ತೆಗೆಯಲಾಗುತ್ತದೆ. ಕೆಲವು ರೈತರು ಬೆಳೆಯ ಅಗತ್ಯಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಬಳಸಿದರೆ ಕೆಲವು ರೈತರು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರಗಳನ್ನೂ ಬಳಸುತ್ತಿದ್ದಾರೆ. ಹೀಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನುಸರಿಸಿದ ದೋಷಪೂರಿತ ಕೃಷಿ ಪದ್ಧತಿಗಳು ಮತ್ತು ಪೋಷಕಾಂಶಗಳ ಅಸಮತೋಲನ ನಿರ್ವಹಣೆಯಿಂದ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಹದಗೆಡುತ್ತಿದೆ ಎನ್ನಬಹುದು.

ಮಾರ್ಗಸೂಚಿ

ಇಂದು ಹದಗೆಡುತ್ತಿರುವ ವಾತಾವರಣಕ್ಕೆ (ಮಣ್ಣು ಗಾಳಿ ಮತ್ತು ನೀರಿನ ಗುಣಮಟ್ಟ) ನಮ್ಮೆಲ್ಲರ ಜೀವನ ಶೈಲಿ ಮತ್ತು ನಮ್ಮ ರೈತರು ಅನುಸರಿಸುತ್ತಿರುವ ದೋಷಯುಕ್ತ ಕೃಷಿ ಪದ್ಧತಿಗಳೇ ಕಾರಣ ಎನ್ನಬಹುದು. ಇಂತಹ ಪರಿಸ್ಥಿತಿಯ ಮಣ್ಣಿನ ಉಳಿವಿಗಾಗಿ ರೈತರು ಅನುಸರಿಸಬಹುದಾದ ಕೆಲವು ಕ್ರಮಗಳನ್ನು ಪಟ್ಟಿ ಮಾಡಲಾಗಿದೆ.

೧. ಮಣ್ಣಿನ ವರ್ಗ ಮತ್ತು ಗುಣಧರ್ಮಗಳ ಆಧಾರದ ಮೇಲೆ ರೈತರು ಬೆಳೆಯಬೇಕಾದ ಬೆಳೆಗಳನ್ನು ನಿರ್ಧರಿಸುವುದರ ಜೊತೆಗೆ ಮಣ್ಣು ಸವಕಳಿ ಮತ್ತು ಕೊಚ್ಚಣಿಯನ್ನು ತಡೆಗಟ್ಟುವ ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆ.
೨. ಸಮಗ್ರ ಪೋಷಕಾಂಶಗಳ ನಿರ್ವಹಣಾ ಪದ್ಧತಿಯ ಅಳವಡಿಕೆ ಬೆಳೆಗೆ ಅಗತ್ಯವಿರುವ ಪೋಷಕಾಂಶಗಳ ಪ್ರಮಾಣದ ಶೇ.೫೦ ರಷ್ಟನ್ನು ಸಾವಯವ ಗೊಬ್ಬರಗಳ ಮೂಲಕ ಮತ್ತು ಮಿಕ್ಕ ಶೇ. ೫೦ ರಷ್ಟನ್ನು ರಾಸಾಯನಿಕ ಗೊಬ್ಬರಗಳ ಮೂಲಕ ಒದಗಿಸುವುದು.
೩. ಮಣ್ಣು ಪರೀಕ್ಷೆ ಆಧಾರದ ಮೇಲೆ ಒಂದು ಬೆಳಗೆ ಹಾಕಬೇಕಾದ ಪೋಷಕಾಂಶದ ಪ್ರಮಾಣವನ್ನು ಲೆಕ್ಕಚಾರ ಮಾಡಿ ಪೂರೈಸಬೇಕು.
೪. ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣವನ್ನು ವೃದ್ಧಿಗೊಳಿಸಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು.
೫. ಮಣ್ಣಿನ ಗುಣಕ್ಕನುಗುಣವಾಗಿ ಶೂನ್ಯ ಉಳುಮೆ ಮತ್ತು ಸಂರಕ್ಷಣಾ ಕೃಷಿ (Conservation Agriculture) ಪದ್ಧತಿಗಳನ್ನು ಅನುಸರಿಸುವುದು.
೬. ಸಮಸ್ಯಾತ್ಮಕ ಮಣ್ಣುಗಳಿದ್ದಲ್ಲಿ ಮಣ್ಣಿನ ಸಮಸ್ಯೆ ಏನೆಂದು ತಜ್ಞರಿಂದ ಅರಿತು ಅವರ ಸಲಹೆ ಪಡೆದು, ಸೂಕ್ತವಾದ ಸುಧಾರಣಾ ಕ್ರಮಗಳನ್ನು ಅನುಸರಿಸಿ ನಂತರ ಬೆಳೆಗಳನ್ನು ಬೆಳೆಯುವುದು ಸೂಕ್ತ.

--ಸಿ. ಎ. ಶ್ರೀನಿವಾಸ ಮೂರ್ತಿ, ೯೯೦೧೦೭೩೯೧೩, ಕೃಷಿ ವಿಜ್ಞಾನಿ, ಬೆಂಗಳೂರು